ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೈಕಮಾಂಡ್‌ನ ತಂತ್ರಗಾರಿಕೆ ಫಲವಾಗಿ ಕುತೂಹಲ ಮೂಡಿಸಿರುವ ಕನಕಪುರ ಕ್ಷೇತ್ರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಮಟ್ಟಹಾಕಬೇಕು ಎಂಬ ಉದ್ದೇಶ ಇದರ ಹಿಂದಿರುವುದು ಇದೀಗ ಜಗಜ್ಜಾಹೀರು.
ವಿಜಯ್ ಮಲಗಿಹಾಳ
ಬೆಂಗಳೂರು (ಏ.27): ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಹೈಕಮಾಂಡ್‌ನ ತಂತ್ರಗಾರಿಕೆ ಫಲವಾಗಿ ಕುತೂಹಲ ಮೂಡಿಸಿರುವ ಕನಕಪುರ ಕ್ಷೇತ್ರದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿದೆ. ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರನ್ನು ಮಟ್ಟಹಾಕಬೇಕು ಎಂಬ ಉದ್ದೇಶ ಇದರ ಹಿಂದಿರುವುದು ಇದೀಗ ಜಗಜ್ಜಾಹೀರು.
ಎಂದಿನಂತೆ ತಮ್ಮ ಪದ್ಮನಾಭನಗರ ಕ್ಷೇತ್ರದಿಂದ ಮತ್ತೊಮ್ಮೆ ಸ್ಪರ್ಧಿಸಲು ಸಜ್ಜಾಗಿದ್ದ ಅಶೋಕ್ ಅವರಿಗೆ ಪಕ್ಷದ ವರಿಷ್ಠರು ಹೆಚ್ಚುವರಿಯಾಗಿ ಕನಕಪುರ ಬಂಡೆ ಒಡೆಯುವ ಟಾಸ್ಕ್ ನೀಡಿದ್ದಾರೆ. ಕನಕಪುರದಲ್ಲಿ ಸತತವಾಗಿ ಗೆಲ್ಲುತ್ತಲೇ ಬಂದಿರುವ ಶಿವಕುಮಾರ್ ಅವರನ್ನು ಎದುರಿಸುವುದು ಸುಲಭವಲ್ಲ ಎಂಬುದು ಅಶೋಕ್ ಅವರಿಗೂ ಗೊತ್ತಿದೆ. ಆದರೂ ಬಿಜೆಪಿಯ ಪ್ರಬಲ ಒಕ್ಕಲಿಗ ನಾಯಕ ಎಂಬುದನ್ನು ನಿರೂಪಿಸುವ ಸಲುವಾಗಿ ಅಶೋಕ್ ಅವರು ಕನಕಪುರದಲ್ಲಿ ಪಕ್ಷದ ಅಸ್ತಿತ್ವದ ಸುಳಿವೇ ಇಲ್ಲದಿದ್ದರೂ ಪಕ್ಷದ ಸೂಚನೆಯನ್ನು ಹೊತ್ತು ಹೋರಾಟಕ್ಕೆ ಮುಂದಾಗಿದ್ದಾರೆ. ಬಿರುಸಿನ ಪ್ರಚಾರದ ನಡುವೆಯೇ ಅಶೋಕ್ ಅವರು ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿದ್ದು ಹೀಗೆ.
* ಇಷ್ಟು ವರ್ಷಗಳ ಚುನಾವಣಾ ರಾಜಕಾರಣದಲ್ಲಿ ಈ ಬಾರಿಯದ್ದು ದೊಡ್ಡ ಸವಾಲೇ?
