ಬಿಜೆಪಿ ಗೆದ್ರೆ ಮತ್ತೆ ಬೊಮ್ಮಾಯಿ ಸಿಎಂ: ಧರ್ಮೇಂದ್ರ ಪ್ರಧಾನ್
ಕಳೆದ ಹಲವು ದಿನಗಳಿಂದ ರಾಜ್ಯದಲ್ಲೇ ವಾಸ್ತವ್ಯ ಹೂಡಿರುವ ಪ್ರಧಾನ್ ಅವರು ನಿತ್ಯ ಹತ್ತಾರು ವಿವಿಧ ಹಂತದ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಗೆಲುವಿಗೆ ಬೇಕಾದ ಚುನಾವಣಾ ರಣತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ.
ವಿಜಯ್ ಮಲಗಿಹಾಳ
ಬೆಂಗಳೂರು (ಮೇ.05): ದಶಕದ ಹಿಂದೆ ಕರ್ನಾಟಕ ಬಿಜೆಪಿ ಉಸ್ತುವಾರಿಯಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ಪ್ರಸಕ್ತ ವಿಧಾನಸಭೆ ಚುನಾವಣೆಯ ಉಸ್ತುವಾರಿಯ ಜವಾಬ್ದಾರಿ ಹೊತ್ತಿದ್ದಾರೆ. ಕೇಂದ್ರ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾಗಿರುವ ಪ್ರಧಾನ್ ಟ್ರಬಲ್ ಶೂಟರ್ ಕೂಡ ಹೌದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೀಲಗಣ್ಣಿನ ಹುಡುಗನೂ ಆಗಿರುವ ಪ್ರಧಾನ್ ಅವರಿಗೆ ಕರ್ನಾಟಕ ಚುನಾವಣೆಯ ಹೊಣೆ ನೀಡಿ ಬೆನ್ನಿಗೆ ನಿಂತಿದ್ದಾರೆ.
ಕಳೆದ ಹಲವು ದಿನಗಳಿಂದ ರಾಜ್ಯದಲ್ಲೇ ವಾಸ್ತವ್ಯ ಹೂಡಿರುವ ಪ್ರಧಾನ್ ಅವರು ನಿತ್ಯ ಹತ್ತಾರು ವಿವಿಧ ಹಂತದ ಸಭೆಗಳನ್ನು ನಡೆಸುವ ಮೂಲಕ ಪಕ್ಷದ ಗೆಲುವಿಗೆ ಬೇಕಾದ ಚುನಾವಣಾ ರಣತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ. ರಾಜ್ಯ ಬಿಜೆಪಿಯ ಚುನಾವಣಾ ಆಗುಹೋಗುಗಳು ಅವರ ನಿಗಾದಲ್ಲೇ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ..
ಬಿಜೆಪಿಯದು ಸಿಂಗಲ್ ಡ್ರೈವರ್ ಡಬಲ್ ಎಂಜಿನ್ ಸರ್ಕಾರ, ಕರ್ನಾಟಕದಿಂದ ದೇಶಕ್ಕೇ ಮೆಸೇಜ್: ಸುಧೀಂದ್ರ ಕುಲಕರ್ಣಿ
* ಚುನಾವಣಾ ಪ್ರಚಾರದ ಅಂತ್ಯ ಸಮೀಪಿಸಿದೆ. ನಿಮ್ಮ ಪಕ್ಷ ಎಷ್ಟು ಸ್ಥಾನ ಗಳಿಸಬಹುದು ಎಂಬ ನಿರೀಕ್ಷೆಯಿದೆ?
ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತ ಗಳಿಸುವತ್ತ ಹೆಜ್ಜೆ ಹಾಕಿದೆ. ಇದರಲ್ಲಿ ಎಳ್ಳಷ್ಟೂ ಅನುಮಾನ ಬೇಡ.
* ಕರ್ನಾಟಕದ ಜನರು ಯಾವ ಕಾರಣಕ್ಕಾಗಿ ಬಿಜೆಪಿಯನ್ನು ಬೆಂಬಲಿಸಬೇಕು? ಏನನ್ನು ಮುಂದಿಟ್ಟುಕೊಂಡು ಮತ ಕೇಳುತ್ತಿದ್ದೀರಿ?
