Karnataka election 2023: ಕೈ, ಬಿಜೆಪಿ ‘ಲಿಂಗಾಯತ’ ಡ್ಯಾಮೇಜ್‌ ಕಂಟ್ರೋಲ್‌ಗೆ ಯತ್ನ!

By Kannadaprabha NewsFirst Published Apr 18, 2023, 5:23 AM IST
Highlights

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿರ್ಗಮನದ ಬೆನ್ನಲ್ಲೇ ಲಿಂಗಾಯತ ಮತಗಳಿಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ‘ಡ್ಯಾಮೇಜ್‌ ಕಂಟ್ರೋಲ್‌’ಗೆ ಇಳಿದಿವೆ.

ಬೆಂಗಳೂರು (ಏ.18) : ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಮತ್ತು ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ನಿರ್ಗಮನದ ಬೆನ್ನಲ್ಲೇ ಲಿಂಗಾಯತ ಮತಗಳಿಗಾಗಿ ಕಾಂಗ್ರೆಸ್‌ ಹಾಗೂ ಬಿಜೆಪಿ ‘ಡ್ಯಾಮೇಜ್‌ ಕಂಟ್ರೋಲ್‌’ಗೆ ಇಳಿದಿವೆ.

ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ ಹಾಗೂ ವೀರೇಂದ್ರ ಪಾಟೀಲ್‌ ಅವರನ್ನು ಅಧಿಕಾರದಿಂದ ಇಳಿಸಿದ ಬಳಿಕ ಲಿಂಗಾಯತ ಸಮುದಾಯ ಆ ಪಕ್ಷದಿಂದ ದೂರ ಸರಿದಿತ್ತು. ಆ ಸಮುದಾಯವನ್ನು ಸೆಳೆಯಲು ನಿರಂತರವಾಗಿ ಕಾಂಗ್ರೆಸ್‌ ಪ್ರಯತ್ನಿಸುತ್ತಲೇ ಬಂದಿತ್ತು. ಇದೀಗ ಶೆಟ್ಟರ್‌ ಹಾಗೂ ಸವದಿ ಸೇರ್ಪಡೆಯನ್ನು ಬಳಸಿಕೊಂಡು ಸಮುದಾಯವನ್ನು ಓಲೈಸುವ ಮೂಲಕ ಹಿಂದೆ ಆಗಿದ್ದ ಡ್ಯಾಮೇಜ್‌ ಸರಿಪಡಿಸಿಕೊಳ್ಳಲು ಸರ್ಕಸ್‌ ನಡೆಸುತ್ತಿದೆ.

Latest Videos

ನನ್ನ, ಶೆಟ್ಟರ್‌ ಬಗ್ಗೆ ಮಾತಾಡುವ ನೈತಿಕತೆ ಬಿಎಸ್‌ವೈಗಿಲ್ಲ: ಲಕ್ಷ್ಮಣ ಸವದಿ

ಮತ್ತೊಂದೆಡೆ, ಶೆಟ್ಟರ್‌ ಹಾಗೂ ಸವದಿ ಅವರು ಪಕ್ಷ ತೊರೆದಿರುವುದರಿಂದ ಉತ್ತರ ಕರ್ನಾಟಕ ಅದರಲ್ಲೂ ವಿಶೇಷವಾಗಿ ಕಿತ್ತೂರು ಕರ್ನಾಟಕದ ಭಾಗದಲ್ಲಿ ಬಿಜೆಪಿಗೆ ನಾಯಕರ ಕೊರತೆ ಎದುರಾಗಬಹುದಾದ ಭೀತಿ ಎದುರಾಗಿದೆ. ಈ ಕೊರತೆಯನ್ನು ನೀಗಿಸಿಕೊಳ್ಳುವ ಮೂಲಕ ಲಿಂಗಾಯತರನ್ನು ಪಕ್ಷದಲ್ಲಿ ಬಲವಾಗಿ ಹಿಡಿದಿಡಲು ಆ ಪಕ್ಷ ಕೂಡ ಪ್ರಯತ್ನ ನಡೆಸುತ್ತಿದೆ. ಈ ಕಾರಣಕ್ಕಾಗಿಯೇ ಆಡಳಿತಾರೂಢ ಬಿಜೆಪಿ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂದೆ ಬಿಟ್ಟು ಲಿಂಗಾಯತ ಸಮುದಾಯದ ಬೆಂಬಲ ಮುಂದುವರೆಸುವಂತೆ ನೋಡಿಕೊಳ್ಳುವ ತಂತ್ರ ರೂಪಿಸುತ್ತಿದೆ.

