ಮಂಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದ ಅಲ್ತಾಫ್ ಕುಂಪಲ ಅವರನ್ನು ಕಾಂಗ್ರೆಸ್ ನಾಯಕರು ಮಸೀದಿಯಲ್ಲಿ ಧಮ್ಕಿ ಹಾಕಿ, ನಾಮಪತ್ರವನ್ನು ವಾಪಸ್ ಪಡೆದ ಬಳಿಕ ಕಿಡ್ನಾಪ್ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ವರದಿ- ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಏ.24): ಮಂಗಳೂರು (ಉಳ್ಳಾಲ) ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕುಂಪಲ ಅವರು ತನ್ನನ್ನು, ಕಾಂಗ್ರೆಸ್ ನಾಯಕರು ಧಮ್ಕಿ ಹಾಕಿ, ನಾಮಪತ್ರ ವಾಪಸ್ ಪಡೆದ ಬಳಿಕ ಕಿಡ್ನಾಪ್ ಮಾಡಿದ್ದರು ಎಂದು ಆರೋಪಿಸಿದ್ದಾರೆ.
ಭಾರೀ ಕುತೂಹಲದ ಕಣವಾಗಿ ಬದಲಾಗಿದ್ದ ಮಂಗಳೂರು ವಿಧಾನಸಭಾ ಕ್ಷೇತ್ರ (ಉಳ್ಳಾಲ)ದ ಜೆಡಿಎಸ್ ಅಭ್ಯರ್ಥಿ ರಾಜ್ಯದ ನಾಯಕರ ಗಮನಕ್ಕೆ ತಾರದೇ ನಾಮ ಪತ್ರ ವಾಪಾಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆದ 3 ದಿನಗಳ ಬಳಿಕ ಮಾಧ್ಯಮಗಳ ಮುಂದೆ ಹಾಜರಾಗಿ, ಕಾಂಗ್ರೆಸ್ ನಾಯಕರು ಬೆದರಿಕೆ ಹಾಕಿ ನಾಮಪತ್ರ ವಾಪಸ್ ಪಡೆದುಕೊಳ್ಳುವಂತೆ ಮಾಡಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಕಂಪಲ (Jds Candidate Altaf Kumpala) ಹೇಳಿದ್ದಾರೆ. ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯ ನಡೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಏ.21ರಂದೇ ಅಭ್ಯರ್ಥಿ ಅಲ್ತಾಫ್ ಕುಂಪಲ ನಾಮಿನೇಷನ್ ವಾಪಸ್ ಪಡೆದಿದ್ದು, ಮೂರು ದಿನದ ಬಳಿಕ ಮಾಧ್ಯಮಗಳ ಎದುರು ಬಂದು ಕಾಂಗ್ರೆಸ್ ಬೆದರಿಕೆ ಬಗ್ಗೆ ಆರೋಪ ಮಾಡಿದ್ದಾರೆ.
ಮತದಾನಕ್ಕೂ ಮುನ್ನ ಜೆಡಿಎಸ್‌ನ 2ನೇ ವಿಕೆಟ್ ಪತನ: ಕಾಂಗ್ರೆಸ್ ಒತ್ತಡಕ್ಕೆ ಜೆಡಿಎಸ್ ಅಭ್ಯರ್ಥಿ ನಾಮಪತ್ರ ವಾಪಸ್
ಮಂಗಳೂರು ಕ್ಷೇತ್ರದ ಅಭ್ಯರ್ಥಿಯನ್ನಾಗಿ ಪಕ್ಷದಿಂದ ಕಣಕ್ಕಿಳಿಸಿದ್ದ ನನ್ನನ್ನು ಕಾಂಗ್ರೆಸ್ ಪಕ್ಷದ ತಂಡವೊಂದು ಕರೆದೊಯ್ದು ಬಲವಂತವಾಗಿ ನಾಮಪತ್ರ ಹಿಂತೆಗೆಯುವಂತೆ ಮಾಡಿದ್ದಾರೆ ಎಂದು ಮಂಗಳೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿರುವ ಅಲ್ತಾಫ್ ಕುಂಪಲ ಆರೋಪಿಸಿದ್ದಾರೆ. ನಾನು ಎಲ್ಲೂ ಓಡಿಹೋಗಿಲ್ಲ, ನನ್ನನ್ನು ಅಪಹರಿಸಿ ಬೆದರಿಸಿ ನನ್ನಿಂದ ನಾಮಪತ್ರ ಹಿಂದೆ ಪಡೆಯುವಂತೆ ಮಾಡಲಾಗಿದೆ. ನನಗೆ ಯಾವುದೇ ರೀತಿಯಲ್ಲಿ ಆಮಿಷ ಒಡ್ಡಲಾಗಿಲ್ಲ. ಈ ಕುರಿತು ಪೊಲೀಸ್ ಕಮಿಷನರ್ ಅವರಿಗೆ ಭದ್ರತೆ ನೀಡುವಂತೆ ಮನವಿ ಮಾಡಲಾಗಿದೆ ಎಂದರು.
