ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಗುರುವಾರ ಸಂಜೆ 7 ಗಂಟೆಗೆ ರಾಜ್ಯಾದ್ಯಂತ ರಾಮ, ಆಂಜನೇಯ ದೇವಸ್ಥಾನಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಣ ಅಭಿಯಾನ ನಡೆಸುವುದಾಗಿ ಹಾಗೂ ಮನೆಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ನೀಡದಂತೆ ಜಾಗೃತಿ ಮೂಡಿಸುವುದಾಗಿ ತಿಳಿಸಿದೆ.
ಬೆಂಗಳೂರು (ಮೇ.04): ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳ ನಿಷೇಧ ಕುರಿತು ಪ್ರಸ್ತಾಪಿಸಿರುವುದರ ವಿರುದ್ಧ ತಿರುಗಿ ಬಿದ್ದಿರುವ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಗುರುವಾರ ಸಂಜೆ 7 ಗಂಟೆಗೆ ರಾಜ್ಯಾದ್ಯಂತ ರಾಮ, ಆಂಜನೇಯ ದೇವಸ್ಥಾನಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಣ ಅಭಿಯಾನ ನಡೆಸುವುದಾಗಿ ಹಾಗೂ ಮನೆಮನೆಗೆ ತೆರಳಿ ಕಾಂಗ್ರೆಸ್ಸಿಗೆ ಮತ ನೀಡದಂತೆ ಜಾಗೃತಿ ಮೂಡಿಸುವುದಾಗಿ ತಿಳಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ದಕ್ಷಿಣ ವಿಭಾಗದ ಸಂಯೋಜಕ ಗೋವರ್ಧನ್, ಎಲ್ಲ ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರಗಳಲ್ಲಿ ‘ಹನುಮಾನ್ ಚಾಲೀಸಾ’ ಪಠಣದ ಮೂಲಕ ಬಜರಂಗಿಗಳ ಒಗ್ಗಟ್ಟನ್ನು ಸಾರುತ್ತೇವೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಘಟನೆಯನ್ನು ನಿಷೇಧಿಸುವುದಾಗಿ ಹೇಳಿದೆ. ಆದರೆ, ನಾವು ಅವರನ್ನು ಅಧಿಕಾರಕ್ಕೆ ಬರದಂತೆ ತಡೆಯಲು ಹಿಂದೂಗಳಲ್ಲಿ ಜನಜಾಗೃತಿ ಮೂಡಿಸುತ್ತೇವೆ. ಹಿಂದೂ ವಿರೋಧಿ ಕಾಂಗ್ರೆಸ್‌ಗೆ ಮೇ 13ರಂದು ರಾಜ್ಯದ ಜನತೆ ತಕ್ಕ ಉತ್ತರವನ್ನು ನೀಡಲಿದ್ದಾರೆ. ಕಾಂಗ್ರೆಸ್ ಮುಖಂಡರು ತಕ್ಷಣ ತಮ್ಮ ಪ್ರಣಾಳಿಕೆ ಹಿಂಪಡೆದು ಕ್ಷಮೆ ಕೋರಬೇಕು. ಇಲ್ಲವೇ ತಾಕತ್ತಿದ್ದರೆ ತಾವು ಕೈಗೊಳ್ಳುವ ಎಲ್ಲ ಚುನಾವಣಾ ಭಾಷಣದಲ್ಲಿ ಬಹಿರಂಗವಾಗಿ ‘ಬಜರಂಗ ದಳ ನಿಷೇಧಿಸುತ್ತೇವೆ’ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.
ಬಿಜೆಪಿ ವರ್ಸಸ್ ಕಾಂಗ್ರೆಸ್ ಬಜರಂಗಿ ಸಂಘರ್ಷ: ನಿಷೇಧ ಪ್ರಸ್ತಾವಕ್ಕೆ ಪ್ರಧಾನಿ ತಿರುಗೇಟು
ದೇಶದ್ರೋಹಿ ಪಿಎಫ್‌ಐ ಸಂಘಟನೆ ಹಾಗೂ ಬಜರಂಗ ದಳವನ್ನು ಒಂದೇ ತಕ್ಕಡಿಯಲ್ಲಿ ಇಟ್ಟಿರುವುದು ಕಾಂಗ್ರೆಸ್ ಮನಸ್ಥಿತಿ ತೋರುತ್ತಿದೆ. ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಗಳನ್ನು ಮತಕ್ಕಾಗಿ ಓಲೈಸಿಕೊಳ್ಳಲು ಮುಂದಾಗಿದೆ ಎಂದು ಕಿಡಿಕಾರಿದರು. ಬೆಂಗಳೂರು ಉತ್ತರ ವಿಭಾಗದ ಸಂಚಾಲಕ ಶಿವಕುಮಾರ್ ಸೇರಿ ಇತರರಿದ್ದರು.
ಪ್ರಧಾನಿಯ ನಿಂದಿಸುವುದೇ ಕಾಂಗ್ರೆಸ್ ಸಾಧನೆ: ಸಚಿವ ಸುಧಾಕರ್
ಬೆಂಗಳೂರಲ್ಲಿ 15 ಕಡೆ ಪಠಣ: ಬೆಂಗಳೂರು ನಗರದಲ್ಲಿ ಯಲಹಂಕ, ಬನ್ನೇರುಘಟ್ಟ, ವಿಜಯನಗರ, ಬಸವನಗುಡಿ ಸೇರಿ ಸುಮಾರು 15ಕ್ಕೂ ಹೆಚ್ಚಿನ ರಾಮ- ಆಂಜನೇಯ ದೇವಸ್ಥಾನದಲ್ಲಿ ಹನುಮಾನ್ ಚಾಲೀಸಾ ಪಠಣ ನಡೆಯಲಿದೆ. ಎಲ್ಲೆಡೆ ನೂರಾರು ಬಜರಂಗಿಗಳು ಪಾಲ್ಗೊಳ್ಳುವರು ಎಂದು ಸಂಘಟನೆ ತಿಳಿಸಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.