ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾವೂ ರಣವೀಳ್ಯ ಕೊಡುತ್ತಿದ್ದೇವೆ. ಅವರು ಹಾಕಿದ ಸವಾಲನ್ನು ಸ್ವೀಕರಿಸುತ್ತೇವೆ. ಈ ಸಲ ಅವರನ್ನು ಸೋಲಿಸಿ ಮನೆಗೆ ಕಳುಹಿಸುವ ಶಪಥ ಮಾಡಿದ್ದೇವೆ ಎಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಿರುಗೇಟು ನೀಡಿದರು.
ಹಾವೇರಿ (ಏ.09): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾವೂ ರಣವೀಳ್ಯ ಕೊಡುತ್ತಿದ್ದೇವೆ. ಅವರು ಹಾಕಿದ ಸವಾಲನ್ನು ಸ್ವೀಕರಿಸುತ್ತೇವೆ. ಈ ಸಲ ಅವರನ್ನು ಸೋಲಿಸಿ ಮನೆಗೆ ಕಳುಹಿಸುವ ಶಪಥ ಮಾಡಿದ್ದೇವೆ ಎಂದು ಶಿಗ್ಗಾಂವಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ತಿರುಗೇಟು ನೀಡಿದರು. ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಸಿಎಂ ವಿರುದ್ಧ ಹರಿಹಾಯ್ದರು. ಬೊಮ್ಮಾಯಿ ಅವರು ಶುಕ್ರವಾರ ಶಿಗ್ಗಾಂವಿ ಕಾರ್ಯಕ್ರಮದಲ್ಲಿ ಆಡಿದ ಮಾತನ್ನು ಉಲ್ಲೇಖಿಸಿದ ಕಾಂಗ್ರೆಸ್ ಆಕಾಂಕ್ಷಿಗಳು, ನಾವು 15 ಮಂದಿ ಆಕಾಂಕ್ಷಿಗಳೂ ನಿಮ್ಮನ್ನು ಎದುರಿಸಲು ಸಮರ್ಥರಿದ್ದೇವೆ. ಆದರೆ, ಬೊಮ್ಮಾಯಿ ಅವರಿಗೇ ಇನ್ನೂ ಬಿಜೆಪಿ ಟಿಕೆಟ್ ಫೈನಲ್ ಆಗಿಲ್ಲ.
ಒಂದು ಕ್ಷೇತ್ರಕ್ಕೆ ಕೂಡ ಟಿಕೆಟ್ ಘೋಷಣೆ ಮಾಡಲಾಗದವರು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿರುವುದು ನಾಚಿಕೆಗೇಡು ಎಂದು ಹೇಳಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ಮಾತನಾಡಿ, ಕುಸ್ತಿ ಆಡಲು ಬೊಮ್ಮಾಯಿ ಕರೆಯುತ್ತಿದ್ದಾರೆ. ಅವರ ಟಿಕೆಟ್ಟೇ ಇನ್ನೂ ಖಚಿತವಾಗಿಲ್ಲ. ಬಿಜೆಪಿ ಪಟ್ಟಿಇದುವರೆಗೂ ಬಿಡುಗಡೆಯಾಗಿಲ್ಲ. ಧಮ್, ತಾಕತ್ ಇದ್ರೆ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಹಳ್ಳ ಹಿಡಿದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲಿ. ದೀಪ ಆರುವ ಮುನ್ನ ಜೋರಾಗಿ ಪ್ರಕಾಶಿಸುವಂತೆ ಸಿಎಂ ಸ್ಥಾನದ ಘನತೆ ಮರೆತು ಹಗುರವಾಗಿ ಮಾತನಾಡುತ್ತಿದ್ದಾರೆ.
undefined
ದೇವೇಗೌಡರ ರೀತಿ ನನ್ನ ಬ್ಲಾಕ್ಮೇಲ್ ಅಸಾಧ್ಯ: ಭವಾನಿಗೆ ಪರೋಕ್ಷ ಟಾಂಗ್ ಕೊಟ್ಟ ಎಚ್‌ಡಿಕೆ
ಬೊಮ್ಮಾಯಿ ಎಂದೂ ಸತ್ಯ ಹೇಳುವುದಿಲ್ಲ. ಅಣ್ಣ-ತಮ್ಮಂದಿರನ್ನೇ ಬೇರೆ ಮಾಡಿ ರಾಜಕೀಯ ಮಾಡುವುದರಲ್ಲಿ ಅವರು ನಿಪುಣರು ಎಂದು ವಾಗ್ದಾಳಿ ನಡೆಸಿದರು. ಕ್ಷೇತ್ರದಲ್ಲಿ ನಡೆದ ಶೂಟೌಟ್ ಪ್ರಕರಣ ಭೇದಿಸಲು ಸಾಧ್ಯವಾಗಿಲ್ಲ. ಬಂಗಾರದ ಅಂಗಡಿ ದರೋಡೆ ಮಾಡಿದ ಆರೋಪಿಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಶೇ. 40 ಭ್ರಷ್ಟಾಚಾರ ಸಿಎಂ ಕಿವಿಗೆ ಮುಟ್ಟಿಲ್ಲವೇ? ನಿಮ್ಮ ಆಡಳಿತ ವೈಖರಿ ಗಮನಿಸಿ ಅನೇಕ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರುತ್ತಿದ್ದಾರೆ. ಇವು ನಿಮ್ಮ ಗಮನಕ್ಕಿಲ್ಲವೇ? ಎಂದು ಹೇಳಿದರು. ಮಾಜಿ ಸಂಸದ ಮಂಜುನಾಥ ಕುನ್ನೂರ ಮಾತನಾಡಿ, ಬೊಮ್ಮಾಯಿ ಅವರು ಸೋಲುವ ಭೀತಿಯಿಂದ ಹತಾಶರಾಗಿ ಮಾತನಾಡುತ್ತಿದ್ದಾರೆ.