ಕಾಂಗ್ರೆಸ್ಸಿಗೆ ಶೆಟ್ಟರ್‌, ಸವದಿ ಶಕ್ತಿ:

ಹಾಗೆ ನೋಡಿದರೆ ಕಾಂಗ್ರೆಸ್‌ ಪಕ್ಷದಲ್ಲಿ ಕಿತ್ತೂರು ಕರ್ನಾಟಕ ಭಾಗದಲ್ಲಿನ ಲಿಂಗಾಯತ ನಾಯಕತ್ವದ ಕೊರತೆ ಇತ್ತು. ಎಂ.ಬಿ.ಪಾಟೀಲ್‌ ಅವರೊಬ್ಬರೇ ಮುಂಚೂಣಿಯಲ್ಲಿದ್ದರು. ಇನ್ನುಳಿದಂತೆ ವಿನಯ್‌ ಕುಲಕರ್ಣಿ ಮೊದಲಾದವರಿದ್ದಾರೆ. ಇದೀಗ ಶೆಟ್ಟರ್‌ ಮತ್ತು ಸವದಿ ಸೇರ್ಪಡೆಯಿಂದ ಕಾಂಗ್ರೆಸ್ಸಿನ ಲಿಂಗಾಯತ ನಾಯಕತ್ವಕ್ಕೆ ಶಕ್ತಿ ಬಂದಂತಾಗಿದೆ. ಇದು ಚುನಾವಣೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.

ಸಾಲು ಸಾಲು ನಾಯಕರ ನಷ್ಟ:

ಕಿತ್ತೂರು ಕರ್ನಾಟಕ ಭಾಗದಲ್ಲಿ ಪ್ರಬಲ ಸಮುದಾಯವಾಗಿರುವ ಲಿಂಗಾಯತ ಸಮುದಾಯದ ಬೆಂಬಲ ಬಿಜೆಪಿಗೇ ಹೆಚ್ಚಿತ್ತು. ಅದಕ್ಕೆ ಪೂರಕವಾಗಿ ಆ ಸಮುದಾಯದ ಅನೇಕ ಹಿರಿಯ ನಾಯಕರು ಬಿಜೆಪಿಯಲ್ಲಿದ್ದರು. ಜಗದೀಶ್‌ ಶೆಟ್ಟರ್‌ ಸೇರಿದಂತೆ ಕೇಂದ್ರ ಸಚಿವರಾಗಿದ್ದ ಸುರೇಶ್‌ ಅಂಗಡಿ, ರಾಜ್ಯ ಸಚಿವರಾಗಿದ್ದ ಉಮೇಶ್‌ ಕತ್ತಿ, ರಾಜ್ಯಸಭಾ ಸದಸ್ಯರಾಗಿದ್ದ ಪ್ರಭಾಕರ್‌ ಕೋರೆ, ಲಕ್ಷ್ಮಣ ಸವದಿ, ಸಚಿವರಾದ ಮುರುಗೇಶ್‌ ನಿರಾಣಿ, ಸಿ.ಸಿ.ಪಾಟೀಲ್‌, ಶಾಸಕ ಬಸನಗೌಡ ಪಾಟೀಲ ಯತ್ನಾಳ, ವಿಧಾನಸಭೆಯ ಉಪಾಧ್ಯಕ್ಷರಾಗಿದ್ದ ವಿಶ್ವನಾಥ್‌ ಮಾಮನಿ ಮೊದಲಾದವರು ಪ್ರಮುಖರು.

