
ಕೆ.ಆರ್.ಪೇಟೆ (ಮೇ.05): ಅಂಬರೀಶ್ ಬದುಕಿದ್ದಾಗ ಅವರನ್ನು ಆತ್ಮೀಯ ಗೆಳೆಯ ಎನ್ನುತ್ತಿದ್ದವರು ಅವರು ನಿಧನರಾದಾಗ ಒಂದು ಸ್ಮಾರಕ ನಿರ್ಮಿಸಲು ಮುಂದಾಗಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ಸಂಸದೆ ಸುಮಲತಾ ಟೀಕಿಸಿದರು. ತಾಲೂಕಿನ ಬೂಕನಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರ ಪರ ಪ್ರಚಾರ ನಡೆಸಿ ಮಾತನಾಡಿ, ಮೂರು ಸಲ ಎಂಪಿ, ಒಮ್ಮೆ ಶಾಸಕರಾಗಿದ್ದ ಅಂಬರೀಶ್ ಸಿನಿಮಾ ಹಾಗೂ ರಾಜಕಾರಣದಲ್ಲಿ ಅಜಾತ ಶತ್ರುವಿನಂತಿದ್ದರು. ಅವರು ತೀರಿಕೊಂಡಾಗ ರಾಜ್ಯದಲ್ಲಿ ಮೈತ್ರಿ ಸರ್ಕಾರವಿತ್ತು. ಅಂಬರೀಶ್ ನನ್ನ ಆಪ್ತ ಮಿತ್ರ.
ಅವರ ಮೇಲೆ ಪ್ರೀತಿ, ಅಭಿಮಾನ, ಗೌರವವಿದೆ ಎಂದವರು ಅವರಿಗೊಂದು ಸ್ಮಾರಕ ನಿರ್ಮಿಸಿಕೊಡಲಾಗಲಿಲ್ಲ. ಆದರೆ, ಯಡಿಯೂರಪ್ಪ ಕೊಟ್ಟಮಾತಿನಂತೆ ನಡೆದುಕೊಂಡರು. ಕೊಟ್ಟಮಾತಿನಂತೆ ನಡೆದುಕೊಳ್ಳುವವರಿಗೆ ಮತ ಹಾಕಿ ಎಂದು ಮಾತಿನಿಂದಲೇ ತಿವಿದರು. ಸತ್ಯ, ನಿಷ್ಠೆ, ಪ್ರಾಮಾಣಿಕತೆ ಎಲ್ಲಿದೆ ಎನ್ನುವುದನ್ನು ತೂಕ ಮಾಡಿ ಕ್ಷೇತ್ರದ ಜನ ಬಿಜೆಪಿ ಅಭ್ಯರ್ಥಿ ಕೆ.ಸಿ.ನಾರಾಯಣಗೌಡರಿಗೆ ಮತ ಹಾಕುವಂತೆ ಮನವಿ ಮಾಡಿದರು. ಕೊಟ್ಟಮಾತಿನಂತೆ ನಡೆಯುವ ಧೀಮಂತ ನಾಯಕ ಬಿ.ಎಸ್.ಯಡಿಯೂರಪ್ಪ. 2019ರಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಮುನ್ನ ನವದೆಹಲಿಯಲ್ಲಿ ಸಂಸದರ ಸಭೆ ಕರೆದಿದ್ದರು. ಅಲ್ಲಿ ನಾನು ಅವರಿಗೆ ಮೈಷುಗರ್ ಪುನಶ್ಚೇತನದ ಬಗ್ಗೆ ಪ್ರಸ್ತಾಪಿಸಿದ್ದೆ. ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಮೈಷುಗರ್ ಕಾರ್ಖಾನೆಯ ಪುನಶ್ಚೇತನಕ್ಕೆ ಕ್ರಮ ವಹಿಸಿದರು.
