Karnataka election 2023: ಕಾಂಗ್ರೆಸ್, ಬಿಜೆಪಿಗೆ ಬಂಡಾಯ ಬಿಸಿ, ಜೆಡಿಎಸ್‌ಗೆ ಸುಗ್ಗಿ!

By Kannadaprabha News  |  First Published Apr 17, 2023, 1:22 PM IST

ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಸಾಂಪ್ರದಾಯಿಕ ವೈರಿಗಳಾದ ಬಿಜೆಪಿ-ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಾಕಿದ ಬೆನ್ನಲ್ಲೇ, ಉಭಯ ಪಕ್ಷಗಳ ಟಿಕೆಟ್‌ ವಂಚಿತರಿಗೆ ಗಾಳ ಹಾಕುವ ಮೂಲಕ ಜೆಡಿಎಸ್‌ ಪಕ್ಷ ತನ್ನ ಬಲ ವೃದ್ಧಿಸಿಕೊಳ್ಳುತ್ತಿದೆ. ಮಾತೃ ಪಕ್ಷದ ಟಿಕೆಟ್‌ ವಂಚಿತರು ಸೆಡ್ಡು ಹೊಡೆದು ಬಂಡಾಯದ ಬಾವುಟ ಹಿಡಿದಿರುವುದು ಆಯಾ ಪಕ್ಷಗಳಿಗೆ ತಲೆನೋವಾಗಿದ್ದು, ಹರಿಹರದ ಕಾಂಗ್ರೆಸ್‌ ಟಿಕೆಟ್‌ ಸಹ ಗೊಂದಲದ ಗೂಡಾಗಿದೆ.


ನಾಗರಾಜ ಎಸ್‌.ಬಡದಾಳ್‌

ದಾವಣಗೆರೆ (ಏ.17) : ಬೆಣ್ಣೆ ನಗರಿ ದಾವಣಗೆರೆ ಜಿಲ್ಲೆಯಲ್ಲಿ ಸಾಂಪ್ರದಾಯಿಕ ವೈರಿಗಳಾದ ಬಿಜೆಪಿ-ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಾಕಿದ ಬೆನ್ನಲ್ಲೇ, ಉಭಯ ಪಕ್ಷಗಳ ಟಿಕೆಟ್‌ ವಂಚಿತರಿಗೆ ಗಾಳ ಹಾಕುವ ಮೂಲಕ ಜೆಡಿಎಸ್‌ ಪಕ್ಷ ತನ್ನ ಬಲ ವೃದ್ಧಿಸಿಕೊಳ್ಳುತ್ತಿದೆ. ಮಾತೃ ಪಕ್ಷದ ಟಿಕೆಟ್‌ ವಂಚಿತರು ಸೆಡ್ಡು ಹೊಡೆದು ಬಂಡಾಯದ ಬಾವುಟ ಹಿಡಿದಿರುವುದು ಆಯಾ ಪಕ್ಷಗಳಿಗೆ ತಲೆನೋವಾಗಿದ್ದು, ಹರಿಹರದ ಕಾಂಗ್ರೆಸ್‌ ಟಿಕೆಟ್‌ ಸಹ ಗೊಂದಲದ ಗೂಡಾಗಿದೆ.

