ಕೋಟಿ ಸಂಪಾದನೆ ಬಿಟ್ಟು ಚುನಾವಣೆಗೆ ಇಳಿದ ರೈತ: ವಿದೇಶದಿಂದ ತವರಿಗೆ ಮರಳಿ ರಾಜಕೀಯಕ್ಕೆ

By Kannadaprabha News  |  First Published May 3, 2023, 10:07 AM IST

ಸಾಫ್ಟ್‌ವೇರ್‌ ಕಂಪನಿ ಮಾಲೀಕನಾಗಿ ಕೋಟಿ ಕೋಟಿ ಹಣ ಸಂಪಾದಿಸುವುದನ್ನು ಬಿಟ್ಟು ತವರಿಗೆ ಮರಳಿ ರೈತ ಹೋರಾಟಗಾರನಾಗಿ ಗುರುತಿಸಿಕೊಂಡು ಇದೀಗ ರಾಜಕೀಯ ಅಖಾಡ ಪ್ರವೇಶಿಸಿದ್ದಾರೆ. 


ಮಂಡ್ಯ ಮಂಜುನಾಥ

ಮಂಡ್ಯ (ಮೇ.03): ಸಾಫ್ಟ್‌ವೇರ್‌ ಕಂಪನಿ ಮಾಲೀಕನಾಗಿ ಕೋಟಿ ಕೋಟಿ ಹಣ ಸಂಪಾದಿಸುವುದನ್ನು ಬಿಟ್ಟು ತವರಿಗೆ ಮರಳಿ ರೈತ ಹೋರಾಟಗಾರನಾಗಿ ಗುರುತಿಸಿಕೊಂಡು ಇದೀಗ ರಾಜಕೀಯ ಅಖಾಡ ಪ್ರವೇಶಿಸಿದ್ದಾರೆ. ಅವರೇ, ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಸರ್ವೋದಯ ಕರ್ನಾಟಕ ಅಭ್ಯರ್ಥಿ ಆಗ್ರ್ಯಾನಿಕ್‌ ಮಂಡ್ಯ ಮಾಲೀಕ ಎಸ್‌.ಸಿ.ಮಧುಚಂದನ್‌. ಅಮೆರಿಕಾದಲ್ಲಿ ಸಾಫ್ಟ್‌ವೇರ್‌ ಕಂಪನಿ ತೆರೆದು ಕೋಟಿ ಹಣ ಸಂಪಾದಿಸುತ್ತಿದ್ದ ಮಧುಚಂದನ್‌ಗೆ ಅದರಲ್ಲಿ ತೃಪ್ತಿಸಿಗದಿದ್ದರಿಂದ ಕಂಪನಿ ಮಾರಾಟ ಮಾಡಿ ತವರಿಗೆ ಆಗಮಿಸಿದರು. ‘ಆಗ್ರ್ಯಾನಿಕ್‌ ಮಂಡ್ಯ’ ಸಂಸ್ಥೆ ಸ್ಥಾಪಿಸಿ ಸಾವಯವ ಉತ್ಪನ್ನ ತಯಾರಿಕೆಗೆ ಮುಂದಾದರು. 

Tap to resize

Latest Videos

ಅಷ್ಟಕ್ಕೇ ಸುಮ್ಮನಾಗದೆ ಹಾಲು ಉತ್ಪಾದಕರ ಹೋರಾಟ ಸಮಿತಿಯನ್ನು ರಚಿಸಿಕೊಂಡು ಜಿಲ್ಲಾ ಹಾಲು ಒಕ್ಕೂಟದ ಹಲವಾರು ಲೋಪ-ದೋಷಗಳನ್ನು ಬಯಲಿಗೆಳೆದು ಜನಮೆಚ್ಚುಗೆ ಗಳಿಸಿದ್ದರು. ಕೀರೆಮಡಿ ಸ್ವಸಹಾಯ ಸಂಘವನ್ನು ರಚಿಸಿ ಮಹಿಳೆಯರ ಬಲವರ್ಧನೆ ಗೊಳಿಸಿದರು. ಕಬ್ಬು ಬೆಳೆಗಾರರ ಸಮಸ್ಯೆ ಸೇರಿದಂತೆ ರೈತರ ಹಲವು ಸಮಸ್ಯೆಗಳ ವಿರುದ್ಧ ದನಿ ಎತ್ತಿ ಹೋರಾಟದ ಕಿಚ್ಚನ್ನು ಮಂಡ್ಯ ನೆಲದಲ್ಲಿ ಜೀವಂತವಾಗಿ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. 

