ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಹೊರತು ಬಿಜೆಪಿಗೆ ರಾಜಿನಾಮೆಯನ್ನು ನೀಡಿಲ್ಲ. ಕೆಲವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಬೆಂಗಳೂರು (ಏ.16): ಈಗಾಗಲೇ ನಾನು ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದೇನೆ ಹೊರತು ಬಿಜೆಪಿಗೆ ರಾಜಿನಾಮೆಯನ್ನು ನೀಡಿಲ್ಲ. ಕೆಲವರೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿಯಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದ ಮೂಲಕ ಆಗಮಿಸಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ನಾನು ಶಿರಿಸಿಯಲ್ಲಿ ಹಲವಾರು ವಿಚಾರಗಳನ್ನ ಹೇಳಿದ್ದೀನಿ. ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ಈಗ ಕಲೆವರೊಂದಿಗೆ ಚರ್ಚೆ ಮಾಡಿ, ಎಲ್ಲವನ್ನು ನೋಡಿಕೊಂಡು ಮುಂದಿನ ತೀರ್ಮಾನ ಮಾಡ್ತೀನಿ. ನನಗೆ ತುಂಬಾ ನೋವಾಗಿದೆ. ಯಾವುದೇ ರೀತಿಯಲ್ಲೂ ನನ್ನ ನೋವಿಗೆ ಪರಿಹಾರ ಸಿಕ್ಕಿಲ್ಲ ಎಂದು ಹೇಳಿದರು.
ರಾಜ್ಯಸಭಾ ಸದಸ್ಯ ಆಫರ್ ತಿರಸ್ಕರಿಸಿ, ಎಂಎಲ್‌ಎ ಟಿಕೆಟ್ ಕೇಳಿದೆ: ಜಗದೀಶ್ ಶೆಟ್ಟರ್
ಈಗ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಉದ್ದೇಶದಿಂದ ವಿಧಾನಸಭಾ ಅಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ್ದೇನೆ. ಇವತ್ತು ಅಥವಾ ನಾಳೆ ಮುಂದಿನ ತೀರ್ಮಾನ ಕೈಗೊಳ್ತೀನಿ. ನಾನು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಕೊಟ್ಟಿಲ್ಲ. ನಾನು ಕಟ್ಟಿ ಬೆಳಿಸಿದ ಪಕ್ಷದಿಂದ ರಾಜೀನಾಮೆ ಕೊಟ್ಟ ಬಳಿಕ ಮುಂದಿನ ತೀರ್ಮಾನ ಮಾಡ್ತೀನಿ. ಬಿಎಸ್ ಯಡಿಯೂರಪ್ಪ ಹೇಳಿಕೆಗೆ ನಾನು ಈಗಾಗಲೆ ಪ್ರತಿಕ್ರಿಯೆ ಕೊಟ್ಟಿದ್ದೀನಿ. ಈಗ ಮತ್ತೊಮ್ಮೆ ಅದೇ ವಿಚಾರವನ್ನು ನಾನು ಮಾತನಾಡುವುದಿಲ್ಲ ಎಂದರು.
ಈಗಾಗಲೇ ಬಿಜೆಪಿಯಿಂದ ಕೇಂದ್ರ ಮಂತ್ರಿ ಮತ್ತು ರಾಜ್ಯಪಾಲರ ಹುದ್ದೆಗೆ ಆಫರ್ ಬಂದಿದೆ ಎಂದು ಕೇಳಿದ ಪ್ರಶ್ನೆಗೆ, ನಾನು ಕೇಳಿದ್ದು ಕೇವಲ ಎಂಎಲ್ಎ ಟಿಕೆಟ್ ಅನ್ನು, ಅದನ್ನೇ ಕೊಟ್ಟಿಲ್ಲ. ಬಿಜೆಪಿ ಹೈಕಮಾಂಡ್‌ನವರೆಲ್ಲಾ ಯಾಕೆ ಹೀಗೆ ಮಾತಾಡ್ತಿದ್ದಾರೆ ಅಂತಾ ಅರ್ಥ ಮಾಡ್ಕೊಳ್ಳಿ ಎಂದು ಹೇಳಿ ರಿಚ್ಮಂಡ್ ಟೌನ್‌ನಲ್ಲಿರೊ ಸ್ಕೈ ಗಾರ್ಡನ್ಸ್ ಅಪಾರ್ಟ್ ಮೆಂಟ್ ಒಳಗೆ ಹೋದರು.
