ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಯಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಕಡೆಯಾದರೆ, ಪಕ್ಷದ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿರುವುದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್.
ವಿಜಯ್ ಮಲಗಿಹಾಳ
ಬೆಂಗಳೂರು (ಮೇ.06): ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಆಡಳಿತಾರೂಢ ಬಿಜೆಪಿಯಲ್ಲಿ ಸರ್ಕಾರದ ಮುಖ್ಯಸ್ಥರಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒಂದು ಕಡೆಯಾದರೆ, ಪಕ್ಷದ ಚುಕ್ಕಾಣಿ ಹಿಡಿದು ಮುನ್ನಡೆಸುತ್ತಿರುವುದು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್. ಟೀಕೆ- ಟಿಪ್ಪಣಿಗಳೇನೇ ಇರಲಿ. ಪಕ್ಷದ ಆಶಯಕ್ಕೆ ತಕ್ಕಂತೆ, ವರಿಷ್ಠರ ಸಲಹೆ-ಸೂಚನೆಯಂತೆ ಬಿಜೆಪಿಯನ್ನು ಸುಸೂತ್ರವಾಗಿ ಮುನ್ನಡೆಸಿದ ಶ್ರೇಯಸ್ಸು ಕಟೀಲ್ ಅವರಿಗೆ ಸಲ್ಲುತ್ತದೆ. ಕೇವಲ ಮಂಗಳೂರಿಗೆ ಮಾತ್ರ ಸೀಮಿತ ಎಂಬ ಹಣೆಪಟ್ಟಿಯನ್ನು ಕಳಚಿ ಹಲವು ಬಾರಿ ರಾಜ್ಯವನ್ನು ಸುತ್ತಿದ ಕಟೀಲ್ ಅವರು ಪಕ್ಷದ ಶಿಸ್ತಿನ ಸಿಪಾಯಿ. ಜೊತೆಗೆ ಮೂರನೇ ಬಾರಿ ಸಂಸದರಾಗಿ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...
* ಚುನಾವಣೆಯ ವಾತಾವರಣ ಹೇಗಿದೆ? ಪ್ರಚಾರ ಹೇಗೆ ನಡೆಯುತ್ತಿದೆ?
ಚುನಾವಣೆಯ ವಾತಾವರಣ ಚೆನ್ನಾಗಿದೆ. ಪ್ರಚಾರವೂ ಚೆನ್ನಾಗಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ರಾಷ್ಟ್ರ ಹಾಗೂ ರಾಜ್ಯ ನಾಯಕರ ಪ್ರಚಾರ ಕಾರ್ಯಕ್ರಮಕ್ಕೆ ಅದ್ಭುತವಾಗಿ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನಮ್ಮ ನಿರೀಕ್ಷೆ ಮೀರಿ ಜನ ಸೇರುತ್ತಿದ್ದಾರೆ. ಜೆಡಿಎಸ್ ಭದ್ರಕೋಟೆ ಎನ್ನುವಂಥ ಹಳೆ ಮೈಸೂರು ಭಾಗದಲ್ಲಿಯೂ ಬಿಜೆಪಿ ಸಮಾವೇಶಗಳಿಗೆ, ರೋಡ್ ಶೋಗಳಿಗೆ ಅತಿಹೆಚ್ಚು ಜನರು ಸೇರುತ್ತಿದ್ದಾರೆ. ನಮ್ಮ ಶಕ್ತಿ ಕೇಂದ್ರಗಳ ಪ್ರಮುಖರು ತಳಮಟ್ಟದಲ್ಲಿ ಕೆಲಸ ಮಾಡುತ್ತಿರುವುದು ನಮಗೆ ಬಲ ಕೊಟ್ಟಿದೆ. ಜೊತೆಗೆ ಮನೆ ಮನೆಗೆ ಭೇಟಿ ನೀಡಿ ಮತದಾರರ ಮನವೊಲಿಸುವ ಅಭಿಯಾನ ಯಶಸ್ವಿಯಾಗಿದೆ.
