Karnataka election results 2023: ಬೆಂಗಳೂರು ಭಾಗದಲ್ಲಿ ಬಿಜೆಪಿ-ಕಾಂಗ್ರೆಸ್‌ ಮಿಶ್ರಫಲ!

By Kannadaprabha News  |  First Published May 14, 2023, 1:26 AM IST

ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಘಟನಾಘಟಿ ನಾಯಕರ ಅಬ್ಬರದ ಪ್ರಚಾರ, ರೋಡ್‌ ಶೋ ಪರಿಣಾಮ ಬೆಂಗಳೂರು ನಗರದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿದ್ದರೆ, ಒಕ್ಕಲಿಗ ಮತ ಕ್ರೋಢೀಕರಣದ ದೆಸೆಯಿಂದ ಕಾಂಗ್ರೆಸ್‌ ಗ್ರಾಮೀಣ ಹಾಗೂ ರಾಮನಗರ ಕ್ಷೇತ್ರದಲ್ಲಿ ತುಸು ಬಲಗೊಂಡಿದೆ. ಆದರೆ ಜೆಡಿಎಸ್‌ ಬಲ ಕುಸಿದಿದೆ. ಮೂರು ಜಿಲ್ಲೆಗಳ ಒಟ್ಟು 36 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 18, ಬಿಜೆಪಿ 17 ಹಾಗೂ ಜೆಡಿಎಸ್‌ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.


ಬೆಂಗಳೂರು (ಮೇ.14) : ಪ್ರಧಾನಿ ಮೋದಿ ಸೇರಿದಂತೆ ಬಿಜೆಪಿ ಘಟನಾಘಟಿ ನಾಯಕರ ಅಬ್ಬರದ ಪ್ರಚಾರ, ರೋಡ್‌ ಶೋ ಪರಿಣಾಮ ಬೆಂಗಳೂರು ನಗರದಲ್ಲಿ ಬಿಜೆಪಿ ಬಲ ಹೆಚ್ಚಿಸಿಕೊಂಡಿದ್ದರೆ, ಒಕ್ಕಲಿಗ ಮತ ಕ್ರೋಢೀಕರಣದ ದೆಸೆಯಿಂದ ಕಾಂಗ್ರೆಸ್‌ ಗ್ರಾಮೀಣ ಹಾಗೂ ರಾಮನಗರ ಕ್ಷೇತ್ರದಲ್ಲಿ ತುಸು ಬಲಗೊಂಡಿದೆ. ಆದರೆ ಜೆಡಿಎಸ್‌ ಬಲ ಕುಸಿದಿದೆ. ಮೂರು ಜಿಲ್ಲೆಗಳ ಒಟ್ಟು 36 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 18, ಬಿಜೆಪಿ 17 ಹಾಗೂ ಜೆಡಿಎಸ್‌ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.

ಬೆಂಗಳೂರು ನಗರ(Bengaluru city) ಜಿಲ್ಲೆಯ 28 ಕ್ಷೇತ್ರಗಳ ಪೈಕಿ ಬಿಜೆಪಿ 15, ಕಾಂಗ್ರೆಸ್‌ 13 ಕ್ಷೇತ್ರಗಳಲ್ಲಿ ಗೆದ್ದಿದ್ದರೆ, ಬೆಂಗಳೂರು ಗ್ರಾಮೀಣ(Bengaluru rural constituency) ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 1 ಕಡೆ ಬಿಜೆಪಿ ಜಯಭೇರಿ ಬಾರಿಸಿದೆ. ರಾಮನಗರ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ 2, ಬಿಜೆಪಿ ಹಾಗೂ ಜೆಡಿಎಸ್‌ ತಲಾ 1 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ಈ ಮೂರು ಜಿಲ್ಲೆಗಳ ಆರು ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್‌ ಈಗ 5 ಕ್ಷೇತ್ರಗಳಲ್ಲಿ ಸೋಲು ಅನುಭವಿಸಿದೆ.

Tap to resize

Latest Videos

Karnataka election results 2023: ಮಧ್ಯ ಕರ್ನಾಟಕದಲ್ಲಿ ಕಾಂಗ್ರೆಸ್‌ ಜಯಭೇರಿ!

