ಚಾಮರಾಜ ಪೇಟೆ ಕ್ಷೇತ್ರದಿಂದ ಬಿಜೆಪಿ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್‌ಗೆ ಟಿಕೆಟ್ ನೀಡಿದೆ. ಇದು ಸೈಲೆಂಟ್ ಸುನೀಲನ ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಇಂದು ಬಿಜೆಪಿ ಕಚೇರಿಗೆ ನುಗ್ಗಿದ ಸುನೀಲನ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ಇತ್ತ ಕಾಂಗ್ರೆಸ್ ಮಾಜಿ ಪೊಲೀಸ್ ಕಮಿಷನರ್ ಪರಿಸ್ಥಿತಿಯನ್ನು ಟ್ವೀಟ್ ಮೂಲಕ ಕುಟುಕಿದೆ.
ಬೆಂಗಳೂರು(ಏ.12): ಕರ್ನಾಟಕ ವಿಧಾನಸಭಾ ಚುನಾವಣೆಗೆ ಟಿಕೆಟ್ ಘೋಷಿಸಿದ ಬಿಜೆಪಿಗೆ ಸಂಕಷ್ಟ ಹೆಚ್ಚಾಗುತ್ತಿದೆ. 189 ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್ ನೀಡಲಾಗಿದೆ. ಆದರೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿಯ ಬಂಡಾಯ ಎದುರಿಸುತ್ತಿದೆ. ಇದೀಗ ಚಾಮರಾಜಪೇಟೆಯಲ್ಲೂ ಬಿಡೆಪಿಗೆ ಬಂಡಾಯದ ಬಿಸಿ ಎದುರಾಗಿದೆ. ಚಾಮರಾಜಪೇಟೆಯಿಂದ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್‌ಗೆ ಟಿಕೆಟ್ ಘೋಷಿಸಲಾಗಿದೆ. ಇದು ಸೈಲೆಂಟ್ ಸುನೀಲ ಹಾಗೂ ಬೆಂಬಲಿಗರ ಆಕ್ರೋಶಕ್ಕೆ ಕಾರಣಾವಾಗಿದೆ. ಇಂದು ಏಕಾಏಕಿ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಗೆ ನುಗ್ಗಿದ ಸೈಲೆಂಟ್ ಸುನೀಲನ ಬೆಂಬಲಿಗರು ಗಲಾಟೆ ಮಾಡಿದ್ದಾರೆ. ಏಕಾಏಕಿ ಕಚೇರಿಗೆ ನುಗ್ಗಿದ ಕಾರಣ ಸುನೀಲನ ಬೆಂಬಲಿಗರನ್ನು ಹೊರಹಾಕಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಭಾಸ್ಕರ್ ರಾವ್‌ಗೆ ಟಿಕೆಟ್ ನೀಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಭಾಸ್ಕರ್ ರಾವ್ ಬದಲು ಸುನೀಲಗೆ ಟಿಕೆಟ್ ನೀಡಬೇಕು ಎಂದು ಬೆಂಬಲಿಗರು ಪಟ್ಟು ಹಿಡಿದ್ದಾರೆ. ಸುನೀಲನ ಬೆಂಬಲಿಗರ ನಡೆಯಿಂದ ಬಿಜೆಪಿ ಕಚೇರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಬಿಜೆಪಿ ಕಚೇರಿಗೆ ಹೆಚ್ಚುವರಿ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಆದರೆ ಇಷ್ಟಕ್ಕೆ ಚಾಮರಾಜಪೇಟೆ ಟಿಕೆಟ್ ವಿಚಾರ ತಣ್ಣಗಾಗಿಲ್ಲ. ಇದರ ನಡುವೆ ಕಾಂಗ್ರೆಸ್ ಟ್ವೀಟ್ ಇದೀಗ ಭಾರಿ ಸಂಚಲನ ಸೃಷ್ಟಿಸಿದೆ.