ಬಿಜೆಪಿ ಗೆದ್ರೆ ಮತ್ತೆ ಬೊಮ್ಮಾಯಿ ಸಿಎಂ: ಧರ್ಮೇಂದ್ರ ಪ್ರಧಾನ್
* ನಿಮ್ಮ ಪ್ರಕಾರ ಬಿಜೆಪಿ ಎಷ್ಟುಸ್ಥಾನ ಪಡೆಯಬಹುದು? ಕೆಲವು ಸಮೀಕ್ಷೆಗಳಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವುದಿಲ್ಲ ಎಂಬ ಅಂಶ ವ್ಯಕ್ತವಾಗಿದೆಯಲ್ಲ?
120ಕ್ಕಿಂತ ಹೆಚ್ಚು ಸ್ಥಾನಗಳನ್ನು ಗಳಿಸುತ್ತೇವೆ. ಅನುಮಾನವೇ ಬೇಡ. ನೋಡುತ್ತಿರಿ. ಸಮೀಕ್ಷೆಗಳು ಏನೇ ಇರಲಿ. ನಮಗೆ ಬೂತ್ ಮಟ್ಟದಲ್ಲಿ ಸಂಘಟನೆ ಹೇಗಿದೆ, ಜನರ ಅಭಿಪ್ರಾಯ ಹೇಗಿದೆ ಎಂಬುದು ಚೆನ್ನಾಗಿ ಗೊತ್ತಾಗಿದೆ. ಜನರ ಬೆಂಬಲ ನಮ್ಮ ಜತೆಗಿದೆ.
* ಬಜೆಟ್ ರೀತಿಯಲ್ಲೇ ಈ ಬಾರಿ ಸಿಕ್ಕಾಪಟ್ಟೆಭರವಸೆಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ರೂಪಿಸಿದ್ದೀರಿ. ಇದು ಎಷ್ಟರಮಟ್ಟಿಗೆ ನಿಮ್ಮ ಕೈಹಿಡಿಯಬಹುದು?
ಹಿಂದೆ ನಮ್ಮ ಸರ್ಕಾರ ನೀಡಿದ ಯೋಜನೆಗಳನ್ನು ಜನರು ಒಪ್ಪಿದ್ದಾರೆ. ನಮ್ಮ ಮೇಲೆ ವಿಶ್ವಾಸ ಬಂದಿದೆ. ಹೀಗಾಗಿ, ಈಗ ಇನ್ನಷ್ಟುಹೊಸ ಕಾರ್ಯಕ್ರಮಗಳ ಬಗ್ಗೆ ಪ್ರಣಾಳಿಕೆ ಮೂಲಕ ಭರವಸೆ ನೀಡಿದ್ದೇವೆ.
* ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿ ನೀಡಿದ ಉಚಿತ ಕೊಡುಗೆಗಳನ್ನು ಟೀಕಿಸಿದ್ದ ಬಿಜೆಪಿ ಕೂಡ ಈಗ ಹಲವು ಉಚಿತ ಕೊಡುಗೆಗಳನ್ನು ಘೋಷಿಸಿದೆಯಲ್ಲ?
ನಾವು ಸುಮ್ಮನೆ ಉಚಿತ ಕಾರ್ಯಕ್ರಮಗಳನ್ನು ಘೋಷಿಸಿಲ್ಲ. ಈಡೇರಿಸಲು ಸಾಧ್ಯವಿರುವಂಥ ಘೋಷಣೆಗಳನ್ನು ಮಾತ್ರ ಹೇಳಿದ್ದೇವೆ. ಅವುಗಳನ್ನು ನಮ್ಮ ಬಜೆಟ್ ಮಿತಿಯಲ್ಲೇ ಜಾರಿಗೊಳಿಸಲು ಸಾಧ್ಯವಿದೆ. ಅತಿ ಬಡವರಿಗೆ ಸಿರಿಧಾನ್ಯ, ಹಾಲು, ಹಬ್ಬಗಳ ದಿನದಂದು ಮೂರು ಅಡುಗೆ ಅನಿಲ ಸಿಲಿಂಡರ್ ಉಚಿತ ನೀಡುವ ಭರವಸೆ ನೀಡಿದ್ದೇವೆ. ಇವು ಬಜೆಟ್ ಮೇಲೆ ಹೊರೆಯಾಗುವಂಥವುಗಳಲ್ಲ. ಆದರೆ, ಕಾಂಗ್ರೆಸ್‌ನ ಭರವಸೆಗಳೆಲ್ಲ ಉಚಿತ ಕೊಡುಗೆಗಳು. ಎಲ್ಲಿಂದ ತರುತ್ತಾರೆ ಹಣ? ಉಚಿತ ಕೊಟ್ಟೂಕೊಟ್ಟೂಕಾಂಗ್ರೆಸ್‌ನವರು ಈ ರಾಜ್ಯವನ್ನು ಎಲ್ಲಿಗೆ ಕೊಂಡೊಯ್ಯುತ್ತಾರೆ? ಈಗಾಗಲೇ ರಾಜ್ಯದ ಮೇಲೆ ಸಾಕಷ್ಟುಸಾಲದ ಹೊರೆ ಹೊರಿಸಿದ್ದಾರೆ. ಈ ಘೋಷಣೆಗಳಿಂದ ಮತ್ತಷ್ಟುಸಾಲ ಹೆಚ್ಚಾಗಲಿದೆ ಅಷ್ಟೇ.
* ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾಲು ಸಾಲು ಆರೋಪಗಳು ಬಿಜೆಪಿಗೆ ಹಿನ್ನಡೆ ಉಂಟು ಮಾಡುವುದಿಲ್ಲ ಎಂಬ ವಿಶ್ವಾಸ ಇದೆಯೇ?
ಜನರಿಗೆ ಎಲ್ಲವೂ ಗೊತ್ತಿದೆ. ಭ್ರಷ್ಟಾಚಾರಕ್ಕೆ ಹೆಸರೇ ಕಾಂಗ್ರೆಸ್. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂಬುದು ಜನರಿಗೆ ತಿಳಿಯದ ಸಂಗತಿ ಏನಲ್ಲ. ಹಿಂದೆ ಲೋಕಾಯುಕ್ತ ಸಂಸ್ಥೆಗೆ ಬಾಗಿಲು ಹಾಕಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸ್ಥಾಪಿಸಿದ್ದು ಇದೇ ಕಾಂಗ್ರೆಸ್ ಪಕ್ಷ. ಇಂಥ ಕಾಂಗ್ರೆಸ್ ಪಕ್ಷದ ಆರೋಪಗಳನ್ನು ಜನರು ನಂಬುವುದಿಲ್ಲ. ಜನರು ಅಭಿವೃದ್ಧಿಯ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.
* ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಮುಂದಿನ ಮುಖ್ಯಮಂತ್ರಿ ಎಂಬ ಮಾತನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರಲ್ಲ?
ರಾಷ್ಟ್ರೀಯ ಅಧ್ಯಕ್ಷರು ಏನು ಹೇಳುತ್ತಾರೆಯೋ ಅದಕ್ಕೆ ನಮ್ಮ ಸಹಮತವಿದೆ.
* ನೀವು ರಾಜ್ಯಾಧ್ಯಕ್ಷರಲ್ಲವೇ. ನಿಮ್ಮ ಅಧ್ಯಕ್ಷತೆಯಲ್ಲೇ ಪಕ್ಷ ಚುನಾವಣೆ ಎದುರಿಸಿ ಗೆದ್ದರೆ ನೀವು ಮುಖ್ಯಮಂತ್ರಿ ಸ್ಥಾನ ಬಯಸುವುದಿಲ್ಲವೇ?
ನನಗೆ ಅಂಥ ಕಲ್ಪನೆಯೇ ಇಲ್ಲ. ಸಂಘಟನೆಯ ಹಿನ್ನೆಲೆಯಿಂದ ಬಂದ ನನಗೆ ಸಂಘಟನಾ ಕಾರ್ಯವೇ ಇಷ್ಟ. ನಾವು ಅಂಥ ಕನಸುಗಳನ್ನೇ ಕಾಣುವುದಿಲ್ಲ. ಆದರ್ಶ, ಸಿದ್ಧಾಂತಕ್ಕಾಗಿ ಬಂದಿದ್ದೇವೆ. ಅಧ್ಯಕ್ಷನಾಗಿದ್ದೇನೆ ಎಂಬ ಕಾರಣಕ್ಕೆ ಮುಖ್ಯಮಂತ್ರಿ ಸ್ಥಾನ ನೀಡಬೇಕು ಅಂತ ಅಲ್ಲ. ನನಗೆ ಸಂಘಟನೆ ಹೊಣೆ ಕೊಟ್ಟಿದ್ದಾರೆ. ಅದನ್ನು ಹೊರುವ ಕೆಲಸ ನನ್ನದು. ಇದುವರೆಗೆ ಸಂಘಟನೆಯನ್ನು ಸುಸೂತ್ರವಾಗಿ ನಡೆಸಿಕೊಂಡು ಬಂದಿದ್ದೇನೆ.