ನ್ನ ರಾಜಕೀಯ ಜೀವನದಲ್ಲೇ ಮೊದಲ ಬಾರಿಗೆ ಎರಡು ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದೇನೆ. ಕೇಂದ್ರದ ನಾಯಕರು ನನಗೆ ಎರಡು ಕಡೆಗಳಲ್ಲಿ ಸ್ಪರ್ಧಿಸುವಂತೆ ಸೂಚನೆ ನೀಡಿದರು. ಆ ಪ್ರಕಾರ ನಾನು ಈಗಿನ ಪದ್ಮನಾಭನಗರ ಕ್ಷೇತ್ರದ ಜತೆಗೆ ಕನಕಪುರದಿಂದಲೂ ಕಣಕ್ಕಿಳಿದಿದ್ದೇನೆ. ಇದು ನನಗೆ ಸವಾಲು ಕೂಡ ಹೌದು. ಪ್ರತಿಷ್ಠೆಯೂ ಹೌದು. ಕಾಂಗ್ರೆಸ್ಸಿನ ಪವರ್‌ಫುಲ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ಸ್ಪರ್ಧಿಸುತ್ತಿದ್ದೇನೆ. ಕನಕಪುರ ಕ್ಷೇತ್ರದ ಜನತೆಯನ್ನು ಶಿವಕುಮಾರ್ ಹೇಗೆ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದಾರೆ ಎಂಬುದು ಪ್ರಪಂಚಕ್ಕೇ ಗೊತ್ತಿರುವ ವಿಚಾರ. ಅಂಥ ಕ್ಷೇತ್ರದ ಅಖಾಡದಲ್ಲಿ ನಾನೀಗ ಧುಮುಕಿದ್ದೇನೆ.
ಸಿಎಂ ಹುದ್ದೆಯನ್ನು ಜಾತಿಗೆ ಸೀಮಿತ ಮಾಡಬೇಡಿ: ಎಚ್.ಡಿ.ಕುಮಾರಸ್ವಾಮಿ
* ಎರಡು ಕ್ಷೇತ್ರಗಳಲ್ಲಿ ನಿಮ್ಮನ್ನು ಕಣಕ್ಕಿಳಿಸುವ ಬಗ್ಗೆ ನಿಮಗೆ ನಿರೀಕ್ಷೆ ಇತ್ತೇ?
ಆ ರೀತಿ ನಿರೀಕ್ಷೆ ನನ್ನ ಕನಸು ಮನಸಲ್ಲೂ ಇರಲಿಲ್ಲ. ಈಗ ಪಕ್ಷ ನನಗೆ ಜವಾಬ್ದಾರಿ ವಹಿಸಿದೆ. ಪಕ್ಷದ ಶಿಸ್ತಿನ ಸಿಪಾಯಿಯಾಗಿ ನಾನು ಆ ಜವಾಬ್ದಾರಿಯನ್ನು ಸ್ವೀಕರಿಸಿ ಸಫಲವಾಗುವಂತೆ ಮಾಡುತ್ತೇನೆ.
* ಕನಕಪುರಕ್ಕೆ ನೀವೇ ಏಕೆ? ಒಕ್ಕಲಿಗ ಸಮುದಾಯದ ಅಶ್ವತ್ಥನಾರಾಯಣ, ಸಿ.ಟಿ.ರವಿ ಇದರಲ್ಲ?
ನೋಡಿ ಕನಕಪುರ ಕ್ಷೇತ್ರದಲ್ಲಿ ಫೈಟ್ ನೀಡುವವರು, ವರ್ಚಸ್ಸು ಇರುವಂಥವರನ್ನು ವರಿಷ್ಠರು ಹುಡುಕುತ್ತಿದ್ದರು. ನಾನು ಕಂದಾಯ ಸಚಿವನಾಗಿ ಇತಿಹಾಸದಲ್ಲೇ ಮೊದಲ ಬಾರಿಗೆ ರೈತರ ಮನೆಬಾಗಿಲಿಗೆ ಕಂದಾಯ ದಾಖಲೆಗಳನ್ನು ಉಚಿತವಾಗಿ ತಲುಪಿಸುವ ಕೆಲಸ ಮಾಡಿದ್ದೇನೆ. ಇಂಥ ಹತ್ತು ಹಲವು ಕಾರ್ಯಕ್ರಮಗಳನ್ನು ನಾನು ಮಾಡಿದ್ದೇನೆ. ಒಕ್ಕಲಿಗ ಜನಾಂಗದ ನಾಯಕರಲ್ಲಿ ನಾನು ಪ್ರಮುಖ ಸ್ಥಾನದಲ್ಲಿ ಇದ್ದೇನೆ. ಬೆಂಗಳೂರಿಗೆ ಸಮೀಪದ ಸ್ಥಳವೂ ಆಗಿರುವುದು ಮತ್ತೊಂದು ಕಾರಣ. ಜತೆಗೆ ಬಿಜೆಪಿಯಲ್ಲಿ ಡಿ.ಕೆ.ಶಿವಕುಮಾರ್‌ಗೆ ಠಕ್ಕರ್ ಕೊಡಬಲ್ಲ ಒಬ್ಬನೇ ವ್ಯಕ್ತಿ ಎಂದರೆ ಅದು ಅಶೋಕ್ ಎಂಬ ಕಾರಣಕ್ಕೆ ನನ್ನನ್ನು ಆಯ್ಕೆ ಮಾಡಿದ್ದಾರೆ.