ಕಳೆದ ಮೂರು ಬಾರಿ ನಮಗೆ ಹೆಚ್ಚು ಸ್ಥಾನ ನೀಡಿದರೂ ಪೂರ್ಣ ಬಹುಮತ ನೀಡಿಲ್ಲ. ಈ ಬಾರಿ ಪೂರ್ಣ ಬಹುಮತ ಕೊಡಿ. ಡಬಲ್ ಎಂಜಿನ್ ಸರ್ಕಾರ ನಿಮ್ಮ ಸೇವೆಗಾಗಿ ನಿಮ್ಮ ಮನೆ ಬಾಗಿಲಿಗೆ ಬರಲಿದೆ. ಬಹುಮತದ ಕೊರತೆ ಕಾರಣದಿಂದಾಗಿಯೇ ನಾವು ರಾಜ್ಯದ ಜನರ ನಿರೀಕ್ಷೆ ಸಂಪೂರ್ಣವಾಗಿ ಪೂರೈಸಿರಲಿಕ್ಕಿಲ್ಲ. ಈ ಬಾರಿ ಪೂರ್ಣ ಬಹುಮತದ ಬೆಂಬಲ ಕೊಟ್ಟರೆ ಕರ್ನಾಟಕದ ಹೊಸ ತಲೆಮಾರಿನ ಆಶೋತ್ತರಗಳನ್ನು ಈಡೇರಿಸಲಿದೆ ಎಂಬ ಭರವಸೆ ನೀಡುತ್ತೇವೆ ಎಂದು ಮತ ಕೇಳುತ್ತಿದ್ದೇವೆ. ನಾವು ಬಸವಣ್ಣನ ಆಡಳಿತ ಪುನರ್‌ಪ್ರತಿಷ್ಠಾಪಿಸುವ ಉದ್ದೇಶ ಹೊಂದಿದ್ದೇವೆ.
* ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಹಣಾಹಣಿ ಕಂಡು ಬರುತ್ತಿದೆಯಲ್ಲ?
ಈ ಬಾರಿಯ ಚುನಾವಣೆ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಹೊಸ ಅಧ್ಯಯನ ಆರಂಭವಾಗುತ್ತಿದೆ. ಬಿಜೆಪಿ ಮತ್ತು ಇತರರು ಎಂಬಂತಾಗಿದೆ. ಇತರರು ಅಂದರೆ, ಕಾಂಗ್ರೆಸ್ ಎ ಮತ್ತು ಬಿ ಟೀಂ. ಅಷ್ಟರ ಮಟ್ಟಿಗೆ ಧ್ರುವೀಕರಣ ಕಂಡು ಬರುತ್ತಿದೆ. 2004, 2008 ಮತು 2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಸ್ಪಷ್ಟಬಹುಮತ ಗಳಿಸಲು ಸಾಧ್ಯವಾಗಿರಲಿಲ್ಲ. ರೈತರ ಪಕ್ಷವಾಗಿ ಗುರುತಿಸಿಕೊಂಡಿದೆ. ಎಲ್ಲ ಸಮುದಾಯಗಳ ನಾಯಕರು ಪಕ್ಷದಲ್ಲಿ ಹೊರಹೊಮ್ಮಿದ್ದಾರೆ. ಎಲ್ಲ ಸಮುದಾಯಗಳ ಬೆಂಬಲ ಲಭಿಸುತ್ತಿದೆ.
* ನಿಮ್ಮ ಈ ವಿಶ್ವಾಸಕ್ಕೆ ಕಾರಣ ಏನು?
