ಸ್ಥಳೀಯ ಮುಖಂಡರಿಗೆ ಈಗ ಡಿಮ್ಯಾಂಡಪ್ಪೋ ಡಿಮ್ಯಾಂಡ್: ಮತಬೇಟೆಗೆ ಗ್ರಾಮಗಳತ್ತ ಹೆಜ್ಜೆ ಹಾಕುತ್ತಿರುವ ಆಕಾಂಕ್ಷಿಗಳು

By Govindaraj S  |  First Published Apr 10, 2023, 6:55 AM IST

ರಾಜ್ಯದ ಪ್ರತಿಯೊಂದು ಹಳ್ಳಿ- ಹಳ್ಳಿಯಲ್ಲಿ ಈಗ ಚುನಾವಣೆ ಗಾಳಿ ಬೀಸಲು ಶುರುವಾಗಿದೆ. ವಿಧಾನಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ಅದರಲ್ಲೂ ಕೆಲ ಪಕ್ಷದ ನಾಯಕರು ಅಂತು ಈ ಬಾರಿ ಗೆಲುವು ಸಾಧಿಸಲ್ಲೇ ಬೇಕು ಎಂದು ಪಣತೊಟ್ಟು ಮನೆ- ಮನೆಗೆ ಹೋಗಿ ಮತಯಾಚನೆ ನಡೆಸಿದ್ದಾರೆ. 


ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ರಾಯಚೂರು

ರಾಯಚೂರು (ಏ.10): ರಾಜ್ಯದ ಪ್ರತಿಯೊಂದು ಹಳ್ಳಿ- ಹಳ್ಳಿಯಲ್ಲಿ ಈಗ ಚುನಾವಣೆ ಗಾಳಿ ಬೀಸಲು ಶುರುವಾಗಿದೆ. ವಿಧಾನಸಭಾ ಚುನಾವಣೆಗಾಗಿ ಎಲ್ಲಾ ಪಕ್ಷಗಳು ತಯಾರಿ ಮಾಡಿಕೊಳ್ಳುತ್ತಿವೆ. ಅದರಲ್ಲೂ ಕೆಲ ಪಕ್ಷದ ನಾಯಕರು ಅಂತು ಈ ಬಾರಿ ಗೆಲುವು ಸಾಧಿಸಲ್ಲೇ ಬೇಕು ಎಂದು ಪಣತೊಟ್ಟು ಮನೆ- ಮನೆಗೆ ಹೋಗಿ ಮತಯಾಚನೆ ನಡೆಸಿದ್ದಾರೆ. ಕೆಲ ನಾಯಕರು ನಾಮಪತ್ರ ಸಲ್ಲಿಕೆ ವೇಳೆಯೇ ಶಕ್ತಿ ಪ್ರದರ್ಶನ ‌ಮಾಡಬೇಕು. ಎದುರಾಳಿಗೆ ನಡುಕ ಹುಟ್ಟುವಂತೆ ಮಾಡಬೇಕು ‌ಎಂಬ ಕಾರಣಕ್ಕೆ ಹಳ್ಳಿ- ಹಳ್ಳಿಗೆ ತೆರಳಿ ನಾಮಪತ್ರಕ್ಕೆ ಬನ್ನಿ ಎಂದು ಆಹ್ವಾನ ನೀಡಲು ಮುಂದಾಗಿದ್ದಾರೆ. ಹೀಗಾಗಿ ಗ್ರಾಮ ಮಟ್ಟದ ಮುಖಂಡರಿಗೆ ಭಾರೀ ಡಿಮ್ಯಾಂಡ್ ಸೃಷ್ಟಿಯಾಗಿದೆ.