ಬಳಿಕ ಮಾತಾಡಿದ ಜೆಡಿಎಸ್ ರಾಜ್ಯ ವಕ್ತಾರ ಎಂ.ಬಿ. ಸದಾಶಿವ ಅವರು, ವಿಷಾದದ ಸಂಗತಿ ಏನೆಂದರೆ ಜಿಲ್ಲೆಯ 8 ಕ್ಷೇತ್ರಗಳಲ್ಲಿ ಅಭ್ಯರ್ಥಿಯನ್ನು ಹಾಕಿದ್ದೆವು. ಮಂಗಳೂರು ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಬೇಕಾದ ಅಲ್ತಾಫ್ ಕುಂಪಲ ಎಂಬ ಒಬ್ಬ ವ್ಯಕ್ತಿಯನ್ನು ಅವರ ಸಮಾಜಸೇವೆಯನ್ನು ಗುರುತಿಸಿ ಟಿಕೆಟ್ ನೀಡಿದ್ದೇವೆ. ಆದರೆ ಎರಡು ದಿನಗಳ ಹಿಂದೆ ಅವರು ಹಬ್ಬದ ದಿನ ಮಸೀದಿಯಿಂದ ಹೊರಬರುವಾಗ ತಂಡವೊಂದು ಅವರನ್ನು ಬೆದರಿಸಿ ಚುನಾವಣಾಧಿಕಾರಿಯ ಬಳಿಗೆ ಕರೆದೊಯ್ದು ನಾಮಪತ್ರ ಹಿಂತೆಗೆದುಕೊಳ್ಳು ವಂತೆ ಮಾಡಲಾಯಿತು. ಇದು ಎಲ್ಲರೂ ಚಿಂತಿಸಬೇಕಾದ ವಿಷಯವಾಗಿದೆ. ಯಾಕೆಂದರೆ ಒಬ್ಬ ಸಾಮಾನ್ಯ ಕಾರ್ಯಕರ್ತನನ್ನೇ ಎದುರಿಸಲಾಗದವರು ಸಮಾಜದ ಜನರನ್ನು ಹೇಗೆ ನಡೆಯಿಸಿಕೊಳ್ಳಬಹುದು?" ಎಂದು ಹೇಳಿದರು.
ಅಲ್ತಾಫ್ ಮರುಸ್ಪರ್ಧೆ ಅರ್ಜಿ ತಿರಸ್ಕೃತ! : ಈ ನಡುವೆ ಮರು ಸ್ಪರ್ಧೆಗೆ ಕೋರಿ ಜೆಡಿಎಸ್ ಅಭ್ಯರ್ಥಿ ಸಲ್ಲಿಸಿದ್ದ ಅರ್ಜಿ ತಿರಸ್ಕಾರಗೊಂಡಿದೆ. ನಾಮಪತ್ರ ವಾಪಾಸ್ ಪಡೆದ ಬೆನ್ನಲ್ಲೇ ಮತ್ತೆ ಸ್ಪರ್ಧೆಗೆ ಮನವಿ ಮಾಡಿದ್ದ ಜೆಡಿಎಸ್ ಅಭ್ಯರ್ಥಿ ಅಲ್ತಾಫ್ ಅರ್ಜಿಯನ್ನು ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ತಿರಸ್ಕಾರ ಮಾಡಿದ್ದಾರೆ. ಎ.20ರಂದು ಜೆಡಿಎಸ್ ನಿಂದ ಮಂಗಳೂರು ಕ್ಷೇತ್ರದ ಅಭ್ಯರ್ಥಿಯಾಗಿ ನಾಮ ಪತ್ರ ಸಲ್ಲಿಸಿದ್ದ ಅಲ್ತಾಫ್, ಎ.21ರ ಮಧ್ಯಾಹ್ನ 3.15ಕ್ಕೆ ನಾಮಪತ್ರ ವಾಪಾಸ್ ಪಡೆದಿದ್ದರು.
ಮಂಡ್ಯದಲ್ಲಿ ಜೆಡಿಎಸ್‌ಗೆ ಸೆಡ್ಡು ಹೊಡೆದ ಕೆ.ವಿ. ಶಂಕರೇಗೌಡರ ಮೊಮ್ಮಗ: ಕುಮಾರಣ್ಣಗೆ ಸಂಕಷ್ಟ
ಆ ಬಳಿಕ ಮತ್ತೆ ಕಾಂಗ್ರೆಸ್ ನವರ ಬೆದರಿಕೆ ಬಗ್ಗೆ ಉಲ್ಲೇಖಿಸಿ ಚುನಾವಣಾಧಿಕಾರಿಗೆ ಪತ್ರ ಬರೆದು ಮತ್ತೆ ಸ್ಪರ್ಧೆಗೆ ಅವಕಾಶ ಕೋರಿದ್ದರು. ಆದರೆ ವಾಪಾಸ್ ಪಡೆದ ನಾಮಪತ್ರ ಊರ್ಜಿತಗೊಳಿಸಲು ಸಾಧ್ಯವಿಲ್ಲ, ಅಭ್ಯರ್ಥಿ ಸ್ಪರ್ಧೆಗೆ ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಮನವಿ ತಿರಸ್ಕರಿಸಲಾಗಿದೆ ಅಂತ ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಆದೇಶ ಮಾಡಿದ್ದಾರೆ.
ಏಪ್ರಿಲ್ 13 ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಏಪ್ರಿಲ್ 21ರವರೆಗೆ ಪೂರ್ಣಗೊಂಡಿದೆ. ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.