* ಹೊಂದಾಣಿಕೆ ರಾಜಕಾರಣಕ್ಕೆ ಬ್ರೇಕ್ ಉದ್ದೇಶದಿಂದ ನಿಮ್ಮನ್ನು ಆಯ್ಕೆ ಮಾಡಲಾಯಿತೇ?
ಹೊಂದಾಣಿಕೆ ರಾಜಕಾರಣದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆ ರೀತಿ ಹೊಂದಾಣಿಕೆ ರಾಜಕಾರಣ ನನ್ನಲ್ಲಿ ಇದ್ದಿದ್ದರೆ ಕನಕಪುರ ಕ್ಷೇತ್ರದಿಂದ ಕಣಕ್ಕಿಳಿಸುತ್ತಿರಲಿಲ್ಲ. ನಾನು ಆರು ಬಾರಿ ಚುನಾವಣೆ ಗೆದ್ದಿದ್ದೇನೆ. ಹಿಂದೆ ಎಂ.ಶ್ರೀನಿವಾಸ್, ಎಸ್.ರಮೇಶ್, ಈಗಿನ ಸಚಿವ ಎಸ್.ಟಿ.ಸೋಮಶೇಖರ್ ವಿರುದ್ಧ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ನಾನೇನೂ ದುರ್ಬಲ ಅಭ್ಯರ್ಥಿಗಳ ವಿರುದ್ಧ ಗೆದ್ದಿಲ್ಲ.
* ನೀವು ಮತ್ತು ಡಿಕೆಶಿ ಒಂದೇ ಸಮುದಾಯದವರು ಎಂಬ ಕಾರಣಕ್ಕೆ ಕಣಕ್ಕಿಳಿಸಿರಬಹುದೇ?
ನನಗೂ ಮತ್ತು ಡಿ.ಕೆ.ಶಿವಕುಮಾರ್ ಅವರಿಗೂ ಯಾವುದೇ ರೀತಿಯ ಸ್ನೇಹ ಸಂಬಂಧ ಇಲ್ಲ. ನನ್ನ ಜೀವನದಲ್ಲಿ ಅವರಿಗೆ ಫೋನ್ ಮಾಡಿ ಮಾತಾಡಿದ್ದು ಇಲ್ಲ. ವೈಯಕ್ತಿಕ ಭೇಟಿಯೂ ಇಲ್ಲ. ಕನಕಪುರದಲ್ಲಿ ಫೈಟ್ ಕೊಡಬೇಕು ಎಂಬ ಉದ್ದೇಶದಿಂದ ನನ್ನನ್ನು ಸ್ಪರ್ಧಿಸಲು ವರಿಷ್ಠರು ಸೂಚಿಸಿದ್ದಾರೆ. ಕಾಟಾಚಾರಕ್ಕೆ ಆಗಿದ್ದರೆ ಅಲ್ಲಿ ನಾನು ಅಭ್ಯರ್ಥಿಯಾಗುತ್ತಿರಲಿಲ್ಲ. ಅಲ್ಲಿ ನಮ್ಮ ಪಕ್ಷ ಶೂನ್ಯ ಸ್ಥಾನದಲ್ಲಿದೆ. ಕಳೆದ ಚುನಾವಣೆಯಲ್ಲಿ ಆರು ಸಾವಿರ ಮತಗಳನ್ನು ಮಾತ್ರ ಗಳಿಸಿದೆ. ಪಕ್ಷ ಉಳಿಸಬೇಕು. ಒಳ್ಳೆಯ ಫೈಟ್ ಕೊಡಬೇಕು ಎಂಬ ಕಾರಣಕ್ಕಾಗಿ ನನ್ನನ್ನು ನಿಲ್ಲಿಸಲಾಗಿದೆ. ನಾನು ಅಲ್ಲಿಗೆ ಹೋದ ಮೇಲೆಯೇ ಕನಕಪುರ ಕ್ಷೇತ್ರದಲ್ಲಿ ಹೋರಾಟದ ಲಕ್ಷಣ ಕಂಡು ಬಂದಿದೆ. ಇದುವರೆಗೆ ಅಲ್ಲಿ ಸ್ಪರ್ಧಿಸುತ್ತಿದ್ದ ಕಾಂಗ್ರೆಸ್ಸೇತರ ಅಭ್ಯರ್ಥಿಗಳು ಪ್ರಬಲರಾಗಿರಲಿಲ್ಲ. ಶಿವಕುಮಾರ್ ಅವರನ್ನು ಎದುರಿಸುವ ಸಾಮರ್ಥ್ಯ ಈ ಅಶೋಕ್‌ಗಿದೆ.
* ಪದ್ಮನಾಭನಗರಕ್ಕೆ ನೀವು ಚಿರಪರಿಚಿತರು. ಆದರೆ, ಕನಕಪುರ ಜನತೆಗೆ ನಿಮ್ಮ ಮೇಲೆ ನಂಬಿಕೆ ಹುಟ್ಟುವುದು ಹೇಗೆ?
ನಾನು ಗೃಹ ಸಚಿವನಾಗಿ, ಕಂದಾಯ ಸಚಿವನಾಗಿ ಕೆಲಸ ಮಾಡಿರುವ ವರ್ಚಸ್ಸು ಇದೆ. ನಾನು ಕೂಡ ಒಕ್ಕಲಿಗ ನಾಯಕ ಎಂಬುದು ಪ್ಲಸ್ ಪಾಯಿಂಟ್. ಬೇರೆ ಯಾರಾದರೂ ಅಭ್ಯರ್ಥಿಗಳಾಗಿದ್ದರೆ ಪ್ರಚಾರ ಮಾಡದಂತೆ ತಡೆಯುತ್ತಿದ್ದರು. ಹಿಂದೆಯೂ ಅಲ್ಲಿ ಅದೇ ರೀತಿ ಆಗಿದೆ. ಆ ರೀತಿ ನನ್ನನ್ನು ತಡೆಯಲು ಸಾಧ್ಯವಿಲ್ಲ. ನಾನು ದುರ್ಬಲ ಅಭ್ಯರ್ಥಿಯಲ್ಲ.
* ಡಿಕೆಶಿ ಮಟ್ಟ ಹಾಕಲು ನೀವು ಕಾರ್ಯತಂತ್ರ ರೂಪಿಸುತ್ತಿದ್ದೀರಂತೆ?
ಅಲ್ಲಿ ಜೆಡಿಎಸ್ ಅಭ್ಯರ್ಥಿ ಅಷ್ಟುಪ್ರಬಲ ಅಲ್ಲ. ಹೀಗಾಗಿ, ಜೆಡಿಎಸ್ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ. ಶಿವಕುಮಾರ್ ವಿರುದ್ಧ ಇರುವಂಥವವರನ್ನು ಒಗ್ಗೂಡಿಸಿಕೊಂಡು ಹೋರಾಟ ಮಾಡುವ ಕೆಲಸ ಆರಂಭಿಸಿದ್ದೇನೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ.