Tap to resize

Latest Videos

ಜಗಳೂರಲ್ಲಿ ಕಾಂಗ್ರೆಸ್‌ಗೆ ಕಬ್ಬಿಣದ ಕಡಲೆ

ಪರಿಶಿಷ್ಟಪಂಗಡಕ್ಕೆ ಮೀಸಲಾದ ಜಗಳೂರು ಕ್ಷೇತ್ರಕ್ಕೆ ಬಿಜೆಪಿ ಹಾಲಿ ಶಾಸಕ ಎಸ್‌.ವಿ.ರಾಮಚಂದ್ರಗೆ ಕಣಕ್ಕಿಳಿಸಿದೆ. ಆದರೆ, ಕ್ಷೇತ್ರದಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯುವ ಸಾಮರ್ಥ್ಯವಿದ್ದ ಮಾಜಿ ಶಾಸಕ ಎಚ್‌.ಪಿ.ರಾಜೇಶ್‌ ಬದಲಿಗೆ ಅನಿರೀಕ್ಷಿತವಾಗಿ ಬಿ.ದೇವೇಂದ್ರಪ್ಪಗೆ ಟಿಕೆಟ್‌ ನೀಡಿದ್ದು ಸ್ವತಃ ರಾಜೇಶ್‌, ಬೆಂಬಲಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆಪಿಸಿಸಿ ನಾಯಕರ ವಿರುದ್ಧ ಹರಿಹಾಯ್ದಿರುವ ಎಚ್‌.ಪಿ.ರಾಜೇಶ ತಮ್ಮೆಲ್ಲಾ ಬೆಂಬಲಿಗರು, ಹಿತೈಷಿಗಳು, ಕಾರ್ಯಕರ್ತರ ಸಲಹೆ ಮೇರೆಗೆ ಮಾತೃ ಪಕ್ಷ ಕಾಂಗ್ರೆಸ್ಸಿನ ವಿರುದ್ಧ ಬಂಡಾಯ ಸಾರಿದ್ದಾರೆ. ಇದು ಸದ್ಯಕ್ಕೆ ಕೈಪಡೆಗೆ ಒಂದಿಷ್ಟುಸವಾಲಿನ ಸಂಗತಿಯೂ ಆಗಿದೆ. ರಾಜೇಶ್‌ ಬೆಂಬಲಿಗರು, ಕಾರ್ಯಕರ್ತರ ವಿರೋಧದ ಮಧ್ಯೆ ದೇವೇಂದ್ರಪ್ಪ ಬಿಜೆಪಿ ಎದುರಾಳಿ ಜೊತೆಗೆ ಸ್ವಪಕ್ಷದ ಅವಕಾಶ ವಂಚಿತ ರಾಜೇಶ್‌ ಸವಾಲನ್ನೂ ಎದುರಿಸಬೇಕಾಗಿದೆ.

ನನ್ನನೂ ಸಿಎಂ ಆಗಲು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ: ಎಚ್‌.ಡಿ.ಕುಮಾರಸ್ವಾಮಿ

ಮಾಯಕೊಂಡದಲ್ಲಿ ಬಂಡಾಯ ಬಾವುಟಗಳು!

ಮಾಯಕೊಂಡ ಮೀಸಲು ಕ್ಷೇತ್ರಕ್ಕೆ ಕಾಂಗ್ರೆಸ್‌, ಬಿಜೆಪಿಯಲ್ಲಿ ಹಿಂಡು ಹಿಂಡು ಆಕಾಂಕ್ಷಿಗಳಿದ್ದರು. ಆದರೆ, ಕಾಂಗ್ರೆಸ್‌ ಕಳೆದ ಬಾರಿ ಸೋತಿದ್ದ ಕೆ.ಎಸ್‌.ಬಸವಂತಪ್ಪಗೆ ಕಣಕ್ಕಿಳಿಸಿದೆ. ಸಹಜವಾಗಿಯೇ ಇಲ್ಲಿ ಆಕಾಂಕ್ಷಿಯಾಗಿದ್ದವರ ಕಣ್ಣು ಕೆಂಪಗೆ ಮಾಡಿದ್ದರೂ, ಒಂದಿಬ್ಬರನ್ನು ಬಿಟ್ಟರೆ ಬೇರಾರೂ ಬಹಿರಂಗವಾಗಿ ಧ್ವನಿ ಎತ್ತಿಲ್ಲ. ಇನ್ನು ಎಚ್‌.ಆನಂದಪ್ಪ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದು, ಜೆಡಿಎಸ್‌ ಬಾಗಿಲು ತಟ್ಟಿದ್ದ ಸವಿತಾಬಾಯಿ ಇದೀಗ ಪಕ್ಷೇತರರಾಗಿ ಕಣಕ್ಕಿಳಿಸುವುದು ನಿಶ್ಚಿತ. ಬಿಜೆಪಿಯಲ್ಲೂ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ ಜಿಲ್ಲಾ ಮುಖಂಡರ ಒತ್ತಡದಂತೆ ಟಿಕೆಟ್‌ ನೀಡಿದ್ದು ಉಳಿದ ಲಂಬಾಣಿ, ಮಾದಿಗ, ಭೋವಿ, ಚಲವಾದಿ ಸಮುದಾಯಗಳ 11 ಮಂದಿ ಆಕಾಂಕ್ಷಿಗಳ ಆಸೆಗೆ ತಣ್ಣೀರೆರಚಿದೆ. ಈ ಎಲ್ಲಾ 11 ಜನರ ಪ್ರತಿನಿಧಿಯಾಗಿ ಆರ್‌.ಎಲ್‌.ಶಿವಪ್ರಕಾಶ್‌ ಕಣಕ್ಕಿಳಿದು, ಬಂಡಾಯದ ಬಾವುಟ ಹಾರಿಸಿದ್ದಾರೆ. ಗೆದ್ದು, ಬಿಜೆಪಿ ಮರಳುವ ಮಾತುಗಳು ಅವಕಾಶ ವಂಚಿತರಿಂದ ಕೇಳಿ ಬರುತ್ತಿವೆ.