ಗುಮ್ಮಟನಗರಿ ವಿಜಯಪುರದಲ್ಲಿ ಕಮಲ ಅರಳುತ್ತಾ, ಕೈ ಮೇಲಾಗುತ್ತಾ?: ಕುತೂಹಲ

ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಹೋರಾಟವನ್ನೇ ಉಸಿರಾಗಿಸಿಕೊಂಡ ಮಧುಚಂದನ್‌, ಉದ್ಯಮಿಯಾಗಿದ್ದರೂ ಸರಳತೆಯನ್ನು ಮೈಗೂಡಿಸಿಕೊಂಡು ರೈತರ ನಡುವೆ ಸಾಮಾನ್ಯ ರೈತನಾಗಿ ಕಾಣಿಸಿಕೊಳ್ಳುತ್ತಾ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಪಾದಯಾತ್ರೆ ಮೂಲಕವೇ ಮನೆ ಮನೆಗೆ ತೆರಳಿ ಮತಯಾಚನೆ ಮಾಡುತ್ತಿ ದ್ದಾರೆ. ಪ್ರಚಾರದ ವೇಳೆ ವಿವಿಧ ಹಣ್ಣುಗಳಿಂದ ನಿರ್ಮಿಸಿದ ಬೃಹತ್‌ ಹಾರ, ಭಾರೀ ಗಾತ್ರದ ಹೂವಿನ ಹಾರಗಳನ್ನಾಗಲೀ ಬಳಸದೆ ಸರಳ ರೀತಿಯಲ್ಲೇ ಜನರ ಮನಗೆಲ್ಲುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ.

ಮಂಡ್ಯ ವಿಧಾನಸಭಾ ಅಖಾಡದಲ್ಲಿ ರೈತ ಸಂಘದಿಂದ ಅಭ್ಯರ್ಥಿಯಾಗಿ ಎಸ್‌.ಸಿ.ಮಧುಚಂದನ್‌ ಹೊಸ ಸಂಚಲನ ಸೃಷ್ಟಿಸಿದ್ದಾರೆ. ಇವರ ಆಗಮನ ರೈತಸಂಘಕ್ಕೆ ಹೊಸ ಶಕ್ತಿ, ಚೈತನ್ಯವನ್ನು ತಂದುಕೊಟ್ಟಿದೆ. ಮಾಜಿ ಸಚಿವ ದಿವಂಗತ ಎಸ್‌.ಡಿ.ಜಯರಾಂ ಸಹೋದರಿಯ ಮಗನಾದ ಮಧುಚಂದನ್‌ ಮಂಡ್ಯ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಹಠದೊಂದಿಗೆ ಗಂಭೀರವಾಗಿ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ರೈತರ ಸಮಸ್ಯೆಗಳ ವಿರುದ್ಧ ತಾವು ನಡೆಸಿರುವ ಹೋರಾಟ, ಸರ್ಕಾರದ ಗಮನಸೆಳೆದಿರುವುದು, ಇ-ಮೇಲ್‌ ಮೂಲಕ ಪ್ರಧಾನಿ ಕಾರ್ಯಾಲಯದ ಗಮನ ಸೆಳೆದು ಅಶಕ್ತರಿಗೆ ನೆರವಾಗಿದ್ದು, ಬಡಾವಣೆಗಳಿಗೆ ಮೂಲಸೌಲಭ್ಯಗಳನ್ನು ದೊರಕಿಸಿಕೊಟ್ಟಿರುವ ಬಗ್ಗೆ ಜನರಿಗೆ ಮನವರಿಗೆ ಮಾಡಿಕೊಡುತ್ತಾ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡುತ್ತಿದ್ದಾರೆ.

ಸಾಗ​ರ​ದಲ್ಲಿ ಕಾಂಗ್ರೆಸ್‌ ಪರ ನಟ ಶಿವಣ್ಣ ಮತ​ಯಾ​ಚ​ನೆ: ನೆಚ್ಚಿನ ನಟನ ನೋಡಲು ಜನ​ಸಾ​ಗರ

ಇವರ ಸರಳತೆಯನ್ನು ಮೆಚ್ಚಿ ಸಾಹಿತಿ ದೇವನೂರು ಮಹಾದೇವ, ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ಕೆ.ಎಸ್‌.ಪುಟ್ಟಣ್ಣಯ್ಯ ಪುತ್ರ ದರ್ಶನ್‌ ಪುಟ್ಟಣ್ಣಯ್ಯ ಬೆಂಬಲ ವ್ಯಕ್ತಪಡಿಸಿದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.

click me!