ವಿಧಾನಸಭೆ ಚುನಾವಣೆಗೆ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಅಂತಿಮ ಕಣ ಸಜ್ಜುಗೊಂಡಿದ್ದು, ಅಂತಿಮವಾಗಿ ಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಇತರೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ 185 ಅಭ್ಯರ್ಥಿಗಳು ಉಳಿದಿದ್ದಾರೆ. ಬಿಜೆಪಿಗೆ ಬೈಲಹೊಂಗಲದಲ್ಲಿ ಬಂಡಾಯ ಎದುರಾಗಿದ್ದರೆ, ರಾಮದುರ್ಗದಲ್ಲಿ ಎದುರಾಗಿದ್ದ ಬಂಡಾಯ ಶಮನಗೊಂಡಿದೆ. ಅರಬಾವಿ ಮತ್ತು ರಾಯಬಾಗದಲ್ಲಿ ಕಾಂಗ್ರೆಸ್‌ಗೆ ಬಂಡಾಯ ಎದುರಾಗಿದೆ. ಗೋಕಾಕದಲ್ಲಿ ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆಯುವ ಮೂಲಕ ಜೆಡಿಎಸ್‌ಗೆ ಶಾಕ್ ಕೊಟ್ಟಿದ್ದಾರೆ.
ಶ್ರೀಶೈಲ ಮಠದ
ಬೆಳಗಾವಿ (ಏ.24) : ವಿಧಾನಸಭೆ ಚುನಾವಣೆಗೆ ಬೆಳಗಾವಿ ಜಿಲ್ಲೆಯ 18 ಕ್ಷೇತ್ರಗಳ ಅಂತಿಮ ಕಣ ಸಜ್ಜುಗೊಂಡಿದ್ದು, ಅಂತಿಮವಾಗಿ ಚುನಾವಣಾ ಕಣದಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಇತರೆ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ 185 ಅಭ್ಯರ್ಥಿಗಳು ಉಳಿದಿದ್ದಾರೆ. ಬಿಜೆಪಿಗೆ ಬೈಲಹೊಂಗಲದಲ್ಲಿ ಬಂಡಾಯ ಎದುರಾಗಿದ್ದರೆ, ರಾಮದುರ್ಗದಲ್ಲಿ ಎದುರಾಗಿದ್ದ ಬಂಡಾಯ ಶಮನಗೊಂಡಿದೆ. ಅರಬಾವಿ ಮತ್ತು ರಾಯಬಾಗದಲ್ಲಿ ಕಾಂಗ್ರೆಸ್‌ಗೆ ಬಂಡಾಯ ಎದುರಾಗಿದೆ. ಗೋಕಾಕದಲ್ಲಿ ಜೆಡಿಎಸ್ ಅಭ್ಯರ್ಥಿ ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆಯುವ ಮೂಲಕ ಜೆಡಿಎಸ್‌ಗೆ ಶಾಕ್ ಕೊಟ್ಟಿದ್ದಾರೆ.
ಬಿಜೆಪಿಗೆ(Karnataka BJP) ಬೈಲಹೊಂಗಲ ಕ್ಷೇತ್ರದಲ್ಲಿ ಬಂಡಾಯ ಎದುರಾಗಿದ್ದು, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. ಅವರ ಮನವೊಲಿಕೆಗೆ ಬಿಜೆಪಿ ನಾಯಕರು ಎಷ್ಚೇ ಪ್ರಯತ್ನ ನಡೆಸಿದರೂ ಫಲ ನೀಡಲಿಲ್ಲ. ಅಂತಿಮವಾಗಿ ವಿಶ್ವನಾಥ ಪಾಟೀಲ ಅವರು ಚುನಾವಣಾ ಕಣದಲ್ಲಿ ಉಳಿಯುವ ಮೂಲಕ ಬಿಜೆಪಿಗೆ ಸೆಡ್ಡು ಹೊಡೆದಿದ್ದಾರೆ. ಬಿಜೆಪಿ ಟಿಕೆಟ್‌ನ ಪ್ರಮುಖ ಆಕಾಂಕ್ಷಿಯಾಗಿದ್ದ ವಿಶ್ವನಾಥ ಅವರಿಗೆ ಟಿಕೆಟ್ ಕೈತಪ್ಪಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಭೆ ನಡೆಸಿ, ತಮ್ಮ ರಾಜಕೀಯ ನಡೆ ಕುರಿತು ತೀರ್ಮಾನ ಕೈಗೊಂಡು, ಸ್ವತಂತ್ರವಾಗಿ ಸ್ಪರ್ಧಿಸಲು ತೀರ್ಮಾನಿಸಿ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಕಳೆದ ಬಾರಿ ಬಿಜೆಪಿ ಬಂಡುಕೋರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಶಾಸಕ ಜಗದೀಶ ಮೆಟಗುಡ್ಡ ಅವರಿಗೆ ಈ ಬಾರಿ ಬಿಜೆಪಿ ಟಿಕೆಟ್ ನೀಡಿದೆ. ಕಳೆದ ಬಾರಿ ಡಾ.