ಹರಿಹರ ಬಿಜೆಪಿ, ಜೆಡಿಎಸ್‌ ಸೆಡ್ಡು, ಕಾಂಗ್ರೆಸ್‌ ಸದ್ದಿಲ್ಲ!

ಹರಿಹರ ಕ್ಷೇತ್ರಕ್ಕೆ ಬಿಜೆಪಿಯಿಂದ ಮೂವರು ಆಕಾಂಕ್ಷಿಗಳಿದ್ದರು. ಈ ಪೈಕಿ ಮಾಜಿ ಶಾಸಕ ಬಿ.ಪಿ.ಹರೀಶ ಗೌಡ, ಜಿಲ್ಲಾಧ್ಯಕ್ಷ ಎಸ್‌.ಎಂ.ವೀರೇಶ ಹನಗವಾಡಿ, ಯುವ ಮುಖಂಡ ಚಂದ್ರಶೇಖರ ಪೂಜಾರ ಆಕಾಂಕ್ಷಿಗಳಿದ್ದರು. ಮೂವರಿಂದಲೂ ಮುಂಚಿನಿಂದ ನಮ್ಮಲ್ಲಿ ಯಾರಿಗೆ ಅವಕಾಶ ನೀಡಿದರೂ ಪಕ್ಷದ ಗೆಲುವೇ ಗುರಿ ಎಂಬ ಮಂತ್ರ ಹೇಳಿದ್ದರು. ಅದರಂತೆ ಟಿಕೆಟ್‌ ಘೋಷಣೆ ನಂತರ ಮೂವರೂ ಜೊತೆಗೆ ಪ್ರಚಾರ ಮಾಡಿ, ಮಾದರಿ ಹೆಜ್ಜೆ ಇಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಜೆಡಿಎಸ್‌ ಪಕ್ಷದ ಮಾಜಿ ಶಾಸಕ ಎಚ್‌.ಎಸ್‌.ಶಿವಶಂಕರ ಕಣಕ್ಕಿಳಿಯಲಿದ್ದಾರೆ. ಬಿಜೆಪಿ, ಜೆಡಿಎಸ್‌ ಅಭ್ಯರ್ಥಿ ಘೋಷಿಸಿದ್ದರೆ, ಕಾಂಗ್ರೆಸ್‌ ಟಿಕೆಟ್‌ ಘೋಷಿಸಿಲ್ಲ. ಹಾಲಿ ಶಾಸಕ ಎಸ್‌.ರಾಮಪ್ಪ, ಶ್ರೀನಿವಾಸ ನಂದಿಗಾವಿ ಸೇರಿ ಆಕಾಂಕ್ಷಿಗಳಿದ್ದಾರೆ. ಆದರೆ, ಯಾರಿಗೂ ಇನ್ನೂ ಘೋಷಿಸದಿದ್ದುದನ್ನು ನೋಡಿದರೆ, ಈ ಸಾಮಾನ್ಯ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ ತಟ್ಟಿದರೂ ಅಚ್ಚರಿ ಇಲ್ಲ