ದಶಕಗಳ ಹಿಂದೆ ಎನ್.ಟಿ.ರಾಮರಾವ್ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದ ವೇಳೆ ಪರಿಶಿಷ್ಟಜಾತಿಯ ಮೀಸಲಾತಿ ಪ್ರಮಾಣವನ್ನು ಶೇ.14ರಿಂದ 15ಕ್ಕೆ ಏರಿಕೆ ಮಾಡಿದ್ದರು. ಇದೀಗ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. ಪರಿಶಿಷ್ಟಜಾತಿಯ ಮೀಸಲಾತಿಯನ್ನು ಶೇ.15ರಿಂದ 17ಕ್ಕೆ ಮತ್ತು ಪರಿಶಿಷ್ಟಪಂಗಡದ ಮೀಸಲಾತಿಯನ್ನು ಶೇ.3ರಿಂದ 7ಕ್ಕೆ ಏರಿಸಲಾಗಿದೆ. ಒಟ್ಟು ಪರಿಶಷ್ಟಸಮುದಾಯಗಳ ಮೀಸಲಾತಿ ಶೇ.6ರಷ್ಟುಹೆಚ್ಚಿಸಿದಂತಾಗಿದೆ. ಸ್ವಾತಂತ್ರ್ಯಾ ನಂತರ ಯಾವುದೇ ರಾಜ್ಯದಲ್ಲಿ ಈ ಪ್ರಮಾಣದ ಮೀಸಲಾತಿ ಏರಿಕೆ ಮಾಡಿದ ಉದಾಹರಣೆ ಇಲ್ಲ. ಮುಸ್ಲಿಂ ಸಮುದಾಯಕ್ಕೆ ಬೇರೆ ಬೇರೆ ಪ್ರವರ್ಗಗಳಲ್ಲಿ ಮೀಸಲಾತಿ ಲಭ್ಯತೆ ಇದ್ದರೂ ಅಸಾಂವಿಧಾನಿಕವಾಗಿ ಶೇ.4ರಷ್ಟುಪ್ರತ್ಯೇಕ ಮೀಸಲಾತಿ ನೀಡಲಾಗುತ್ತಿತ್ತು. ಇದನ್ನು ರದ್ದುಪಡಿಸಿ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳಿಗೆ ತಲಾ ಶೇ.2ರಷ್ಟುಮೀಸಲಾತಿ ನಿಗದಿಪಡಿಸಿ ಹಂಚಿಕೆ ಮಾಡಿದ್ದು ನಮ್ಮ ಬಿಜೆಪಿ ಸರ್ಕಾರ. ಇದು ಮತದಾರರ ಮೇಲೆ ಪರಿಣಾಮ ಬೀರುತ್ತಿದೆ.
* ಕೇವಲ ವಿವಿಧ ಸಮುದಾಯಗಳ ಮೀಸಲಾತಿ ಹೆಚ್ಚಳದಿಂದ ಬಿಜೆಪಿಗೆ ಬಹುಮತ ಗಳಿಸುವಷ್ಟುಸ್ಥಾನಗಳು ಬರುವ ವಿಶ್ವಾಸ ಬಂದಿದೆಯೇ?
ಅಷ್ಟೇ ಅಲ್ಲ. ಕೋವಿಡ್ ಸಂಕಷ್ಟಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸಿದ ಕ್ರಮಗಳು, ಸಾಮಾಜಿಕ ನ್ಯಾಯ ಪ್ರತಿಪಾದಿಸುವಂಥ ವಿವಿಧ ಕಾರ್ಯಕ್ರಮಗಳು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾವು ನೀಡಿರುವ ಭರವಸೆಗಳನ್ನು ಈಡೇರಿಸಿರುವುದು...ಹೀಗೆ ಹಲವಾರು ಕಾರಣಗಳಿಂದಾಗಿ ಬಿಜೆಪಿಗೆ ಈ ಬಾರಿ ಕರ್ನಾಟಕದಲ್ಲಿ ಬಹುಮತಕ್ಕೆ ಬೇಕಾದ ಸ್ಥಾನಗಳು ಲಭಿಸುತ್ತವೆ ಎಂಬ ವಿಶ್ವಾಸ ಬಂದಿದೆ.
* ಆಡಳಿತ ವಿರೋಧಿ ಅಲೆಯೂ ಅಷ್ಟೇ ಪ್ರಮಾಣದಲ್ಲಿ ತೀವ್ರವಾಗಿ ಇದೆಯಂತೆ?
ಆಡಳಿತ ವಿರೋಧಿ ಅಲೆಯ ಪರಿಭಾಷೆ ಬದಲಾಗಿದೆ. ಈಗ ಜನ ಕಾರ್ಯಕ್ಷಮತೆಯ ರಾಜಕೀಯಕ್ಕೆ ಮನ್ನಣೆ ನೀಡುತ್ತಿದ್ದಾರೆ. ಉತ್ತರದಾಯಿತ್ವಕ್ಕೆ ಬೆಲೆ ನೀಡುತ್ತಿದ್ದಾರೆ. ನಾವು ಮಾಡಿದ್ದೇ ಆಡಳಿತ ಎನ್ನುವಂಥ ಆ ದಿನಗಳು ಹೋದವು. ಉತ್ತರ ಪ್ರದೇಶದಲ್ಲಿ 50 ವರ್ಷಗಳ ಬಳಿಕ ಒಂದು ಪಕ್ಷದ ಸರ್ಕಾರ ಸತತವಾಗಿ ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ಇದೇ ರೀತಿ ಇತರ ಕೆಲವು ರಾಜ್ಯಗಳಲ್ಲೂ ಆಗಿದೆ. ಆಡಳಿತ ವಿರೋಧಿ ಅಲೆ ಎಂಬುದು ಕ್ರಮೇಣ ನಶಿಸಿ ಹೋಗುತ್ತಿದೆ. ಆಡಳಿತ ಪರ ಅಲೆ ಎನ್ನುವುದು ನಿಧಾನವಾಗಿ ಹೆಚ್ಚುತ್ತಿದೆ. ಕರ್ನಾಟಕದಲ್ಲಿ ಈ ಬಾರಿಯ ಚುನಾವಣೆಯಲ್ಲಿ 75 ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡಿದ್ದೇವೆ. ರಾಜ್ಯದಲ್ಲಿ ಪಕ್ಷ ಇದನ್ನು ಎದುರಿಸುವಷ್ಟುಗಟ್ಟಿಯಾಗಿದೆ ಎಂಬ ಕಾರಣಕ್ಕಾಗಿಯೇ ಟಿಕೆಟ್ ಹಂಚಿಕೆಯಲ್ಲಿ ಬದಲಾವಣೆ ಮಾಡುವ ಧೈರ್ಯ ತೋರಿದ್ದೇವೆ.