* ಟಿಕೆಟ್ ಹಂಚಿಕೆಯಲ್ಲಿ ಬಿಜೆಪಿ ಈ ಬಾರಿ ಒಂದಿಷ್ಟುಪ್ರಯೋಗ ಮಾಡಿದೆ. ಇದು ಯಶಸ್ವಿಯಾಗುವ ವಿಶ್ವಾಸ ಇದೆಯೇ?
ಬಿಜೆಪಿ ಹಿಂದೆಯೂ ಬೇರೆ ಬೇರೆ ರಾಜ್ಯಗಳಲ್ಲಿನ ಚುನಾವಣೆ ವೇಳೆ ಟಿಕೆಟ್ ಹಂಚಿಕೆಯಲ್ಲಿ ಪ್ರಯೋಗ ಮಾಡಿದೆ. ಅದೇ ರೀತಿ ಈ ಬಾರಿ ಕರ್ನಾಟಕದಲ್ಲೂ ಮಾಡಿದೆ. ಯಾವ ಪಕ್ಷವೂ ಮಾಡದೇ ಇರುವಂತೆ 75 ಹೊಸ ಮುಖಗಳಿಗೆ ಅವಕಾಶ ಕೊಟ್ಟಿದ್ದೇವೆ. ಇದು ಚುನಾವಣಾ ಫಲಿತಾಂಶದಲ್ಲಿ ಗೊತ್ತಾಗಲಿದೆ. ಜನರಿಗೂ ಮತ್ತು ಪಕ್ಷದ ಕಾರ್ಯಕರ್ತರಿಗೆ ವಿಶ್ವಾಸ ಬಂದಿದೆ.
* ಇದೇ ರೀತಿಯ ಪ್ರಯೋಗ ಮುಂಬರುವ ಲೋಕಸಭಾ ಚುನಾವಣೆಯಲ್ಲಿನ ಟಿಕೆಟ್ ಹಂಚಿಕೆಯಲ್ಲೂ ಮುಂದುವರೆಯಬಹುದೇ?
ಮಾಡಬಹುದು. ರಾಷ್ಟ್ರೀಯ ನಾಯಕರು, ಸಂಸದೀಯ ಮಂಡಳಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು. ನಾನು ಲೋಕಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲೂ ಪ್ರಯೋಗ ಮಾಡುವುದನ್ನು ಸಮರ್ಥಿಸುತ್ತೇನೆ. ಉದಾಹರಣೆಗೆ ನಾನು ಮೂರು ಬಾರಿ ಸಂಸದನಾಗಿದ್ದೇನೆ. ನನ್ನನ್ನೇ ಕೈಬಿಡಬಹುದು. ನನ್ನಿಂದಲೇ ಪ್ರಯೋಗ ಆರಂಭ ಮಾಡಬಹುದು. ತಪ್ಪೇನಿಲ್ಲ. ಕಮ್ಯುನಿಸ್ಟ್ ಪಕ್ಷವನ್ನೇ ತೆಗೆದುಕೊಳ್ಳಿ. ಸೈದ್ಧಾಂತಿಕವಾಗಿ ಭಿನ್ನಾಭಿಪ್ರಾಯ ಇರಬಹುದು. ಆದರೆ, ಆ ಪಕ್ಷದಲ್ಲಿ ಎರಡು ಬಾರಿ ಸಂಸದರಾದವರಿಗೆ ಮೂರನೇ ಬಾರಿ ಟಿಕೆಟ್ ನೀಡುವುದಿಲ್ಲ. ನಾವೇ ನಾಲ್ಕಾರು ಬಾರಿ ಸಂಸದರಾಗಿ ಕೆಲಸ ಮಾಡುವುದಕ್ಕಿಂತ ಪಕ್ಷದ ಕೆಲಸ ಮಾಡಬಹುದಲ್ಲ. ಈ ದಿಕ್ಕಿನಲ್ಲಿ ಯೋಚನೆ ಮಾಡಬೇಕು.
