ಡಿಕೆಶಿ ಭ್ರಷ್ಟ ರಕ್ತದ ಪತ್ರ ಜನಕ್ಕೆ ಬೇಡ: ನಳಿನ್‌ ಕುಮಾರ್‌ ಕಟೀಲ್‌

By Kannadaprabha NewsFirst Published Apr 27, 2023, 3:40 AM IST
Highlights

ರಕ್ತದಲ್ಲಿ ಬರೆದುಕೊಡುತ್ತೇನೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ, ಬಿಜೆಪಿ 40 ಸೀಟನ್ನೂ ಪಡೆಯಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದ್ದಾರೆ. 

ಗದಗ (ಏ.27): ರಕ್ತದಲ್ಲಿ ಬರೆದುಕೊಡುತ್ತೇನೆ. ಕಾಂಗ್ರೆಸ್‌ ಅಧಿಕಾರಕ್ಕೆ ಬರುತ್ತದೆ, ಬಿಜೆಪಿ 40 ಸೀಟನ್ನೂ ಪಡೆಯಲ್ಲ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ವ್ಯಂಗ್ಯವಾಡಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರ ಭ್ರಷ್ಟಾಚಾರದ ರಕ್ತದಲ್ಲಿ ಬರೆದ ಪತ್ರ ರಾಜ್ಯದ ಜನತೆಗೆ ಬೇಡ ಎಂದು ಹೇಳಿದ್ದಾರೆ. ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸ್ವತಃ ಡಿ.ಕೆ.ಶಿವಕುಮಾರ್‌ ಅವರೇ ಭಯದಲ್ಲಿದ್ದಾರೆ. ಯಾವಾಗ ಬಂಧನ ಆಗುತ್ತೋ ಗೊತ್ತಿಲ್ಲ. ಜನರಿಗೆ ತಪ್ಪು ಸಂದೇಶ ಕೊಟ್ಟು ಅನುಕಂಪ ಗಿಟ್ಟಿಸಿಕೊಳ್ಳಲು ಅವರು ಯತ್ನಿಸುತ್ತಿದ್ದಾರೆ. ಇದನ್ನೆಲ್ಲ ನೋಡಿದಾಗ ಕಾಂಗ್ರೆಸ್‌ ಭಯದ ವಾತಾವರಣ ಸೃಷ್ಟಿಸಲೆತ್ನಿಸುತ್ತಿದೆ ಎನ್ನುವುದು ಸ್ಪಷ್ಟ. 

ಬಾಯಲ್ಲಿ ಒಂದು ಹೇಳುತ್ತಾರೆ, ಆದರೆ ಅವರಿಗೆ ಒಳಗೆ ಸೋಲಿನ ಆತಂಕ ಕಾಡುತ್ತಿದೆ. ಅವರಲ್ಲಿ ಗೊಂದಲ ಹೆಚ್ಚಾಗಿದೆ ಎಂದರು. ಯಾವಾಗ ಮಲ್ಲಿಕಾರ್ಜುನ ಖರ್ಗೆ ಮುಂದಿನ ಮುಖ್ಯಮಂತ್ರಿ ಎಂದು ಡಿ.ಕೆ.ಶಿವಕುಮಾರ್‌ ಹೇಳಿದರೋ ಅಂದಿನಿಂದ ಸಿದ್ದರಾಮಣ್ಣ ಮಾತಾಡುತ್ತಿಲ್ಲ, ಸಿದ್ದರಾಮಣ್ಣ ಅವರ ಕನಸನ್ನು ಡಿ.ಕೆ.ಶಿವಕುಮಾರ್‌ ನುಚ್ಚುನೂರು ಮಾಡಿದ್ದಾರೆ. ಮುಖ್ಯವಾಗಿ ವರುಣ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಸೋಮಣ್ಣ ಭಾರೀ ಅಂತರದಿಂದ ಗೆಲುವು ಸಾಧಿಸುತ್ತಾರೆ. ಹೀಗೆ ರಾಜ್ಯಾದ್ಯಂತ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎನ್ನುವುದು ಸ್ಪಷ್ಟವಾದ ನಂತರ ಅವರು ಗದಗ ನಗರದಲ್ಲಿ ಗಲಭೆ ಮಾಡಿಸಿದ್ದಾರೆ. ಮೇ 13ಕ್ಕೆ ಕಾಂಗ್ರೆಸ್‌ನ ಶವಪೆಟ್ಟಿಗೆಗೆ ಡಿ.ಕೆ.ಶಿವಕುಮಾರ್‌, ಸಿದ್ರಾಮಣ್ಣ ಅಂತಿಮ ಮೊಳೆ ಹೊಡೆಯುತ್ತಾರೆ ಎಂದರು.