ಈ ಪೈಕಿ ಈಗ ಸುರೇಶ್‌ ಅಂಗಡಿ, ಉಮೇಶ್‌ ಕತ್ತಿ ಹಾಗೂ ವಿಶ್ವನಾಥ್‌ ಮಾಮನಿ ಅವರು ನಿಧನ ಹೊಂದಿದ್ದಾರೆ. ಪ್ರಭಾಕರ್‌ ಕೋರೆ ಹೆಚ್ಚೂ ಕಡಮೆ ತಟಸ್ಥರಾಗಿದ್ದಾರೆ. ಇದೀಗ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ. ಉಳಿದವರು ನಿರಾಣಿ, ಪಾಟೀಲ್‌ ಮತ್ತು ಯತ್ನಾಳ. ಯತ್ನಾಳ ಮತ್ತು ನಿರಾಣಿ ಅವರಿಬ್ಬರಿಗೂ ಪರಸ್ಪರ ಹೊಂದಾಣಿಕೆ ಇಲ್ಲ. ಒಂದೇ ಪಕ್ಷದಲ್ಲಿದ್ದರೂ ಬದ್ಧ ವೈರಿಗಳಂತಾಗಿದ್ದಾರೆ. ಸಿ.ಸಿ.ಪಾಟೀಲ್‌ ಗದಗ ಜಿಲ್ಲೆಗೆ ಸೀಮಿತವಾಗಿದ್ದಾರೆ. ಹೀಗಾಗಿ, ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿಯ ಲಿಂಗಾಯತ ನಾಯಕತ್ವ ಕುಸಿದಂತಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅದೇ ಭಾಗದವರಾದರೂ ಅವರು ಆ ಭಾಗದಲ್ಲಿ ಲಿಂಗಾಯತ ನಾಯಕತ್ವಕ್ಕೆ ಹೆಚ್ಚು ಒತ್ತು ಕೊಟ್ಟಿರಲಿಲ್ಲ.

ಬಿಎಸ್‌ವೈ ಮೇಲೆ ಬಿಜೆಪಿ ಅವಲಂಬಿತ:

ಈ ಕಾರಣಕ್ಕಾಗಿಯೇ ಆಡಳಿತಾರೂಢ ಬಿಜೆಪಿ ಈಗ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಕಿತ್ತೂರು ಕರ್ನಾಟಕ ಭಾಗದಲ್ಲಿ ಮುಂದೆ ಬಿಟ್ಟು ಲಿಂಗಾಯತ ಸಮುದಾಯದ ಬೆಂಬಲ ಮುಂದುವರೆಸುವಂತೆ ನೋಡಿಕೊಳ್ಳುವ ತಂತ್ರ ರೂಪಿಸುತ್ತಿದೆ. ಯಡಿಯೂರಪ್ಪ ಅವರಿಗೆ ಆ ಭಾಗದಲ್ಲಿ ಹಿಡಿತವಿದೆ. ಪ್ರಚಾರದ ವೇಳೆ ಮತ್ತು ರಣತಂತ್ರ ರೂಪಿಸುವಲ್ಲಿ ಯಡಿಯೂರಪ್ಪ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಮೂಲಕ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಬಿಜೆಪಿ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಕಾರಣಕ್ಕಾಗಿಯೇ ಜಗದೀಶ್‌ ಶೆಟ್ಟರ್‌ ಮತ್ತು ಲಕ್ಷ್ಮಣ ಸವದಿ ಅವರು ಪಕ್ಷ ತೊರೆದ ಬೆನ್ನಲ್ಲೇ ಯಡಿಯೂರಪ್ಪ ಅವರಿಂದ ತುರ್ತು ಪತ್ರಿಕಾಗೋಷ್ಠಿ ನಡೆಸುವ ಮೂಲಕ ಆಗಿರುವ ನಷ್ಟಸರಿಪಡಿಸಲು ಬಿಜೆಪಿ ನಾಯಕರು ಪ್ರಯತ್ನಿಸಿದ್ದರು.

