ಯಾವ ಪಕ್ಷಕ್ಕೂ ಬಹುಮತ ಬರದಿರಲೆಂದು ಪೂಜಿಸುವ ಜೆಡಿಎಸ್‌ನವರು ಫಲಿತಾಂಶದ ಬಳಿಕ ಕಾಂಗ್ರೆಸ್ ಆದರೂ ಸರಿ, ಬಿಜೆಪಿಯಾದರೂ ಸರಿ, ತಾವು ಕೈಜೋಡಿಸಿ ಮುಖ್ಯಮಂತ್ರಿ ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಬೆಂಗಳೂರು (ಏ.10): ಯಾವ ಪಕ್ಷಕ್ಕೂ ಬಹುಮತ ಬರದಿರಲೆಂದು ಪೂಜಿಸುವ ಜೆಡಿಎಸ್‌ನವರು ಫಲಿತಾಂಶದ ಬಳಿಕ ಕಾಂಗ್ರೆಸ್ ಆದರೂ ಸರಿ, ಬಿಜೆಪಿಯಾದರೂ ಸರಿ, ತಾವು ಕೈಜೋಡಿಸಿ ಮುಖ್ಯಮಂತ್ರಿ ಆಗಬಹುದು ಎಂದು ಲೆಕ್ಕಾಚಾರ ಹಾಕುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ಭಾನುವಾರ ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದಿಂದ ನಡೆದ ‘ಶೋಷಿತ ಸಮುದಾಯಗಳ ಮುಖಂಡರ ರಾಜ್ಯ ಮಟ್ಟದ ಸಂಕಲ್ಪ ಅಧಿವೇಶನ’ ಉದ್ಘಾಟಿಸಿ ಅವರು ಮಾತನಾಡಿದರು. ಜೆಡಿಎಸ್‌ನವರು ನಾವು 123 ಕ್ಷೇತ್ರ ಗೆಲ್ಲುತ್ತೇವೆ ಎಂದು ಸುಮ್ಮನೆ ಹೇಳುತ್ತಾರೆ. ಅವರಲ್ಲಿ ಸ್ಪರ್ಧಿಸಲು ಅಭ್ಯರ್ಥಿಗಳೇ ಇಲ್ಲ.
ಬೇರೆ ಪಕ್ಷದಿಂದ ವಲಸೆ ಬರುತ್ತಾರೆ ಎಂದು ಕಾದು ಕುಳಿತಿದ್ದಾರೆ. ಹಿಂದೆ ನಾವು ಅಲ್ಲಿದ್ದಾಗ 59 ಕ್ಷೇತ್ರಗಳನ್ನು ಗೆದ್ದಿದ್ದೆವು. ಬಳಿಕ 28, 40, 37 ಸೀಟುಗಳನ್ನು ಗೆದ್ದರು. ಇವರು ಅಧಿಕಾರಕ್ಕೆ ಬರಲು ಸಾಧ್ಯವೇ? ಅದಕ್ಕಾಗಿಯೇ ಯಾವುದೇ ಪಕ್ಷಕ್ಕೂ ಪೂರ್ಣ ಬಹುಮತ ಬರದಿದ್ದರೆ ಸಾಕಪ್ಪಾ ಎಂದು ಪೂಜೆ ಮಾಡುತ್ತಾರೆ ಎಂದರು. ನಾವು ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರುವುದು ಬೇಡ ಎಂದು ಸಮ್ಮಿಶ್ರ ಸರ್ಕಾರಕ್ಕೆ ಮುಂದಾದೆವು. ಆದರೆ, ನಮ್ಮ ಮನೆಗೆ ಬಂದು ನೀವೇ ಮುಖ್ಯಮಂತ್ರಿ ಆಗಿ ಎಂದು ಕೇಳಿಕೊಂಡಿದ್ದಕ್ಕೆ ಒಪ್ಪಿಕೊಂಡೆ ಎಂದು ಕುಮಾರಸ್ವಾಮಿ ಸುಳ್ಳು ಹೇಳುತ್ತಾರೆ ಎಂದರು.