ಹೊನ್ನಾಳಿ ರೇಣುಕಾಚಾರ್ಯಗೆ ಗೌಡರ ಸವಾಲು

ಹೊನ್ನಾಳಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಹಾಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಉತ್ಸಾಹದಿಂದ ಕ್ಷೇತ್ರಾದ್ಯಂತ ಕೊರೋನಾ ಕಾಲದಿಂದಲೇ ಸಕ್ರಿಯರಾಗಿದ್ದು, ಇಂದು ಸಹ ಕ್ಷೇತ್ರದಲ್ಲಿ ಸುತ್ತಾಟ ನಡೆಸಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಮಾಜಿ ಶಾಸಕ ಡಿ.ಜಿ.ಶಾಂತನಗೌಡಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ. ಶಾಂತನಗೌಡ, ಜಿಲ್ಲಾಧ್ಯಕ್ಷ ಎಚ್‌.ಬಿ.ಮಂಜಪ್ಪ ಮಧ್ಯೆ ಟಿಕೆಟ್‌ಗಾಗಿ ಬಿಗ್‌ ಫೈಟ್‌ನಲ್ಲಿ ಮಾಜಿ ಶಾಸಕರಿಗೆ ಹೈಕಮಾಂಡ್‌ ಮಣೆ ಹಾಕಿದೆ. ಆದರೆ, ಈ ಇಬ್ಬರ ಮಧ್ಯೆ ಮುಂಚಿನ ಬಾಂಧವ್ಯಇಲ್ಲ. ಕಳೆದ ಬಾರಿಯೇ ಮುಂದಿನ ಸಲ ಮಂಜಪ್ಪಗೆ ಅವಕಾಶ ಮಾಡಿಕೊಡುವುದಾಗಿ ಹೇಳಿದ್ದ ಗೌಡರು ಕೈಕೊಟ್ಟರೆಂಬ ಬೇಸರ ಮಂಜಪ್ಪ, ಬೆಂಬಲಿಗರಲ್ಲಿದೆ. ಇಬ್ಬರನ್ನು ಒಗ್ಗೂಡಿಸಿ, ಕ್ಷೇತ್ರದಲ್ಲಿ ಗೆಲ್ಲುವ ಲೆಕ್ಕಾಚಾರ ಕಾಂಗ್ರೆಸ್ಸಿನ ಜಿಲ್ಲಾ, ರಾಜ್ಯ ಮುಖಂಡರು ಮಾಡಲು ಸಿದ್ಧತೆ ನಡೆಸಿದ್ದಾರೆ.

ಉತ್ತರ-ದಕ್ಷಿಣ ಕೈ ಉತ್ಸಾಹ, ಕಮಲಕ್ಕೆ ಝಳ!

