ವಿರೋಧದ ಅಲೆ ಮಧ್ಯೆಯೂ ಕುಮಾರ್‌ ಬಂಗಾರಪ್ಪಗೆ ಬಿಜೆಪಿ ಟಿಕೆಟ್‌: ನಮೋ ವೇದಿಕೆ ಆಶ​ಯಕ್ಕೆ ಹಿನ್ನಡೆ

By Kannadaprabha News  |  First Published Apr 14, 2023, 1:00 AM IST

ತಾಲೂಕಿನ ಮೂಲ ಬಿಜೆಪಿಗರಿಂದ ಭಾರೀ ವಿರೋಧದ ನಡುವೆಯೂ ಟಿಕೆಟ್‌ ಪಡೆಯುವಲ್ಲಿ ಯಶಸ್ವಿ ಆಗಿರುವ ಕುಮಾರ ಬಂಗಾರಪ್ಪ ಮೊದಲ ಹಂತದಲ್ಲಿ ನಮೋ ವೇದಿಕೆ ವಿರುದ್ಧ ಜಯ ಸಾಧಿಸಿದ್ದಾರೆ ಎಂದೇ ಬಿಂಬಿಸಾಗುತ್ತಿದೆ. 


ಎಚ್‌.ಕೆ.ಬಿ. ಸ್ವಾಮಿ

ಸೊರಬ (ಏ.14): ತಾಲೂಕಿನ ಮೂಲ ಬಿಜೆಪಿಗರಿಂದ ಭಾರೀ ವಿರೋಧದ ನಡುವೆಯೂ ಟಿಕೆಟ್‌ ಪಡೆಯುವಲ್ಲಿ ಯಶಸ್ವಿ ಆಗಿರುವ ಕುಮಾರ ಬಂಗಾರಪ್ಪ ಮೊದಲ ಹಂತದಲ್ಲಿ ನಮೋ ವೇದಿಕೆ ವಿರುದ್ಧ ಜಯ ಸಾಧಿಸಿದ್ದಾರೆ ಎಂದೇ ಬಿಂಬಿಸಾಗುತ್ತಿದೆ. ಕುಮಾರ ಬಂಗಾರಪ್ಪ 2018 ಚುನಾವಣೆ ನಂತರ ಮೂಲ ಬಿಜೆಪಿಗರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಆರೋಪಕ್ಕೆ ಯಾವುದೇ ಮನ್ನಣೆ ನೀಡದ ಶಾಸಕರಿಂದ ಸಿಡಿದೆದ್ದು ಮುಖಂಡರಿಂದ ನಮೋ ವೇದಿಕೆ ಹುಟ್ಟಿಕೊಳ್ಳಲು ಕಾರಣವಾಗಿದೆ. ಇದು ಬಿಜೆಪಿಯ ಇನ್ನೊಂದು ಭಾಗವೆಂದೇ ಬಿಂಬಿಸಲಾಗಿದೆ. 

Tap to resize

Latest Videos

ಹಿರಿಯ ಧುರೀಣ ಎ.ಎಸ್‌. ಪದ್ಮನಾಭ ಭಟ್‌ ಅವರನ್ನು ಮುಂದಿಟ್ಟುಕೊಂಡು ಕಳೆದ ಮೂರು ವರ್ಷಗಳಿಂದ ಕುಮಾರ್‌ ಬಂಗಾರಪ್ಪ ವಿರುದ್ಧ ಪಕ್ಷದೊಳಗೇ ಹೋರಾಟ ನಡೆಸುತ್ತ ಬಂದಿರುವ ನಮೋ ವೇದಿಕೆ 2023ರ ವಿಧಾನಸಭಾ ಚುನಾವಣೆಗೆ ಕುಮಾರ ಬಂಗಾರಪ್ಪ ಅವರಿಗೆ ಟಿಕೇಟ್‌ ನೀಡದಿರುವಂತೆ ಬಿಜೆಪಿ ವರಿಷ್ಠರಿಗೆ ದೂರು ನೀಡಿ ಪಟ್ಟುಹಿಡಿದ್ದರು. ಕುಮಾರ ಬಂಗಾರಪ್ಪ ಅವರ ವಿರುದ್ಧ ಹೈಕಮಾಂಡ್‌ಗೆ ನಮೋ ವೇದಿಕೆ ಸಲ್ಲಿಸಿದ ಆರೋಪಗಳು, ಸಂಘ ಪರಿವಾರದ ಕಾರ್ಯಕರ್ತರು ಪ್ರಧಾನಿಗೆ ಬರೆದ ಪತ್ರಗಳು ಯಾವುದನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದ ದೆಹಲಿ ಹೈಕಮಾಂಡ್‌ ಹಾಲಿ ಶಾಸಕರಿಗೆ ಮತ್ತೊಮ್ಮೆ ಬಿಜೆಪಿಯಿಂದ ಸ್ಪರ್ಧಿಸಲು ಅನುವು ಮಾಡಿಕೊಟ್ಟಿದೆ. 

