ರಾಜರಾಜೇಶ್ವರಿನಗರ
ತೀವ್ರ ಹಣಾಹಣಿಯಲ್ಲಿ ಮುನಿರತ್ನಗೆ ಗೆಲುವು
ಮುನಿರತ್ನ (ಬಿಜೆಪಿ)-1,27,980
ಕುಸುಮಾ ಎಚ್. (ಕಾಂಗ್ರೆಸ್)- 1,16,138
ಡಾ. ವಿ. ನಾರಾಯಣಸ್ವಾಮಿ (ಜೆಡಿಎಸ್) - 7,795
ಕಳೆದ ಉಪ ಚುನಾವಣೆಯಲ್ಲಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ಮುನಿರತ್ನ ವಿರುದ್ಧ ಭಾರೀ ಅಂತರದಿಂದ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕುಸುಮಾ ಈ ಬಾರಿ ಚುನಾವಣೆಯಲ್ಲಿ ಮುನಿರತ್ನ ಅವರಿಗೆ ಒಂದು ಹಂತದಲ್ಲಿ ಸೋಲಿನ ಭೀತಿ ಮೂಡಿಸಿದ್ದರು. ಮತ ಎಣಿಕೆ ವೇಳೆ ಕೆಲ ಹೊತ್ತಿನ ಬಳಿಕ ಸತತ ಮುನ್ನಡೆ ಸಾಧಿಸಿದ್ದ ಕುಸುಮಾ 21ನೇ ಸುತ್ತಿನ ಅಂತ್ಯಕ್ಕೆ ಬರೋಬ್ಬರಿ 10 ಸಾವಿರ ಮುನ್ನಡೆ ಸಾಧಿಸಿದ್ದರು. ಬಳಿಕ ಕ್ರಮೇಣ ಮುನ್ನಡೆ ಕ್ಷೀಣಿಸುತ್ತಾ 29ನೇ ಸುತ್ತಿಗೆ ಮುನಿರತ್ನ ಮುನ್ನಡೆಗೆ ಬಂದು ಅಂತಿಮವಾಗಿ 11,607 ಮತಗಳ ಅಂತರದಿಂದ ಗೆದ್ದು ಬೀಗಿದರು. ಉಪಚುನಾವಣೆ ಸೋಲಿನ ಬಳಿಕ ಜನರೊಂದಿಗೆ ಒಡನಾಟ ಬೆಳೆಸಿಕೊಂಡಿದ್ದ ಕುಸುಮಾ ಒಕ್ಕಲಿಗರನ್ನು ಒಗ್ಗೂಡಿಸಲು ಯಶಸ್ವಿಯಾಗಿದ್ದರು. ಮುನಿರತ್ನ ಅವರೊಂದಿಗೆ ಅಸಮಾಧಾನ ಹೊಂದಿದ್ದ ಬಿಜೆಪಿ ಮಾಜಿ ಪಾಲಿಕೆ ಸದಸ್ಯರನ್ನು ಸೆಳೆದು ತೀವ್ರ ಹೋರಾಟ ನಡೆಸಿದ್ದರು. ಇದರ ಹೊರತಾಗಿಯೂ ತಮ್ಮ ವೈಯಕ್ತಿಕ ಮತಗಳು, ಬಿಜೆಪಿ ಸಾಂಪ್ರದಾಯಿಕ ಮತಗಳಿಂದಾಗಿ ಮುನಿರತ್ನ ಅವರು ಅಂತಿಮ ಹಂತದಲ್ಲಿ ಗೆಲುವಿನ ದಡ ಸೇರಿದ್ದಾರೆ. ತನ್ಮೂಲಕ ಸತತ ನಾಲ್ಕನೇ ಬಾರಿಗೆ ಜಯ ದಾಖಲಿಸಿದ್ದಾರೆ.
2- ಹೆಬ್ಬಾಳ ವಿಧಾನಸಭಾ ಕ್ಷೇತ್ರ
ಬೈರತಿ ಸುರೇಶ್ ಭರ್ಜರಿ ಗೆಲುವು
ಬೈರತಿ ಸುರೇಶ್ (ಕಾಂಗ್ರೆಸ್) - 91,838
ಕಟ್ಟಾಜಗದೀಶ್ (ಬಿಜೆಪಿ) - 61,084
ಸಯ್ಯದ್ ಮೊಹಿದ್ ಅಲ್ತಾಫ್ (ಜೆಡಿಎಸ್) - 1604
ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಬೈರತಿ ಸುರೇಶ್ ಅವರು ಮತ್ತೊಮ್ಮೆ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅಭಿವೃದ್ಧಿ ಕೆಲಸ, ಜನರೊಂದಿಗಿನ ಒಡನಾಟ, ಸ್ವಂತ ಖರ್ಚಿನಿಂದ ಜನರ ಸಮಸ್ಯೆ ಬಗೆಹರಿಸುವ ಮನೋಭಾವದ ಸುರೇಶ್ ಅವರು ಸುಲಭ ಗೆಲುವು ಸಾಧಿಸಿದ್ದು, ತನ್ಮೂಲಕ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುರೇಶ್ ವಿರುದ್ಧ ಕಣಕ್ಕಿಳಿದಿದ್ದ ಬಿಜೆಪಿಯ ಕಟ್ಟಾಜಗದೀಶ್ ಮೊದಲ ಸುತ್ತಿನ ಮತ ಎಣಿಕೆಯಿಂದಲೇ ಹಿನ್ನಡೆ ಅನುಭವಿಸಿದರು. ಸತತ 17 ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡ ಸುರೇಶ್ 30,823 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದರು. ಮತ ವಿಭಜನೆ ಮೂಲಕ ಸುರೇಶ್ ಅವರಿಗೆ ಪೆಟ್ಟು ನೀಡಬಹುದು ಎಂದು ಅಂದಾಜಿಸಿದ್ದ ಜೆಡಿಎಸ್‌ನ ಸಯ್ಯದ್ ಮೊಹಿದ್ ಅಲ್ತಾಫ್ ಕೇವಲ 1604 ಮತ ಗಳಿಸುವ ಮೂಲಕ ಸೋಲೊಪ್ಪಿಕೊಂಡರು. 2018ರ ಚುನಾವಣೆಯಲ್ಲಿ ವೈ.ಎ. ನಾರಾಯಣಸ್ವಾಮಿ ವಿರುದ್ಧ 21 ಸಾವಿರ ಮತಗಳ ಅಂತರದಿಂದ ಗೆದ್ದಿದ್ದ ಸುರೇಶ್ ಈ ಬಾರಿ ಗೆಲುವಿನ ಅಂತರವನ್ನು ಹೆಚ್ಚಿಸಿಕೊಂಡು ಕ್ಷೇತ್ರದ ಮೇಲಿನ ಹಿಡಿತ ಗಟ್ಟಿಗೊಳಿಸಿಕೊಂಡಿದ್ದಾರೆ.
