ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಮದ್ಯ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ‘ಎಣ್ಣೆ’ ಮಾರಾಟ ಎರಡೂವರೆ ಪಟ್ಟಿಗೂ ಅಧಿಕ ಹೆಚ್ಚಳವಾಗಿದೆ.
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಮೇ.06): ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯದಲ್ಲಿ ಮದ್ಯ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ. ಕಳೆದ ವರ್ಷ ಇದೇ ಸಮಯಕ್ಕೆ ಹೋಲಿಸಿದರೆ ‘ಎಣ್ಣೆ’ ಮಾರಾಟ ಎರಡೂವರೆ ಪಟ್ಟಿಗೂ ಅಧಿಕ ಹೆಚ್ಚಳವಾಗಿದೆ. 2022ರ ಮೇ 1ರಿಂದ 4ರವರೆಗೆ 2.37 ಲಕ್ಷ ಬಾಕ್ಸ್ (ಪ್ರತಿ ಬಾಕ್ಸ್‌ನಲ್ಲಿ 7.8 ಲೀಟರ್) ಬಿಯರ್ ಮಾರಾಟವಾಗಿದ್ದರೆ, ಪ್ರಸಕ್ತ ವರ್ಷ ಇದೇ ಅವಧಿಯಲ್ಲಿ 5.44 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದೆ. ಬಿಯರ್ ಹೊರತುಪಡಿಸಿ ಇನ್ನುಳಿದ ವಿಸ್ಕಿ, ಬ್ರಾಂಡಿ, ರಮ್ ಮತ್ತಿತರ ಮದ್ಯ ಮಾರಾಟವೂ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದೆ.
3.80 ಲಕ್ಷ ಬಾಕ್ಸ್ (ಪ್ರತಿ ಬಾಕ್ಸ್‌ನಲ್ಲಿ 8.64 ಲೀಟರ್)ಗೆ ಪ್ರತಿಯಾಗಿ ಪ್ರಸಕ್ತ 8.98 ಲಕ್ಷ ಬಾಕ್ಸ್ ಮದ್ಯ ಬಿಕರಿಯಾಗಿದೆ. ಕಳೆದ ವರ್ಷ ಮೇ ಮೊದಲ ವಾರ ನಡೆದಿರುವ ವಹಿವಾಟಿಗೂ ಪ್ರಸಕ್ತ ನಡೆದಿರುವ ಮಾರಾಟವನ್ನು ಒಟ್ಟಾರೆ ಲೀಟರ್ ಲೆಕ್ಕದಲ್ಲಿ ಹೇಳುವುದಾದರೆ, ಬಿಯರ್ 18.48 ಲಕ್ಷ ಲೀಟರ್‌ಗೆ ಬದಲಾಗಿ 42.43 ಲಕ್ಷ ಲೀಟರ್ ಮಾರಾಟವಾಗಿದೆ. ವಿಸ್ಕಿ ಮತ್ತಿತರ ಮದ್ಯ 2022ರ ಮೇ ಮೊದಲ ವಾರದಲ್ಲಿ 32.83 ಲಕ್ಷ ಲೀಟರ್ ಮಾರಾಟವಾಗಿತ್ತು. ಈಗ 77.58 ಲಕ್ಷ ಲೀಟರ್ ಬಿಕರಿಯಾಗಿದೆ.
