‘ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದೆ. ಹೀಗಾಗಿ ರಾಜಕೀಯದಿಂದ ನನ್ನನ್ನು ದೂರ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಬಂದಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಡಿ.ಕೆ. ಸುರೇಶ್ ಅವರಿಂದ ಕನಕಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು (ಏ.22): ‘ನನ್ನ ಅಧ್ಯಕ್ಷತೆಯಲ್ಲಿ ಬಿಜೆಪಿ ವಿರುದ್ಧ ದೊಡ್ಡ ಮಟ್ಟದ ಹೋರಾಟ ನಡೆಯುತ್ತಿದೆ. ಹೀಗಾಗಿ ರಾಜಕೀಯದಿಂದ ನನ್ನನ್ನು ದೂರ ಮಾಡಲು ಷಡ್ಯಂತ್ರ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಬಂದಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಡಿ.ಕೆ. ಸುರೇಶ್ ಅವರಿಂದ ಕನಕಪುರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕನಕಪುರ ಕ್ಷೇತ್ರಕ್ಕೆ ತಾವು ಸಲ್ಲಿಸಿದ್ದ ನಾಮಪತ್ರ ಅಂಗೀಕಾರ ಆಗುವುದಕ್ಕೂ ಮೊದಲು ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ನಾಮಪತ್ರ ಅಂಗೀಕಾರ ಆಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.
‘ಕಳೆದ 15 ವರ್ಷದಿಂದ ನಾನು ಒಂದು ಮನೆ ಬಿಟ್ಟರೆ ಯಾವುದೇ ಆಸ್ತಿ ಖರೀದಿ ಮಾಡಿಲ್ಲ. ಆದರೂ ನನ್ನ ಮೇಲೆ ಷಡ್ಯಂತ್ರ ಮಾಡುತ್ತಿದ್ದಾರೆ. ನಾಮಪತ್ರ ತಿರಸ್ಕರಿಸುವ ಕುತಂತ್ರ ನಡೆಯುತ್ತಿದೆ. ನಾನು ಯಾವುದಕ್ಕೂ ಹೆದರುವವನಲ್ಲ. ಅವರು ಏನೇ ಮಾಡಲಿ ನಾನು ಬಂಡೆಯಂತೆ ನಿಲ್ಲುತ್ತೇನೆ’ ಎಂದು ಹೇಳಿದರು.
ಏ.30ಕ್ಕೆ ಚನ್ನಪಟ್ಟಣದಲ್ಲಿ ಪ್ರಧಾನಿ ಮೋದಿ ಪ್ರಚಾರ: 2 ಲಕ್ಷ ಜನ ಭಾಗಿ
‘ಈಗಿನ ತಂತ್ರಜ್ಞಾನದಲ್ಲಿ ಯಾರು ಮಾಹಿತಿ ನೋಡುತ್ತಾರೆ, ಡೌನ್‌ಲೋಡ್ ಮಾಡಿಕೊಳ್ಳುತ್ತಾರೆ ಎಂಬ ಮಾಹಿತಿ ಸಿಗುತ್ತದೆ. ಬಿಜೆಪಿ ಘಟಕವು ನನ್ನ ದಾಖಲೆ ಪರಿಶೀಲಿಸುತ್ತಿದೆ. ಒಂದು ಹೇಳಿಕೆಗೆ ಮಾನನಷ್ಟಮೊಕದ್ದಮೆ ದಾಖಲಿಸಿ 7 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದಿರುವ ರಾಹುಲ್ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಳಿಸಿದವರು ಬಿಜೆಪಿಯವರು. ಅಷ್ಟುಕುತಂತ್ರಿಗಳ ಮುಂದೆ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ನನ್ನ ದಾಖಲೆಗಳು ಸರಿಯಿದ್ದರೂ ಅಧಿಕಾರ ದುರ್ಬಳಕೆಗೆ ಯತ್ನಿಸುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಜಾಗರೂಕವಾಗಿ ಹೆಜ್ಜೆ ಇಡುತ್ತಿದ್ದೇವೆ’ ಎಂದರು.