3- ಪುಲಕೇಶಿನಗರ
ಕೈ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತು
ಎ.ಸಿ.ಶ್ರೀನಿವಾಸ್ (ಕಾಂಗ್ರೆಸ್) - 87,316
ಅಖಂಡ ಶ್ರೀನಿವಾಸಮೂರ್ತಿ (ಬಿಎಸ್‌ಪಿ) - 25,106
ಎ. ಮುರಳಿ (ಬಿಜೆಪಿ) - 10,624
ಪುಲಕೇಶಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಎ.ಸಿ. ಶ್ರೀನಿವಾಸ್ ಭರ್ಜರಿ ಗೆಲುವು ಸಾಧಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್ ಶಾಸಕಾಗಿದ್ದ ಅಖಂಡ ಶ್ರೀನಿವಾಸ ಮೂರ್ತಿ ಅವರಿಗೆ ಡಿಜೆ ಹಳ್ಳಿ ಗಲಭೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದ ಕ್ಷೇತ್ರವಿದು. ಪುಲಿಕೇಶಿನಗರ ಟಿಕೆಟ್ ಘೋಷಿಸದಿದ್ದರೂ ಕಾಂಗ್ರೆಸ್ ಟಿಕೆಟ್ ಸಿಗುವುದಿಲ್ಲ ಎಂಬ ಕಾರಣಕ್ಕೆ ಶ್ರೀನಿವಾಸ ಮೂರ್ತಿ ಬಿಎಸ್‌ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಇವರ ವಿರುದ್ಧ ಎರಡು ಬಾರಿ ಮಹದೇವಪುರದಿಂದ ಸ್ಪರ್ಧಿಸಿ ಸೋತಿದ್ದ ಎ.ಸಿ. ಶ್ರೀನಿವಾಸ್ ಅವರನ್ನು ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಮಾಡಿತ್ತು. ಎಸ್‌ಡಿಪಿಐ, ಬಿಎಸ್‌ಪಿ, ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಹಣಾಹಣಿ ಹಾಗೂ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಕ್ಷೇತ್ರಕ್ಕೆ ಹೊಸಮುಖವಾಗಿರುವ ಶ್ರೀನಿವಾಸ್‌ಗೆ ಟಿಕೆಟ್ ನೀಡಿದ್ದರಿಂದ ಫಲಿತಾಂಶ ಕುತೂಹಲ ಮೂಡಿಸಿತ್ತು. ಆದರೆ, ಅಲ್ಪಸಂಖ್ಯಾತರು ಹಾಗೂ ದಲಿತರೇ ಹೆಚ್ಚಿರುವ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಲಭ ಗೆಲುವು ಸಾಧಿಸಿದೆ. ಕಳೆದ ಚುನಾವಣೆಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಅಂತರದಿಂದ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದ ಈ ಕ್ಷೇತ್ರದಲ್ಲಿ ಈ ಬಾರಿಯೂ ಎ.ಸಿ. ಶ್ರೀನಿವಾಸ್ 62 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ. ಈ ಮೂಲಕ ಕ್ಷೇತ್ರ ಕಾಂಗ್ರೆಸ್‌ನ ಭದ್ರಕೋಟೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
4- ಚಿಕ್ಕಪೇಟೆ
ಕಾಂಗ್ರೆಸ್‌ಗೆ ಬಂಡಾಯ ಅಭ್ಯರ್ಥಿ ಹೊಡೆತ
ಉದಯ್ ಗರುಡಾಚಾರ್ (ಬಿಜೆಪಿ) - 57,299
ಆರ್.ವಿ. ದೇವರಾಜ್ (ಕಾಂಗ್ರೆಸ್) - 45,186
ಯೂಸುಫ್ ಷರೀಫ್ -ಕೆಜಿಎಫ್ ಬಾಬು( ಪಕ್ಷೇತರ)- 20,931
ಗೆಲುವಿನ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್‌ನ ಆರ್.ವಿ. ದೇವರಾಜ್ ಅವರಿಗೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಯೂಸುಫ್ ಷರೀಫ್ (ಕೆಜಿಎಫ್ ಬಾಬು) ನೀಡಿದ ಹೊಡೆತದ ಪರಿಣಾಮ ಬಿಜೆಪಿಯ ಉದಯ್ ಗರುಡಾಚಾರ್ ಮತ್ತೊಮ್ಮೆ ಗೆಲುವಿನ ನಗೆ ಬೀರಿದ್ದಾರೆ.
ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಮಾಜಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಕೆಜಿಎಫ್ ಬಾಬು ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದರು. ಗಂಗಾಂಬಿಕೆ ನಾಮಪತ್ರ ವಾಪಸು ಪಡೆದರೂ ಕೆಜಿಎಫ್ ಬಾಬು ಸ್ಪರ್ಧೆಯಲ್ಲಿ ಮುಂದುವರೆದು ಕಾಂಗ್ರೆಸ್ ವೋಟ್ ಬ್ಯಾಂಕ್ ಆಗಿರುವ ಅಲ್ಪಸಂಖ್ಯಾತ ಮತಗಳನ್ನು ಸೆಳೆಯಲು ಯಶಸ್ವಿಯಾದರು. ಹಣ, ಮನೆ ನಿರ್ಮಾಣ, ಉಚಿತ ಗ್ಯಾಸ್ ಸಿಲಿಂಡರ್ ಭರವಸೆಗಳ ಮೂಲಕ ಕ್ಷೇತ್ರದಲ್ಲಿ ಹವಾ ಸೃಷ್ಟಿಸಿದ್ದರು. ಎಲ್ಲದರ ಪರಿಣಾಮವಾಗಿ ಕೆಜಿಎಫ್ ಬಾಬು 20,921 ಮತ ಗಳಿಸಿದರು. ಹೀಗಾಗಿ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳು ವಿಭಜನೆಯಾಗಿ ಆರ್.ವಿ. ದೇವರಾಜ್ 45 ಸಾವಿರ ಮತ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ 57 ಸಾವಿರ ಮತ ಗಳಿಸಿದ ಉದಯ್ ಗರುಡಾಚಾರ್ 12 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿ ಸತತ ಎರಡನೇ ಬಾರಿಗೂ ಶಾಸಕರಾಗಿ ಆಯ್ಕೆಯಾದರು.
5- ಬಸವನಗುಡಿ
ಮತ್ತೊಮ್ಮೆ ರವಿಸುಬ್ರಹ್ಮಣ್ಯ ಗೆಲುವು
ಎಲ್.ಎ. ರವಿಸುಬ್ರಹ್ಮಣ್ಯ (ಬಿಜೆಪಿ): 78,854
ಯು.ಬಿ. ವೆಂಕಟೇಶ್ (ಕಾಂಗ್ರೆಸ್): 23,876
ಅರಮನೆ ಶಂಕರ್ (ಜೆಡಿಎಸ್): 19,931
ಬಿಜೆಪಿಯಲ್ಲಿನ ಬಂಡಾಯದ ನಡುವೆಯೂ ಮತ್ತೊಮ್ಮೆ ಟಿಕೆಟ್ ಪಡೆದಿದ್ದ ಎಲ್.ಎ. ರವಿಸುಬ್ರಹ್ಮಣ್ಯ ಬಸವನಗುಡಿ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವಿನ ನಗೆ ಬೀರಿದ್ದಾರೆ. ಮಾಜಿ ಮೇಯರ್ ಕಟ್ಟೆಸುಬ್ರಹ್ಮಣ್ಯ ಸೇರಿ ಹಲವರು ಬಿಜೆಪಿ ಟಿಕೆಟ್‌ಗಾಗಿ ಲಾಬಿ ನಡೆಸಿದ್ದರು. ಆದರೂ, ಪಕ್ಷ ಎಲ್.ಎ.ರವಿಸುಬ್ರಹ್ಮಣ್ಯ ಅವರಿಗೆ ಮತ್ತೊಂದು ಅವಕಾಶ ನೀಡಿತ್ತು. ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್ ಕ್ಷೇತ್ರದಲ್ಲಿ ಪ್ರಬಲ ಪೈಪೋಟಿ ನೀಡುತ್ತಾರೆ ಎಂಬ ವಾತಾವರಣವಿತ್ತು. ಅವರೊಂದಿಗೆ ಜೆಡಿಎಸ್‌ನ ಅರಮನೆ ಶಂಕರ್ ಕೂಡ ಕ್ಷೇತ್ರ ವ್ಯಾಪ್ತಿಯಲ್ಲಿ ಒಕ್ಕಲಿಗ, ಅಲ್ಪಸಂಖ್ಯಾತ ಮತಗಳನ್ನು ಒಗ್ಗೂಡಿಸುವ ಪ್ರಯತ್ನ ನಡೆಸಿದ್ದರು. ಆದರೆ, ಆ ಎಲ್ಲ ಪ್ರಯತ್ನಗಳಿಗೂ ತಣ್ಣೀರೆರಚುವಂತೆ ಎಲ್.ಎ. ರವಿಸುಬ್ರಹ್ಮಣ್ಯ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಹತ್ತಿರದ ಪ್ರತಿಸ್ಪರ್ಧಿ ಯು.ಬಿ. ವೆಂಕಟೇಶ್ ವಿರುದ್ಧ 54,978 ಭಾರೀ ಮತಗಳ ಅಂತರದಿಂದ ರವಿಸುಬ್ರಹ್ಮಣ್ಯ ಗೆಲುವು ಸಾಧಿಸಿದರು.
