Karnataka election 2023: ಕಾಂಗ್ರೆಸ್ ಪಕ್ಷದ ಪಾಲಾಗುವರೇ ಲಿಂಬಿಕಾಯಿ, ಚಿಕ್ಕನಗೌಡರ?

By Kannadaprabha News  |  First Published Mar 11, 2023, 9:45 AM IST

ಹು-ಧಾ ಪಶ್ಚಿಮ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಅಭ್ಯರ್ಥಿಗಳನ್ನು ತಂದು ತನ್ನ ಪಕ್ಷದಿಂದ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎಂಬ ವದಂತಿ ಪಕ್ಷದಲ್ಲಿ ತಳಮಳ ಉಂಟುಮಾಡಿದೆ.


ಬಸವರಾಜ ಹಿರೇಮಠ

ಧಾರವಾಡ (ಮಾ.11) : ಹು-ಧಾ ಪಶ್ಚಿಮ ಹಾಗೂ ಕುಂದಗೋಳ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಅಭ್ಯರ್ಥಿಗಳನ್ನು ತಂದು ತನ್ನ ಪಕ್ಷದಿಂದ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸಿದೆ ಎಂಬ ವದಂತಿ ಪಕ್ಷದಲ್ಲಿ ತಳಮಳ ಉಂಟುಮಾಡಿದೆ.

Tap to resize

Latest Videos

ಸುಮಾರು ಮೂರು ದಶಕಗಳಿಂದಲೇ ತಂದೆ ಚಂದ್ರಕಾಂತ ಹಾಗೂ ಪುತ್ರ ಅರವಿಂದ ಬೆಲ್ಲದ(MLA Arvind bellad) ಪಶ್ಚಿಮ ಕ್ಷೇತ್ರವನ್ನು ಆಳುತ್ತಿದ್ದು ಈ ಬಾರಿಯಾದರೂ ಈ ಕ್ಷೇತ್ರವನ್ನು ಶತಾಯ-ಗತಾಯ ವಶ ಪಡೆಯಬೇಕು. ಇದಕ್ಕಾಗಿ ಒಬ್ಬ ಪ್ರಬಲ ಲಿಂಗಾಯತರನ್ನು ಕಣಕ್ಕೆ ಇಳಿಸಿದರೆ, ಯಶಸ್ಸು ಸಾಧ್ಯ ಎಂದು ಭಾವಿಸಿರುವ ಕಾಂಗ್ರೆಸ್‌ ಹೈಕಮಾಂಡ(Congress Highcommand) ಯಡಿಯೂರಪ್ಪನವರ ಪರಮಶಿಷ್ಯ ವಿಧಾನಪರಿಷತ್‌ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ(Mohan limbikayi) ಅವರನ್ನು ಪಕ್ಷಕ್ಕೆ ಬರಮಾಡಿಕೊಂಡು ಹು-ಧಾ ಪಶ್ಚಿಮ ಕ್ಷೇತ್ರದಿಂದ ಕಣಕ್ಕಿಳಿಸಲು ನಿರ್ಧರಿಸಿದೆ ಎಂಬ ವದಂತಿ ದಟ್ಟವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ(KPCC President DK Shivakumar) ಈ ಬಗ್ಗೆ ಪಕ್ಷದ ಆಕಾಂಕ್ಷಿಗಳಿಗೆ ಸೂಚ್ಯವಾಗಿ ಮಾಹಿತಿ ನೀಡಿ, ಪಕ್ಷದ ಅಧಿಕೃತ ಅಭ್ಯರ್ಥಿಯ ಗೆಲುವಿಗಾಗಿ ಎಲ್ಲರೂ ಶ್ರಮಿಸಬೇಕೆಂದು ತಿಳಿಸಿದ್ದಾರೆ. ಈ ಮಾಹಿತಿ ಬರುತ್ತಿದ್ದಂತೆ ಕಾಂಗ್ರೆಸ್‌ ಟಿಕೆಟ್‌ ಬಯಸಿ ತಲಾ .2 ಲಕ್ಷ ಶುಲ್ಕ ಸಂದಾಯ ಮಾಡಿ ಅರ್ಜಿ ಸಲ್ಲಿಸಿದ್ದ 11 ಆಕಾಂಕ್ಷಿಗಳು ನಿರಾಶರಾಗಿದ್ದು, ಇತ್ತೀಚೆಗೆ ತಮ್ಮ ಬಹಿರಂಗ ಆಕ್ರೋಶ ಸಹ ವ್ಯಕ್ತಪಡಿಸಿದ್ದಾರೆ.

ಪದೇಪದೆ ರಾಜ್ಯಕ್ಕೆ ಭೇಟಿ ನೀಡುವ ಮೋದಿದು ಚುನಾವಣೆ ಗಿಮಿಕ್: ಒಂದುಸಲವೂ ಜನರ ಸಮಸ್ಯೆ ಕೇಳಲಿಲ್ಲ

ಯಾರು ಲಿಂಬಿಕಾಯಿ?