ಹಿಂಬಾಗಿಲ ಮೂಲಕ ಬಂದು ಅವರು ಸಿಎಂ ಆಗಿದ್ದಾರೆ. ಶಿಗ್ಗಾಂವಿ ಮನೆಯಲ್ಲಿ ಒಂದು ದಿನವೂ ವಾಸ್ತವ್ಯ ಮಾಡಲಿಲ್ಲ. ಶಿಗ್ಗಾಂವಿ ತಾಲೂಕಿಗೆ ಬಂದು ಸ್ವಂತ ಅಭಿವೃದ್ಧಿಯಾಗಿದೆಯೇ ಹೊರತು ತಾಲೂಕಿನ ಅಭಿವೃದ್ಧಿಯಾಗಿಲ್ಲ. ಒಳಒಪ್ಪಂದ ಮಾಡಿಕೊಂಡು 3 ಬಾರಿ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕ್ಷೇತ್ರದ ಜನರು ಈ ಸಲ ನಿಮ್ಮನ್ನು ತಿರಸ್ಕಾರ ಮಾಡಲಿದ್ದಾರೆ. ಹಣ, ಅಧಿಕಾರದ ಮದದಿಂದ ಅವರು ಏನೇನೋ ಮಾತನಾಡುತ್ತಿದ್ದಾರೆ. ಅವರು ಹೇಳಿದಂತೆ ನಮಗೂ ಗೋಡಾ ಹೈ, ಮೈದಾನ ಹೈ... ಎಂದು ತಿರುಗೇಟು ನೀಡಿದರು.
ನಾನು ಶಾಸಕನಾಗಿ, ಸಂಸದನಾಗಿ ಜಾರಿಗೊಳಿಸಿದ ಅನೇಕ ನೀರಾವರಿ ಯೋಜನೆಗಳನ್ನು ಇವರು ತಮ್ಮದೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ತಮ್ಮ ಬೆಂಬಲಿಗರಿಗೆ 5-6 ತಿಂಗಳಲ್ಲಿ ನೂರಾರು ಕೋಟಿ ರು. ಟೆಂಡರ್ ಕಾಮಗಾರಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಅವರು ಒಂದು ಸಮಾಜದ ಮೀಸಲಾತಿ ಕಿತ್ತು ಇನ್ನೊಬ್ಬರಿಗೆ ಕೊಟ್ಟಿರುವುದು ಸರಿಯಲ್ಲ. ಶಿಗ್ಗಾಂವಿ ಕ್ಷೇತ್ರದಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ ಎಂಬುದನ್ನು ಚರ್ಚಿಸಲು ಒಂದೇ ವೇದಿಕೆಗೆ ಬರಲಿ. ನಿನ್ನೆ ಬಿಜೆಪಿ ಸೇರ್ಪಡೆಯಾದವರಲ್ಲಿ ಬಹುತೇಕರು ಕಾಂಗ್ರೆಸಿಗರಲ್ಲ, ಅವರೆಲ್ಲ ಮೂಲ ಬಿಜೆಪಿಗರೇ ಆಗಿದ್ದಾರೆ ಎಂದರು.
ಕೆಆರ್‌ಪಿಪಿ ಸೇರ್ಪಡೆ ಆಗ್ತಾರಾ ಎಚ್.ಆರ್.ಶ್ರೀನಾಥ್: ಭುಗಿಲೆದ್ದ ಭಿನ್ನಮತ ನೋಡಿ ಗೇಮ್ ಶುರುಮಾಡಿದ ಜನಾರ್ದನ ರೆಡ್ಡಿ
ಷಣ್ಮುಖಪ್ಪ ಶಿವಳ್ಳಿ ಮಾತನಾಡಿ, ಸರ್ಕಾರದ ಅವಧಿ 15 ದಿನ ಇರುವಾಗ ನಿಗಮ, ಮಂಡಳಿಗಳಿಗೆ ನೇಮಕ ಮಾಡಿ ತಮ್ಮ ಪಕ್ಷದ ನೂರಾರು ಕಾರ್ಯಕರ್ತರಿಗೇ ಸಿಎಂ ಮೋಸ ಮಾಡಿದ್ದಾರೆ ಎಂದರು. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಶಶಿಧರ ಯಲಿಗಾರ, ಯಾಸೀರಖಾನ್ ಪಠಾಣ, ರಾಜೇಶ್ವರಿ ಪಾಟೀಲ, ಎಸ್.ವಿ. ಪಾಟೀಲ, ಸಂಜೀವಕುಮಾರ ನೀರಲಗಿ, ಶಂಭಣ್ಣ ಆಜೂರ, ಎಂ.ಎಸ್. ಮುಲ್ಲಾ, ಸಿ.ಎಸ್. ಪಾಟೀಲ ಇದ್ದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.