* ನೀವು ರಾಜ್ಯ ರಾಜಕಾರಣಕ್ಕೆ ಬರುತ್ತೀರಿ ಎಂಬ ವದಂತಿ ಹಿಂದೆ ಕೇಳಿಬಂದಿತ್ತು?
ನನಗೆ ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಯಾವುದೇ ಆಸಕ್ತಿಯಿಲ್ಲ.
* ವರ್ಷದ ಹಿಂದೆಯೇ ನೀವು ಜಗದೀಶ್ ಶೆಟ್ಟರ್ ಮತ್ತು ಈಶ್ವರಪ್ಪ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂದು ಹೇಳಿದ್ದ ಆಡಿಯೋ ವೈರಲ್ ಆಗಿತ್ತಲ್ಲ?
ನಾನು ಈಗ ಅದರ ಬಗ್ಗೆ ಉಲ್ಲೇಖ ಮಾಡಲು ಹೋಗುವುದಿಲ್ಲ.
* ಆಯ್ತು. ಶೆಟ್ಟರ್ ಹಾಗೂ ಲಕ್ಷ್ಮಣ ಸವದಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನವನ್ನು ಪಕ್ಷ ಗಂಭೀರವಾಗಿ ಮಾಡಿದಂತೆ ಕಂಡು ಬರಲಿಲ್ಲ?
ಇಲ್ಲ. ಅಂತಿಮ ಕ್ಷಣದವರೆಗೂ ಅವರಿಬ್ಬರನ್ನೂ ಪಕ್ಷದಲ್ಲೇ ಉಳಿಸಿಕೊಳ್ಳುವ ಪ್ರಯತ್ನ ಗಂಭೀರವಾಗಿ ಆಗಿದೆ. ವರಿಷ್ಠರು ಮಾತುಕತೆ ನಡೆಸಿದ್ದಾರೆ. ಆದರೂ ಅವರು ಎಲ್ಲವನ್ನೂ ಮೀರಿ ಹೋಗಿದ್ದಾರೆ. ತಾವು ಸಿದ್ಧಾಂತಕ್ಕಾಗಿ ಬಂದವರಾ ಅಥವಾ ಅಧಿಕಾರಕ್ಕೆ ಬಂದವರಾ ಎಂಬುದನ್ನು ಅವರು ಯೋಚನೆ ಮಾಡಬೇಕಿತ್ತು.
* ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿರುವುದು ಪಕ್ಷಕ್ಕೆ ಎಷ್ಟುಅನುಕೂಲವಾಗಲಿದೆ?
ಮೋದಿ ಅವರ ಹವಾ ಇಡೀ ರಾಜ್ಯದಲ್ಲಿದೆ. ಅತಿಹೆಚ್ಚು ಜನರ ಬೆಂಬಲ ಇರುವ, ಜನಾಭಿಮಾನ ಇರುವ ನಾಯಕ ಮೋದಿ. ಮೋದಿ ಅವರು ಪ್ರಚಾರಕ್ಕೆ ಹೋದಲ್ಲೆಲ್ಲ ನಾವು ಹೆಚ್ಚು ಸ್ಥಾನ ಪಡೆಯುತ್ತೇವೆ.
* ದೇಶದ ಪ್ರಧಾನಿಯಾಗಿ ಮೋದಿ ಅವರು ಕೇವಲ ಒಂದು ರಾಜ್ಯದ ಚುನಾವಣೆಗೆ ಏಳು ದಿನ ಮೀಸಲಿಡುವ ಅಗತ್ಯವಿದೆಯೇ?
ಅವರೊಬ್ಬ ದಂಡನಾಯಕ. ಕರ್ನಾಟಕದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬ ಕಾರಣಕ್ಕಾಗಿ ಸುದೀರ್ಘ ಪ್ರಚಾರ ನಡೆಸಿದ್ದಾರೆ. ಅವರು ಯಾವುದೇ ರಾಜ್ಯದ ಚುನಾವಣೆ ಇದ್ದರೂ ಪ್ರವಾಸ ಮಾಡುತ್ತಾರೆ.