* ಮುಂಚಿತವಾಗಿಯೇ ನಿಮ್ಮನ್ನು ಕನಕಪುರ ಅಭ್ಯರ್ಥಿ ಮಾಡುವ ನಿರ್ಧಾರ ಕೈಗೊಂಡಿದ್ದರೆ ಅನುಕೂಲವಾಗುತ್ತಿತ್ತೇ?
ಆರು ತಿಂಗಳ ಮುಂಚೆ ನನಗೆ ಮಾಹಿತಿ ನೀಡಿದ್ದರೆ ನಾನು ಈ ಚುನಾವಣೆಯಲ್ಲಿ ಗೆದ್ದೇ ಬಿಡುತ್ತಿದ್ದೆ. ಕಾರ್ಯಕರ್ತರ ಪಡೆ ರಚಿಸಿ ತುಂಬಾ ಬಲವಾಗಿ ನಮ್ಮ ಪಕ್ಷದ ನೆಟ್‌ವರ್ಕ್ ಸ್ಥಾಪಿಸುತ್ತಿದ್ದೆ. ಆ ಕ್ಷೇತ್ರದಲ್ಲಿ ಶಿವಕುಮಾರ್ ಅವರಿಗೆ ಅಷ್ಟುವಿರೋಧವಿದೆ. ಈಗಲಾದರೂ ಪರವಾಗಿಲ್ಲ. ನಾನು ಶಕ್ತಿಮೀರಿ ಪ್ರಯತ್ನ ಮಾಡುತ್ತಿದ್ದೇನೆ. ಜನರು ಶಿವಕುಮಾರ್ ವಿರುದ್ಧ ಇದ್ದಾರೆ ಎಂಬುದು ಸ್ಪಷ್ಟವಾಗಿ ಕಂಡು ಬರುತ್ತಿದೆ. ಬಿಜೆಪಿ ಮತ್ತು ನರೇಂದ್ರ ಮೋದಿ ಅವರ ಆಡಳಿತ ಕನಕಪುರಕ್ಕೆ ಬರಬೇಕು ಎಂಬ ಸಂದೇಶವನ್ನು ಪ್ರಧಾನಿ ಪ್ರತಿನಿಧಿಯಾಗಿ ಕೊಡುತ್ತಿದ್ದೇನೆ.
* ಕನಕಪುರದ ಜನತೆ ಶಿವಕುಮಾರ್ ಅವರನ್ನು ಬಿಟ್ಟು ನಿಮ್ಮನ್ನು ಯಾಕೆ ಬೆಂಬಲಿಸಬೇಕು?
ಅಲ್ಲಿ ಒಂದು ರೀತಿಯ ಉಸಿರುಗಟ್ಟುವ ವಾತಾವರಣವಿದೆ. ಶಿವಕುಮಾರ್ ಕಪಿಮುಷ್ಟಿಯಿಂದ ಕನಕಪುರವನ್ನು ಹೊರಗೆ ತರಬೇಕಾಗಿದೆ. ಜನರು ಬದಲಾವಣೆ ಬಯಸುತ್ತಿದ್ದಾರೆ. ಆ ಬದಲಾವಣೆಯ ಗಾಳಿ ಇಟ್ಟುಕೊಂಡು ನಮ್ಮದೇ ಆದ ವರ್ಚಸ್ಸನ್ನು ಬಳಸಿಕೊಂಡು ಬಿಜೆಪಿ ಅಲೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದೇನೆ.
* ಒಟ್ಟಿನಲ್ಲಿ ಕನಕಪುರದ ಬಂಡೆಯನ್ನು ಒಡೆಯಲು ನೀವು ಸಜ್ಜಾಗಿದ್ದೀರಿ?
ಹೌದು. ಕನಕಪುರದ ಬಂಡೆಯನ್ನು ಒಡೆಯುವುದಕ್ಕೆ ಹೋಗಿದ್ದೇನೆ. ಆ ರೀತಿಯ ರಣತಂತ್ರವನ್ನು ಬಿಜೆಪಿ ವರಿಷ್ಠರು ಮಾಡುತ್ತಿದ್ದಾರೆ.