ನನ್ನ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ತಲೆಬಿಸಿ: ಶಾಸಕ ಶರತ್‌ ಬಚ್ಚೇಗೌಡ

ಈ ಮೂಲಕ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಮಗನಿಗೆ ಮತ್ತು ಈಡಿಗ ಸಮುದಾಯದ ಪ್ರಮುಖರಾದ ಕುಮಾರ್‌ಗೆ ಪ್ರಾಮುಖ್ಯತೆ ನೀಡಿದ್ದಾರೆ. ಒಂದುವೇಳೆ ಕುಮಾರ ಬಂಗಾರಪ್ಪ ಅವರಿಗೆ ಟಿಕೆಟ್‌ ವಂಚಿಸಿ ಇನ್ನೊಬ್ಬರಿಗೆ ಸ್ಪರ್ಧಿಸಲು ಅವಕಾಶ ನೀಡಿದ್ದರೆ ಸೊರಬ ತಾಲೂಕಿನ ಪಕ್ಕದ ಶಿಕಾರಿಪುರ ಕ್ಷೇತ್ರದ ಅಭ್ಯರ್ಥಿ ಬಿ.ವೈ. ವಿಜಯೇಂದ್ರ ಅವರಿಗೆ ಸ್ವಲ್ಪಮಟ್ಟಿಗೆ ವ್ಯತಿರಿಕ್ತ ಪರಿಣಾಮ ಬೀರುವ ಸಂಭವ ಹೆಚ್ಚಾಗಿತ್ತು. ಏಕೆಂದರೆ ಸೊರಬ- ಶಿಕಾರಿಪುರ ಗಡಿಭಾಗದಲ್ಲಿ ಈಡಿಗ ಸಮುದಾಯಕ್ಕೆ ಸೇರಿದ ಸುಮಾರು ಶೇ.28 ಮತಗಳಿವೆ. ಅಲ್ಲದೇ, ಕುಮಾರ ಬಂಗಾರಪ್ಪ ಬೆಂಬಲಿಗರೂ ಆ ಭಾಗದಲ್ಲಿದ್ದು, ಈಗಾಗಲೇ ಒಳಮೀಸಲಾತಿ ವಿಚಾರದಲ್ಲಿ ಒಂದಿಷ್ಟುಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿರುವ ಬಿಜೆಪಿಗೆ ಈಡಿಗ ಸಮುದಾಯವನ್ನೂ ನಿರ್ಲಕ್ಷಿಸಿದರೆ ಮತ ಗಳಿಕೆಯಲ್ಲಿ ಹಿನ್ನಡೆ ಆಗಬಹುದು ಎನ್ನುವ ಆತಂಕ ಇತ್ತು. 