ಇನ್ನು ದಾವಣಗೆರೆ ಉತ್ತರ-ದಕ್ಷಿಣ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷವು ತನ್ನ ಪ್ರಶ್ನಾತೀತ ನಾಯಕರಾದ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪನವರಿಗೆ ಕಣಕ್ಕಿಳಿಸಿದೆ. ಇಲ್ಲಿ ಉತ್ತರಕ್ಕೆ ಎಸ್ಸೆಸ್‌ ಮಲ್ಲಿಕಾರ್ಜುನ ವಿರುದ್ಧ ಟಿಕೆಟ್‌ಗೆ ಯಾರ ಪೈಪೋಟಿ ಇರಲಿಲ್ಲ. ಆದರೆ, ದಕ್ಷಿಣದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್‌ ನೀಡಬೇಕೆಂಬ ಕೂಗು ಕೇಳಿ ಬಂದಿತ್ತು. ಆದರೆ, ಟಿಕೆಟ್‌ ಘೋಷಣೆಯಾದ ಡಾ.ಶಾಮನೂರು ಶಿವಶಂಕರಪ್ಪ ತಮ್ಮ ಸುದೀರ್ಘ ರಾಜಕೀಯ ಅನುಭವ, ಎಲ್ಲಾ ಜನರೊಂದಿಗೆ ದಶಕಗಳಿಂದಲೂ ಹೊಂದಿರುವ ಒಡನಾಟದಿಂದ ಹಾದಿ ಸುಗಮ ಮಾಡಿಕೊಂಡಿದ್ದಾರೆ. ಬಿಜೆಪಿ ಜೊತೆಗೆ ಈ ಸಲ ದಕ್ಷಿಣದಲ್ಲಿ ಕಾಂಗ್ರೆಸ್ಸಿಗೆ ಜೆಡಿಎಸ್‌, ಎಸ್‌ಡಿಪಿಐ, ಸುಸಿ, ಆಮ್‌ ಆದ್ಮಿ ಪಕ್ಷದ ಸವಾಲು ಇದೆ.

ಉತ್ತರ, ದಕ್ಷಿಣಕ್ಕೆ ಚುನಾವಣೆಗೆ ಎದುರಾಳಿ ಬಿಜೆಪಿ ಉತ್ತರಕ್ಕೆ ಲೋಕಿಕೆರೆ ನಾಗರಾಜ, ದಕ್ಷಿಣಕ್ಕೆ ಬಿ.ಜಿ.ಅಜಯಕುಮಾರ್‌ಗೆ ಕಣಕ್ಕಿಳಿಸಿದೆ. ಬಿಜೆಪಿಯಲ್ಲಿ ಉಭಯ ಕ್ಷೇತ್ರಕ್ಕೆ ಸಾಲು ಸಾಲು ಆಕಾಂಕ್ಷಿಗಳಿದ್ದರು. ಆದರೆ, ಓಟಿಂಗ್‌, ಸಮೀಕ್ಷೆ, ಜನಾಭಿಪ್ರಾಯ ಧಿಕ್ಕರಿಸಿ, ಜಿಲ್ಲೆಯ ಕೆಲವೇ ಕೆಲವು ಮುಖಂಡರ ಚಿತಾವಣೆಯಿಂದ ಪಕ್ಷಕ್ಕಾಗಿ ಹಗಲಿರುಳು ನಿಸ್ವಾರ್ಥದಿಂದ ದುಡಿದವರಿಗೆ ಟಿಕೆಟ್‌ ತಪ್ಪಿಸಲಾಗಿದೆ. ತಮ್ಮ ರಾಜಕೀಯ ಜೀವನ ಮುಗಿಯಿತೆಂದು ಪಕ್ಷವನ್ನೇ ತಾಯಿಯೆಂದು ದುಡಿದಂತಹ ಪ್ರಾಮಾ ಣಿಕರಿಗೆ ಅವಕಾಶ ತಪ್ಪಿಸಲಾಗಿದೆಯೆಂಬ ಅಸಮಾಧಾನ ಹೊಗೆಯಾಡುತ್ತಿರುವುದು ಸುಳ್ಳಲ್ಲ. ಆದರೆ, ಬಿಜೆಪಿ ಸರ್ಕಾರ ಬಂದಾಗಿನಿಂದಲೂ ಜಿಲ್ಲೆಯ ಮುಖಂಡರ ಮಧ್ಯೆಯೇ ಸರಿ ಇಲ್ಲವೆಂಬುದೂ ಸುಳ್ಳಲ್ಲ. ಮನೆಯೊಂದು, ಮೂರು ಬಾಗಿಲು ಎಂಬಂತಾಗಿದ್ದ ಬಿಜೆಪಿ ಉಭಯ ಕ್ಷೇತ್ರದಲ್ಲಿ ಚುನಾವಣೆ ಹೇಗೆ ಎದುರಿಸಲಿದೆ, ಅಸಮಾಧಾನಿತರು, ಅವಕಾಶ ವಂಚಿತರನ್ನು ಹೇಗೆ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತದೆಂಬುದು ಕುತೂಹಲ ಕೆರಳಿಸಿದೆ.