ಬಿಜೆಪಿ-ಕಾಂಗ್ರೆಸ್‌ ಯಥಾಸ್ಥಿತಿ:

ಬೆಂಗಳೂರು ನಗರ ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನಿಂತುಕೊಂಡಿದೆ. ಜೊತೆಗೆ ಬೆಂಗಳೂರು ಗ್ರಾಮೀಣ ಹಾಗೂ ರಾಮನಗರ ಜಿಲ್ಲೆಯಲ್ಲಿ ತನ್ನ ಹೆಜ್ಜೆ ಇಟ್ಟಿದೆ. ಕಾಂಗ್ರೆಸ್‌ ಸಹ ಈ ಮೂರು ಜಿಲ್ಲೆಗಳಲ್ಲಿ ಹೆಚ್ಚಿನ ಸ್ಥಾನದಲ್ಲಿ ಗೆದ್ದಿದೆ. 2018ರ ಚುನಾವಣೆ ಹಾಗೂ ನಂತರ ನಡೆದ ‘ಆಪರೇಷನ್‌ ಕಮಲ’ ಪರಿಣಾಮ ತನ್ನ ಕ್ಷೇತ್ರಗಳ ಸಂಖ್ಯೆಯನ್ನು 15ಕ್ಕೆ ಹೆಚ್ಚಿಸಿಕೊಂಡಿದ್ದ ಬಿಜೆಪಿ ಈಗ ನಡೆದಿರುವ ಚುನಾವಣೆಯಲ್ಲಿ ಅಷ್ಟೇ ಸಂಖ್ಯೆಯ ಕ್ಷೇತ್ರವನ್ನು ಉಳಿಸಿಕೊಂಡಿದೆ. ಆದರೆ ಸಣ್ಣ ಬದಲಾವಣೆ ಎಂದರೆ ಈ ಹಿಂದೆ ಜೆಡಿಎಸ್‌ ವಶದಲ್ಲಿದ್ದ ದಾಸರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಗೆದ್ದಿದೆ. ಇದಕ್ಕೆ ಬದಲಾಗಿ ಗೋವಿಂದರಾಜನಗರ ಕ್ಷೇತ್ರದಲ್ಲಿ ಬಿಜೆಪಿ ಪರಾಭವಗೊಂಡಿದೆ. ಉಳಿದಂತೆ ಹಾಲಿ ಬಿಜೆಪಿ ಪ್ರತಿನಿಧಿಸುತ್ತಿದ್ದ ಎಲ್ಲ ಕ್ಷೇತ್ರಗಳನ್ನು ಉಳಿಸಿಕೊಂಡಿದೆ.

ಬಲ ಹೆಚ್ಚಿಸಿಕೊಂಡ ಕಾಂಗ್ರೆಸ್‌:

ಇನ್ನು ಕಳೆದ ಚುನಾವಣೆ ಹಾಗೂ ತದ ನಂತರ ಅಪರೇಷನ್‌ ಕಮಲದ ನಂತರ ಬೆಂಗಳೂರು ನಗರ ಜಿಲ್ಲೆಯಲ್ಲಿ 12 ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಈಗ ಹೆಚ್ಚುವರಿಯಾಗಿ ಗೋವಿಂದರಾಜನಗರ ಕ್ಷೇತ್ರ ಗೆಲ್ಲುವ ಮೂಲಕ ಸಂಖ್ಯಾಬಲ 13ಕ್ಕೆ ಏರಿದೆ. ಕಳೆದ ಬಾರಿ ಗೆದ್ದಿದ್ದ ಕ್ಷೇತ್ರಗಳಲ್ಲಿ ಪುನಃ ಜಯಭೇರಿ ಬಾರಿಸಿದೆ.

ಕಳೆದ 2018ರ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಲ್ಲಿ ಗೆದ್ದಿದ್ದ ಜೆಡಿಎಸ್‌ ಮಹಾಲಕ್ಷ್ಮೇ ಲೇಔಟ್‌ ಕ್ಷೇತ್ರದಿಂದ ಜಯಗಳಿಸಿದ್ದ ಕೆ.ಗೋಪಾಲಯ್ಯ ಆಪರೇಷನ್‌ ಕಮಲ ಪರಿಣಾಮ ಬಿಜೆಪಿಗೆ ಸೇರಿದ್ದರು. ಹೀಗಾಗಿ ದಾಸರಹಳ್ಳಿ ಕ್ಷೇತ್ರ ಮಾತ್ರ ಜೆಡಿಎಸ್‌ ತೆಕ್ಕೆಯಲ್ಲಿತ್ತು. ಆದರೆ ಈಗ ನಡೆದ ಚುನಾವಣೆಯಲ್ಲಿ ದಾಸರಹಳ್ಳಿ ಕ್ಷೇತ್ರದಲ್ಲಿ ಬಿಜೆಪಿ ಎದುರು ಸೋತಿದೆ.