ಸಿಎಂ ಗಾದಿ ಅವಕಾಶವಿದೆ, ಬೆಂಬಲಿಸಿ: ಮತ್ತೊಮ್ಮೆ ಮನದಿಂಗಿತ ಬಿಚ್ಚಿಟ್ಟ ಸಿದ್ದರಾಮಯ್ಯ
ಸಚಿವ ಕೆ.ಸಿ.ನಾರಾಯಣಗೌಡರಿಗೆ ನೀವು ಹಾಕುವ ಮತ ಯಡಿಯೂರಪ್ಪ ಮತ್ತು ನರೇಂದ್ರ ಮೋದಿಗೆ ನೀಡುವ ಮತ ಎಂದ ಸುಮಲತಾ, ನಾನು ಪಕ್ಷೇತರ ಸಂಸದೆಯಾಗಿದ್ದರೂ ತಾರತಮ್ಯ ಮಾಡದೆ ಪ್ರಧಾನಿ ಮೋದಿ ಜಿಲ್ಲೆಯ ಅಭಿವೃದ್ಧಿಗೆ 700 ಕೋಟಿ ರು. ಅನುದಾನ ನೀಡಿದ್ದಾರೆ. ಸಂಸದ ನಿಧಿಯಿಂದ ನಾನು ಕೆ.ಆರ್.ಪೇಟೆ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡಿದ್ದೇನೆ. ಪಕ್ಷೇತರ ಸಂಸದೆಗೆ ಇಷ್ಟುಪೋ›ತ್ಸಾಹ ನೀಡುವ ಮೋದಿ ಅವರದೇ ಪಕ್ಷದ ಎಂಪಿಯಾದರೆ ಇನಷ್ಟುಅನುದಾನ ಕೊಡಬಹುದು. ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ ನಾನು ಬಿಜೆಪಿಗೆ ಬೆಂಬಲ ನೀಡಿದ್ದೇನೆ ಎಂದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಕುಟುಂಬ ರಾಜಕಾರಣದ ಪಕ್ಷವನ್ನು ಬೆಳೆಸಿದರೆ ಒಂದು ಕುಟುಂಬ ಮಾತ್ರ ಪ್ರಗತಿ ಹೊಂದುತ್ತದೆ. ನೀವು ಹಾಕುವ ಮತ ನಿಮ್ಮ ಅಭಿವೃದ್ಧಿಗೆ ಬಳಕೆಯಾಗಬೇಕು. ಒಂದು ಪಕ್ಷ ಜಿಲ್ಲೆಯಲ್ಲಿ ಮೈನಿಂಗ್ ದೊರೆಗಳಿಗೆ ಟಿಕೆಟ್ ನೀಡಿದ್ದರೆ ಮತ್ತೊಂದು ಪಕ್ಷ ವಲಸಿಗ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಆ ಪಕ್ಷಕ್ಕೆ ಗೆಲ್ಲುವ ಆತ್ಮಸ್ಥೈರ್ಯವೇ ಇಲ್ಲ. ಆದ್ದರಿಂದ ಕೊಟ್ಟಮಾತಿನಂತೆ ನಡೆದುಕೊಳ್ಳುವ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕಿ.
-ಸುಮಲತಾ ಅಂಬರೀಶ್, ಸಂಸದೆ
ಬಜರಂಗದಳವಲ್ಲ, ಕಾಂಗ್ರೆಸ್ಸೇ ಬ್ಯಾನ್ ಆಗುತ್ತೆ: ಬಿ.ವೈ.ವಿಜಯೇಂದ್ರ
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅದರ ಅಂತ್ಯ ಕಾಲ ಆರಂಭವಾಗಿದೆ. ಮೋದಿ, ಅಮಿತ್ ಶಾ ಮುಂದೆ ರಾಹುಲ್ ಗಾಂಧಿ ಸಮಾನರಾಗಲು ಸಾಧ್ಯವೇ ಎಂದು ಪ್ರಶ್ನಿಸಿದ ಯಡಿಯೂರಪ್ಪ, ಜನರು ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಉತ್ತರ ಪ್ರದೇಶದ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ 5 ಸ್ಥಾನಗಳು. ಅದೇ ಮಾದರಿಯಲ್ಲಿ ಇಲ್ಲಿಯೂ ಕಾಂಗ್ರೆಸ್ ಅನ್ನು ಜನರು ಮೂಲೆಗುಂಪು ಮಾಡುತ್ತಾರೆ.
-ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.