ಬಿಜೆಪಿ ಸರ್ಕಾರ 40 % ಅಲ್ಲ, ಕಾಮಗಾರಿ ನಡೆಸದೇ 100% ಕಮಿಷನ್ ಹೊಡೆದಿದೆ: ಎಚ್‌ಡಿಕೆ

ಚನ್ನಗಿರಿಯಲ್ಲಿ ಕಾಂಗ್ರೆಸ್‌-ಬಿಜೆಪಿ 2ರಲ್ಲೂ ಬಂಡಾಯ

ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಬದಲಿಗೆ ಈ ಸಲ ಎಚ್‌.ಎನ್‌.ಶಿವಕುಮಾರಗೆ ಟಿಕೆಟ್‌ ಘೋಷಣೆ ಮಾಡಿದ್ದು, ಇದೇ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಶಾಸಕರ ಪುತ್ರ ಮಾಡಾಳು ಮಲ್ಲಿಕಾರ್ಜುನ ಸ್ವಪಕ್ಷಕ್ಕೆ ಸೆಡ್ಡು ಹೊಡೆದು, ಬಂಡಾಯದ ಬಾವುಟ ಹಿಡಿದಿದ್ದಾರೆ. ಕ್ಷೇತ್ರಕ್ಕೆ ಪಕ್ಷೇತರನಾಗಿ ಸ್ಪರ್ಧಿಸುವ ಘೋಷಣೆ ಮಾಡಿದ್ದಾರೆ. ಇನ್ನು ಕಾಂಗ್ರೆಸ್‌ ಶಿವಗಂಗಾ ವಿ.ಬಸವರಾಜಗೆ ಟಿಕೆಟ್‌ ಘೋಷಣೆ ಮಾಡಿದ ಬೆನ್ನಲ್ಲೇ ಅವಕಾಶ ತಪ್ಪಿದ್ದರಿಂದ ಜಿಪಂ ಮಾಜಿ ಸದಸ್ಯ ತೇಜಸ್ವಿ ವಿ.ಪಟೇಲ್‌ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರೆ. ಕಾಂಗ್ರೆಸ್‌ನಲ್ಲಿ ಮೊದಲು ಮಾಜಿ ಶಾಸಕ ವಡ್ನಾಳ್‌ ರಾಜಣ್ಣ ಹೆಸರು ಕೇಳಿ ಬಂದಿತ್ತು. ಆದರೆ, ಶಾಮನೂರು, ಮಲ್ಲಿಕಾರ್ಜುನ ಗರಡಿಯ ಹುಡುಗ, ಕಿಸಾನ್‌ ಸೆಲ್‌ ಜಿಲ್ಲಾಧ್ಯಕ್ಷ ಶಿವಗಂಗಾ ಬಸವರಾಜಗೆ ಟಿಕೆಟ್‌ ಘೋಷಣೆಯಾಗಿದ್ದು, ಇಲ್ಲಿಯೂ ಬಂಡಾಯದ ಹೊಗೆ ಏಳುತ್ತಿದೆ. ನಾಮಪತ್ರ ಸಲ್ಲಿಸಲು ಕಡೆಯ ದಿನ ಸಮೀಪಿಸುತ್ತಿದ್ದಂತೆ ಚಿತ್ರಣ ಗೊತ್ತಾಗಲಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಈಗಾಗಲೇ ಏಪ್ರಿಲ್‌ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ.  ಏಪ್ರಿಲ್‌ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್‌ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

click me!