ಸೋಲುತ್ತೇವೆಂದು ದಿಲ್ಲಿ ಬಿಜೆಪಿ ನಾಯಕರು ಪದೇ ಪದೇ ರಾಜ್ಯಕ್ಕೆ: ಡಿ.ಕೆ.ಶಿವಕುಮಾರ್
ಬಿಜೆಪಿಯವರು ಎಸ್‌ಸಿ ಮೀಸಲಾತಿ ಪ್ರಮಾಣವನ್ನು ಶೇ.15ರಿಂದ ಶೇ.17ಕ್ಕೆ ಏರಿಕೆ ಮಾಡಿ, ಶೇ.17ನ್ನು ಆಧಾರವಾಗಿಸಿ ವಿವಿಧ ಜಾತಿಗಳಿಗೆ ಶೇ.6, ಶೇ.4.5, ಶೇ.1 ಎಂದು ಮೀಸಲು ಲೆಕ್ಕಹಾಕಿದ್ದಾರೆ. ಆದರೆ ಈ ಮೀಸಲಾತಿ ಹೆಚ್ಚಳ ಇನ್ನೂ ಊರ್ಜಿತವೇ ಆಗಿಲ್ಲ. ಲಂಬಾಣಿ, ಬೋವಿಗಳಿಗೆ ಶೇ.4.5 ಮೀಸಲಾತಿ ಲೆಕ್ಕ ಹಾಕಿದ್ದಾರೆ. ಇದಕ್ಕೂ ಮೊದಲು ಮೀಸಲಾತಿ ಹೆಚ್ಚಳ ಊರ್ಜಿತವಾಗಬೇಕು. ಈ ಬಾರಿ ಬಿಜೆಪಿಯವರು ಜನರ ಹಣೆಗೆ ತುಪ್ಪ ಹಚ್ಚಿದ್ದಾರೆ. ಮೂಗಿಗೆ ಹಚ್ಚಿದ್ದರೆ ವಾಸನೆಯಾದರೂ ಬರುತ್ತಿತ್ತು, ಈಗ ವಾಸನೆಯೂ ಬರುತ್ತಿಲ್ಲ ಎಂದು ಟೀಕಿಸಿದರು.
ಮೀಸಲಾತಿ ಹೆಚ್ಚಿಸಿದ್ದಾರೆ ಎಂದು ಭಾವಿಸಿ ಕೆಲವು ದಲಿತ ಮುಖಂಡರು ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸನ್ಮಾನಿಸಿದ್ದಾರೆ. ಮೀಸಲಾತಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್ ಸಿಗದಿದ್ದರೆ ಬಿಜೆಪಿ, ಜೆಡಿಎಸ್‌ನಿಂದ ನಿಂತುಕೊಳ್ತೇವೆ ಎಂದು ಹೋಗುತ್ತಾರೆ. ಬಿಜೆಪಿಯವರು ‘ಬಿ’ ಫಾರಂ ಕೊಡುತ್ತಾರೆ ಎಂದಾಕ್ಷಣ ನಿಮ್ಮ ಬದ್ಧತೆ ಎಲ್ಲಿ ಹೋಗುತ್ತದೆ? ದಲಿತ ಮುಖಂಡರು ಗೊಂದಲ ಸೃಷ್ಟಿಸಬಾರದು, ಜನರ ದಾರಿ ತಪ್ಪಿಸಬಾರದು ಎಂದು ಕರೆಕೊಟ್ಟರು. ಕರಾವಳಿಯಲ್ಲಿ ಗಲಾಟೆ ಆಗಬೇಕಾದರೆ ಬಿಜೆಪಿಯವರು ಶೂದ್ರರ ಹುಡುಗರನ್ನು ಮುಂದೆ ಬಿಡುತ್ತಾರೆ.
ಮೇಲ್ಜಾತಿಯ ಒಬ್ಬರೂ ಇಂತಹ ಹೋರಾಟಕ್ಕೆ ಬರಲ್ಲ. ಅವರು ಜೈಲಿಗೆ ಹೋಗಿದ್ದರೆ, ಕೊಲೆ ಆಗಿದ್ದರೆ ತೋರಿಸಿ ತೋರಿಸಿ ನೋಡೋಣ. ಇದನ್ನೆಲ್ಲ ಅರ್ಥಮಾಡಿಕೊಳ್ಳಬೇಕು ಎಂದರು. ನಾವು 1931ರ ಬಳಿಕ ನಡೆಯದ ಜಾತಿಗಣತಿಯನ್ನು ಮಾಡಿದ್ದೆವು. ಆ ವರದಿಯನ್ನು ಮುಂದಿನ ಸರ್ಕಾರ ಪರಿಗಣಿಸಲೇ ಇಲ್ಲ. ಸದಾಶಿವ ಆಯೋಗದ ವರದಿ ಇನ್ನೂ ಸದನದ ಮುಂದೆ ಬಂದೇ ಇಲ್ಲ, ಬಹಳಷ್ಟುಜನ ಇದನ್ನು ಓದಿಕೊಂಡಿಲ್ಲ. ನಮ್ಮ ಸರ್ಕಾರ ಬಂದ ತಕ್ಷಣ ಅದನ್ನು ಜಾರಿಗೊಳಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿ ದುರಾಡಳಿತ ತಿಂಗಳಲ್ಲಿ ಅಂತ್ಯ: ಸಂಸದ ಶಶಿ ತರೂರ್
ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ, ಮಾಜಿ ಅಡ್ವೋಕೆಟ್ ಜನರಲ್ ರವಿವರ್ಮ ಕುಮಾರ್, ಸಂಚಾಲಕ ಮಾವಳ್ಳಿ ಶಂಕರ್, ಎಣ್ಣೆಗೆರೆ ಆರ್.ವೆಂಕಟರಾಮಯ್ಯ, ಎಂ.ಜಿ.ನರಸಿಂಹಯ್ಯ, ಮಹ್ಮದ್ ಪಾಷಾ ಸೇರದಂತೆ ಇತರರಿದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.