ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಅವರದೇ ಕ್ಷೇತ್ರಗಳಲ್ಲಿ ಕಟ್ಟಿಹಾಕುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ.
ಬೆಂಗಳೂರು (ಏ.10): ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರನ್ನು ಅವರದೇ ಕ್ಷೇತ್ರಗಳಲ್ಲಿ ಕಟ್ಟಿಹಾಕುವ ನಿಟ್ಟಿನಲ್ಲಿ ಬಿಜೆಪಿ ವರಿಷ್ಠರು ಗಂಭೀರ ಚಿಂತನೆ ನಡೆಸಿದ್ದಾರೆ. ಸಿದ್ದರಾಮಯ್ಯ ಸ್ಪರ್ಧಿಸುವ ವರುಣಾ ಕ್ಷೇತ್ರದಿಂದ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಮತ್ತು ಶಿವಕುಮಾರ್ ಪ್ರತಿನಿಧಿಸುವ ಕನಕಪುರ ಕ್ಷೇತ್ರದಿಂದ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ಕಣಕ್ಕಿಳಿಸುವ ಸಂಬಂಧ ದೆಹಲಿಯಲ್ಲಿ ನಡೆದ ಹಿರಿಯ ನಾಯಕರ ಸಭೆಯಲ್ಲಿ ಚರ್ಚೆ ನಡೆದಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಹಾಗಂತ ಸಚಿವರಾದ ಸೋಮಣ್ಣ ಮತ್ತು ಅಶೋಕ್ ಅವರು ತಮ್ಮ ರಾಜಕೀಯ ಭವಿಷ್ಯ ಪಣಕ್ಕಿಡಬೇಕು ಎಂದೇನೂ ಇಲ್ಲ. ಅವರಿಬ್ಬರಿಗೂ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆಯೂ ಪ್ರಸ್ತಾಪವಾಗಿದೆ ಎಂದು ತಿಳಿದು ಬಂದಿದೆ. ಅಂದರೆ ಸೋಮಣ್ಣ ಅವರಿಗೆ ವರುಣಾ ಕ್ಷೇತ್ರದ ಜೊತೆಗೆ ಅವರು ಬಯಸಿದ ಚಾಮರಾಜನಗರ ಕ್ಷೇತ್ರದ ಟಿಕೆಟ್ ಲಭಿಸಬಹುದು. ಅದೇ ರೀತಿ ಅಶೋಕ್ ಅವರಿಗೆ ಕನಕಪುರ ಜೊತೆಗೆ ಈಗ ಪ್ರತಿನಿಧಿಸುತ್ತಿರುವ ಪದ್ಮನಾಭನಗರ ಕ್ಷೇತ್ರದ ಟಿಕೆಟ್ ಲಭಿಸಬಹುದು. ಈ ಬಗ್ಗೆ ಶನಿವಾರ ಮತ್ತು ಭಾನುವಾರ ದೆಹಲಿಯಲ್ಲಿ ನಡೆದ ರಾಜ್ಯ ಹಾಗೂ ರಾಷ್ಟ್ರೀಯ ನಾಯಕರ ಸರಣಿ ಸಭೆಗಳಲ್ಲಿ ಸಮಾಲೋಚನೆ ನಡೆದಿದೆ.
ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ?: ಅಭ್ಯರ್ಥಿ ಅಂತಿಮಗೊಳಿಸಲು ಮೋದಿ 2 ಗಂಟೆ ಕಸರತ್ತು
ಆದರೆ, ಇದು ಅನುಷ್ಠಾನಕ್ಕೆ ಬರುತ್ತಾ ಎನ್ನುವುದು ಸೋಮವಾರ ಪಟ್ಟಿಪ್ರಕಟಗೊಂಡ ಬಳಿಕವೇ ಸ್ಪಷ್ಟವಾಗಿ ಗೊತ್ತಾಗಲಿದೆ. ಸಚಿವ ಸೋಮಣ್ಣ ಅವರು ವರುಣಾ ಜೊತೆಗೆ ಈಗ ಪ್ರತಿನಿಧಿಸುತ್ತಿರುವ ಗೋವಿಂದರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ವರಿಷ್ಠರು ಒಪ್ಪಿದರೂ ಸ್ವತಃ ಸೋಮಣ್ಣ ಅವರೇ ಬೇಡ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ. ಇದಕ್ಕೆ ಕಾರಣವೂ ಇದೆ. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಕುರುಬರು ಕೂಡ ನಿರ್ಣಾಯಕ ಮತದಾರರು ಆಗಿರುವುದರಿಂದ ಸಿದ್ದರಾಮಯ್ಯ ವಿರುದ್ಧ ವರುಣದಲ್ಲಿ ಸ್ಪರ್ಧಿಸುವ ಆಕ್ರೋಶ ಇಲ್ಲೂ ವ್ಯಕ್ತವಾಗಬಹುದು ಎಂದು ಎಂಬ ಹಿಂಜರಿಕೆ ಇದೆ.
ಇದೇ ವೇಳೆ ಸೋಮಣ್ಣ ಅವರ ಪುತ್ರ ಡಾ.ಅರುಣ್ ಸೋಮಣ್ಣ ಅವರಿಗೆ ಈ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದಿಲ್ಲ ಎಂಬುದನ್ನು ವರಿಷ್ಠರು ಸ್ಪಷ್ಟಪಡಿಸಿದ್ದಾರೆ. ಆದರೆ, ಮುಂದೆ ಅರುಣ್ ಅವರಿಗೆ ಇನ್ನಷ್ಟುಪ್ರಮುಖ ಜವಾಬ್ದಾರಿ ನೀಡಲಾಗುವುದು. ಸಾಧ್ಯವಾದರೆ ಮುಂದಿನ ವರ್ಷ ಎದುರಾಗುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಟಿಕೆಟ್ ಅವಕಾಶ ನೀಡುವ ಸಾಧ್ಯತೆಯ ಸುಳಿವನ್ನೂ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಅಂಗವೈಕಲ್ಯ ಮುಂದಿಟ್ಟು ಜಾಮೀನು ಕೇಳಿದ ಆರೋಪಿ: ಒಪ್ಪದ ಹೈಕೋರ್ಟ್
ಎಚ್‌ಡಿಕೆ ವಿರುದ್ಧ ಸಿಪಿವೈ?: ಇದೇ ವೇಳೆ ಜೆಡಿಎಸ್ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಮಾಜಿ ಸಚಿವ ಹಾಗೂ ವಿಧಾನ ಪರಿಷತ… ಸದಸ್ಯ ಸಿ.ಪಿ.ಯೋಗೇಶ್ವರ್ ಅವರನ್ನೇ ಕಣಕ್ಕಿಳಿಸಬೇಕೊ ಅಥವಾ ಅವರಿಗಿಂತ ಸಮರ್ಥ ಅಭ್ಯರ್ಥಿ ಸಿಕ್ಕರೆ ಅವರನ್ನು ಕಣಕ್ಕಿಳಿಸಬೇಕೊ ಎಂಬ ಜಿಜ್ಞಾಸೆ ಮುಂದುವರೆದಿದೆ. ಬಹುತೇಕ ಯೋಗೇಶ್ವರ್ ಅವರೇ ಬಿಜೆಪಿ ಅಭ್ಯರ್ಥಿ ಆಗಬಹುದು ಎನ್ನಲಾಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.