ಬೆಂ.ಗ್ರಾಮೀಣ-ಕುಸಿದ ಜೆಡಿಎಸ್‌:

ಕಳೆದ ಚುನಾವಣೆಯಲ್ಲಿ ಬೆಂಗಳೂರು ಗ್ರಾಮೀಣ ಜಿಲ್ಲೆಯ ನಾಲ್ಕು ಕ್ಷೇತ್ರಗಳ ಪೈಕಿ ಎರಡರಲ್ಲಿ ಗೆದ್ದಿದ್ದ ಜೆಡಿಎಸ್‌ ಈ ಬಾರಿ ಒಂದೂ ಕ್ಷೇತ್ರದಲ್ಲಿ ಗೆಲುವು ಸಾಧಿಸಲಾಗಿಲ್ಲ. ಕಳೆದ ಬಾರಿ ದೊಡ್ಡ ಬಳ್ಳಾಪುರ ಕ್ಷೇತ್ರದಲ್ಲಿ ಗೆದ್ದಿದ್ದ ಕಾಂಗ್ರೆಸ್‌ ಈಗ ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ಕ್ಷೇತ್ರಗಳಲ್ಲಿ ಜಯಗಳಿಸುವ ಮೂಲಕ ದಾಪುಗಾಲು ಹಾಕಿದೆ. ಆದರೆ ದೊಡ್ಡಬಳ್ಳಾಪುರ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಟ್ಟಿದೆ.

ರಾಮನಗರ ಜಿಲ್ಲೆ-ಅರಳಿದ ಕಮಲ:

ನಾಲ್ಕು ಕ್ಷೇತ್ರಗಳಿರುವ ರಾಮನಗರ ಜಿಲ್ಲೆಯಲ್ಲಿ ಮೊದಲಿನಿಂದಲೂ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಡುವೆ ಪೈಪೋಟಿ. ಜಿಲ್ಲೆಯಲ್ಲಿ ಕಮಲ ಅರಳಿಸಲು ಹಲವಾರು ವರ್ಷಗಳಿಂದ ಬೆವರು ಸುರಿಸಿದರೂ ಯಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಮಾಗಡಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿದೆ. ರಾಮನಗರದಲ್ಲಿ ಬಹಳ ವರ್ಷಗಳ ನಂತರ ಕಾಂಗ್ರೆಸ್‌ ಗೆದ್ದಿದೆ. ಇನ್ನು ನಿರೀಕ್ಷೆಯಂತೆ ಕನಕಪುರ ಹಾಗೂ ಚೆನ್ನಪಟ್ಟಣ ಕ್ಷೇತ್ರದಿಂದ ಕ್ರಮವಾಗಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಜಯಗಳಿಸಿದೆ.

Karnataka election results 2023 : ಕಾಂಗ್ರೆಸ್ ವಶವಾಯ್ತು ಕಲ್ಯಾಣ ಕರ್ನಾಟಕ!

ಬಲಾಬಲ

  • ಬೆಂಗಳೂರು ನಗರ ಜಿಲ್ಲೆ (ಒಟ್ಟು 28)
  • ಬಿಜೆಪಿ-15
  • ಕಾಂಗ್ರೆಸ್‌ 13
  • ಬೆಂಗಳೂರು ಗ್ರಾಮೀಣ ಜಿಲ್ಲೆ (ಒಟ್ಟು 4)
  • ಕಾಂಗ್ರೆಸ್‌-3
  • ಬಿಜೆಪಿ-1
  • ರಾಮನಗರ (ಒಟ್ಟು 4)
  • ಕಾಂಗ್ರೆಸ್‌-2
  • ಬಿಜೆಪಿ-1
  • ಜೆಡಿಎಸ್‌-1
click me!