ವಿಶ್ವನಾಥ ಪಾಟೀಲ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಈ ಬಾರಿ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಪಾಟೀಲ ಕಣಕ್ಕಿಳಿಯುವ ಮೂಲಕ ಬಿಜೆಪಿಗೆ ಶಾಕ್ ನೀಡಿದ್ದಾರೆ. ಕಳೆದ ಬಾರಿ ಇವರಿಬ್ಬರ ಸ್ಪರ್ಧೆಯ ಲಾಭ ಕಾಂಗ್ರೆಸ್‌ಗೆ ಅನುಕೂಲವಾಗಿತ್ತು. ಈ ಬಾರಿಯೂ ಇದೇ ಫಲಿತಾಂಶ ಮರುಕಳಿಸಿದರೂ ಅಚ್ಚರಿಪಡುವಂತಿಲ್ಲ ಎನ್ನುವುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಕುಂದಾನಗರಿಯಲ್ಲಿ ರಾಹುಲ್ ಕ್ಯಾಂಪೇನ್: ಲಿಂಗಾಯತ ನಾಯಕರಿಗೆ ಹೆಚ್ಚಿನ ಜವಬ್ದಾರಿ!
ಇನ್ನು ರಾಮದುರ್ಗ ಕ್ಷೇತ್ರದ ಬಿಜೆಪಿ ಟಿಕೆಟ್(BJP Ticket) ಕೈತಪ್ಪಿದ ಹಿನ್ನೆಲೆಯಲ್ಲಿ ಹಾಲಿ ಬಿಜೆಪಿ ಶಾಸಕ ಮಹಾದೇವಪ್ಪ ಯಾದವಾಡ ಅವರು ಬಿಜೆಪಿ ವಿರುದ್ಧ ಬಂಡಾಯದ ಕಹಳೆ ಮೊಳಗಿಸಿದ್ದರು. ಬಿಜೆಪಿ ಟಿಕೆಟ್ ಬೆಂಗಳೂರು ಮೂಲದ ಉದ್ಯಮಿ ಚಿಕ್ಕರೇವಣ್ಣ ಅವರ ಪಾಲಾಗಿರುವುದರಿಂದ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನಗೊಂಡು, ಪಕ್ಷೇತರ ಅಭ್ಯರ್ಥಿಯಾಗಿ ಯಾದವಾಡ ಅವರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ಪಡೆಯುವ ಮುನ್ನದಿನ ಬಿಜೆಪಿ ನಾಯಕರಾದ ಬಸನಗೌಡ ಪಾಟೀಲ ಯತ್ನಾಳ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಮಹಾದೇವಪ್ಪ ಯಾದವಾಡ ಅವರನ್ನು ಭೇಟಿಯಾಗಿ ಮನವೊಲಿಸಲು ನಡೆಸಿದ ಸಂಧಾನ ವಿಫಲವಾಗಿತ್ತು. ಯಾದವಾಡ ಅವರು ತಮ್ಮ ನಾಮಪತ್ರ ವಾಪಸ್ ಪಡೆಯುವ ಮೂಲಕ ನಾವೊಬ್ಬ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಎಂದು ಹೇಳಿಕೊಂಡಿದ್ದಾರೆ. ಅದರ ಜೊತೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಪ್ಪ ಯಾದವಾಡ ಕೂಡ ನಾಮಪತ್ರ ವಾಪಸ್ ಪಡೆದಿದ್ದಾರೆ. ಬಿಜೆಪಿ ಟಿಕೆಟ್ ಪ್ರಮುಖ ಆಕಾಂಕ್ಷಿಗಳಲ್ಲೊಬ್ಬರಾಗಿದ್ದ ಬಿಜೆಪಿ ಹಿರಿಯ ನಾಯಕ,ವಕೀಲ ಪಿ.ಎಫ್.ಪಾಟೀಲ ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮೂಲಕ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿದ್ದರು. ಆದರೆ, ಕೊನೆ ಗಳಿಗೆಯಲ್ಲಿ ಬಿಜೆಪಿ ನಾಯಕರು ನಡೆಸಿದ ಸಂಧಾನ ಫಲಪ್ರದವಾಗಿದ್ದು, ಪಾಟೀಲ ಕೂಡ ತಮ್ಮ ನಾಮಪತ್ರ ವಾಪಸ್ ಪಡೆಯುವ ಮೂಲಕ ಇಲ್ಲಿ ಬಿಜೆಪಿಗೆ ಎದುರಾಗಿದ್ದ ಬಂಡಾಯ ಸದ್ಯದ ಮಟ್ಟಿಗೆ ಶಮನಗೊಂಡಿದೆ.