6- ಬಿಟಿಎಂ ಲೇಔಟ್
ರಾಮಲಿಂಗಾರೆಡ್ಡಿಗೆ ಸತತ 7ನೇ ಗೆಲುವು
ರಾಮಲಿಂಗಾರೆಡ್ಡಿ (ಕಾಂಗ್ರೆಸ್): 68,557
ಕೆ.ಆರ್. ಶ್ರೀಧರ್ ರೆಡ್ಡಿ (ಬಿಜೆಪಿ): 59,335
ಎಂ.ವೆಂಕಟೇಶ್ (ಜೆಡಿಎಸ್): 1841
ಕಾಂಗ್ರೆಸ್‌ನ ಹಿರಿಯ ನಾಯಕ ರಾಮಲಿಂಗಾರೆಡ್ಡಿ ಬಿಟಿಎಂ ಲೇಔಟ್‌ನಿಂದ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆಮೂಲಕ ಬಿಟಿಎಂ ಲೇಔಟ್ ಕಾಂಗ್ರೆಸ್‌ನ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಖುದ್ದು ಅಮಿತ್ ಶಾ ಕ್ಷೇತ್ರದಲ್ಲಿ ಸಂಚರಿಸಿ ರಾಮಲಿಂಗಾರೆಡ್ಡಿ ವಿರುದ್ಧ ಪ್ರಚಾರ ನಡೆಸಿ, ಬಿಜೆಪಿಯ ಕೆ.ಆರ್. ಶ್ರೀಧರ್ ರೆಡ್ಡಿ ಪರ ಮತಚಲಾಯಿಸುವಂತೆ ಮತದಾರರಲ್ಲಿ ಕೋರಿದ್ದರು. ಅಲ್ಲದೆ, ಚುನಾವಣೆಯುದ್ದಕ್ಕೂ ಒಂದಿಲ್ಲೊಂದು ಗದ್ದಲದಿಂದ ಬಿಟಿಎಂ ಲೇಔಟ್ ಗಮನ ಸೆಳೆದಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು, ಮುಖಂಡರ ನಡುವೆ ಗದ್ದಲುಗಳು ನಡೆದು ದೂರು, ಪ್ರತಿದೂರು ದಾಖಲಾಗಿದ್ದವು. ಆದರೂ ಬಿಜೆಪಿಯ ಎಲ್ಲ ಚುನಾವಣಾ ತಂತ್ರವನ್ನು ಮೀರಿ ರಾಮಲಿಂಗಾರೆಡ್ಡಿ ಅವರು ಕೆ.ಆರ್. ಶ್ರೀಧರ್ ರೆಡ್ಡಿ ವಿರುದ್ಧ 9,222 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
7- ಬ್ಯಾಟರಾಯನಪುರ
ಮತ್ತೆ ಬ್ಯಾಟರಾಯನಪುರ ಕೈ ತೆಕ್ಕೆಗೆ
ಕೃಷ್ಣ ಬೈರೇಗೌಡ (ಕಾಂಗ್ರೆಸ್): 1,60,182
ಎಚ್.ಸಿ.ತಮ್ಮೇಶ್ ಗೌಡ (ಬಿಜೆಪಿ): 1,21,978
ಪಿ.ನಾಗರಾಜ ಗೌಡ (ಜೆಡಿಎಸ್): 4,365
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪ್ರಾಬಲ್ಯವಿರುವ ಕ್ಷೇತ್ರಗಳಲ್ಲೊಂದಾದ ಬ್ಯಾಟರಾಯನಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದೆರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಎ. ರವಿ ಅವರಿಗೆ ಈ ಬಾರಿ ಟಿಕೆಟ್ ನೀಡದೆ ಬಿಜೆಪಿ ಎಚ್.ಸಿ. ತಮ್ಮೇಶ್ ಗೌಡ ಅವರನ್ನು ಕಣಕ್ಕಿಳಿಸಿತು. ಹೀಗಾಗಿ ಕ್ಷೇತ್ರದ ಮತದಾರರಲ್ಲಿ ಸತತ ಸೋಲು ಕಂಡ ಎ. ರವಿ ಬಗ್ಗೆ ಇದ್ದ ಅನುಕಂಪದ ಲಾಭ ಈ ಬಾರಿ ಬಿಜೆಪಿ ಪಡೆಯದಂತಾಗಿತ್ತು. ಆರಂಭದಲ್ಲಿ ಕೃಷ್ಣ ಬೈರೇಗೌಡ ಅವರಿಗೆ ಪ್ರಬಲ ಸ್ಪರ್ಧಿ ಎಂದೇ ತಮ್ಮೇಶ್ ಗೌಡ ಗುರುತಿಸಿಕೊಂಡಿದ್ದರಾದರೂ, ಚುನಾವಣಾ ಫಲಿತಾಂಶ ಅದಕ್ಕೆ ವ್ಯತಿರಿಕ್ತವಾಗಿ ಬಂದಿದೆ. ತಮ್ಮೇಶ್ ಗೌಡ ಅವರಿಗಿಂತ ಕೃಷ್ಣ ಬೈರೇಗೌಡ 38,204 ಹೆಚ್ಚಿನ ಮತಗಳನ್ನು ಪಡೆದು, ಬ್ಯಾಟರಾಯನಪುರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆಲುವಿನ ನಗೆ ಬೀರುವಂತೆ ಮಾಡಿದ್ದಾರೆ.
8- ಯಶವಂತಪುರ
ಎಸ್.ಟಿ. ಸೋಮಶೇಖರ್ ಗೆಲುವು
ಎಸ್.ಟಿ. ಸೋಮಶೇಖರ್ (ಬಿಜೆಪಿ): 1,69,149
ಜವರಾಯಿಗೌಡ (ಜೆಡಿಎಸ್): 1,54,031
ಬಾಲರಾಜ ಗೌಡ (ಕಾಂಗ್ರೆಸ್): 21,684
2018ರ ಚುನಾವಣೆಯಲ್ಲಿ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಬಿಜೆಪಿ ಪಾರಮ್ಯವಿದೆ. ಸಮ್ಮಿಶ್ರ ಸರ್ಕಾರದ ವಿರುದ್ಧ ಬಂಡಾಯವೆದ್ದು ಬಿಜೆಪಿ ಸೇರಿ 2019ರ ಉಪಚುನಾವಣೆಯಲ್ಲಿ ಮರು ಆಯ್ಕೆಯಾಗಿದ್ದ ಎಸ್.ಟಿ. ಸೋಮಶೇಖರ್, ಇದೀಗ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸತತ ಮೂರು ಬಾರಿ ಸೋತಿದ್ದ ಜವರಾಯಿಗೌಡ ನಾಲ್ಕನೇ ಬಾರಿ ಸೋಲು ಕಂಡಿದ್ದಾರೆ. ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರೇ ಖುದ್ದು ತೆರಳಿ ಯಶವಂತಪುರದಲ್ಲಿ ಜವರಾಯಿಗೌಡ ಪರವಾಗಿ ಪ್ರಚಾರ ನಡೆಸಿದ್ದರು. ಸೋಲಿನ ಅನುಕಂಪ ಮತ್ತು ಜೆಡಿಎಸ್ ವರಿಷ್ಠರ ಪ್ರಚಾರದಿಂದ ಈ ಬಾರಿ ಜೆಡಿಎಸ್ ಗೆಲುವು ಸಾಧಿಸಲಿದೆ ಎಂಬ ಮಾತುಗಳು ದಟ್ಟವಾಗಿತ್ತು. ಆದರೆ, ಎಸ್.ಟಿ. ಸೋಮಶೇಖರ್ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿದ್ದು, 15,118 ಮತಗಳ ಅಂತರದಿಂದ ಕ್ಷೇತ್ರವನ್ನು ಮತ್ತೊಮ್ಮೆ ವಶಕ್ಕೆ ಪಡೆದಿದ್ದಾರೆ.
