ಜನವಿರೋಧಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ತಮ್ಮ ಗೆಲುವಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎಸ್.ಮಧು ಬಂಗಾರಪ್ಪ ಹೇಳಿದರು.
ಸೊರಬ (ಏ.14): ಜನವಿರೋಧಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡುವ ಮೂಲಕ ತಮ್ಮ ಗೆಲುವಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಎಸ್.ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ಆನವಟ್ಟಿಪಟ್ಟಣದಲ್ಲಿ ಗುರುವಾರ ಕಾಂಗ್ರೆಸ್ ಚುನಾವಣಾ ನಿರ್ವಹಣಾ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಮತಯಾಚಿಸಲು ಜನ ವಿಲ್ಲದಂತಾಗಿದೆ. ನುಡಿದಂತೆ ನಡೆಯುವ ಕಾಂಗ್ರೆಸ್ ಅಭಿವೃದ್ಧಿ ಕಾರ್ಯಗಳು ಮತ್ತು ಕ್ಷೇತ್ರದಲ್ಲಿ ನನ್ನ ನಾಯಕತ್ವ ಮೆಚ್ಚಿ ತಂಡೋಪತಂಡವಾಗಿ ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕ್ಷೇತ್ರದಲ್ಲಿ ಕೇವಲ ಒಂದು ತಿಂಗಳಲ್ಲಿ ಸುಮಾರು 40 ಸಾವಿರ ಜನ ಪಕ್ಷದ ಸದಸ್ಯತ್ವ ಪಡೆದಿದ್ದಾರೆ. ಬೂತ್‌ಮಟ್ಟದಲ್ಲಿ ಪಕ್ಷದ ಸಂಘಟನೆ ಉತ್ತಮವಾಗಿ ನಡೆಯುತ್ತಿದೆ. ಕ್ಷೇತ್ರದಲ್ಲಿ ಶೇ.50ರಷ್ಟು ಮಹಿಳಾ ಮತದಾರರಿದ್ದು, ಅವರಿಗೂ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಕ್ಷದ ಮಹಿಳಾ ಮುಖಂಡರು ಮತ್ತು ಕಾರ್ಯಕರ್ತರು ಉತ್ತಮವಾಗಿ ಸಂಘಟನೆ ಮಾಡುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಕಾಂಗ್ರೆಸ್ ನೀಡುತ್ತಿರುವ ಗ್ಯಾರಂಟಿ ಕಾರ್ಡ್ ವಿಶ್ವಾಸಾರ್ಹವಾಗಿದೆ.
undefined
ಶಿರಾ ಕ್ಷೇತ್ರದ ಅಭಿವೃದ್ಧಿಯಲ್ಲಿ ನನ್ನದೇ ಸಿಂಹಪಾಲು: ಮಾಜಿ ಸಚಿವ ಟಿ.ಬಿ.ಜಯಚಂದ್ರ
ಬಿಜೆಪಿಯಂತೆ ಸುಳ್ಳು ಭರವಸೆಯನ್ನು ಪಕ್ಷ ನೀಡುವುದಿಲ್ಲ ಎಂದರು. ಇದೇ ಸಂದರ್ಭದಲ್ಲಿ ಬಿಜೆಪಿಯನ್ನು ತೊರೆದು ಹಿರಿಯ ಮುಖಂಡ ಕಲ್ಲಂಬಿ ಹಿರಿಯಣ್ಣ ಅವರು ಮಧು ಬಂಗಾರಪ್ಪ ಅವರ ನಾಯಕತ್ವವನ್ನು ಮೆಚ್ಚಿ ಕಾಂಗ್ರೆಸ್ ಸೇರ್ಪಡೆಗೊಂಡರು. ಆನವಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಗೌಡ ಬಿಳಗಲಿ, ಜಿ.ಪಂ. ಮಾಜಿ ಸದಸ್ಯರಾದ ತಬಲಿ ಬಂಗಾರಪ್ಪ, ಶಿವಲಿಂಗೇಗೌಡ, ಸತೀಶ್ ಅರ್ಜುನಪ್ಪ, ಮುಖಂಡರಾದ ವಿಜಯಕುಮಾರ್ ಹೊಸಕೊಪ್ಪ, ಸುರೇಶ್ ಹಾವಣ್ಣನವರ್, ಎಲ್.ಜಿ. ರಾಜಶೇಖರ ಕುಪ್ಪಗಡ್ಡೆ, ಎಂ.ಡಿ. ಶೇಖರ್, ಮಂಜುನಾಥ್ ಕುಬಟೂರು, ಸಂಜೀವ ನೇರಲಗಿ, ಹಬೀಬುಲ್ಲಾ ಹವಾಲ್ದಾರ್ ಮತ್ತಿತರರಿದ್ದರು.
ಬಿಜೆಪಿಗೆ ರಾಜೀನಾಮೆ ನೀಡಲು ಸೊಗಡು ಶಿವಣ್ಣ ತೀರ್ಮಾನ: ಪಕ್ಷೇತರವಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ
17ರಂದು ನಾಮಪತ್ರ ಸಲ್ಲಿಕೆ: ಸೊರಬ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಏ.17ರಂದು ನಾಮಪತ್ರ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಲಿದೆ. ಕ್ಷೇತ್ರದ ಪ್ರತಿ ಬೂತ್ ಮಟ್ಟದಿಂದಲೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ಮತದಾನ ದಿನಾಂಕದ ಪೂರ್ವದಲ್ಲಿ ಸೊರಬ ಮತ್ತು ಆನವಟ್ಟಿಯಲ್ಲಿ ಎರಡು ಸಮಾವೇಶ ನಡೆಸುವ ಉದ್ದೇಶ ಹೊಂದಲಾಗಿದೆ. ಸೊರಬ ಸಮಾವೇಶಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಆನವಟ್ಟಿಸಮಾವೇಶಕ್ಕೆ ಡಿ.ಕೆ. ಶಿವಕುಮಾರ್ ಅವರನ್ನು ಆಹ್ವಾನಿಸಲಾಗುವುದು ಎಂದು ಮಧು ಬಂಗಾರಪ್ಪ ಮಾಹಿತಿ ನೀಡಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.