Latest Videos

undefined

ಹಳ್ಳಿಯ ಮತಬ್ಯಾಂಕ್ ಗಟ್ಟಿಯಾಗಲು ಗ್ರಾಮದ ಮುಖಂಡರೇ ಆಧಾರ: ಇಷ್ಟು ದಿನಗಳ ಕಾಲ ರಾಜಧಾನಿ, ಜಿಲ್ಲಾ ಕೇಂದ್ರ ಮತ್ತು ತಾಲೂಕಾ ಕೇಂದ್ರಗಳಿಗೆ ಸೀಮಿತವಾದ ನಾಯಕರು ಈಗ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಅಷ್ಟೇ ಅಲ್ಲದೆ ಗ್ರಾಮದಲ್ಲಿನ ತಮ್ಮ ಪಕ್ಷದ ಕಾರ್ಯಕರ್ತರು ಯಾರು, ಮುಖಂಡರು ಯಾರು ಎಂಬುವುದು ತಿಳಿದುಕೊಂಡು ಅವರನ್ನು ಭೇಟಿ ‌ಮಾಡುವುದು ಶುರು ಮಾಡಿದ್ದಾರೆ. ಅಲ್ಲದೇ ಗ್ರಾಮ ಮಟ್ಟದ ಮುಖಂಡರ ಸಮಸ್ಯೆ ಆಲಿಸಿದಂತೆ ಮಾಡಿ ಅವರಿಗೆ ಜವಾಬ್ದಾರಿ ನೀಡುತ್ತಿದ್ದಾರೆ. ಕೆಲ ನಾಯಕರು ಊರಿಗೆ ಬಂದ್ರೂ ಹಳೆಯ ಕಾರ್ಯಕರ್ತರನ್ನ ಭೇಟಿ ‌ಮಾಡದೇ ಹೋಗಿದ್ರೆ, ಅಂತಹ ಮುಖಂಡರು ಮುನಿಸಿಕೊಂಡು ಬೇರೆ ಪಕ್ಷಗಳಿಗೆ ಸೇರ್ಪಡೆ ಆಗುತ್ತಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಈಗ ಸರ್ವೇ ಸಾಮಾನ್ಯ ಕಾಣಬಹುದಾಗಿದೆ. 

ಕೋಲಾರದಲ್ಲಿ ಇಂದು ಬೃಹತ್ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ: ಎಚ್.ಡಿ.ಕುಮಾರಸ್ವಾಮಿ ಭಾಗಿ

ಗ್ರಾಮದ ಮುಖಂಡರೇ ರಾಜಕೀಯ ನಾಯಕರ ಟಾರ್ಗೆಟ್: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳ ಸ್ಪರ್ಧಿಗಳ ಕಣ್ಣು ಈಗ ಗ್ರಾಮಗಳ ಮುಖಂಡ ಮೇಲೆ ಬಿದ್ದಿದೆ. ಇದರಿಂದಾಗಿ ರಾಜಕೀಯ ನಾಯಕರು ಹಳ್ಳಿಗಳಿಗೆ ಭೇಟಿ ನೀಡಿ ಗ್ರಾಮದ ಮುಖಂಡರ ಜೊತೆಗೆ ಮಾತುಕತೆ ನಡೆಸಿ ಅವರ ನೇತೃತ್ವದಲ್ಲಿ ಪ್ರಚಾರಕ್ಕೆ ಹೋಗುವುದು ಕಾಣಬಹುದಾಗಿದೆ. ಪ್ರತಿ ಗ್ರಾಮಗಳಲ್ಲೂ ಪಕ್ಷಕ್ಕೊಬ್ಬರು ಮುಖಂಡರು ಇರುತ್ತಾರೆ. ಅವರು ತಮ್ಮದೇ ಆದ ಮತದಾರರನ್ನ ಗ್ರಾಮದಲ್ಲಿ ಹೊಂದಿರುತ್ತಾರೆ. ಇದನ್ನ ಅರಿತ ಆಕಾಂಕ್ಷಿಗಳು ಅವರನ್ನೇ ಟಾರ್ಗೆಟ್ ಮಾಡಿ ಅವರ ಜೊತೆಗೆ ಪ್ರಚಾರಕ್ಕೆ ಇಳಿಯುತ್ತಿದ್ದಾರೆ.