* ಕನಕಪುರಕ್ಕೆ ಹೆಚ್ಚಿನ ಗಮನ ಹರಿಸಿದರೆ ಪದ್ಮನಾಭನಗರದಲ್ಲಿ ಸಮಸ್ಯೆ ಆಗುವುದಿಲ್ಲವೇ?
ಇಲ್ಲ. ಪದ್ಮನಾಭನಗರದಲ್ಲಿ ನಾನು ಸಾಕಷ್ಟುಅಭಿವೃದ್ಧಿ ಕೆಲಸ ಮಾಡಿದ್ದೇನೆ. ಇಲ್ಲಿನ ಜನರೊಂದಿಗೆ ನಿರಂತರ ಒಡನಾಟವಿದೆ. ಬಹುತೇಕರು ವಿದ್ಯಾವಂತರು. ಅವರಿಗೆ ಅಶೋಕ್ ಏನು ಎಂಬುದು ಚೆನ್ನಾಗಿಯೇ ಗೊತ್ತಿದೆ. ನನ್ನ ಮೇಲೆ ವಿಶ್ವಾಸವಿದೆ. ಮನೆ ಮಗನ ರೀತಿ ಗೆಲ್ಲಿಸಲಿದ್ದಾರೆ.
* ಡಿಕೆಶಿ ಗೆದ್ದರೆ ಸಿಎಂ ಆಗುವ ಅವಕಾಶ ಇದೆ, ನೀವು ಗೆದ್ದರೆ ಸಿಎಂ ಅವಕಾಶ ಬರಬಹುದಾ?
ಶಿವಕುಮಾರ್ ಆ ಭ್ರಮೆಯಲ್ಲಿದ್ದಾರೆ. ಕಾಂಗ್ರೆಸ್ಸಿನ ಅನೇಕ ಶಾಸಕರು ಹಾಗೂ ಮುಖಂಡರು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಲಿ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ. ಶಿವಕುಮಾರ್ ಮುಖ್ಯಮಂತ್ರಿ ಆಗಬೇಕು ಎಂದು ಒಬ್ಬ ಕಾಂಗ್ರೆಸ್ ಶಾಸಕರೂ ಹೇಳಿಲ್ಲ. ಅವರು ಹೋಮ ಹವನ, ಜ್ಯೋತಿಷ್ಯದಲ್ಲಿ ನಿರತರಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದೇ ಅಸಾಧ್ಯದ ಮಾತು. ಶಾಸಕರಾಗಿಯೇ ಜನರಿಗೆ ಅವರನ್ನು ತಡೆದುಕೊಳ್ಳಲು ಆಗುತ್ತಿಲ್ಲ. ಇನ್ನು ಮುಖ್ಯಮಂತ್ರಿಯಾದರೆ ಅಲ್ಲಿನ ಜನರ ಪರಿಸ್ಥಿತಿ ಮತ್ತಷ್ಟುಕಷ್ಟಕರವಾಗಲಿದೆ. ನಮ್ಮಲ್ಲಿ ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಪಕ್ಷ ಹಾಗೂ ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಂತೆ ಅಲ್ಲ.
* ಹಾಗಂತ ನಿಮಗೆ ಮುಖ್ಯಮಂತ್ರಿ ಆಗಬೇಕು ಎಂಬ ಆಸೆ ಇಲ್ಲವೇ?
ಆಸೆ ಇದೆ. ಇಲ್ಲ ಅಂತಲ್ಲ. ಆದರೆ, ದುರಾಸೆ ಇಲ್ಲ.
