ನಿನ್ನೆ ಜೆಡಿಎಸ್ ಇಂದು ಮತ್ತೆ ಬಿಜೆಪಿ, ಮಾಜಿ ಶಾಸಕ ನಾಗರಾಜು ನಡೆಯಿಂದ ಕಾರ್ಯಕರ್ತರಿಗೆ ಗೊಂದಲ!

By Suvarna NewsFirst Published Apr 16, 2023, 8:05 PM IST
Highlights

ಮೊನ್ನೆ ಬಿಜೆಪಿ, ನಿನ್ನೆ ಜೆಡಿಎಸ್, ಇಂದು ಮತ್ತೆ ಬಿಜೆಪಿ. ಚುನಾವಣೆ ಸಮೀಪಿಸುತ್ತಿದ್ದಂತೆ ನಾಯಕರು ಟಿಕೆಟ್‌ಗಾಗಿ ಒಂದೊಂದು ಪಕ್ಷ ಅಲೆಯುತ್ತಿದ್ದಾರೆ. ಇದೀಗ ಮಾಜಿ ಶಾಸಕ ಎಂ.ವಿ.ನಾಗರಾಜು ಹಲವು ಅಚ್ಚರಿ ನೀಡಿದ್ದಾರೆ.

ನೆಲಮಂಗಲ(ಏ.16): ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಸಂಚಲನ ಜೋರಾಗಿದೆ. ಪಕ್ಷಾಂತರ ಪರ್ವ, ಟಿಕೆಟ್ ವಂಚಿತರ ಆಕ್ರೋಶ, ಬೇರೆ ಪಕ್ಷದ ಜೊತೆ ಸಂಪರ್ಕ ಸೇರಿದಂತೆ ಹಲವು ಘಟನೆಗಳು ನಡೆಯುತ್ತಿದೆ. ಬಿಜೆಪಿಯಿಂದ ಟಿಕೆಟ್ ವಂಚಿತ ನೆಲಮಂಗಲ ಮಾಜಿ ಶಾಸಕ ನಾಗರಾಜು ಜೆಡಿಎಸ್ ಹಾಗೂ ಬಿಜೆಪಿಗೆಯನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ. ಬಿಜೆಪಿಯಿಂದ ಟಿಕೆಟ್ ವಂಚಿತ ಮಾಜಿ ಶಾಸಕ ನಾಗರಾಜು ನಿನ್ನೆ ಜೆಡಿಎಸ್ ವರಿಷ್ಠ ಹೆಚ್‌ಡಿ ದೇವೇಗೌಡ ಹಾಗೂ  ಹೆಚ್‌ಡಿ ಕುಮಾರಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದ್ದರು. ಆದರೆ ಇಂದು ನೆಲಮಂಗಲದಲ್ಲಿ ಆಯೋಜಿಸಿದ್ದ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದಾರೆ. 

ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಸಪ್ತಗಿರಿ ಶಂಕರ್ ನಾಯಕ್‌ಗೆ ಟಿಕೆಟ್ ನೀಡಿದ್ದಾರೆ. ಮಾಜಿ ಶಾಸಕ ನಾಗರಾಜುಗೆ ಟಿಕೆಟ್ ನೀಡಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ನಾಗರಾಜು ಪಕ್ಷ ತೊರೆಯಲು ನಿರ್ಧರಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಎಂ.ವಿ.ನಾಗರಾಜು ಸೇರಿದಂತೆ ಕೆಲ ಬಿಜೆಪಿ ಮುಖಂಡರು ಜೆಡಿಎಸ್‌ ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದರು.

Latest Videos

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ಎರಡೇ ದಿನಕ್ಕೆ ಔಟ್, ಪಕ್ಷೇತರ ಅಭ್ಯರ್ಥಿಯಾಗಿ ಸವಿತಾ ಬಾಯಿ ಕಣಕ್ಕೆ!

ಟಿಕೆಟ್‌ ಕೈತಪ್ಪಿದ ಬೆನ್ನಲ್ಲೇ ಸ್ವಪಕ್ಷದ ನಿರ್ಣಯ ಹಾಗೂ ವಿಭಾಗ ಸಂಘಟನಾ ಕಾರ್ಯದರ್ಶಿ ಹಾಗೂ ಕೆಲ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಬಿಜೆಪಿ ನಾಯಕರು ನಾಗರಾಜು ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಈ ವೇಳೆ ಟಿಕೆಟ್ ಬೇಡಿಕೆ ಇಟ್ಟ ನಾಗರಾಜುಗೆ ಹೈಕಮಾಂಡ್ ಜೊತೆ ಚರ್ಚಿಸಿ ನಿರ್ಧಾರ ಪ್ರಕಟಿಸುವದಾಗಿ ನಾಯಕರು ಭರವಸೆ ನೀಡಿದ್ದರು. ಇತ್ತ ಬೆಂಬಲಿಗರ ಸಭೆ ಕರೆದ ನಾಗರಾಜು ತನಗೆ ಮೋಸ ಮಾಡಿದ್ದಾರೆ ಎಂದು ಕಣ್ಣೀರಿಟ್ಟಿದ್ದರು. ಇತ್ತ ಕಾದು ನೋಡುವ ತಂತ್ರ ಅನುಸರಿಸಿದ ನಾಗರಾಜುಗೆ ಟಿಕೆಟ್ ಸಿಕ್ಕಿಲ್ಲ . 

