ಹಿಂದೂ ಫೈರ್‌ಬ್ರಾಂಡ್, ವಿಜಯಪುರ ನಗರ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸ್ಪರ್ಧಿಸಿರುವ ಗುಮ್ಮಟನಗರಿ ವಿಜಯಪುರ ನಗರ ಮತಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಮಧ್ಯೆದಲ್ಲಿ ಏರ್ಪಟ್ಟ ಪೈಪೋಟಿಗಿಂತ ಇಲ್ಲಿ ಹಿಂದೂ-ಮುಸ್ಲಿಂ ಮಧ್ಯೆ ಭಾರಿ ಜಿದ್ದಾಜಿದ್ದಿ ನಡೆದಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ.
ರುದ್ರಪ್ಪ ಆಸಂಗಿ
ವಿಜಯಪುರ (ಮೇ.03): ಹಿಂದೂ ಫೈರ್‌ಬ್ರಾಂಡ್, ವಿಜಯಪುರ ನಗರ ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಸ್ಪರ್ಧಿಸಿರುವ ಗುಮ್ಮಟನಗರಿ ವಿಜಯಪುರ ನಗರ ಮತಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಮಧ್ಯೆದಲ್ಲಿ ಏರ್ಪಟ್ಟ ಪೈಪೋಟಿಗಿಂತ ಇಲ್ಲಿ ಹಿಂದೂ-ಮುಸ್ಲಿಂ ಮಧ್ಯೆ ಭಾರಿ ಜಿದ್ದಾಜಿದ್ದಿ ನಡೆದಿರುವುದು ಇಡೀ ರಾಜ್ಯದ ಗಮನ ಸೆಳೆದಿದೆ. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ, ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕಾಂಗ್ರೆಸ್ಸಿನ ಅಬ್ದುಲ್ ಹಮೀದ ಮುಶ್ರೀಫ್, ಆಮ್ ಆದ್ಮಿ ಪಕ್ಷದ ಹಾಸಿಂ ಪೀರ ವಾಲೀಕಾರ, ಶಿವಸೇನಾ ಉದ್ಧವ ಬಾಳಾ ಸಾಹೇಬ ಠಾಕ್ರೆ ಪಕ್ಷದ ಸತೀಶ ಅಶೋಕ ಪಾಟೀಲ, ಬಹುಜನ ಸಮಾಜ ಪಾರ್ಟಿಯ ಮಲ್ಲಿಕಾರ್ಜುನ ಕೆಂಗನಾಳ ಹಾಗೂ ಪಕ್ಷೇತರರು ಸೇರಿ ಒಟ್ಟು 14 ಮಂದಿ ಕಣದಲ್ಲಿ ಸೆಣಸುತ್ತಿದ್ದಾರೆ.
undefined
ಜೆಡಿಎಸ್ ಪಕ್ಷದ ಅಭ್ಯರ್ಥಿ ಬಂದೇನವಾಜ ಮಹಾಬರಿ ಅವರು ಕಣದಿಂದ ನಿವೃತ್ತಿ ಘೋಷಣೆ ಮಾಡಿ, ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದಾರೆ. ಈಗ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಯತ್ನಾಳ ಹಾಗೂ ಕಾಂಗ್ರೆಸ್ಸಿನ ಅಬ್ದುಲ್ ಹಮೀದ ಮುಶ್ರೀಫ್ ಅವರ ಮಧ್ಯೆ ನೇರ ಹಣಾಹಣಿ ಏರ್ಪಟ್ಟಿದೆ. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಹಾಗೂ ಬಿಜೆಪಿ ಅಭ್ಯರ್ಥಿ ಬಸನಗೌಡ ಪಾಟೀಲ ಅವರು ಬಾಲ್ಯದ ಗೆಳೆಯರು. ಆದರೆ ಈಗ ಅವರಿಬ್ಬರೂ ಒಂದೇ ಪಕ್ಷದಲ್ಲಿದ್ದರೂ ರಾಜಕೀಯ ಕಡುವೈರಿಗಳಾಗಿದ್ದು, ಇತ್ತ ಯತ್ನಾಳ-ಪಟ್ಟಣಶೆಟ್ಟಿಮಧ್ಯೆದ ರಾಜಕೀಯ ಕಂದಕವನ್ನು ಮುಚ್ಚುವಲ್ಲಿ ಬಿಜೆಪಿ ವರಿಷ್ಠರು ಸಫಲರಾಗಲಿಲ್ಲ.
ಬಿಜೆಪಿ-ಕಾಂಗ್ರೆಸ್ ಮಧ್ಯೆ ಮುತಾಲಿಕ್ ಆಟ: ಸುನಿಲ್ ಅಂತರದಲ್ಲಿ ಕುಸಿತವೆಷ್ಟು?