ದೆಹಲಿಯಲ್ಲಿ ಟಿಕೆಟ್‌ಗಾಗಿ ಮಾಜಿ ಸಿಎಂ ಶೆಟ್ಟರ್ ಅಲೆದಾಟ, ಜೋಶಿ ಬಳಿಕ ಜೆಪಿ ನಡ್ಡಾ ಮನೆಗೆ ತೆರಳಿ ಚರ್ಚೆ!
ಟಿಕೆಟ್ ಪಡೆದ ಬಳಿಕ ಮಾಧ್ಯಮಕ್ಕೆ ಪ್ರತಿರಕ್ರಿಯೆ ನೀಡಿದ್ದ ಭಾಸ್ಕರ್ ರಾವ್, ಎಲ್ಲರ ಬೆಂಬಲ ಪಡೆದು ಚಾಮರಾಜನಗರದಲ್ಲಿ ಗೆಲುವು ಸಾಧಿಸುತ್ತೇನೆ. ಸುನೀಲ ಜೊತೆ ಚರ್ಚಿಸುತ್ತೇನೆ. ಅವರ ಬೆಂಬಲವೂ ಅಗತ್ಯ ಎಂದಿದ್ದರು. ಇದೇ ಹೇಳಿಕೆಯನ್ನು ಮುಂದಿಟ್ಟುಕೊಂಡ ಕಾಂಗ್ರೆಸ್, ಟ್ವೀಟ್ ಮೂಲಕ ಬಿಜೆಪಿಯನ್ನು ಕುಟುಕಿದೆ. ಮಾಜಿ ಪೊಲೀಸ್ ಕಮಿಷನರ್ ಒಬ್ಬರು ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಒಬ್ಬನ ಮುಂದೆ ನಿಂತು ಕೈಮುಗಿದು ಬೆಂಬಲ ಕೋರುವುದು ಈ ವ್ಯವಸ್ಥೆಯ ದುರಂತ. ಇದು ಬಿಜೆಪಿ ಮಹಿಮೆ. ಈ ಚುನಾವಣೆಯಲ್ಲಿ ಬಿಜೆಪಿ ರೌಡಿ ಮೋರ್ಚಾ ಪ್ರಭಲವಾಗಿ ಕೆಲಸ ಮಾಡುತ್ತಿದೆ ಎಂದರೆ ಮುಂದೆ ಬಿಜೆಪಿ ಕ್ರಿಮಿನಲ್‌ಗಳ ಸಾಮ್ರಾಜ್ಯ ಸ್ಥಾಪಿಸುತ್ತದೆ ಎಂದೇ ಅರ್ಥ. ಮತದಾರರು ಎಚ್ಚರಾಗಬೇಕು. ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಮಾಜಿ ಪೊಲೀಸ್ ಕಮಿಷನರ್ ಒಬ್ಬರು ಮೋಸ್ಟ್ ವಾಂಟೆಡ್ ರೌಡಿ ಶೀಟರ್ ಒಬ್ಬನ ಮುಂದೆ ನಿಂತು ಕೈಮುಗಿದು ಬೆಂಬಲ ಕೋರುವುದು ಈ ವ್ಯವಸ್ಥೆಯ ದುರಂತ.
ಇದು ಬಿಜೆಪಿ ಮಹಿಮೆ!
ಈ ಚುನಾವಣೆಯಲ್ಲಿ ಪ್ರಭಲವಾಗಿ ಕೆಲಸ ಮಾಡುತ್ತಿದೆ ಎಂದರೆ ಮುಂದೆ ಬಿಜೆಪಿ ಕ್ರಿಮಿನಲ್‌ಗಳ ಸಾಮ್ರಾಜ್ಯ ಸ್ಥಾಪಿಸುತ್ತದೆ ಎಂದೇ ಅರ್ಥ.