ಹಳ್ಳಿಯ ಮತರಕ್ಷಕರೇ ಗ್ರಾಮ ಮಟ್ಟದ ಕಾರ್ಯಕರ್ತರು: ಚುನಾವಣೆ ಬಂತು ಅಂದ್ರೆ ಸಾಕು ಹಳ್ಳಿಯಲ್ಲಿ ಇದ್ದ ಪಕ್ಷದ ಮುಖಂಡರು ಫುಲ್ ಅಲರ್ಟ್ ಆಗುತ್ತಾರೆ. ತಾವೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದಂತೆ ಗ್ರಾಮದಲ್ಲಿ ಬಿಳಿ ಬಟ್ಟೆ ತೊಟ್ಟು ಓಡಾಟ ಮಾಡುತ್ತಾರೆ. ತಮ್ಮ ಪಕ್ಷದ ಕಾರ್ಯಕರ್ತರನ್ನ ಜಮಾಯಿಸಿಕೊಂಡು ಸಭೆ ಮಾಡಿ, ಪ್ರಚಾರ ಮಾಡಲು ಸಿದ್ದರಾಗುತ್ತಾರೆ. ಅಷ್ಟೇ ಅಲ್ಲದೇ ಯಾವ ಮನೆಯ ಓಟು ಯಾವ ಪಕ್ಷಕ್ಕೆ ಹೋಗುತ್ತೆ, ಅವರನ್ನು ನಮ್ಮ ಪಕ್ಷಕ್ಕೆ ಹೇಗೆ ಸೆಳೆಯಬೇಕು. ಅವರ ಪ್ಲಸ್‌ ಮತ್ತು ಮೈನಸ್ ಗಳ ಬಗ್ಗೆಯೂ ಚಿಂತನೆ ಮಾಡುವುದು ಗ್ರಾಮ ಮಟ್ಟದ ಕಾರ್ಯಕರ್ತರು. ಹೀಗಾಗಿ ಆಕಾಂಕ್ಷಿಗಳು ಈಗ ಗ್ರಾಮ ಮಟ್ಟದ ಕಾರ್ಯಕರ್ತರನ್ನ ಗಟ್ಟಿಗೊಳಿಸಲು ನಾನಾ ಕಸರತ್ತು ಶುರು ಮಾಡಿದ್ದಾರೆ. 

ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗಾಗಿ ಆಕಾಂಕ್ಷಿಗಳು ಹುಡುಕಾಟ: ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿಯೂ ಪಕ್ಷ ನಿಷ್ಠೆಯ ಕಾರ್ಯಕರ್ತರ ಸಂಖ್ಯೆ ಕಡಿಮೆಯಾಗಿದೆ. ಗಾಳಿಬಂದಂತೆ ತೂರಿಕೊಳ್ಳಬೇಕು ಎಂಬ ಮನಸ್ಥಿತಿಯ ಮುಖಂಡರೇ ಹೆಚ್ಚಾಗಿದ್ದಾರೆ. ಇಂತಹವರ ಮಧ್ಯೆ ಪಕ್ಷದ ನಿಷ್ಠಾವಂತ ಮುಖಂಡರನ್ನ ಗುರುತಿಸಿ ಅವರಿಗೆ ಜವಾಬ್ದಾರಿ ನೀಡುವುದು ಆಕಾಂಕ್ಷಿಗಳಿಗೆ ದೊಡ್ಡ ಸವಾಲ್ ಆಗಿದೆ. ಪಕ್ಷದ ನಿಷ್ಠಾವಂತ ಗ್ರಾಮ ಮಟ್ಟದ ಮುಖಂಡರು. ಹಿಂದಿನಿಂದಲೂ ತಮ್ಮ ಪಕ್ಷದ ಮತಗಳು ಬೇರೆ ಪಕ್ಷಗಳಿಗೆ ಹೋಗದಂತೆ ಕಾಪಾಡಿಕೊಂಡು ಬಂದಿರುತ್ತಾರೆ. ಮತ ಹಾಕಿದವರಿಗೆ ಸರಕಾರದ ಸವಲತ್ತುಗಳನ್ನು ಕೊಡಿಸಿರುತ್ತಾರೆ. ಈ ಮೂಲಕ ಅವರನ್ನು ಬೇರೆ ಪಕ್ಷಗಳ ಕಡೆ ಹೋಗದಂತೆ ನೋಡಿಕೊಂಡಿರುತ್ತಾರೆ. ಗ್ರಾಮದ ಯಾವುದೇ ಕಾರ್ಯಕ್ರಮ ಇದ್ರೂ ಮುಖಂಡರು ಎದುರು ನಿಲ್ಲುತ್ತಾರೆ. ಅಷ್ಟೇ ಅಲ್ಲದೇ ರಾಜಕೀಯ ಪಕ್ಷಗಳು ನಡೆಸುವ ಯಾವುದೇ ಕಾರ್ಯಕ್ರಮಗಳು ಇದ್ರೂ ಜನರನ್ನು ಕಳುಹಿಸುತ್ತಾರೆ. ಚುನಾವಣೆ ಬಂದಾಗ ತಮ್ಮ ಬೆಂಬಲಕ್ಕಿರುವ ಮತದಾರರ ಮನೆಗಳಿಗೆ ಹೋಗಿ ಮತಗಳು ಚದುರದಂತೆ ಜತನದಿಂದ ಕಾಪಾಡಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಾರೆ. ಹೀಗಾಗಿ ಗ್ರಾಮದ ಮುಖಂಡರು ಆಕಾಂಕ್ಷಿಗಳಿಗೆ ಅತೀ ಮುಖ್ಯವಾಗಿದ್ದಾರೆ.