* ಬದಲಾವಣೆಯ ಧೈರ್ಯ ಮಾಡಿದ್ದರಿಂದಲೇ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅಂಥ ಹಲವರು ಪಕ್ಷ ತೊರೆದು ಹೋದರಲ್ಲ? ಇದರಿಂದ ಪಕ್ಷಕ್ಕೆ ಹಿನ್ನೆಡೆ ಉಂಟಾಗುವುದಿಲ್ಲವೇ?
ಬಿಜೆಪಿ ವ್ಯವಸ್ಥೆಯಲ್ಲಿ ಇದೆಲ್ಲ ಸಮಸ್ಯೆ ಉಂಟು ಮಾಡುವುದಿಲ್ಲ. ನಮ್ಮದು ಕೇಡರ್ ಆಧಾರಿತ ಪಕ್ಷ. ರಾಷ್ಟ್ರೀಯ ನಾಯಕತ್ವ ಇದೆ. ರಾಜ್ಯ ನಾಯಕತ್ವ ಇದೆ. ಎಲ್ಲರಿಗೂ ಅವಕಾಶ ನೀಡಬೇಕು ಎಂಬುದು ನಮ್ಮ ಉದ್ದೇಶ. ಸವದಿ ಕಳೆದ ಚುನಾವಣೆಯಲ್ಲಿ ಸೋತ ಮೇಲೂ ಅವರನ್ನು ಎಂಎಲ್‌ಸಿ ಮಾಡಿ, ಉಪಮುಖ್ಯಮಂತ್ರಿ ಮಾಡಿದೆವು. ಶೆಟ್ಟರ್ ಅವರನ್ನು ಹಿಂದೆ ಬಿ.ಬಿ.ಶಿವಪ್ಪ ಅವರಂಥ ಹಿರಿಯ ನಾಯಕರನ್ನು ಕಡೆಗಣಿಸಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದು ಇದೇ ಬಿಜೆಪಿ. ಪಕ್ಷ ಯಾರನ್ನೂ ನಿರ್ಲಕ್ಷಿಸಿಲ್ಲ. ಯಡಿಯೂರಪ್ಪ, ಈಶ್ವರಪ್ಪ, ರವೀಂದ್ರನಾಥ್, ರಾಮದಾಸ್, ಹಾಲಾಡಿ ಶ್ರೀನಿವಾಸಶೆಟ್ಟಿಮೊದಲಾದವರು ಮಾದರಿ ಸೃಷ್ಟಿಸಿದ್ದಾರೆ. ಪಕ್ಷ ನಮ್ಮ ತಾಯಿ ಇದ್ದಂತೆ. ತಾಯಿಯನ್ನು ಬದಲಾಯಿಸಲು ಸಾಧ್ಯವಿಲ್ಲ.
* ಕರ್ನಾಟಕದಲ್ಲಿನ ಬಿಜೆಪಿ ಸರ್ಕಾರದ ಸಾಧನೆ ಬಗ್ಗೆ ನಿಮಗೆ ಸಮಾಧಾನ ಇದೆಯೇ?