ಅಮಿತ್ ಶಾ ಮಾತನಾಡಿದ್ರು ವಿಶ್ವಾಸ ದ್ರೋಹ ಮಾಡಿ ಶೆಟ್ಟರ್ ಹೋಗಿದ್ದಾರೆ: ಬಿ.ಎಸ್.ಯಡಿಯೂರಪ್ಪ

ಸಮೀಕ್ಷೆ ಸುಳ್ಳಾಗಿದೆ: ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಮೇಲುಗೈ ವಿಚಾರ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇನ್ನು ಸ್ವಲ್ಪ ದಿನ ಕಾದು ನೋಡಿ. ಆಗ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಗೊತ್ತಾಗುತ್ತದೆ. ಉತ್ತರ ಪ್ರದೇಶ, ಗೋವಾ, ನಾಗಾಲ್ಯಾಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಮೀಕ್ಷೆ ಹೇಳಿತ್ತು. ಆದರೂ ಅಧಿಕಾರಕ್ಕೆ ಬಂದಿಲ್ಲವೇ? ಉತ್ತರ ಪ್ರದೇಶ, ನಾಗಾಲ್ಯಾಂಡ್‌ನಲ್ಲಿ ನಮಗೆ ಬಹುಮತ ಬಂದಿದೆ. ಅದೇ ಮಾದರಿಯಲ್ಲೇ ಮೇ 13ರಂದು ಕರ್ನಾಟಕದಲ್ಲೂ ನಮ್ಮದೇ ಬಹುಮತದ ಸರ್ಕಾರ ಬರುತ್ತದೆ ಎಂದು ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ರೇಸ್‌ನಲ್ಲಿ ಸಿ.ಟಿ.ರವಿ, ಆರ್‌.ಅಶೋಕ್‌ ಹೆಸರು ವಿಷಯ ಕುರಿತು ಪ್ರಶ್ನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಟೀಲ್‌, ನಮ್ಮ ಪಕ್ಷದಲ್ಲಿ ಮುಖ್ಯಮಂತ್ರಿ ವಿಚಾರವಾಗಿ ಚರ್ಚೆ ಇಲ್ಲವೇ ಇಲ್ಲ. ಈಶ್ವರಪ್ಪ ಹೇಳಿಕೆಗಳನ್ನು ಗಮನಿಸಿದ್ದೇನೆ, ಅವರೊಂದಿಗೂ ಚರ್ಚಿಸುತ್ತೇನೆ. ರಾಜ್ಯದ ವರಿಷ್ಠರಾದ ಯಡಿಯೂರಪ್ಪ ಮಾರ್ಗದರ್ಶನ, ಬೊಮ್ಮಾಯಿ ಅವರ ನೇತೃತ್ವದಲ್ಲಿ ಚುನಾವಣೆ ನಡೆದಿದೆ. ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ. ರಾಷ್ಟ್ರೀಯ ನಾಯಕರು ಚರ್ಚೆ ಮಾಡಿ ಮುಖ್ಯಮಂತ್ರಿ ಯಾರೆಂದು ಘೋಷಣೆ ಮಾಡುತ್ತಾರೆ ಎಂದು ಕಟೀಲ್‌ ಹೇಳಿದರು. ಜಗದೀಶ್‌ ಶೆಟ್ಟರ್‌ ಅವರಿಗೆ ಕೊಡುವ ಎಲ್ಲ ಸ್ಥಾನ-ಮಾನಗಳನ್ನು ಬಿಜೆಪಿ ಕೊಟ್ಟಿದೆ. ಈಗ ಅವರು ನಮ್ಮ ಪಕ್ಷದಲ್ಲಿಲ್ಲ. ನಮ್ಮ ವಿರೋಧಿ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿ ಯಾರೇ ಆಗಿರಲಿ ಅವರನ್ನು ಸೋಲಿಸುವುದೇ ನಮ್ಮ ಗುರಿ. ಜಗದೀಶ್‌ ಶೆಟ್ಟರ್‌ ಅಭ್ಯರ್ಥಿಯಾದರೇನು, ಬೇರೆಯವರಾದರೇನು?

40 ಪರ್ಸೆಂಟ್‌ ಸರ್ಕಾರ ಕಿತ್ತೊಗೆದು ಕಾಂಗ್ರೆಸ್‌ ಅಧಿಕಾರಕ್ಕೆ ತನ್ನಿ: ಪ್ರಿಯಾಂಕಾ ಗಾಂಧಿ

ಬಿಜೆಪಿಯಿಂದ ಮಾತ್ರ ಲಿಂಗಾಯತ ಸಿಎಂ: ರಾಜ್ಯದಲ್ಲಿ ಬಿಜೆಪಿಯಿಂದ ಮಾತ್ರ ಲಿಂಗಾಯತ ಮುಖ್ಯಮಂತ್ರಿ ಮಾಡಲು ಸಾಧ್ಯ. ಈ ಹಿಂದೆ ಕೂಡಾ ಮೂರು ಮುಖ್ಯಮಂತ್ರಿಗಳು ಲಿಂಗಾಯತರೇ ಆಗಿದ್ದರು. ಮುಂದೆಯೂ ಬಿಜೆಪಿಯಿಂದಲೇ ಲಿಂಗಾಯತರು ಮುಖ್ಯಮಂತ್ರಿ ಆಗುತ್ತಾರೆ. ನಮ್ಮ ಪಕ್ಷವೇ ಲಿಂಗಾಯತರಿಗೆ ಅವಕಾಶ ಕೊಡಲಿದೆ. ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ನಮ್ಮ ಪಕ್ಷದಿಂದ ಮುಂದಿನ ಸಿಎಂ ಲಿಂಗಾಯತರು ಎಂದು ಹೇಳಲಿ ನೋಡೋಣ ಎಂದು ಕಟೀಲ್‌ ಸವಾಲು ಹಾಕಿದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

click me!