ಆಕಾಂಕ್ಷಿಗಳು ಮತದಾರರಿಗೆ ಮುಟ್ಟಲು ಗ್ರಾಮ ಮುಖಂಡರೇ ಸೇತುವೆ: ಹಿಂದಿನಂತೆ ಈಗಿನ ಚುನಾವಣೆಗಳು ಇಲ್ಲ. ಹತ್ತಾರು ರೀತಿಯ ಚುನಾವಣಾ ನೀತಿ ಸಂಹಿತೆಗಳು ಇವೆ. ಇವುಗಳ ಮಧ್ಯೆಯಲ್ಲಿ ಮತದಾರರಿಗೆ ಏನು ತಲುಪಿಸಬೇಕೋ ಅದು ತಲುಪಿಸಲು ಗ್ರಾಮದ ಮುಖಂಡರ ಅಗತ್ಯ ಮುಖ್ಯವಾಗಿದೆ. ಗ್ರಾಮದ ಮುಖಂಡರಿಗೆ ಯಾರ ಮನೆಗೆ ಏನು ಏನೇನು ತಲುಪಿಸಬೇಕೋ ಎಂಬುದು ಗ್ರಾಮದ ಮುಖಂಡರಿಗೆ ಗೊತ್ತಿರುತ್ತೆ, ಮತದಾರರು ಅಷ್ಟೇ ಅವರಿಗೆ ಏನೂ ಬೇಕಾದರೂ ಅವರು ಮೊದಲು ಹೋಗುವುದು ಆ ಗ್ರಾಮದಲ್ಲಿನ ಮುಖಂಡರ ಮನೆಗಳಿಗೆ, ಹೀಗಾಗಿ ಗ್ರಾಮದ ಮತದಾರರ ಮೇಲೆ ಈ ಮುಖಂಡರು ಹಿಡಿತ ಇಟ್ಟು ಕೊಂಡಿರುತ್ತಾರೆ. ಇದೇ ಈ ಮುಖಂಡರ ಗತ್ತು ಗೈರತ್ತಿಗೆ ಕಾರಣವೂ ಆಗಿದೆ.

ಗ್ರಾಮದ ಮುಖಂಡರು ಕೈಕೊಟ್ಟರೇ ಅಭ್ಯರ್ಥಿ ಸೋಲು ಖಚಿತ: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮತದಾರರು ಎಷ್ಟು ಮುಖ್ಯವೋ.. ಅಷ್ಟೇ ಮುಖ್ಯ ಗ್ರಾಮದ ಮುಖಂಡರು. ಗ್ರಾಮಗಳಲ್ಲಿ ಮೊದಲಿಂದಲೂ ಪಕ್ಷ ನಿಷ್ಠೆ ಹೊಂದಿದ್ದರೂ ಕೆಲವರು ಪಕ್ಷದ ನಿರ್ಲಕ್ಷ್ಯಕ್ಕೆ ಒಳಗಾಗಿರುತ್ತಾರೆ. ಅಂತಹ ಮುಖಂಡರನ್ನು ಪ್ರತಿಪಕ್ಷಗಳು ಸೆಳೆಯುವ ಯತ್ನವನ್ನು ನಡೆಸುತ್ತವೆ. ಈಗಾಗಲೇ ಸಾಕಷ್ಟು ಮುಖಂಡರು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋಗುವ ಪ್ರಕ್ರಿಯೆಗಳು ಕ್ಷೇತ್ರಾದ್ಯಂತ ನಡೆಯುತ್ತಿವೆ. ಎಲ್ಲಾ ಪಕ್ಷಗಳು ಈ ಮುಖಂಡರ ಬೇಟೆಯಲ್ಲಿ ಈಗ ನಿರತರಾಗಿದ್ದಾರೆ. ಏಕೆಂದರೆ ಎಲ್ಲಕ್ಕೂ ಗ್ರಾಮದ ಮುಖಂಡರೇ ಮೂಲ. ಹೀಗಾಗಿ ರಾಜಕೀಯ ಪಕ್ಷಗಳು ಆ ಗ್ರಾಮಗಳ ಮುಖಂಡರ ಮೇಲೆ ಸದಾಕಾಲ ಕಣ್ಣು ಇಟ್ಟಿರಬೇಕು. ಮುಖಂಡರನ್ನು ಹೇಳಿದ ಕೆಲಸಗಳನ್ನು ಮಾಡಿಕೊಡಬೇಕು. ಒಂದು ವೇಳೆ ಗ್ರಾಮದ ಮುಖಂಡರನ್ನ ನಿರ್ಲಕ್ಷಿಸಿದರೆ ಬೇರೊಂದು ಪಕ್ಷಕ್ಕೆ ತಮ್ಮ ನಿಷ್ಟೆ ಬದಲಿಸುವವರೂ ಇದ್ದಾರೆ. ಇದು ಪ್ರತಿ ಚುನಾವಣೆ ನಡೆದಾಗಲೂ ಸಾಮಾನ್ಯವಾಗಿ ನಡೆದುಕೊಂಡು ಬಂದಿರುವ ಪ್ರಕ್ರಿಯೆ. ಹೀಗಾಗಿ ರಾಜಕೀಯ ಪಕ್ಷಗಳು ಗ್ರಾಮ ಮಟ್ಟದ ಮುಖಂಡರನ್ನು ಎಚ್ಚರಿಕೆ ಯಿಂದ ನಿರ್ವಹಿಸುತ್ತಾರೆ. ಇಲ್ಲಿ ಯಡವಟ್ಟಾದರೇ ಅದರ ಎಫೆಕ್ಟ್ ಫಲಿತಾಂಶದಲ್ಲಿ ಕಾಣಿಸುತ್ತದೆ.