ಹೀಗಾಗಿ, ಈಡಿಗ ಸಮುದಾಯಕ್ಕೇ ಟಿಕೆಟ್‌ ನೀಡುವ ನಿರ್ಧಾರಕ್ಕೆ ಬಂದಿತ್ತು. ಈ ಹಿನ್ನೆಲೆ ಬಿ.ಎಸ್‌. ಯಡಿಯೂರಪ್ಪ 15 ದಿನಗಳ ಹಿಂದೆಯೇ ಕುಮಾರ ಬಂಗಾರಪ್ಪ ಅವರನ್ನು ಬೆಂಬಲಿಸಿ ಎಂದು ಹೇಳುವ ಮೂಲಕ ಟಿಕೆಟ್‌ ನೀಡುವ ಸುಳಿವು ನೀಡಿದ್ದರು. ಈ ಮಾತುಗಳ ಮೂಲಕ ಶಿಕಾರಿಪುರ ಕ್ಷೇತ್ರದಲ್ಲಿ ಸ್ಪರ್ಧಿಸುವ ಬಿ.ವೈ. ವಿಜಯೇಂದ್ರ ಅವ​ರಿಗೆ ಮತಗಳ ಬಲ ಇನ್ನಷ್ಟುಹೆಚ್ಚಿಸಲು ಚಾಣಕ್ಯತನ ತೋರಿದ್ದಾರೆ ಎನ್ನುವ ಮಾತು ಬಿಜೆಪಿ ವಲಯದಲ್ಲಿ ಸುಳಿದಾಡಿತ್ತು. ಈ ಮೂಲಕ ಕುಮಾರ ಬಂಗಾರಪ್ಪ ನಮೋ ವಿರುದ್ಧ ಟಿಕೆಟ್‌ ಪಡೆಯುವಲ್ಲಿ ಜಯ ಸಾಧಿಸಿದ್ದಾರೆ.

ನಮೋ ಅಭ್ಯರ್ಥಿ ಯಾರು?: ಪಕ್ಷ ಕುಮಾರ ಬಂಗಾರಪ್ಪ ಅವರಿಗೆ ಟಿಕೇಟ್‌ ನೀಡಿದರೆ ನಮೋ ವೇದಿಕೆಯಿಂದ ಅವರ ವಿರುದ್ಧ ಸಾಮಾನ್ಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗುವುದು ಎಂದು ಘೋಷಿಸಲಾಗಿತ್ತು. ಕುಮಾರ್‌ಗೆ ಹೈಕಮಾಂಡ್‌ ಮಣೆ ಹಾಕಿದೆ. ಈಗ ಅವರ ವಿರುದ್ಧ ನಮೋ ವೇದಿಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಸೇಡು ತೀರಿಸಿಕೊಳ್ಳುವ ಸುಸಂದರ್ಭ ಒದಗಿ ಬಂದಿದೆ ಎಂದೇ ಹೇಳಲಾಗುತ್ತಿದೆ. ಹಾಗಿದ್ದರೆ ಕುಮಾರ ಬಂಗಾರಪ್ಪ ವಿರುದ್ಧ ಸ್ಪರ್ಧಿಸುವ ಅಭ್ಯರ್ಥಿ ಯಾರು? ಎನ್ನುವ ಚರ್ಚೆ ಪ್ರಾರಂಭವಾಗಿದೆ.

ವಿರೋಧಿಗಳು ಬಲಿಷ್ಠರಾಗಿರುವ ಕಡೆ ಪ್ರಬಲ ಅಭ್ಯರ್ಥಿ: ಸಿ.ಪಿ.ಯೋಗೇಶ್ವರ್‌

ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಡಾ.ಎಚ್‌.ಇ. ಜ್ಞಾನೇಶ್‌, ಜಿಪಂ ಮಾಜಿ ಅಧ್ಯಕ್ಷೆ ಗೀತಾ ಮಲ್ಲಿಕಾರ್ಜುನ, ಸದಸ್ಯ ರಾಜಶೇಖರ ಗಾಳಿಪುರ, ಪಾಣಿ ರಾಜಪ್ಪ, ಎ.ಎಲ್‌. ಅರವಿಂದ ಅವರ ಹೆಸರುಗಳು ಕೇಳಿಬರುತ್ತಿವೆ. ಪಟ್ಟಣದಲ್ಲಿ ಸಭೆ ಸೇರಿದ್ದ ನಮೋ ವೇದಿಕೆ ಕಾರ್ಯಕರ್ತರು ಸಂಧಾನಕ್ಕೆ ಯಾರೇ ಬಂದರೂ ಯಾವುದೇ ಕಾರಣಕ್ಕೂ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಿಲ್ಲ. ಮುಂದಿನ ಎರಡು ದಿನಗಳಲ್ಲಿ ಅಭ್ಯರ್ಥಿಯನ್ನು ಪ್ರಕಟಿಸುವ ತೀರ್ಮಾನ ತಳೆ​ಯ​ಲಾ​ಗಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!