40 ಪರ್ಸೆಂಟ್ ಸರ್ಕಾರ ಕಿತ್ತೊಗೆದು ಕಾಂಗ್ರೆಸ್ ಅಧಿಕಾರಕ್ಕೆ ತನ್ನಿ: ಪ್ರಿಯಾಂಕಾ ಗಾಂಧಿ
* ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಸಂಘಟನೆ ಬಲಗೊಳ್ಳಬೇಕು ಎಂಬ ಟಾಸ್ಕ್ ಅನ್ನು ಅಮಿತ್ ಶಾ ಅವರು ನೀವು ಸೇರಿದಂತೆ ಪಕ್ಷದ ಒಕ್ಕಲಿಗ ನಾಯಕರಿಗೆ ನೀಡಿದ್ದರಲ್ಲ?
ನಾಲ್ಕು ತಿಂಗಳ ಹಿಂದೆ ಟಾಸ್ಕ್ ನೀಡಿದ್ದರು. ಹಳೆ ಮೈಸೂರು ಭಾಗದ 68 ಕ್ಷೇತ್ರಗಳಲ್ಲಿ ವಿಜಯ ಸಂಕಲ್ಪ ಯಾತ್ರೆ ಮೂಲಕ ಪ್ರವಾಸ ಮಾಡಿದ್ದೇನೆ. ಈ ಭಾಗದಲ್ಲಿ ಪಕ್ಷದ ಬಲ ಮತ್ತು ವರ್ಚಸ್ಸು ಹೆಚ್ಚಾಗಿದೆ. ಅನೇಕ ಜಿಲ್ಲೆಗಳಲ್ಲಿ ಮೊದಲು ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಪೈಪೋಟಿ ಇರುತ್ತಿತ್ತು. ಈಗ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕೆಲವೆಡೆ ಬಿಜೆಪಿಯೇ ಮುಂದಿದೆ.
* ಪ್ರತಿಪಕ್ಷದ ನಾಯಕರನ್ನು ಕಟ್ಟಿಹಾಕಬೇಕು ಎಂಬ ಬಿಜೆಪಿ ವರಿಷ್ಠರ ತಂತ್ರ ನಿಮ್ಮ ಮೂಲಕ ಯಶಸ್ವಿಯಾಗಿದೆಯೇ?
ಆಗಿದೆ. ಇದುವರೆಗಿನ ಶಿವಕುಮಾರ್ ಅವರ ಎಲ್ಲ ಚುನಾವಣೆಗಳನ್ನು ಅವರ ಸಹೋದರ ಡಿ.ಕೆ.ಸುರೇಶ್ ಮಾಡುತ್ತಿದ್ದರು. ಜತೆಗೆ ಬೇರೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಪ್ರಚಾರವನ್ನೂ ಮಾಡುತ್ತಿದ್ದರು. ಈಗ ನಾನು ಅಭ್ಯರ್ಥಿಯಾದ ಬಳಿಕ ಸುರೇಶ್ ಎಲ್ಲಿಯೂ ಹೋಗದೆ ಕನಕಪುರದಲ್ಲೇ ಠಿಕಾಣಿ ಹೂಡಿದ್ದಾರೆ. ನಾನು ಪ್ರಚಾರಕ್ಕೆ ಹೋಗುವ ಹಳ್ಳಿಗಳಿಗೆ ಮುಂಚಿತವಾಗಿಯೇ ಸುರೇಶ್ ಅಲ್ಲಿಗೆ ಹೋಗಿ ಅಲ್ಲಿನ ಜನರನ್ನು ಮಾತನಾಡಿಸಿಕೊಂಡು ಹೋಗುತ್ತಿದ್ದಾರೆ. ಅಷ್ಟರಮಟ್ಟಿಗೆ ಅವರನ್ನು ಕಟ್ಟಿಹಾಕಿದ್ದೇನೆ. ಅದೇ ರೀತಿ ವಿ.ಸೋಮಣ್ಣ ಅವರು ಸ್ಪರ್ಧಿಸಿರುವ ವರುಣ ಕ್ಷೇತ್ರದಲ್ಲೂ ಪ್ರತಿಪಕ್ಷದ ನಾಯಕರಲ್ಲಿ ಆತಂಕ ಸೃಷ್ಟಿಯಾಗಿದೆ. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.