ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ?: ಸಿದ್ದು ವಿರುದ್ಧ ಶ್ರೀನಿವಾಸ್ ಪ್ರಸಾದ್‌ ವಾಗ್ದಾಳಿ

By Kannadaprabha News  |  First Published Apr 28, 2023, 9:42 PM IST

ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ? ಎಲ್ಲಾ ಮತಗಳನ್ನೂ ಇವರು ಪಡೆಯಲು ಆಗುತ್ತದೆಯೇ? ಮಾನಸಿಕ ರೋಗಿಗಳು, ದಡ್ಡರು ಈ ರೀತಿಯ ಹೇಳಿಕೆ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ವಾಗ್ದಾಳಿ ನಡಸಿದರು. 
 


ಮೈಸೂರು (ಏ.28): ಯಾರಾದರೂ ಒಂದು ಲಕ್ಷ ಮತಗಳಿಂದ ಗೆಲ್ಲಲು ಸಾಧ್ಯವೇ? ಎಲ್ಲಾ ಮತಗಳನ್ನೂ ಇವರು ಪಡೆಯಲು ಆಗುತ್ತದೆಯೇ? ಮಾನಸಿಕ ರೋಗಿಗಳು, ದಡ್ಡರು ಈ ರೀತಿಯ ಹೇಳಿಕೆ ನೀಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ವಾಗ್ದಾಳಿ ನಡಸಿದರು. ಮೈಸೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಮಾಜಿ ಸಿಎಂ, ವಿರೋಧ ಪಕ್ಷನಾಯಕರಾಗಿರುವವರು. ಮಾತನಾಡುವ ಮುನ್ನ ಯೋಚಿಸಬೇಕು ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯ ಸುರಕ್ಷಿತ ಕ್ಷೇತ್ರಕ್ಕಾಗಿ ಹುಡುಕಾಟ ನಡೆಸಿ, ಕೊನೆಗೂ ವರುಣಗೆ ಬಂದು ನಿಂತಿದ್ದಾರೆ. ವರುಣಗೆ ನಾಮಪತ್ರ ಸಲ್ಲಿಸಲು ಮಾತ್ರ ಬರುತ್ತೇನೆ ಎಂದು ಹೇಳಿದ್ದವರು ಆಗಲೇ ಎರಡನೇ ಬಾರಿ ಪ್ರಚಾರ ಮಾಡಿದ್ದಾರೆ. ಕಳೆದ ಬಾರಿ ಚಾಮುಡೇಶ್ವರಿಯಲ್ಲಿ ಸ್ಪರ್ಧಿಸಿದ್ದಾಗಲೂ ಇದೇ ರೀತಿ ಹೇಳಿದ್ದರು. ಸೋಲಿನ ಸುಳಿವು ಸಿಕ್ಕ ಮೇಲೆ ಗಲ್ಲಿ ಗಲ್ಲಿಯಲ್ಲಿ ಓಡಾಡಿದ್ದರು. ತಮ್ಮ ಅಹಂಕಾರದಿಂದಲೇ 36 ಸಾವಿರ ಮತಗಳಿಂದ ಸೋತಿದ್ದರು. ಅವರ ಆಪ್ತನೊಬ್ಬ 23 ಸಾವಿರ ಮತಗಳ ಅಂತರದಿಂದ ಸೋತಿದ್ದ ಎಂದು ಡಾ.ಎಚ್‌.ಸಿ. ಮಹದೇವಪ್ಪ ಹೆಸರೇಳದೆ ಶ್ರೀನಿವಾಸಪ್ರಸಾದ್‌ ಕುಟುಕಿದರು.

Latest Videos

undefined

ಈಶ್ವರಪ್ಪರಿಂದ ಬಿಜೆಪಿ ಭೀಷ್ಮರಂತೆ ಮಾರ್ಗದರ್ಶನ: ಅಣ್ಣಾಮಲೈ

ಡಿಕೆಶಿಗೆ ತಿರುಗೇಟು: ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ಬೇಕಾದರೆ ರಕ್ತದಲ್ಲಿ ಬರೆದುಕೊಡುತ್ತೇನೆ ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ವಿ. ಶ್ರೀನಿವಾಸಪ್ರಸಾದ್‌ ಅವರು, ಡಿ.ಕೆ. ಶಿವಕುಮಾರ್‌ ತಲೆ ಮೇಲೆ ಐಟಿ, ಇಡಿ ಕತ್ತಿ ತೂಗಾಡುತ್ತಿದೆ. ಯಾವಾಗ ಏನಾಗುತ್ತದೋ ಗೊತ್ತಿಲ್ಲ. ಒಂದು ಪಕ್ಷದ ಅಧ್ಯಕ್ಷರಾದವರು ಈ ರೀತಿ ಮಾತನಾಡುವುದು ಸರಿಯಲ್ಲ. ಇಂತಹವರು ರಾಜ್ಯದ ಮುಖ್ಯಮಂತ್ರಿಯಾದರೆ ಯಾವ ರೀತಿ ಆಡಳಿತ ನಡೆಸುತ್ತಾರೆ ಎಂದು ತಿರುಗೇಟು ನೀಡಿದರು.