9 - ದಾಸರಹಳ್ಳಿ
ಬಿಜೆಪಿಯ ಎಸ್.ಮುನಿರಾಜು ಗೆಲುವು
ಎಸ್. ಮುನಿರಾಜು (ಬಿಜೆಪಿ): 91,289
ಆರ್. ಮಂಜುನಾಥ್ (ಜೆಡಿಎಸ್): 82,095
ಜಿ. ಧನಂಜಯ (ಕಾಂಗ್ರೆಸ್); 43,519
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಕ್ಷೇತ್ರವನ್ನು ಕಸಿದುಕೊಂಡಿದ್ದ ಜೆಡಿಎಸ್ ಈ ಬಾರಿ ಬಿಜೆಪಿ ಎದುರು ಶರಣಾಗಿದೆ. ಬಿಜೆಪಿಯ ಭದ್ರಕೋಟೆ ಎಂದೇ ಬಿಂಬಿತವಾಗಿದ್ದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಒಳೇಟಿನ ಪರಿಣಾಮ ಕಳೆದ ಬಾರಿ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡಲಾಗಿತ್ತು. ಆದರೆ, ಈ ಬಾರಿ ಮಾಜಿ ಶಾಸಕ ಎಸ್. ಮುನಿರಾಜು ಮತ್ತೆ ಕಣಕ್ಕಿಳಿದು ಹಾಲಿ ಶಾಸಕ ಜೆಡಿಎಸ್‌ನ ಆರ್. ಮಂಜುನಾಥ್ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ ಕ್ಷೇತ್ರಗಳ ಪೈಕಿ ದಾಸರಹಳ್ಳಿ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ಎಲ್ಲರೂ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಕಳೆದ ಬಾರಿ ಸೋಲಿನಿಂದ ಪಾಠ ಕಲಿತಿದ್ದ ಎಸ್. ಮುನಿರಾಜು ಬಿಜೆಪಿಯ ಸ್ಥಳೀಯ ಮುಖಂಡರು, ಕಾರ್ಯಕರ್ತರನ್ನು ಒಟ್ಟಿಗೆ ಕರೆದುಕೊಂಡು ಚುನಾವಣೆ ಎದುರಿಸಿ ಗೆಲುವು ಸಾಧಿಸಿದ್ದಾರೆ. ಎಸ್. ಮುನಿರಾಜು ಅವರು ಆರ್. ಮಂಜುನಾಥ್‌ಗಿಂತ 9,194 ಹೆಚ್ಚುವರಿ ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು.
10- ಹೊಸಕೋಟೆ
ಸಚಿವ ಎಂಟಿಬಿ ನಾಗರಾಜ್‌ಗೆ ಸೋಲುಣಿಸಿದ ಶರತ್
ಶರತ್ ಬಚ್ಚೇಗೌಡ (ಕಾಂಗ್ರೆಸ್) - 1,07,220
ಎಂಟಿಬಿ ನಾಗರಾಜ್ (ಬಿಜೆಪಿ) - 1,02,145
ಸಿ. ನಾರಾಯಣಸ್ವಾಮಿ (ಪಕ್ಷೇತರ) - 1,425
2018ರಲ್ಲಿ ಗೆದ್ದು ಸಮ್ಮಿಶ್ರ ಸರ್ಕಾರದಲ್ಲಿ ಸಚಿವರಾಗಿ ನಂತರ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿ ನಂತರ 2019ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಎಂಟಿಬಿ ನಾಗರಾಜ್ ಮತ್ತೊಮ್ಮೆ ಸೋಲನುಭವಿಸಿದ್ದಾರೆ. 2019ರ ಉಪಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಬಂಡಾಯವೆದ್ದು ಪಕ್ಷೇತರರಾಗಿ ಸ್ಪರ್ಧಿಸಿದ್ದ ಶರತ್ ಬಚ್ಚೇಗೌಡ ಗೆಲುವು ಸಾಧಿಸಿದ್ದರು. ಆನಂತರ ಕ್ಷೇತ್ರದಲ್ಲಿ ತಮ್ಮ ಹಿಡಿತ ಬಿಗಿ ಮಾಡಿಕೊಂಡಿದ್ದಲ್ಲದೆ, ಕಾಂಗ್ರೆಸ್‌ಗೆ ಬೆಂಬಲವನ್ನೂ ಸೂಚಿಸಿದ್ದರು. ಈ ಬಾರಿ ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧೆಗಿಳಿದಿದ್ದ ಶರತ್ ಬಚ್ಚೇಗೌಡ ಹಾಗೂ ಕ್ಷೇತ್ರದಲ್ಲಿ ಮತ್ತೆ ಶಾಸಕರಾಗಿ ಆಯ್ಕೆಯಾಗುವ ಹಂಬಲದಲ್ಲಿ ಬಿಜೆಪಿಯಿಂದ ಎಂಟಿಬಿ ನಾಗರಾಜ್ ಸ್ಪರ್ಧಿಸಿದ್ದು, ಇಬರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿತ್ತು. ಇಬ್ಬರಲ್ಲಿ ಯಾರೇ ಗೆದ್ದರೂ ಅಂತರ ಕಡಿಮೆ ಇರಲಿದೆ ಎಂಬ ಅಭಿಪ್ರಾಯ ಕ್ಷೇತ್ರದಲ್ಲಿ ವ್ಯಕ್ತವಾಗಿತ್ತು. ಅದರಂತೆ ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ಅವರು ಎಂಟಿಬಿ ಅವರಿಗಿಂತ 5,075 ಹೆಚ್ಚಿನ ಮತಗಳನ್ನು ಪಡೆದು ಎರಡನೇ ಬಾರಿಗೆ ಶಾಸಕರಾಗಿದ್ದಾರೆ.