ಮೋಹನ ಲಿಂಬಿಕಾಯಿ ಈ ಹಿಂದೆ ವಿಧಾನಪರಿಷತ್‌ ಚುನಾವಣೆಯಲ್ಲಿ ಪಶ್ಚಿಮ ಪದವೀಧರ ಕ್ಷೇತ್ರದಿಂದ ಸೋಲಿಲ್ಲದ ಸರದಾರ ಎಂದೇ ಖ್ಯಾತರಾಗಿದ್ದ ಕಾಂಗ್ರೆಸ್ಸಿನ ಎಚ್‌.ಕೆ. ಪಾಟೀಲರನ್ನು ಪರಾಭವಗೊಳಿಸಿ ಅನೇಕ ವರ್ಷಗಳ ನಂತರ ಬಿಜೆಪಿಗೆ ಸ್ಥಾನವನ್ನು ಒದಗಿಸಿಕೊಟ್ಟು ರಾಜಕೀಯದಲ್ಲಿ ಗಮನ ಸೆಳೆದಿದ್ದರು.

ಆದರೆ, ತಮ್ಮ ಅವಧಿ ಮುಗಿಯುವ ಮೊದಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಬಿಜೆಪಿಯಿಂದ ಯಡಿಯೂರಪ್ಪನವರ ಕೆಜೆಪಿಗೆ ಹಾರಿ ಹು-ಧಾ ಪಶ್ಚಿಮ ಕ್ಷೇತ್ರದಿಂದ ಕೆಜೆಪಿ ಅಭ್ಯರ್ಥಿಯಾಗಿ 2013ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದರು. ಆದರೆ, ಅರವಿಂದ ಬೆಲ್ಲದ ವಿರುದ್ಧ ಪರಾಭವಗೊಂಡರು. ಮುಂದೆ, ಮತ್ತೇ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಬಂದಾಗ ಬಿಜೆಪಿ ಟಿಕೆಟ್‌ಗೆ ಲಿಂಬಿಕಾಯಿ ಆಕಾಂಕ್ಷಿಯಾಗಿದ್ದರೂ ಅವಕಾಶ ಸಿಗಲಿಲ್ಲ. ಪ್ರಸ್ತುತ, ಕಾಂಗ್ರೆಸ್‌ ಧುರೀಣರು ಮತ್ತೆ ಅವರನ್ನು ಸಂಪರ್ಕಿಸಿ ಚುನಾವಣೆಗೆ ಸ್ಪರ್ಧಿಸುವಂತೆ ಸೂಚ್ಯವಾಗಿ ತಿಳಿಸಿದ್ದಾರೆ. ಆದರೆ, ಈ ಬಗ್ಗೆ ಲಿಂಬಿಕಾಯಿ ಅಂತಿಮ ನಿರ್ಣಯ ಕೈಗೊಂಡಿಲ್ಲ ಎಂಬ ಮಾಹಿತಿ ಇದೆ.

ಚಿಕ್ಕನಗೌಡರಿಗೆ ಚಿಗುರೊಡೆದ ಆಸೆ:

