ಭೀಮಾ ತೀರದಲ್ಲಿ ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌ಗೆ ‘ಪಕ್ಷೇತರ’ನ ಸೆಡ್ಡು?

By Kannadaprabha News  |  First Published May 4, 2023, 10:55 AM IST

ಜಿಲ್ಲೆಯ ಭೀಮಾ ನದಿತೀರದಲ್ಲಿರುವ ಅಫಜಲ್ಪುರ ಅಸೆಂಬ್ಲಿ ಕ್ಷೇತ್ರ ಮೂರ್ನಾಲ್ಕು ಕಾರಣಗಳಿಗಾಗಿ ರಾಜ್ಯದ ಗಮನ ಸೆಳೆಯುತ್ತಿದೆ. ಪ್ರತಿಷ್ಠಿತ ಗುತ್ತೇದಾರ್‌ ಕುಟುಂಬದಲ್ಲಿ ಸ್ಫೋಟಗೊಂಡಿರುವ ದಾಯಾದಿ ಕಲಹ, ಅದರಿಂದ ಕ್ಷೇತ್ರಾದ್ಯಂತ ಉಂಟಾಗಿರುವ ರಾಜಕೀಯ ಸಂಚಲನ, ವೈಯಕ್ತಿಕ ಸಂಬಂಧಗಳ ನಡುವಿನ ಗೊಂದಲ ಭಾರಿ ಧೂಳೆಬ್ಬಿಸಿದೆ.


ಶೇಷಮೂರ್ತಿ ಅವಧಾನಿ

ಕಲಬುರಗಿ (ಮೇ.04): ಜಿಲ್ಲೆಯ ಭೀಮಾ ನದಿತೀರದಲ್ಲಿರುವ ಅಫಜಲ್ಪುರ ಅಸೆಂಬ್ಲಿ ಕ್ಷೇತ್ರ ಮೂರ್ನಾಲ್ಕು ಕಾರಣಗಳಿಗಾಗಿ ರಾಜ್ಯದ ಗಮನ ಸೆಳೆಯುತ್ತಿದೆ. ಪ್ರತಿಷ್ಠಿತ ಗುತ್ತೇದಾರ್‌ ಕುಟುಂಬದಲ್ಲಿ ಸ್ಫೋಟಗೊಂಡಿರುವ ದಾಯಾದಿ ಕಲಹ, ಅದರಿಂದ ಕ್ಷೇತ್ರಾದ್ಯಂತ ಉಂಟಾಗಿರುವ ರಾಜಕೀಯ ಸಂಚಲನ, ವೈಯಕ್ತಿಕ ಸಂಬಂಧಗಳ ನಡುವಿನ ಗೊಂದಲ ಭಾರಿ ಧೂಳೆಬ್ಬಿಸಿದೆ.

Latest Videos

undefined

ಅಣ್ತಮ್ಮರ ನಡುವೆಯೇ ಪೈಪೋಟಿ: ಬಿಜೆಪಿಯಿಂದ ಪಕ್ಷದ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯಾ ಗುತ್ತೇದಾರ್‌ ಕಣದಲ್ಲಿದ್ದರೆ, ಟಿಕೆಟ್‌ ವಂಚಿತ ಇವರ ಕಿರಿಯ ಸಹೋದರ ನಿತಿನ್‌ ಗುತ್ತೇದಾರ್‌ ಪಕ್ಷೇತರರಾಗಿ (ಚಹಾ ಕೆಟಲ್‌ ಸಂಕೇತ) ಅಣ್ಣನ ವಿರುದ್ಧವೇ ತೊಡೆತಟ್ಟಿದ್ದಾರೆ. ಹೀಗಾಗಿ ಬಿಜೆಪಿಗಿಲ್ಲಿ ಭಾರಿ ಬಂಡಾಯ ಎದುರಾಗಿದೆ.  ತಮಗೆ ವಯಸ್ಸಾಯ್ತು, ಟಿಕೆಟ್‌ ಬೇಡವೆಂದು ಗೋಗರೆದರೂ ಹೈಕಮಾಂಡ್‌ ಕರೆದು ಟಿಕೆಟ್‌ ನೀಡ್ದಿರಿಂದ ಪುನರಾಯ್ಕೆ ಬಯಸಿ ಕಣದಲ್ಲಿರುವ ಎಂ.ವೈ.ಪಾಟೀಲ್‌ ಕಾಂಗ್ರೆಸ್‌ ಹುರಿಯಾಳು. 