11- ದೇವನಹಳ್ಳಿ
ಕೆ.ಎಚ್.ಮುನಿಯಪ್ಪ ಗೆಲುವು
ಕೆ.ಎಚ್. ಮುನಿಯಪ್ಪ (ಕಾಂಗ್ರೆಸ್): 73,058
ನಿಸರ್ಗ ನಾರಾಯಣಸ್ವಾಮಿ (ಜೆಡಿಎಸ್): 68,427
ಪಿಳ್ಳಮುನಿಶಾಮಪ್ಪ (ಬಿಜೆಪಿ): 34,404
ಜೆಡಿಎಸ್ ಪ್ರಾಬಲ್ಯದ ಕ್ಷೇತ್ರವಾದ ದೇವನಹಳ್ಳಿ ಕ್ಷೇತ್ರದಲ್ಲಿ ಈ ಬಾರಿ ಕೈ ಬಲಗೊಂಡಿದೆ. ಕೇಂದ್ರದ ಮಾಜಿ ಸಚಿವ ಕೆ.ಎಚ್. ಮುನಿಯಪ್ಪ ರಾಜ್ಯ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಸ್ಥಳೀಯ ಮಟ್ಟದ ವಿರೋಧ, ಟಿಕೆಟ್ ಆಕಾಂಕ್ಷಿಗಳಿಂದ ಬಂಡಾಯದ ಬಿಸಿ ಎದುರಿಸಿದ್ದ ಕೆ.ಎಚ್. ಮುನಿಯಪ್ಪ ಅವೆಲ್ಲವಕ್ಕೂ ಮದ್ದರೆದು, ಬಂಡಾಯ ಶಮನ ಮಾಡಿದ್ದರು. ಅಲ್ಲದೆ, ಸ್ಥಳೀಯ ಮುಖಂಡರನ್ನೇ ಮುಂದಿಟ್ಟುಕೊಂಡು ಚುನಾವಣೆ ಎದುರಿಸಿದ್ದರು. ಕ್ಷೇತ್ರದಲ್ಲಿನ ಜೆಡಿಎಸ್ ವರ್ಚಸ್ಸು ಮತ್ತು ಕಾಂಗ್ರೆಸ್‌ನ ಬಂಡಾಯವನ್ನೇ ನೆಚ್ಚಿಕೊಂಡು ಚುನಾವಣೆ ಎದುರಿಸಿದ್ದ ಹಾಲಿ ಶಾಸಕ ಜೆಡಿಎಸ್‌ನ ನಿಸರ್ಗ ನಾರಾಯಣಸ್ವಾಮಿ ಕಡಿಮೆ ಅಂತರದಲ್ಲಿ ಸೋಲುಂಡಿದ್ದಾರೆ. ಕೆ.ಎಸ್. ಮುನಿಯಪ್ಪ ಅವರು ನಿಸರ್ಗ ನಾರಾಯಣಸ್ವಾಮಿ ವಿರುದ್ಧ 4,631 ಮತಗಳ ಅಂತರದಿಂದ ಗೆಲ್ಲುವು ಸಾಧಿಸಿದ್ದಾರೆ.
12- ಸರ್ವಜ್ಞನಗರ
ಮತ್ತೆ ಕಾಂಗ್ರೆಸ್ ವಶಕ್ಕೆ
ಕೆ.ಜೆ. ಜಾರ್ಜ್ (ಕಾಂಗ್ರೆಸ್) -1,18,558
ಪದ್ಮನಾಭರೆಡ್ಡಿ (ಬಿಜೆಪಿ) - 62,821
ಮೊಹಮ್ಮದ್ ಮುಸ್ತಾಫ (ಜೆಡಿಎಸ್) -3831
ಕಾಂಗ್ರೆಸ್‌ನ ಗ್ಯಾರಂಟಿ ಕ್ಷೇತ್ರ ಎಂದೇ ಗುರುತಿಸಿಕೊಳ್ಳುವ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ಈ ಬಾರಿಯೂ ಕೈ ವಶವಾಗಿದೆ. ಅಲ್ಪಸಂಖ್ಯಾತ, ಹಿಂದುಳಿದ ವರ್ಗದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಕೆ.ಜೆ. ಜಾರ್ಜ್ ಕೈ ಹಿಡಿದಿದ್ದು, ಬಿಜೆಪಿಯ ಪದ್ಮನಾಭರೆಡ್ಡಿ ವಿರುದ್ಧ 55,768 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಕಳೆದ ಎರಡು ಚುನಾವಣೆಗಳಿಂದಲೂ ಪದ್ಮನಾಭರೆಡ್ಡಿ ಬಿಜೆಪಿಯಿಂದ ಕಣಕ್ಕಿಳಿದಿದ್ದು, ಯಾವುದೇ ಅನುಕಂಪ ಅವರ ಪರವಾಗಿ ಕೆಲಸ ಮಾಡಲಿಲ್ಲ. ಕ್ಷೇತ್ರದಲ್ಲಿ ಬಿಗಿ ಹಿಡಿತ ಸಾಧಿಸಿರುವ ಕೆ.ಜೆ. ಜಾಜ್‌ರ್ ಗೆಲುವು ಈ ಬಾರಿಯೂ ಅನಾಯಾಸವಾಗಿದೆ. ಮತ ಎಣಿಕೆ ಆರಂಭವಾದ ಕೊನೆಯವರೆಗೂ ಕೆ.ಜೆ.ಜಾಜ್‌ರ್ ಮುನ್ನಡೆ ಕಾಯ್ಡುಕೊಂಡರು. ಆಮೂಲಕ ಮತ್ತೊಮ್ಮೆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವಂತಾಯಿತು.