ವರುಣದಲ್ಲಿ ಬಿಜೆಪಿ- ಜೆಡಿಎಸ್‌ ಒಳ ಒಪ್ಪಂದ ಮಾಡಿಕೊಂಡಿವೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸಪ್ರಸಾದ್‌ ಅವರು, ನಂಜನಗೂಡಿನಲ್ಲಿ ಜೆಡಿಎಸ್‌ ಅಭ್ಯರ್ಥಿ ಹಾಕದೆ ಕಾಂಗ್ರೆಸ್‌ಗೆ ಬೆಂಬಲ ನೀಡಿದೆ. ವರುಣದಲ್ಲಿ ಸ್ಪರ್ಧೆ ಮಾಡಿದೆ. ಇಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವವರು ಯಾರು? ಇವರಿಗೆ ನಮ್ಮ ಬಗ್ಗೆ ಮಾತನಾಡಲು ಯಾವ ನೈತಿಕತೆ ಇದೆ. ನಾನು ನಂಜನಗೂಡು ಉಪ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾಗ ಕಾಂಗ್ರೆಸ್‌ನಲ್ಲಿ ಅಭ್ಯರ್ಥಿಯಿಲ್ಲದೆ ಜೆಡಿಎಸ್‌ನ ಕಳಲೆ ಕೇಶವಮೂರ್ತಿ ಕಣಕ್ಕಿಳಿಸಿದ್ದರು. ಈ ಬಾರಿ ನಂಜನಗೂಡಿನಲ್ಲಿ ಜೆಡಿಎಸ್‌ ಘಟಕವೇ ಕಾಂಗ್ರೆಸ್‌ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದೆ ಎಂದು ಕಿಡಿಕಾರಿದರು.

ಮತ್ತೆ ಅಧಿಕಾರಕ್ಕೆ: ಬಿಜೆಪಿಗೆ ಜನಬೆಂಬಲ, ಮೆಚ್ಚುಗೆ ಇದೆ. ಡಬಲ್‌ ಎಂಜಿನ್‌ ಸರ್ಕಾರ ಉತ್ತಮ ಆಡಳಿತ ನೀಡಿರುವುದರಿಂದ ಅತಂತ್ರ ಸ್ಥಿತಿ ನಿರ್ಮಾಣವಾಗದೆ ಸ್ಪಷ್ಟಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಜಿಲ್ಲೆಯಲ್ಲಿ ಪಕ್ಷದ ಬಲ ಹೆಚ್ಚಾಗಿದೆ. ಜಿಲ್ಲೆಯ 11 ಕ್ಷೇತ್ರಗಳಲ್ಲಿ ಹಾಲಿ ಇಬ್ಬರು ಶಾಸಕರಿಗೆ ಟಿಕೆಟ್‌ ನೀಡಿದ್ದು, ಉಳಿದ ಕಡೆ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಪಕ್ಷದ ಹೋರಾಟ ಸಂಘಟಿತವಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು. ಕಳೆದ ಲೋಕಸಭೆ ಚುನಾವಣೆಯಿಂದ ಗ್ರಾಮಾಂತರ ಭಾಗದಲ್ಲೂ ಪಕ್ಷದ ಶಕ್ತಿ ವೃದ್ಧಿಸಿದೆ. ಕಳೆದ ಬಾರಿ ವರುಣದಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಾಗಿತ್ತು. 

‘ಮನ್‌ ಕಿ ಬಾತ್‌’ ಗಿನ್ನಿಸ್‌ ದಾಖಲೆ ಸೇರುವ ಸಾಧ್ಯ​ತೆ: ಸಂಸದ ಬಿ.ವೈ.ರಾಘವೇಂದ್ರ

ಈ ಬಾರಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಮೇಯರ್‌ ಶಿವಕುಮಾರ್‌, ಕೃಷ್ಣರಾಜ ಕ್ಷೇತ್ರದ ಅಭ್ಯರ್ಥಿ ಟಿ.ಎಸ್‌. ಶ್ರೀವತ್ಸ, ಮುಖಂಡರಾದ ಎಸ್‌. ಜಯಪ್ರಕಾಶ್‌, ಕೆ. ವಸಂತಕುಮಾರ್‌, ಗಿರಿಧರ್‌ ಮೊದಲಾದವರು ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!