ಸೋಲಿಲ್ಲದ ಸರದಾರ ಸಿ.ಟಿ.ರವಿಗೆ ಕಮಲದ ಗರಡಿಯಲ್ಲಿ ಪಳಗಿದ ತಮ್ಮಯ್ಯ ಟಕ್ಕರ್‌

ಜೆಡಿಎಸ್‌ನಿಂದ ಶಿವಕುಮಾರ್‌ ನಾಟೀಕಾರ್‌ ಕಣಲ್ಲಿದ್ದರೆ, ಪಿಎಸ್‌ಐ ಹಗರಣದ ಕಿಂಗ್‌ಪಿಎನ್‌ ಆರ್‌.ಡಿ.ಪಾಟೀಲ್‌ ಸಮಾಜವಾದಿ ಪಕ್ಷದಿಂದ ಸೈಕಲ್‌ ಹತ್ತಿ ಅಖಾಡ ದಲ್ಲಿ ಸವಾರಿಯಲ್ಲಿದ್ದಾರೆ. ಗುತ್ತೇದಾರ್‌ ಸಹೋದರರ ದಾಯಾದಿ ಕಲಹದ ಲಾಭ ಯಾರಿಗೆ? ಅಣ್ತಮ್ಮರಲ್ಲೇ ಒಬ್ಬರು ಗೆಲ್ಲುತ್ತಾರಾ? ಇಬ್ಬರ ಜಗಳ, ಮೂರನೆಯವರಿಗೆ ಲಾಭ ಎಂಬಂತೆ ಅಣ್ತಮ್ಮರ ಜಗಳದ ಲಾಭ ಇನ್ನಾರದ್ದೋ ಪಾಲಾಗುತ್ತಾ? ಒಂದು ವೇಳೆ ಅಣ್ತಮ್ಮರಲ್ಲೇ ಮತ ವಿಭಜನೆಯಾದ್ರೆ ಎಲ್ಲರಿಗಿಂತ ಹೆಚ್ಚು ಕಾಂಗ್ರೆಸ್‌ಗೆ ಲಾಭವೆ? ಅಣ್ತಮ್ಮರ ಜಗಳದ ಲಾಭ ಬಾಚಿ ಕೊಳ್ಳುವುದೆ? ಎಂದು ಕ್ಷೇತ್ರಾದ್ಯಂತ ಚರ್ಚೆಗಳು ಸಾಗಿವೆ.

ಪಕ್ಷಾಂತರಿಗಳಿಗೆ ಪಕ್ಷೇತರನ ಸವಾಲ್‌!: ಪಾರಂಪರಿಕ ಎದುರಾಳಿಗಳಾದ ಎಂ.ವೈ. ಪಾಟೀಲ್‌ ಹಾಗೂ ಮಾಲೀಕಯ್ಯ ಗುತ್ತೇದಾರ್‌ ನಡುವೆಯೇ ನೇರ ಹಣಾಹಣಿ, ಇಬ್ಬರೂ ಮುಖಂಡರು ಸಮಯ-ಅವಕಾಶ ಹಾಗೂ ಅಗತ್ಯಕ್ಕೆ ತಕ್ಕಂತೆ ಪಕ್ಷಾಂತರಿಗಳಾಗಿ ಪೈಪೋಟಿಗೆ ಇಳಿಯುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಕ್ಷೇತ್ರದಲ್ಲಿ ಈ ಪಕ್ಷಾಂತರಿಗಳಿಬ್ಬರ ನಡುವೆ ಪಕ್ಷೇತರ ನಿತಿನ್‌ ಗುತ್ತೇದಾರ್‌ ಪ್ರಬಲ ಸವಾಲೊಡ್ಡಿದ್ದಾರೆ.

ಯಾರ ಮತ ಬುಟ್ಟಿಗೆ ಯಾರ ಕೈ?: ಕ್ಷೇತ್ರದಲ್ಲಿರುವ 18 ರಿಂದ 40 ವರ್ಷದೊಳಗಿನ 1.10 ಲಕ್ಷ ಮತದಾರರೇ ನನ್ನ ಶಕ್ತಿ ಎಂದು ಪಕ್ಷೇತರ ನಿತೀನ್‌ ಗುತ್ತೇದಾರ್‌ ಯುವಶಕ್ತಿಯನ್ನೇ ನೆಚ್ಚಿದ್ದಾರೆ. ಮಾಲೀಕಯ್ಯಾ ಗುತ್ತೇದಾರ್‌ ಕೂಡ ಹೆಚ್ಚುಕಮ್ಮಿ ಈ ಯುವ ಮತಗಳ ಜೊತೆಗೆ ಇನ್ನೂ ಕೆಲವು ಮತಬ್ಯಾಂಕ್‌ ಹೊಂದಿರೋದಾಗಿ ಗೆಲುವಿನ ಕನಸು ಕಾಣುತ್ತಿದ್ದಾರೆ. 