13- ಶಿವಾಜಿನಗರ ವಿಧಾನಸಭಾ ಕ್ಷೇತ್ರ
ಕಾಂಗ್ರೆಸ್‌ನ ಭದ್ರ ಕೋಟೆಯಲ್ಲಿ ರಿಜ್ವಾನ್
ರಿಜ್ವಾನ್ ಅರ್ಷದ್ (ಕಾಂಗ್ರೆಸ್) -64,729
ಚಂದ್ರ ಎನ್. (ಬಿಜೆಪಿ) - 41531
ಪ್ರಕಾಶ್ ನೆಡುಂಗಡಿ (ಆಮ್ ಆದ್ಮಿ ಪಕ್ಷ) - 1624
ಶಿವಾಜಿನಗರ ಕ್ಷೇತ್ರದಲ್ಲಿ ಹಾಲಿ ಶಾಸಕ ರಿಜ್ವಾನ್ ಅರ್ಷದ್ 23,198 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ತನ್ಮೂಲಕ ಕಾಂಗ್ರೆಸ್ ಮತ್ತೊಮ್ಮೆ ತನ್ನ ಭದ್ರಕೋಟೆಯಲ್ಲಿ ಗೆದ್ದು ಬೀಗಿದೆ.
ಕಾಂಗ್ರೆಸ್‌ನಿಂದ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದ ಆರ್.ರೋಷನ್ ಬೇಗ್ 2019ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಹಕರಿಸಿದ್ದ ಆರೋಪದ ಮೇಲೆ ಕಾಂಗ್ರೆಸ್‌ನಿಂದ ಉಚ್ಚಾಟನೆಗೊಂಡರು. ಈ ವೇಳೆ ನಡೆದ ಉಪ ಚುನಾವಣೆಯಲ್ಲಿ ರಿಜ್ವಾನ್ ಅರ್ಷದ್ ಗೆಲುವು ಸಾಧಿಸಿದ್ದರು. ಈಗ ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಿಜ್ವಾನ್ ಅವರ ವಿರುದ್ಧ ಬಿಜೆಪಿ ಎಚ್.ಚಂದ್ರು ಎಂಬ ಹೊಸಮುಖವನ್ನು ಕಣಕ್ಕಿಳಿಸಿತ್ತು. ಅವರು 41 ಸಾವಿರ ಮತ ಗಳಿಸಲಷ್ಟೇ ಶಕ್ತರಾದ ಹಿನ್ನೆಲೆಯಲ್ಲಿ ಶಿವಾಜಿನಗರ ಮತ್ತೊಮ್ಮೆ ಕಾಂಗ್ರೆಸ್ ತೆಕ್ಕೆಗೆ ಬಿದ್ದಿದೆ.
14- ಚಾಮರಾಜಪೇಟೆ
ಸತತ ನಾಲ್ಕನೇ ಬಾರಿ ಜಮೀರ್ ಗೆಲುವು
ಜಮೀರ್ ಅಹಮದ್ (ಕಾಂಗ್ರೆಸ್) -77,631
ಭಾಸ್ಕರ್ ರಾವ್ (ಬಿಜೆಪಿ) -23,678
ಸಿ.ಗೋವಿಂದರಾಜು (ಜೆಡಿಎಸ್) -19,086
ಚಾಮರಾಜ ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್‌ನ ಜಮೀರ್ ಅಹಮದ್ 77631 ಮತಗಳಿಂದ ಭರ್ಜರಿ ಜಯಗಳಿಸಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್‌ರಾವ್ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಜೆಡಿಎಸ್ ತೃತೀಯ ಸ್ಥಾನ ಪಡೆದಿದೆ. ಬಹುಜನ ಸಮಾಜ ಪಕ್ಷ, ಕರ್ನಾಟಕ ರಾಷ್ಟ್ರ ಸಮಿತಿ, ನವಭಾರತ ಸೇನೆ, ಉತ್ತಮ ಪ್ರಜಾಕೀಯ ಪಕ್ಷ ಸೇರಿದಂತೆ ಒಟ್ಟಾರೆ 12 ಅಭ್ಯರ್ಥಿಗಳು ಕಣದಲ್ಲಿದ್ದರು. 1130 ನೋಟಾ ಮತಗಳು ಕ್ಷೇತ್ರದಲ್ಲಿ ಚಲಾವಣೆಯಾಗಿವೆ. 2008 ಮತ್ತು 2013 ರ ವಿಧಾನಸಭಾ ಚುನಾವಣೆಯಲ್ಲಿ ಜಮೀರ್ ಅಹಮದ್ ಖಾನ್ ಜೆಡಿಎಸ್‌ನಿಂದ ಸ್ಪರ್ಧಿಸಿ ಜಯಗಳಿಸಿದ್ದು 2018 ರಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಗೆಲುವು ಸಾಧಿಸಿದ್ದರು. ಇದೀಗ ಪುನರಾಯ್ಕೆಯಾಗಿದ್ದು ಸತತ ನಾಲ್ಕನೇ ಬಾರಿ ಜಯಗಳಿಸಿದಂತಾಗಿದೆ.