ಇತ್ತ ಪಕ್ಷದ ವರಿಷ್ಠರು ಯಾವುದೇ ನಿರ್ಣಯ ತೆಗೆದುಕೊಳ್ಳದ ಪರಿಣಾಮ, ಜೆಡಿಎಸ್‌ ವರಿಷ್ಠರ ಮನೆಗೆ ಭೇಟಿ ನೀಡಿ ಚರ್ಚಿಸಿದ್ದರು. ಎಚ್‌.ಡಿ.ದೇವೇಗೌಡರ ಮನೆಗೆ ಭೇಟಿ ನೀಡಿದ ಮಾಜಿ ಶಾಸಕ ನಾಗರಾಜು ಜೆಡಿಎಸ್‌ ಪಕ್ಷದಿಂದ ತಮಗೆ ಟಿಕೆಟ್‌ ನೀಡುವಂತೆ ಕೇಳಿದ್ದಾರೆ ಎನ್ನಲಾಗಿದೆ. ಆದರೆ ದೇವೇಗೌಡರು ಈ ಬಾರಿ ಜೆಡಿಎಸ್‌ ಪಕ್ಷಕ್ಕೆ ಬೆಂಬಲ ನೀಡಿದರೆ ಮುಂದಿನ 2028ರ ಚುನಾವಣೆಯಲ್ಲಿ ಟಿಕೆಟ್‌ ನೀಡುತ್ತೇವೆ ಎಂದು ಆಶ್ವಾಸನೆ ನೀಡಿದ್ದರು. ಹೀಗಾಗಿ ಜೆಡಿಎಸ್‌ನಿಂದಲೂ ಟಿಕೆಟ್ ಸಿಗುವುದು ಅನುಮಾನವಾಗಿತ್ತು. ಇತ್ತ ನೆಲಮಂಗಲದಲ್ಲಿ ಬಿಜೆಪಿ ಪಕ್ಷ ಸೇರ್ಪಡೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಇಂದು ನಾಗರಾಜು ಪ್ರತ್ಯಕ್ಷರಾಗಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರಿಗೆ ಗಾಳಹಾಕಿರುವ ಬಿಜೆಪಿ, ಸಪ್ತಗಿರಿ ಶಂಕರ್ ನಾಯಕ್ ನೇತೃತ್ವದಲ್ಲಿ ಹಲವು ನಾಯಕರು ಪಕ್ಷ ಸೇರಿಕೊಂಡಿದ್ದಾರೆ. ಗ್ರಾಮ ಪಂಚಾಂಯ್ತಿ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಅಧ್ಯಕ್ಷರು ಮತ್ತು ಹಲವು ಸದಸ್ಯರು ಬಿಜೆಪಿ ಸೇರಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ನಾಗರಾಜು ಪ್ರತ್ಯಕ್ಷಗೊಂಡಿದ್ದಾರೆ. 

ನನಗೆ ಟಿಕೆಟ್ ಯಾಕಿಲ್ಲ? ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕ ಜಗದೀಶ್ ಶೆಟ್ಟರ್ ಭಾವುಕ!

ಇತ್ತ ಕೆಲ ಬಿಜೆಪಿ ಮುಖಂಡರು ಬಿಜೆಪಿ ಬಿಟ್ಟು ಜೆಡಿಎಸ್‌ ಪಕ್ಷಕ್ಕೆ ಹೋಗಿದ್ದಾರೆಂದು ಪೋಸ್ಟ್‌ ಹಾಕುತ್ತಿದ್ದಂತೆ ಮಾಜಿ ಶಾಸಕ ಎಂ.ವಿ.ನಾಗರಾಜು ಹಾಗೂ ಮುಖಂಡರು ನಾವು ನೆಲಮಂಗಲ ಕ್ಷೇತ್ರದ ವಿಚಾರವಾಗಿ ದೇವೇಗೌಡರನ್ನು ಭೇಟಿಯಾಗಿ ಚರ್ಚಿಸಿದ್ದೇವೆಯೇ ಹೊರೆತು ಜೆಡಿಎಸ್‌ ಪಕ್ಷಕ್ಕೆ ಸೇರಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ.

click me!