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಇಂದು ಪ್ರಕಟ?: ಅಭ್ಯರ್ಥಿ ಅಂತಿಮಗೊಳಿಸಲು ಮೋದಿ 2 ಗಂಟೆ ಕಸರತ್ತು

ಮಾಜಿ ಜಿ.ಪಂ ಮತ್ತು ಮಾಜಿ ತಾ.ಪಂ. ಸದಸ್ಯರಿಗೂ ಭಾರೀ ಬೇಡಿಕೆ: ಪ್ರತಿ ವಿಧಾನಸಭಾ ಚುನಾವಣೆಯಲ್ಲಿ ತಾ.ಪಂ. ಸದಸ್ಯರು ಮತ್ತು ಜಿಲ್ಲಾ ಪಂಚಾಯತ್ ನ ಸದಸ್ಯರು ಇರುತ್ತಿದ್ರು. ಪಕ್ಷದಿಂದ ಆಯ್ಕೆಗೊಂಡ ಸದಸ್ಯರಿಗೆ ಜವಾಬ್ದಾರಿ ನೀಡಿ ಚುನಾವಣೆ ಮಾಡಲಾಗುತ್ತಿತ್ತು. ಆದ್ರೆ ಈ ಬಾರಿ ಎರಡೂ ಸ್ಥಳೀಯ ಸಂಸ್ಥೆಗಳಲ್ಲಿ ಜನಪ್ರತಿನಿಧಿಗಳು ಇಲ್ಲ. ಚುನಾವಣೆ ನಡೆಯದೇ ಎರಡು ವರ್ಷಗಳಿ೦ದ ಅಧಿಕಾರಿಗಳ ಆಡಳಿತ ನಡೆಸುತ್ತಿದ್ದಾರೆ. ಇದು ಕೂಡಾ ಈಗ ರಾಜಕೀಯ ಪಕ್ಷಗಳಿಗೆ ಸವಾಲ್ ಆಗಿದೆ. ಮಾಜಿ ಸದಸ್ಯರನ್ನೇ ನಂಬಿ ರಾಜಕೀಯ ಪಕ್ಷಗಳು ಪ್ರಚಾರದಲ್ಲಿ ತೊಡಗಿವೆ. 

ಇನ್ನೂ  ಕೆಲವೆಡೆ ಮುಖಂಡರಿಗೆ ತಾ.ಪಂ. ಮತ್ತು ಜಿ.ಪಂ. ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಿಸುವ ಭರವಸೆಯನ್ನು ಕೊಟ್ಟು ಪಕ್ಷದ ಪರ ಪ್ರಚಾರ ನಡೆಸುವಂತೆ ಮನವೊಲಿಸುತ್ತಿದ್ದಾರೆ. ಒಟ್ಟಿನಲ್ಲಿ ಚುನಾವಣಾ ಸ್ಪರ್ಧಿಗಳಿಗೆ ಗ್ರಾಮದ ಮುಖಂಡರೇ ಬಲವಾಗಿದ್ದು. ಹೀಗಾಗಿ ಗ್ರಾಮ ಮಟ್ಟದ ಮುಖಂಡರಿಗೆ ಎಲ್ಲಿಲ್ಲದ ಬೇಡಿಕೆ ಸೃಷ್ಟಿಯಾಗಿದಂತೂ ಸತ್ಯ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!