ಚಿಕ್ಕ ಬಾಲಕನಿಗೆ ಹೇಳಿದಂತೆ ನಿನಗೆ ಟಿಕೆಟ್‌ ಇಲ್ಲ ಹೋಗು ಎಂದು ಅಗೌರವದಿಂದ ಹೊರ ದಬ್ಬಿದರು: ಶೆಟ್ಟರ್‌

ಕಾಂಗ್ರೆಸ್‌ ಲೆಕ್ಕಾಚಾರ ಏನು?

- ನಿಜಲಿಂಗಪ್ಪ, ವೀರೇಂದ್ರ ಪಾಟೀಲ್‌ ಪ್ರಕರಣಗಳ ಬಳಿಕ ಪಕ್ಷದಿಂದ ದೂರ ಸರಿದಿದ್ದ ಲಿಂಗಾಯತರು

- ಸಮುದಾಯವನ್ನು ಓಲೈಸಲು ನಿರಂತರವಾಗಿ ಪ್ರಯತ್ನಗಳನ್ನು ನಡೆಸುತ್ತಲೇ ಬಂದಿದ್ದ ಕಾಂಗ್ರೆಸ್‌ ಪಕ್ಷ

- ಇದೀಗ ಲಿಂಗಾಯತ ಸಮುದಾಯದ ಶೆಟ್ಟರ್‌, ಸವದಿ ಸೇರ್ಪಡೆಯಿಂದ ಪಕ್ಷಕ್ಕೆ ಭಾರಿ ಲಾಭದ ನಿರೀಕ್ಷೆ

- ದೂರ ಸರಿದಿದ್ದ ಲಿಂಗಾಯತ ಸಮುದಾಯವನ್ನು ಪಕ್ಷದತ್ತ ಸೆಳೆಯಲು ಈ ಅವಕಾಶ ಬಳಸುವ ಸಾಧ್ಯತೆ

ಬಿಜೆಪಿ ಕಸರತ್ತು ಏನು?

- ಸಚಿವರಾದ ಸುರೇಶ್‌ ಅಂಗಡಿ, ಉಮೇಶ್‌ ಕತ್ತಿ, ಶಾಸಕ ಮಾಮನಿ ಸಾವಿನಿಂದ ಪಕ್ಷಕ್ಕೆ ನಾಯಕರ ನಷ್ಟ

- ಪ್ರಭಾಕರ ಕೋರೆ ತಟಸ್ಥ. ಶೆಟ್ಟರ್‌, ಸವದಿ ಪಕ್ಷ ತೊರೆದು ಕಾಂಗ್ರೆಸ್‌. ಸಿ.ಸಿ.ಪಾಟೀಲ್‌ ಗದಗಕ್ಕೆ ಸೀಮಿತ

- ಮುರುಗೇಶ್‌ ನಿರಾಣಿ, ಯತ್ನಾಳ ಇಬ್ಬರ ನಡುವೆ ಪರಸ್ಪರ ಹೊಂದಾಣಿಕೆ ಇಲ್ಲದಿರುವುದು ಭಾರಿ ಸಮಸ್ಯೆ

- ಲಿಂಗಾಯತ ಮತಗಳನ್ನು ಹಿಡಿದಿಟ್ಟುಕೊಳ್ಳಲು ಯಡಿಯೂರಪ್ಪ ಅವರಿಗೆ ಪ್ರಾಶಸ್ತ್ಯ ನೀಡಲು ಚಿಂತನೆ

click me!