ನನಗೆ ಬೇಕಾದಷ್ಟು ಅಧಿಕಾರಿಗಳು, ಮಾಧ್ಯಮ ಸ್ನೇಹಿತರು ಇದ್ದಾರೆ. ನನ್ನ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಬಿಜೆಪಿ ಸರ್ಕಾರ ನನ್ನ ಮೇಕೆದಾಟು, ಭಾರತ ಜೋಡೋ ಯಾತ್ರೆ, ಸ್ವಾತಂತ್ರ್ಯ ನಡಿಗೆ ತಡೆಯಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಅವರಿಗೆ ನಮ್ಮ ಗ್ಯಾರಂಟಿ ಯೋಜನೆಗಳನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಿಜೆಪಿ ಭ್ರಷ್ಟಾಚಾರ, ಕೋವಿಡ್ ಭ್ರಷ್ಟಾಚಾರ ಬಗ್ಗೆ ನನ್ನ ಅವಧಿಯಲ್ಲಿ ದೊಡ್ಡ ಹೋರಾಟ ನಡೆದು ಮಂತ್ರಿ ರಾಜೀನಾಮೆ ನೀಡಬೇಕಾಯಿತು. ಈತನಿಂದ ಈ ಪರಿಸ್ಥಿತಿ ಬಂದಿದೆ ಎಂದು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ: ಕಾಂಗ್ರೆಸ್‌ನಲ್ಲಿ ಲಿಂಗಾಯತ ಮುಖ್ಯಮಂತ್ರಿ ಮಾಡಲಿ ಎಂಬ ಸಚಿವ ಸೋಮಣ್ಣ ಹೇಳಿಕೆಗೆ ಪ್ರತಿಕ್ರಿಯಿಸಿ, ‘ನನಗೆ ಸೋಮಣ್ಣ, ಬೊಮ್ಮಾಯಿ ಹಿತವಚನ ಬೇಡ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಮಾಡುತ್ತಿದ್ದೇವೆ. ಅವರು ಸಿಕ್ಕ ಕಡೆಗಳಲ್ಲಿ ಹಸ್ತಲಾಘವ ನೀಡಿ ಅವರಿಗೆ ಬೀಳ್ಕೊಡುಗೆ ನೀಡಿ. ಅವರು ಮತ್ತೆ ಅಧಿಕಾರಕ್ಕೆ ಬರುವುದಿಲ್ಲ ಎಂದು ಕರೆ ನೀಡಿದರು.
ನೆಮ್ಮದಿ ಬದುಕಿಗೆ ಕಾಂಗ್ರೆಸ್ ಬೆಂಬಲಿಸಿ: ಆರ್‌ಆರ್ ನಗರ ಅಭ್ಯರ್ಥಿ ಕುಸುಮಾ
ಅಣೆಕಟ್ಟು ಒಡೆದ ನಂತರ ನೀರು ನಿಲ್ಲಿಸಲಾಗಲ್ಲ: ಬಿ.ಎಸ್. ಯಡಿಯೂರಪ್ಪ ಅವರ ನಿವಾಸದಲ್ಲಿ ಲಿಂಗಾಯತ ನಾಯಕರ ಸಭೆ ವಿಚಾರವಾಗಿ ಮಾತನಾಡಿದ ಡಿ.ಕೆ. ಶಿವಕುಮಾರ್, ಆಣೆಕಟ್ಟು ಒಡೆದ ನಂತರ ನೀರನ್ನು ನಿಲ್ಲಿಸಲು ಸಾಧ್ಯವಿಲ್ಲ. ಅದನ್ನು ಮತ್ತೆ ಹೊಸದಾಗಿ ಕಟ್ಟಬೇಕು. ಈಗ ಒಡೆದು ಹೊರ ಹರಿದಿರುವ ನೀರು ಸಮುದ್ರ ಸೇರಬೇಕು. ಈ ಕಾಂಗ್ರೆಸ್ ಸಮುದ್ರಕ್ಕೆ ಎಲ್ಲರೂ ಬಂದು ಸೇರಬೇಕು ಎಂದು ಹೇಳಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.