ಮತದಾರರು ಎಚ್ಚರಾಗಬೇಕು. pic.twitter.com/1zHZMuB4e7
ಒಂದೆಡೆ ಸೈಲೆಂಟ್ ಸುನೀಲನ ಬೆಂಬಲಿಗರ ಆಕ್ರೋಶ ಹೆಚ್ಚಾಗುತ್ತಿದ್ದರೆ, ಇತ್ತ ಚಾಮರಾಜಪೇಟೆ ಬಿಜೆಪಿ ಮಂಡಳಿ ಅಧ್ಯಕ್ಷ ಹಾಗೂ ಕಾರ್ಯಕರ್ತರು ಭಾಸ್ಕರ್ ರಾವ್‌ಗೆ ಟಿಕೆಟ್ ನೀಡಿರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ. ಚಾಮರಾಜಪೇಟೆಯಿಂದ ಭಾಸ್ಕರ್ ರಾವ್‌ಗೆ ಟಿಕೆಟ್ ನೀಡಿರುವುದು ಸೂಕ್ತ ನಿರ್ಧಾರವಲ್ಲ. ನಮಗೆ ಭಾಸ್ಕರ್ ರಾವ್ ಬೇಡ ಎಂದು ಹೇಳಿದ್ದೇವೆ.ಮತದಾನದ ಮೂಲಕ ಭಾಸ್ಕರ್ ರಾವ್ ಬದಲು ಬೇರೆ ಅಭ್ಯರ್ಥಿಗೆ ಮತ ಹಾಕಿದ್ದೆವು. ಇದೀಗ ಪತ್ರದ ಮೂಲಕ ನಮ್ಮ ಇಂಗಿತ ವ್ಯಕ್ತಪಡಿಸಿದ್ದೇವೆ. ಇದನ್ನು ಬಿಜೆಪಿ ನಾಯಕ ರವಿ ಕುಮಾರ್‌ಗೆ ತಲುಪಿಸಿದ್ದೇವೆ. ಅವರ ಭರವಸೆಯೊಂದಿಗೆ ಮುಂದುವರಿಯುತ್ತಿದ್ದೇವೆ ಎಂದು ಚಾಮರಾಜಪೇಟೆ ಬಿಜೆಪಿ ಮಂಡಳಿ ಅಧ್ಯಶ್ರ ಚನ್ನಕೇಶವ ಹೇಳಿದ್ದಾರೆ.
ಬಿಜೆಪಿಯ ಮತ್ತೊಂದು ವಿಕೆಟ್ ಪತನ, ಟಿಕೆಟ್ ಕೈತಪ್ಪಿದ ಆರ್ ಶಂಕರ್ ರಾಜೀನಾಮೆ!
ಚಾಮರಾಜಪೇಟೆ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಕುರಿತು ಮಾತನಾಡಿದ ರವಿ ಕುಮಾರ್, ಭಾಸ್ಕರ್ ರಾವ್ ಬದಲಾವಣೆ ಮಾಡುವಂತೆ ಮನವಿ ಮಾಡಿದ್ದಾರೆ. ನಿಮ್ಮ ಹಾಗೆ ನಾನೂ ಕೂಡ ಬಿಜೆಪಿ ಕಾರ್ಯಕರ್ತ. ನಿಮ್ಮ ಮನವಿಯನ್ನು ನಿಮ್ಮ ಪ್ರತಿನಿಧಿಯಾಗಿ ರಾಜ್ಯಾಧ್ಯಕ್ಷರ ಜೊತೆ ಚರ್ಚಿಸುತ್ತೇನೆ. ನಿಮ್ಮ ಮನವಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿಕೊಡುತ್ತೇನೆ. ಚಾಮರಾಜಪೇಟೆ ಸದ್ಯದ ಪರಿಸ್ಥಿತಿ ಕುರಿತು ವರದಿ ನೀಡಿದ್ದೇನೆ. ನಮ್ಮ ಕಾರ್ಯಕರ್ತರಿಗೆ ನ್ಯಾಯ ಕೊಡಿಸಬೇಕಿದೆ. ಎಲ್ಲರೂ ಒಗ್ಗಟ್ಟಾಗಿ ಚಾಮರಾಜಪೇಟೆಯಲ್ಲಿ ಬಿಜೆಪಿ ಬಾವುಟ ಹಾರಿಸೋಣ ಎಂದು ರವಿಕುಮಾರ್ ಹೇಳಿದ್ದಾರೆ.