* ಹಿಂದೆ ರಾಜ್ಯ ಹಲವು ಸಂಕಷ್ಟಎದುರಿಸಿದ ವೇಳೆ ರಾಜ್ಯಕ್ಕೆ ಕಾಲಿಡದ ಪ್ರಧಾನಿ ಮೋದಿ ಅವರು ಈ ಪರಿ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ?
ಆ ಕಾಲದಲ್ಲೂ ಮೋದಿ ಅವರು ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯಕ್ಕೆ ಏನು ನೆರವು ಕೊಡಬೇಕೋ ಅದನ್ನು ಕೊಟ್ಟಿದ್ದಾರೆ. ಹಿಂದಿನ ಯಾವುದೇ ಕೇಂದ್ರ ಸರ್ಕಾರ ನೀಡದಿರುವಷ್ಟುಅನುದಾನ, ನೆರವು ನೀಡಿದ್ದಾರೆ.
ಬಿಜೆಪಿಯದು ಸಿಂಗಲ್ ಡ್ರೈವರ್ ಡಬಲ್ ಎಂಜಿನ್ ಸರ್ಕಾರ, ಕರ್ನಾಟಕದಿಂದ ದೇಶಕ್ಕೇ ಮೆಸೇಜ್: ಸುಧೀಂದ್ರ ಕುಲಕರ್ಣಿ
* ಅಧಿಕಾರಕ್ಕೆ ಬಂದರೆ ಬಜರಂಗದಳವನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದು ಬಿಜೆಪಿಗೆ ಒಂದು ಪ್ರಬಲ ಅಸ್ತ್ರ ನೀಡಿದಂತಾಯಿತೆ?
ಸಮಾಜವನ್ನು ಒಡೆಯುವ ಉದ್ದೇಶದಿಂದಲೇ ಈ ಅಂಶವನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ತಾಕತ್ತಿದ್ದರೆ ಬಜರಂಗ ದಳವನ್ನು ನಿಷೇಧಿಸಲಿ. ರಾಜಸ್ಥಾನದಲ್ಲಿ ಅವರದೇ ಪಕ್ಷದ ಸರ್ಕಾರವಿದೆ. ಮಾಡಿ ತೋರಿಸಲಿ ನೋಡೋಣ. ಕರ್ನಾಟಕದಲ್ಲಿ ಇದಕ್ಕೆ ಪ್ರಯತ್ನ ಮಾಡಲಿ. ಕಾಂಗ್ರೆಸ್ ನಿರ್ನಾಮವಾಗಲಿದೆ. ಇದು ನಮಗೆ ಅಸ್ತ್ರ ಎಂದಲ್ಲ. ಜನರ ಭಾವನೆಗಳಿಗೆ ಧಕ್ಕೆ ತಂದಿದೆ. ಬಜರಂಗ ದಳ ಎಲ್ಲಿಯೂ ಭಯೋತ್ಪಾದನೆ ಕೃತ್ಯ ಎಸಗಿಲ್ಲ. ಎಲ್ಲಿಯೂ ಬಾಂಬ್ ಇಟ್ಟಿಲ್ಲ. ಹಿಂದು ಸಮುದಾಯದ ಹಿತಕ್ಕೆ ಧಕ್ಕೆ ಉಂಟಾದಾಗ ಪ್ರತಿಭಟನೆ ಮಾಡುತ್ತದೆ.
* ಈ ವಿಧಾನಸಭಾ ಚುನಾವಣೆ ಬಳಿಕವೂ ನೀವು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮುಂದುವರೆಯುತ್ತೀರಾ?
ಹಾಗೇನಿಲ್ಲ. ನನ್ನನ್ನು ಮುಂದುವರೆಸಬೇಕು ಎಂದೇನಿಲ್ಲ. ನನ್ನ ಅವಧಿ ಈಗಾಗಲೇ ಮುಗಿದಿದೆ. ರಾಷ್ಟ್ರೀಯ ನಾಯಕರು ಯೋಚನೆ ಮಾಡಿ ಹೊಸಬರನ್ನು ತರುತ್ತಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.