ಕಾಂಗ್ರೆಸ್ ಸೇರ್ಪಡೆ ಮುಂದೂಡಿಕೆ: ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಇಂದು ಕಾಂಗ್ರೆಸ್ ಸೇರ್ಪಡೆಗೆ ಸಮಯ ನಿಗದಿ ಮಾಡಲಾಗಿತ್ತು. ಇದಕ್ಕಾಗಿ ತರಾತುರಿಯಲ್ಲಿ ವಿಶೇಷ ವಿಮಾನದ ಮೂಲಕ ಜಗದೀಶ್ ಶೆಟ್ಟರ್ ಬೆಂಗಳೂರಿಗೆ ಆಗಮಿಸಿದರು. ಆದರೆ, ಕಾಂಗ್ರೆಸ್ ಸೇರುವ ಬಗ್ಗೆ ಇನ್ನೂ ಗೊಂದಲದಲ್ಲಿರುವಂತೆ ಕಾಣುತ್ತಿರುವ ಅವರು, ನಾಳೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುವುದಾಗಿ ಸಿದ್ದರಾಮಯ್ಯ ಅವರಿಗೆ ದೂರವಾಣಿ ಕರೆ ಮೂಲಕ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಸವದಿ ಹೆಣವನ್ನು ಸ್ಮಶಾನಕ್ಕೆ ಕಳಿಸಿ, ಬಿಜೆಪಿ ಕಚೇರಿ ಮುಂದೆ ಯಾಕೆ ತರ್ತೀರಿ?: ಯತ್ನಾಳ್
ಈ ಮಾತಿನ ಮರ್ಮಗಳೇನು? : ಕಳೆದ ಮೂರು ದಿನಗಳ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಜಗದೀಶ್ ಶೆಟ್ಟರ್ ಅವರು ರಾಜ್ಯದಲ್ಲಿ ಹಿರಿಯ ರಾಜಕಾರಣಿಗಳಾದ ಬಿ.ಎಸ್. ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಚುನಾವಣಾ ರಾಜಕಾರಣಕ್ಕೆ ರಾಜಿನಾಮೆ ನೀಡಿದ್ದಾರೆ. ಇನ್ನು ರಾಜ್ಯದ ಲಿಂಗಾಯತ ಸಮುದಾಯದಲ್ಲಿಯೂ ಹಿರಿಯ ನಾಯಕ ಎಂದು ಇರುವುದು ನಾನೊಬ್ಬನೇ. ಇಷ್ಟೆಲ್ಲಾ ಇರುವಾಗ ನನಗೆ ಯಾವ ಕಾರಣಕ್ಕೆ ಟಿಕೆಟ್ ಕೊಡುತ್ತಿಲ್ಲ. ನನಗಿನ್ನೂ 70 ವರ್ಷವೂ ಆಗಿಲ್ಲ. ನನಗಿಂತ ವಯಸ್ಸಿನಲ್ಲಿ ಹಿರಿಯರು ಇರುವವರಿಗೆಲ್ಲಾ ಟಿಕೆಟ್ ಕೊಟ್ಟಿರುವಾಗ ನನಗೇಕೆ ಟಿಕೆಟ್ ಕೊಡುತ್ತಿಲ್ಲ ಎಂದು ಹೇಳಿದ್ದರು. ಆದರೆ, ಈ ಮಾತಿನ ಮರ್ಮವೇನು ಎಂಬುದನ್ನು ಬಿಜೆಪಿ ನಾಯಕರು ಅರ್ಥ ಮಾಡಿಕೊಳ್ಳಬೇಕಿದೆ.
ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭಗೊಂಡಿದೆ. ಏಪ್ರಿಲ್ 20 ನಾಮಪತ್ರ ಸಲ್ಲಿಕೆಗೆ ಕಡೆಯ ದಿನಾಂಕವಾಗಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಹಾಗೆ, ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10 ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.