ಬೆಳಗಾವಿ ಉತ್ತರ ಕ್ಷೇತ್ರದಲ್ಲಿ ಕಾಂಗ್ರೆಸ್ ಬಂಡುಕೋರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಅಜೀಂ ಪಟವೇಗಾರ ಅವರ ಮನವೊಲಿಸುವಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಆಸೀಫ್ ಸೇಠ್ ಅವರಿಗೆ ಎದುರಾಗಿದ್ದ ಬಂಡಾಯದ ಭೀತಿ ಶಮನಗೊಂಡಂತಾಗಿದೆ. ಅರಬಾವಿ ಮತ್ತು ರಾಯಬಾಗದಲ್ಲಿ ಕಾಂಗ್ರೆಸ್‌ಗೆ ಬಂಡಾಯ ಎದುರಾಗಿದೆ. ಅರಬಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಭೀಮಪ್ಪ ಗಡಾದ ಅವರು ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡುಹೊಡೆದಿದ್ದಾರೆ. ಅದರಂತೆ ರಾಯಬಾಗದಲ್ಲಿ ಕಾಂಗ್ರೆಸ್ ಟಿಕೆಟ್ ಪ್ರಮುಖ ಆಕಾಂಕ್ಷಿಯಾಗಿದ್ದ ಐಎಎಸ್ ಹುದ್ದೆಗೆ ಸ್ವಯಂ ನಿವೃತ್ತಿ ಪಡೆದು ಚುನಾವಣೆಗೆ ತಯಾರಿ ನಡೆಸಿದ್ದ ಶಂಭು ಕಲ್ಲೋಳಕರ ಅವರಿಗೆ ಟಿಕೆಟ್ ಕೈತಪ್ಪಿದೆ. ಹಾಗಾಗಿ,ಚುನಾವಣೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಕಲ್ಲೋಳಕರ ಅವರಿಗೆ ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಿರುದ್ಧವೇ ಬಂಡಾಯದ ಬಾವುಟ ಹಾರಿಸಿದ್ದಾರೆ. ರಾಯಬಾಗ ಮತ್ತು ಅರಬಾವಿಯಲ್ಲಿ ಕಾಂಗ್ರೆಸ್‌ಗೆ ಬಂಡಾಯದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ.
ಗೋಕಾಕದಲ್ಲಿ ಕಾಂಗ್ರೆಸ್‌ಗೆ ಎದುರಾಗಿದ್ದ ಬಂಡಾಯ ಶಮನಗೊಂಡಿದ್ದು, ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಅಶೋಕ ಪೂಜಾರಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದರು. ಮಾಜಿ ಡಿಸಿಎಂ ಲಕ್ಷ್ಮಣ ಸವದಿ ನಡೆಸಿದ ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಅಶೋಕ ಪೂಜಾರಿ ಅವರು ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಕೈಬಿಟ್ಟು, ಕಾಂಗ್ರೆಸ್ ಅಭ್ಯರ್ಥಿಗೆ ತಮ್ಮ ಬೆಂಬಲ ಘೋಷಣೆ ಮಾಡಿದರು. ಈ ನಡುವೆ ಗೋಕಾಕ ಜೆಡಿಎಸ್ ಅಭ್ಯರ್ಥಿ ಚನ್ನಬಸಪ್ಪ ಗಿಡ್ಡನವರ ತಮ್ಮ ನಾಮಪತ್ರ ವಾಪಸ್ ಪಡೆಯುವ ಮೂಲಕ ಜೆಡಿಎಸ್‌ಗೆ ಶಾಕ್ ನೀಡಿದ್ದಾರೆ.
Belagavi : 9070 ಜನರಿಗೆ ತಮ್ಮ ಮನೆಯಿಂದಲೇ ಮತ ಚಲಾವಣೆ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.