ಕುಂದಗೋಳ ಕ್ಷೇತ್ರದಲ್ಲಿ ಯಡಿಯೂರಪ್ಪ(BS Yadiyurappa)ನವರ ಇನ್ನೊಬ್ಬ ಆಪ್ತ, ಬೀಗರಾಗಿರುವ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ(SI Chikkanagowdar) ಅವರನ್ನು ಕಾಂಗ್ರೆಸ್‌ ಪಕ್ಷದಿಂದ ಚುನಾವಣೆಗೆ ನಿಲ್ಲಿಸುವ ವದಂತಿಯೂ ಕೇಳಿ ಬಂದಿದೆ. ಚಿಕ್ಕನಗೌಡರ ಎರಡು ಸಲ ಬಿಜೆಪಿ ಶಾಸಕರಾಗಿ, ಎರಡು ಬಾರಿ ಸೋತಿದ್ದಾರೆ. ಈ ಬಾರಿ ಮತ್ತೊಮ್ಮೆ ಬಿಜೆಪಿ ಟಿಕೆಟ್‌ ಕೇಳಿದ್ದರೂ ಬಿಜೆಪಿ ಅವರ ಮನವಿಯನ್ನು ಪರಿಗಣಿಸುವ ಸಾಧ್ಯತೆ ಇಲ್ಲವಾಗಿದೆ. 2018ರ ಚುನಾವಣೆಯಲ್ಲಿ ಗೆಲ್ಲಬಹುದಾಗಿದ್ದ ಸ್ಥಾನವನ್ನು ಬಿಜೆಪಿ ಅಲ್ಪ ಅಂತರದಿಂದ ಕಳೆದುಕೊಳ್ಳಲು ಸರಿಯಾದ ಅಭ್ಯರ್ಥಿಗೆ ಟಿಕೆಟ್‌ ಕೊಡಲಿಲ್ಲ ಎಂಬ ಭಾವನೆ ಇದೆ. ಹೀಗಾಗಿ, ಈ ಬಾರಿ ಬಿಜೆಪಿ ಬೇರೆ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವ ಬಗ್ಗೆ ಯೋಚಿಸುತ್ತಿದೆ. ತಮಗೆ ಟಿಕೆಟ್‌ ಸಿಗುವುದಿಲ್ಲ ಎಂಬುದು ಖಾತ್ರಿಯಾಗುತ್ತಿದ್ದಂತೆ ಕಾಂಗ್ರೆಸ್ಸಿನಿಂದ ಕರೆ ಬಂದಿರುವುದು ಚಿಕ್ಕನಗೌಡರಿಗೆ ಹೊಸ ಆಸೆ ಮೂಡಿಸಿದೆ. ಆದರೆ, ಕಾಂಗ್ರೆಸ್‌ ಟಿಕೆಟ್‌ ಅಪೇಕ್ಷಿಸಿ ಹಾಲಿ ಶಾಸಕಿ ಕುಸುಮಾವತಿ ಶಿವಳ್ಳಿ ಸೇರಿದಂತೆ ಒಂದು ಡಜನ್‌ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಬೇರೆ ಪಕ್ಷದಿಂದ ಆಮದು ಮಾಡಿಕೊಂಡವರನ್ನು ಕಣಕ್ಕಿಳಿಸುವುದು ಕಸಿವಿಸಿ ಉಂಟು ಮಾಡಿದೆ. ಆಕಸ್ಮಾತ್‌, ಕಾಂಗ್ರೆಸ್‌ ಚಿಕ್ಕನಗೌಡರಗೆ ಟಿಕೆಟ್‌ ನೀಡಿದರೆ, ಈ ಎಲ್ಲ ಆಕಾಂಕ್ಷಿಗಳು ತಟಸ್ಥರಾಗಬಹುದು ಅಥವಾ ಬಂಡಾಯ ಅಭ್ಯರ್ಥಿಗಳಾಗಬಹುದು ಅಥವಾ ಪಕ್ಷ ವಿರೋ​ಧಿ ಚಟುವಟಿಕೆಯಲ್ಲೂ ತೊಡಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ರಾಜ್ಯದಲ್ಲಿರುವುದು ಬಿ-ರಿಪೋರ್ಟ್‌ ಸರ್ಕಾರ: ಡಿ.ಕೆ.ಶಿವಕುಮಾರ್‌ ವಾಗ್ದಾಳಿ

ಹು-ಧಾ ಪಶ್ಚಿಮ ಕ್ಷೇತ್ರದಲ್ಲಿಯೂ ಇದೇ ತರಹ ಬೆಳವಣಿಗೆ ಉಂಟಾದರೆ ಅಚ್ಚರಿ ಪಡಬೇಕಿಲ್ಲ. ಈಗಾಗಲೇ, ಕೆಲವು ಆಕಾಂಕ್ಷಿಗಳು ಹು-ಧಾ ಪಶ್ಚಿಮ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ತಾವೇ ಆಗುವರೆಂಬ ಭರವಸೆಯೊಂದಿಗೆ ಹಲವು ತಿಂಗಳುಗಳಿಂದ ಕೋಟಿ ರುಪಾಯಿ ಖರ್ಚು ಮಾಡಿ ಹಲವಾರು ಕಾರ್ಯಕ್ರಮಗಳನ್ನು ಸಂಘಟಿಸಿ ಪ್ರಚಾರ ಕಾರ್ಯ ನಡೆಸಿದ್ದಾರೆ. ಕೊನೆ ಕ್ಷಣದಲ್ಲಿ ಲಿಂಬಿಕಾಯಿಗೆ ಕಾಂಗ್ರೆಸ್‌ ಟಿಕೆಟ್‌ ಸಿಕ್ಕರೆ, ಇವರಲ್ಲಿ ಕೆಲವರು ಪಕ್ಷ ತೊರೆಯಬಹುದು ಅಥವಾ ಬಂಡಾಯ ಅಭ್ಯರ್ಥಿಯಾಗಬಹುದು. ಒಟ್ಟಾರೆ, ಕಾಂಗ್ರೆಸ್‌ ಈ ಹೊಸತಂತ್ರ ಹೂಡಿದರೆ ಬಿಜೆಪಿಗೆ ವರದಾನವಾಗುವ ಲಕ್ಷಣಗಳು ಮಾತ್ರ ಸ್ಪಷ್ಟ.

click me!