15- ಗಾಂಧಿನಗರ
ಕೂದಲೆಳೆ ಅಂತರದಲ್ಲಿ ದಿನೇಶ್ ಗೆಲುವು
ದಿನೇಶ್ ಗುಂಡೂರಾವ್ (ಕಾಂಗ್ರೆಸ್) -54,118
ಸಪ್ತಗಿರಿಗೌಡ (ಬಿಜೆಪಿ) -54,013
ವಿ.ನಾರಾಯಣಸ್ವಾಮಿ (ಜೆಡಿಎಸ್) -12,857
ಕಾಂಗ್ರೆಸ್ ಪ್ರಾಬಲ್ಯದ ಗಾಂಧಿನಗರ ವಿಧಾನ ಸಭಾ ಕ್ಷೇತ್ರವನ್ನು ಸತತ 6 ನೇ ಬಾರಿಗೂ ಉಳಿಸಿಕೊಳ್ಳುವಲ್ಲಿ ದಿನೇಶ್ ಗುಂಡೂರಾವ್ ಯಶಸ್ವಿಯಾಗಿದ್ದಾರೆ. ಆದರೆ ಬಿಜೆಪಿಯ ಸಪ್ತಗಿರಿಗೌಡ ಅವರು ತೀವ್ರ ಪೈಪೋಟಿ ನೀಡಿ ಗೆಲುವಿನ ಅಂತರ ಕಡಿಮೆ ಮಾಡುವಲ್ಲಿ ಮಾತ್ರ ಸಫಲರಾಗಿದ್ದಾರೆ. ಕಾಂಗ್ರೆಸ್-ಬಿಜೆಪಿ ನಡುವೆ ಕೊನೆಯವರೆಗೂ ತೀವ್ರ ಪೈಪೋಟಿ ಏರ್ಪಟ್ಟು ಕೊನೆಗೆ ದಿನೇಶ್ ಗುಂಡೂರಾವ್ ಅವರು 54,118 ಮತ ಪಡೆದು ಜಯದ ನಗೆ ಬೀರಿದರು. ಬಿಜೆಪಿ ಅಭ್ಯರ್ಥಿ ಸಪ್ತಗಿರಿ ಗೌಡ 54,013 ಮತ ಪಡೆದಿದ್ದು ದಿನೇಶ್ ಗುಂಡೂರಾವ್ ಅವರ ಗೆಲುವಿನ ಅಂತರವನ್ನು 105 ಮತಗಳಿಗೆ ಮಾತ್ರ ಸೀಮಿತ ಮಾಡಿದ್ದಾರೆ. ಜೆಡಿಎಸ್ ಅಭ್ಯರ್ಥಿ ವಿ.ನಾರಾಯಣಸ್ವಾಮಿ ಮೂರನೇ ಸ್ಥಾನ ಪಡೆದಿದ್ದಾರೆ. ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದು ಕುತೂಹಲ ಕೆರಳಿಸಿದ್ದ ಬಿಜೆಪಿ ಬಂಡಾಯ ಅಭ್ಯರ್ಥಿ ಕೃಷ್ಣಯ್ಯ ಶೆಟ್ಟಿ6 ಸಾವಿರ ಚಿಲ್ಲರೆ ಮತಗಳನ್ನಷ್ಟೇ ಪಡೆದಿದ್ದಾರೆ.
16- ಶಾಂತಿನಗರ
ನಾಲ್ಕನೇ ಬಾರಿ ಗೆದ್ದ ಎನ್.ಎ. ಹ್ಯಾರೀಸ್
ಎನ್.ಎ.ಹ್ಯಾರೀಸ್ (ಕಾಂಗ್ರೆಸ್): 61030
ಕೆ. ಶಿವಕುಮಾರ್ (ಬಿಜೆಪಿ): 53905
ಕೆ. ಮಥಾಯ್ (ಆಮ್ ಆದ್ಮಿ ಪಕ್ಷ) : 1604
ಕಾಂಗ್ರೆಸ್ಸಿನ ಭದ್ರ ಕೋಟೆಗಳಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರವೂ ಒಂದಾಗಿದ್ದು, ಹಾಲಿ ಶಾಸಕ ಎನ್.ಎ. ಹ್ಯಾರೀಸ್ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಲ್ಪಸಂಖ್ಯಾತ, ದಲಿತ ಹಾಗೂ ಅನ್ಯಭಾಷಿಕ ಮತದಾರರೇ ಹೆಚ್ಚಿರುವ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಹಿಂದುತ್ವ ಮತ್ತು ಸ್ಥಳೀಯವಾಗಿ ಆಡಳಿತ ವಿರೋಧಿ ವಿಷಯಗಳನ್ನು ಮುನ್ನಲೆಗೆ ತಂದಿತ್ತು. ಬಿಬಿಎಂಪಿಯ ಮಾಜಿ ಸದಸ್ಯ ಕೆ. ಶಿವಕುಮಾರ್ ಬಿಜೆಪಿಯಿಂದ ಕಣಕ್ಕಿಳಿದು ಎನ್.ಎ. ಹ್ಯಾರೀಸ್‌ಗೆ ಪ್ರಬಲ ಸ್ಪರ್ಧೆಯೊಡ್ಡಿದರು. ಮತ ಎಣಿಕೆಯಲ್ಲಿ ಮೊದಲ ಕೆಲ ಸುತ್ತುಗಳಲ್ಲಿ ಶಿವಕುಮಾರ್ ಮುನ್ನಡೆ ಸಾಧಿಸಿ ಮೊದಲ ಬಾರಿಗೆ ಬಿಜೆಪಿ ಶಾಂತಿನಗರ ವಶಕ್ಕೆ ಪಡೆಯಲಿದೆ ಎಂಬ ಪರಿಸ್ಥಿತಿ ಬಿಂಬಿತವಾಗಿತ್ತು. ಆದರೆ, 5ನೇ ಸುತ್ತಿನ ನಂತರ ಮುನ್ನಡೆ ಪಡೆದ ಹ್ಯಾರೀಸ್ ಕೊನೆಯ ಸುತ್ತಿನವರೆಗೆ ಅದನ್ನು ಮುಂದುವರಿಸಿದರು. ಅಂತಿಮವಾಗಿ ಎನ್.ಎ. ಹ್ಯಾರೀಸ್ 7,125 ಮತಗಳ ಅಂತರದಿಂದ ಗೆಲುವು ಸಾಧಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.