ಖಂಡಿತ ಸಮಾಧಾನವಿದೆ. ಈ ಕಾರಣಕ್ಕಾಗಿಯೇ ನಾವು ಡಬಲ್ ಎಂಜಿನ್ ಸರ್ಕಾರ ಮುಂದೆಯೂ ಇರಬೇಕು ಎಂದು ಬಯಸುತ್ತಿದ್ದೇವೆ. ನಾನೊಬ್ಬ ರಾಜಕೀಯ ವಿಜ್ಞಾನದ ವಿದ್ಯಾರ್ಥಿಯಾಗಿ, ಸಮಾಜ ಶಾಸ್ತ್ರದ ವಿದ್ಯಾರ್ಥಿಯಾಗಿ ಕರ್ನಾಟಕದ ಬೆಳವಣಿಗೆ, ಬೆಂಗಳೂರಿನ ಬೆಳವಣಿಗೆಯನ್ನು ಗಮನಿಸಿದ್ದೇನೆ. ಅರ್ಧದಷ್ಟುಅಮೆರಿಕ ಬೆಂಗಳೂರಿನ ಐಟಿ ಕ್ಷೇತ್ರದಿಂದ ಪ್ರಭಾವಿತವಾಗಿದೆ. ಇಲ್ಲಿ ಸ್ಥಿರ ಸರ್ಕಾರ ಇರಬೇಕು ಎಂಬುದು ನಮ್ಮ ಆಶಯ. ಈ ದೃಷ್ಟಿಯಿಂದ ಬಿಜೆಪಿ ಸಹಜ ಪಕ್ಷ. ಪೂರ್ಣ ಬಹುಮತ ನೀಡಿ ಎಂಬ ಮನವಿಯನ್ನು ಪ್ರಧಾನಿ ಮೋದಿ ಅವರು ಮಾಡುತ್ತಿದ್ದಾರೆ.
ರಾಜ್ಯ ರಾಜಕೀಯಕ್ಕೆ ಬರುವ ಆಸೆ ಇಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
* ಆಡಳಿತಾರೂಢ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪಗಳು ಸಿಕ್ಕಾಪಟ್ಟೆಕೇಳಿಬಂದಿವೆಯಲ್ಲ?
ಆರೋಪ ಮಾಡುತ್ತಿರುವವರು ಯಾರು. ಕಾಂಗ್ರೆಸ್ ಪಕ್ಷದವರು. ತಮ್ಮ ಪಕ್ಷ ಉಳಿಸಿಕೊಳ್ಳಲು ಆರೋಪ ಮಾಡುತ್ತಲೇ ಇರುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ವಿಷಯಗಳು ಸಿಗದೇ ಇರುವುದರಿಂದ ಹತಾಶರಾಗಿ ಜನರನ್ನು ಗೊಂದಲಕ್ಕೀಡು ಮಾಡಲು ಪ್ರಯತ್ನಿಸುತ್ತಿದ್ದಾರೆ. ಆರೋಪ ಮುಖ್ಯವಾಗುವುದಿಲ್ಲ. ಜನರು ಯಾರನ್ನು ಒಪ್ಪುತ್ತಾರೆ, ಯಾರ ನಾಯಕತ್ವಕ್ಕೆ ಮನ್ನಣೆ ನೀಡುತ್ತಾರೆ ಎಂಬುದು ಮುಖ್ಯ.
* ಬಿಜೆಪಿ ಬಹುಮತ ಗಳಿಸಿದಲ್ಲಿ ಬಸವರಾಜ ಬೊಮ್ಮಾಯಿ ಅವರೇ ಮತ್ತೆ ಮುಖ್ಯಮಂತ್ರಿಯಾಗುತ್ತಾರಾ?
ಅವರೇ ಈಗ ಮುಖ್ಯಮಂತ್ರಿ. ನಾವು ಅವರ ನೇತೃತ್ವದ ಸರ್ಕಾರವನ್ನು ಪುನರ್‌ಸ್ಥಾಪಿಸಲು ಜನರ ಬೆಂಬಲ ಕೇಳುತ್ತಿದ್ದೇವೆ. ಪ್ರಚಾರ ಸಮಿತಿ ಅಧ್ಯಕ್ಷರೂ ಬೊಮ್ಮಾಯಿ ಅವರೇ ಆಗಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಅವರು ಪ್ರಚಾರ ಸಮಿತಿಯ ನೇತೃತ್ವ ವಹಿಸಿಕೊಂಡಿದ್ದಾರೆ. ಇಡೀ ಪಕ್ಷ ಅವರ ಬೆನ್ನಿಗಿದೆ. ಹೀಗಾಗಿ, ಅವರೇ ಮುಂದಿನ ಮುಖ್ಯಮಂತ್ರಿಯಾಗುತ್ತಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಎಲ್ಲ ನಾಯಕರೂ ಪ್ರಚಾರದ ವೇಳೆ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸುವಂತೆ ಮತಯಾಚನೆ ಮಾಡುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.