ಪುತ್ತೂರು ಬಿಜೆಪಿಗೆ ಪುತ್ತಿಲ ಕಂಟಕ, ಹಿಂದೂ ಮುಖಂಡ-ಬಿಜೆಪಿ ಜಗಳದಲ್ಲಿ ಗೆಲ್ಲುತ್ತಾ ಕಾಂಗ್ರೆಸ್?

By Gowthami K  |  First Published Apr 24, 2023, 6:10 PM IST

ಪುತ್ತೂರಿನಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರದಲ್ಲಿ ಮೂಲ ಸಂಘ ಪರಿವಾರದ ಅಭ್ಯರ್ಥಿಗಳಿಂದಲೇ  ಸ್ಪರ್ಧೆ ಇದೆ. ಬಿಜೆಪಿಗೆ ಇದು ನುಂಗಲಾರದ ತುತ್ತಾಗಿದೆ. ಪಕ್ಷೇತರ ಅಭ್ಯರ್ಥಿ ಪರ ಅಲೆ ಎದ್ದಿದೆ.


ಮಂಗಳೂರು (ಏ.24): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಧಾನ ಸಭಾ ಕ್ಷೇತ್ರ ಮಾತ್ರ ಈ ಬಾರಿ ವಿಶೇಷ ಅನ್ನಿಸಿಕೊಳ್ಳಲಿದೆ. ಏಕೆಂದರೆ ಸದ್ಯ ಪುತ್ತೂರಿನಲ್ಲಿ ಕಾಂಗ್ರೆಸ್, ಬಿಜೆಪಿ, ಪಕ್ಷೇತರದಲ್ಲಿ ಮೂಲ ಸಂಘ ಪರಿವಾರದ ಅಭ್ಯರ್ಥಿಗಳಿಂದಲೇ  ಸ್ಪರ್ಧೆ ಇದೆ. ಮಾತ್ರವಲ್ಲ ಬಿಜೆಪಿಯಿಂದ ಆಶಾ ತಿಮ್ಮಪ್ಪ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಬಂಡಾಯವೆದ್ದು ಪಕ್ಷೇತರವಾಗಿ ಸ್ಪರ್ಧಿಸಿದ್ದಾರೆ. ಇಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ನಾಮಪತ್ರ ವಾಪಾಸ್ ಪಡೆಯದೇ ಸ್ಪರ್ಧಾ ಕಣದಲ್ಲೇ ಉಳಿದಿದ್ದಾರೆ. ಜತೆಗೆ ಪುತ್ತಿಲ ಅವರಿಗೆ ಚುನಾವಣಾ ಆಯೋಗ "ಬ್ಯಾಟ್" ಅನ್ನು ಚಿಹ್ನೆಯನ್ನಾಗಿ ನೀಡಿದೆ. ಪುತ್ತಿಲ ಸ್ಪರ್ಧೆ ಪುತ್ತೂರಿನಲ್ಲಿ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಆರ್.ಎಸ್.ಎಸ್, ಬಿಜೆಪಿ ನಾಯಕರ ಯಾವುದೇ ಒತ್ತಡಕ್ಕೂ ಬಗ್ಗದ ಅರುಣ್ ಕುಮಾರ್ ಪುತ್ತಿಲ ತಾನು ಬಂಡಾಯವಾಗಿ ಸ್ಪರ್ಧಿಸುವುದನ್ನು ಗಟ್ಟಿ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ನಾಮಪತ್ರ ವಾಪಾಸ್ ಗೆ ಬಿಜೆಪಿ ನಡೆಸಿದ ಎಲ್ಲಾ ಪ್ರಯತ್ನಗಳೂ ಕೂಡ ವಿಫಲವಾಗಿದೆ. ಹೀಗಾಗಿ ಪುತ್ತೂರಿನಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಅರುಣ್ ಕುಮಾರ್ ಪುತ್ತಿಲ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ. ಮಾತ್ರವಲ್ಲ ಸಂಘಪರಿವಾರ ಹಿನ್ನೆಲೆಯ ಮೂವರು ನಾಯಕರ ಮಧ್ಯೆ ಈ ಬಾರಿ ಬಿಗ್ ಫೈಟ್ ನಡೆಯಲಿದೆ.

Tap to resize

Latest Videos

ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ ಇರಬೇಕು, 50% ಮೀಸಲಾತಿ ತೆಗೆದು ಹಾಕಿ

ಹೀಗಾಗಿ ಕರಾವಳಿ ಜಿಲ್ಲೆಯ ಕುತೂಹಲದ ಕಣವಾಗಿ ಪುತ್ತೂರು ಕ್ಷೇತ್ರ ಈ ಬಾರಿ ಇರುವುದಂತೂ ಸುಳ್ಳಲ್ಲ. ಕಳೆದ ಬಾರಿ  ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅಶೋಕ್ ಕುಮಾರ್ ರೈ  ತಿಂಗಳ ಹಿಂದಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಮಾತ್ರವಲ್ಲ ಕಾಂಗ್ರೆಸ್ ಪಕ್ಷದಿಂದ  ಪುತ್ತೂರು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಕೂಡ ಮಾಡಿದ್ದಾರೆ. ಹೀಗಾಗಿ ಪುತ್ತೂರಿನಲ್ಲಿ ಆಶಾ ತಿಮ್ಮಪ್ಪ, ಅಶೋಕ್ ರೈ ಮತ್ತು ಅರುಣ್ ಕುಮಾರ್ ಪುತ್ತಿಲ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಚಿಕ್ಕಪೇಟೆಯಲ್ಲಿ ಸಾವಿರ ಕೋಟಿ ಒಡೆಯನಿಂದ ಕಾಂಗ್ರೆಸ್ ಸೆಡ್ಡು ನಿಂತು ಬಂಡಾಯ, 

ಇನ್ನು ಪುತ್ತಿಲ ವರ್ಸಸ್ ಬಿಜೆಪಿ ಜಗಳದಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂಬ ಲೆಕ್ಕಾಚಾರವೂ ಇದೆ. ಪುತ್ತಿಲ ಸ್ಪರ್ಧೆಯಿಂದ ಬಿಜೆಪಿ ಮತ ವಿಭಜನೆಯಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವ ರಾಜಕೀಯ ಲೆಕ್ಕಾಚಾರ ಕೂಡ ಇದೆ. ಆದರೆ ಪುತ್ತಿಲ ನಾಮಿನೇಶನ್ ದಿನ ಸಾವಿರಾರು ಸಂಖ್ಯೆಯಲ್ಲಿ ಹಿಂದೂ ಮುಖಂಡರು ಬೆಂಬಲ ನೀಡಿ, ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ  ಬಿಜೆಪಿ ವೋಟ್ ಸೆಳೆದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಗೆಲ್ತಾರೆ ಎಂಬ ಲೆಕ್ಕಾಚಾರವು ಇನ್ನೊಂದು ಕಡೆ ಇದೆ. ತಾಲೂಕಿನ ಬಹುತೇಕ ಮಂದಿ ಕೂಡ ಪುತ್ತಿಲ ಕಡೆ ಜಾಸ್ತಿ ಒಲವು ಹೊಂದಿದ್ದಾರೆ. ಅದೇನೆ ಇರಲಿ ಸದ್ಯಕ್ಕಂತು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಸ್ಪರ್ಧೆಯಿಂದ ಪುತ್ತೂರು ಕಣ ರಂಗೇರಿದೆ. ಜೊತೆಗೆ  ಬಿಜೆಪಿಯ ನೆಮ್ಮದಿ ಕೆಡಿಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!