ಇನ್ನು, ಯತ್ನಾಳ ಅವರ ಜತೆಗಿನ ಬಹುತೇಕ ನಾಯಕರ ಸಂಬಂಧ ಅಷ್ಟಕ್ಕಷ್ಟೇ. ಹಿಂದೂ ಮತಗಳು ಒಡೆಯದಂತೆ ಯತ್ನಾಳ ಅವರು ಹಿಂದುತ್ವದ ಅಸ್ತ್ರ ಝಳಪಿಸುತ್ತಿದ್ದಾರೆ. ಆದರೆ ಹಿಂದುತ್ವ ಈ ಚುನಾವಣೆಯಲ್ಲಿ ಯಾವ ರೀತಿ ವರ್ಕೌಟ್ ಆಗುತ್ತದೆ ಎಂಬುವುದನ್ನು ಕಾದು ನೋಡಬೇಕಷ್ಟೆ. ಕಳೆದ ಚುನಾವಣೆಯಲ್ಲಿ ಕೇವಲ ಆರು ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದ ಕಾಂಗ್ರೆಸ್ಸಿನ ಅಬ್ದುಲ್ ಹಮೀದ ಮುಶ್ರೀಫ್ ಅವರು ಈ ಬಾರಿ ಮುಸ್ಲಿಂ ಮತ ದಾರರು ತನಗೆ ಒಗ್ಗಟ್ಟಿನಿಂದ ಮತ ಚಲಾಯಿಸುವಂತೆ ಕೇಳಿಕೊಳ್ಳುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಆಗಿನ ಹಾಲಿ ಶಾಸಕ ಡಾ. ಮಕ್ಬುಲ್ ಬಾಗವಾನ ಅವರಿಗೆ ಟಿಕೆಟ್ ದೊರೆತಿರಲಿಲ್ಲ.
ಆಗ ಅಬ್ದುಲ್‌ಹಮೀದ ಮುಶ್ರೀಫ್ ಅವರಿಗೆ ಟಿಕೆಟ್ ದೊರೆತಿತ್ತು. ಇದರಿಂದ ಬಾಗವಾನ ಸಮಾಜದವರು ಅಸಮಾಧಾನಗೊಂಡು ಮುಶ್ರೀಫ್ ಅವರಿಗೆ ಮತ ಹಾಕಿರ ಲಿಲ್ಲ. ಆದರೆ ಈ ಬಾರಿ ಮುಸ್ಲಿಂ ಜಮಾತ್‌ನಲ್ಲಿಯೇ ಸಭೆಗಳು ನಡೆದು ಈ ಬಾರಿ ಯಾವುದೇ ಪರಿಸ್ಥಿತಿಯಲ್ಲಿಯೂ ಮುಸ್ಲಿಂ ಸಮುದಾಯದ ಅಭ್ಯರ್ಥಿ ಅಬ್ದುಲ್ ಹಮೀದ ಮುಶ್ರೀಫ್ ಅವರಿಗೆ ಮತ ಚಲಾಯಿಸಬೇಕು ಎಂದು ಫರ್ಮಾನು ಹೊರಡಿಸುತ್ತಿರುವುದು ತೆರೆಮರೆಯಲ್ಲಿ ನಡೆದಿದೆ. ಈ ಬಾರಿ ಬಾಗವಾನ ಸಮಾಜದವರೂ ಮುಶ್ರೀಫ್ ಪರವಾಗಿ ಇದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿ ಹಿಂದೂ, ಮುಸ್ಲಿಂ ಮತಗಳು ಹೆಚ್ಚು ಕಡಿಮೆ ಸಮವಾಗಿವೆ. ಹೀಗಾಗಿ, ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಹಿಂದೂ-ಮುಸ್ಲಿಂ ಮತಗಳು ಒಡೆಯದಂತೆ ಹೆಚ್ಚು ಗಮನ ಹರಿಸಿದ್ದಾರೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ಯಾರೇ ಗೆದ್ದರೂ ಕೂದಲೆಳೆಯಷ್ಟುಅಂತರದಲ್ಲಿಯೇ ಗೆಲುವು ಆಗುವ ಸಾಧ್ಯತೆ ಇದೆ.
ಜಾತಿ ಲೆಕ್ಕಾಚಾರ: ವಿಜಯಪುರ ನಗರ ಮತಕ್ಷೇತ್ರದಲ್ಲಿ ಒಟ್ಟು 2,64,714 ಮತದಾರರು ಇದ್ದಾರೆ. ಮಹಿಳೆಯರು 1,31,459 ಹಾಗೂ ಪುರುಷರು 1,33,255 ಮತದಾರರು ಇದ್ದಾರೆ. ಪಂಚಮ ಸಾಲಿ, ಗಾಣಿಗ, ಬಣಜಿಗ, ಲಿಂಗಾಯತರು ಸೇರಿ ಒಟ್ಟು ಸುಮಾರು 1,45,000 ಮತದಾರರು ಇದ್ದಾರೆ. ಎಸ್.ಸಿ, ಎಸ್.ಟಿ. 40,000 ಇದ್ದಾರೆ. ಮುಸ್ಲಿಂ ಮತದಾರರು- 79,000 ಇದ್ದಾರೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಮುಸ್ಲಿಂ ಮೀಸಲು ಮರುಜಾರಿ, ಒಟ್ಟು ಮಿತಿ 75%ಕ್ಕೆ ಹೆಚ್ಚಳ: ಕಾಂಗ್ರೆಸ್
2018ರ ಫಲಿತಾಂಶ
ಬಸನಗೌಡ ಪಾಟೀಲ ಯತ್ನಾಳ (ಬಿಜೆಪಿ)--------76,308
ಅಬ್ದುಲ್‌ಹಮೀದ ಮುಶ್ರೀಫ್ (ಕಾಂಗ್ರೆಸ್)-------69,895
ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ (ಜೆಡಿಎಸ್)----------- 2,083