ಇನ್ನು ಪಕ್ಷದ ಮತಬ್ಯಾಂಕ್‌ ಶೋಷಿತರು, ಅಲ್ಪಸಂಖ್ಯಾತರು, ಓಬಿಸಿ ವರ್ಗ, ವೀರಶೈವ-ಲಿಂಗಾಯಿತ ಮತಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್‌ನ ಎಂ.ವೈ.ಪಾಟೀಲ್‌ ಕೊನೆಯ ಚುನಾವಣೆ ಎಂದು ಮತದಾರರನ್ನು ಭಾವನಾತ್ಮಕವಾಗಿ ಸೆಳೆಯೋ ಪ್ರಯತ್ನದಲ್ಲಿದ್ದಾರೆ. ಪುತ್ರರ ಪಟ್ಟಾಭಿಷೇಕಕ್ಕೆ ಸಿದ್ಧರಾಗಿದ್ದರೂ ಹೈಕಮಾಂಡ್‌ ಕ್ಷೇತ್ರದ ನಾಜೂಕಿನ ವಾತಾವರಣ ಗಮನಿಸಿ ರಿಸ್‌್ಕ ಯಾಕೆಂದು ಎಂ.ವೈ. ಪಾಟೀಲರನ್ನೇ ಕಣಕ್ಕಿಳಿಸಿದೆಯಾದರೂ , ಮಕ್ಬುಲ್‌ ಪಟೇಲ್‌, ರಾಜೇಂದ್ರ ಪಾಟೀಲ್‌, ಅಫ್ತಾಬ್‌ ಪಟೇಲ್‌ ಸೇರಿದಂತೆ 8 ಮಂದಿ ಕೈ ಟಿಕೆಟ್‌ ವಂಚಿತರು ಇದೀಗ ಕಾಂಗ್ರೆಸ್‌ಗೆ ಕೈ ಕೊಟ್ಟು ಬಹಿರಂಗವಾಗಿಯೇ ಪಕ್ಷೇತರ ನಿತಿನ್‌ ಪರ ಪ್ರಚಾರಕ್ಕಿಳಿದಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಸಂಘಟನೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನಲು ಈ ಬೆಳವಣಿಗೆ ಕನ್ನಡಿ ಹಿಡಿದಿದೆ.

2018 ರ ಫಲಿತಾಂಶ
1) ಎಂವೈ ಪಾಟೀಲ್‌ (ಕಾಂಗ್ರೆಸ್‌)- 71, 735
2) ಮಾಲೀಕಯ್ಯಾ ಗುತ್ತೇದಾರ್‌ (ಬಿಜೆಪಿ)- 61, 141
3) ರಾಜುಗೌಡ ರೇವೂರ್‌ (ಜೆಡಿಎಸ್‌)- 13, 350

ಆನಂದ್‌ ಸಿಂಗ್‌ಗೆ ಪ್ರತಿಷ್ಠೆಯಾಗಿರುವ ವಿಜಯನಗರದ ವಿಜಯ: ಹಳಬರ ಮೇಲೆ ಕಾಂಗ್ರೆಸ್‌ಗೆ ನಂಬಿಕೆ

ಜಾತಿ ಲೆಕ್ಕಾಚಾರ: ಕ್ಷೇತ್ರದಲ್ಲಿ ಲಿಂಗಾಯತ, ದಲಿತ, ಕೋಲಿ (ಕಬ್ಬಲಿಗ), ಮುಸ್ಲಿಂ ಮತ್ತು ಕುರುಬ ಸಮುದಾಯದ ಮತಗಳು ನಿರ್ಣಾಯಕ. ಪಂಚಮಸಾಲಿ 21 ಸಾವಿರ, ಬಣಜಿಗ 11 ಸಾವಿರ, ಆದಿ 8 ಸಾವಿರ, ಗಾಣಿಗ 6 ಸಾವಿರ, ಕೋಲಿ 37 ಸಾವಿರ, ಮುಸ್ಲಿಂ 35 ಸಾವಿರ, ಕುರುಬ 20 ಸಾವಿರ, ಶೋಷಿತ ಸಮಾಜದ 32 ಸಾವಿರ, ಬ್ರಾಹ್ಮಣ 3 ಸಾವಿರ, ಇತರೆ 15 ಸಾವಿರದಷ್ಟು ಮತದಾರರು ಇಲ್ಲಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!