ಪ್ರಧಾನಿ ಮೋದಿ ಆರ್ಶೀರ್ವದಿಸಲು ಜನತೆಗೆ ಸಂಸದ ತೇಜಸ್ವಿ ಸೂರ್ಯ ಮನವಿ
ಸ್ಟಾಕ್ ಇಲ್ಲದೆ ಪರದಾಟ: ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟ ಆಗುತ್ತಿರುವುದರಿಂದ ಹೋಬಳಿ, ತಾಲೂಕು ಮಟ್ಟದ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಸ್ಟೋರ್‌ಗಳಲ್ಲಿ ಸ್ಟಾಕ್ ಇಲ್ಲದೆ ಮಾಲೀಕರು ಪರದಾಡುವಂತಾಗಿದೆ. ಗ್ರಾಮೀಣ ಪ್ರದೇಶಗಳಲ್ಲೂ ಚುನಾವಣಾ ಕಾವು ಏರಿದೆ. ಹಣದ ‘ಹರಿವು’ ಹೆಚ್ಚಾಗಿರುವುದರಿಂದ ಮದ್ಯ ಪ್ರಿಯರು ಮುಗಿಬೀಳುತ್ತಿದ್ದು, ದಿನವೂ ಸ್ಟಾಕ್ ಬರುತ್ತಿದ್ದಂತೆ ಕಡಿಮೆ ಬೆಲೆಯ ಮದ್ಯವು ಬಂದಷ್ಟೇ ವೇಗವಾಗಿ ಮಾರಾಟವಾಗುತ್ತಿದೆ.
ಕಳೆದ ತಿಂಗಳು ಸಹ ಬಿಯರ್ ಮಾರಾಟದಲ್ಲಿ ಗಣನೀಯವಾಗಿ ಏರಿಕೆಯಾಗಿತ್ತು. 2022ರ ಏಪ್ರಿಲ್‌ನಲ್ಲಿ 36.84 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ಪ್ರಸಕ್ತ ಏಪ್ರಿಲ್‌ನಲ್ಲಿ ಬರೋಬ್ಬರಿ 38.58 ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿ ಶೇ.4.72ರಷ್ಟುಮಾಸಿಕ ಬೆಳವಣಿಗೆಯಾಗಿದೆ. ರಾಜಕೀಯ ಪಕ್ಷಗಳ ಕೆಲ ಅಭ್ಯರ್ಥಿಗಳು ಚುನಾವಣೆಗೆ ಭಾರೀ ಪ್ರಮಾಣದಲ್ಲಿ ಹಣ ವೆಚ್ಚ ಮಾಡುತ್ತಿದ್ದು, ಇದು ಪರೋಕ್ಷವಾಗಿ ಮದ್ಯ ಮಾರಾಟ ಹೆಚ್ಚಾಗಲು ಕಾರಣವಾಗಿದೆ ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.
ಶೇ.20ಕ್ಕಿಂತ ಹೆಚ್ಚುವರಿ ಮದ್ಯವಿಲ್ಲ: ‘ಮಾದರಿ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಒಂದೊಮ್ಮೆ ಮದ್ಯದಂಗಡಿ ಮಾಲೀಕರು ಹೆಚ್ಚಿನ ಮದ್ಯಕ್ಕೆ ಬೇಡಿಕೆ ಸಲ್ಲಿಸಿದರೂ ಕಳೆದ ವರ್ಷದ ಮಾರಾಟ ಪರಿಗಣಿಸಿ ಶೇ.20ರಷ್ಟು ಹೆಚ್ಚುವರಿ ಸ್ಟಾಕ್‌ಗೆ ಮಾತ್ರ ನಾವು ಅನುಮತಿ ನೀಡುತ್ತಿದ್ದೇವೆ. ಮೇ 15ರ ಬಳಿಕ ಮದ್ಯದಂಗಡಿಯವರು ಹೆಚ್ಚಿನ ಸ್ಟಾಕ್ ಬೇಕಾದರೆ ಪಡೆದುಕೊಳ್ಳಬಹುದು’ ಎಂದು ಅಬಕಾರಿ ಇಲಾಖೆ ಮೂಲಗಳು ಸ್ಪಷ್ಟಪಡಿಸಿವೆ.
ರಾಜಕೀಯ ಪಕ್ಷಗಳ ಬಹಿರಂಗ ಪ್ರಚಾರ ಸಭೆ, ರೋಡ್ ಶೋ ಅಬ್ಬರಕ್ಕೇರಿರುವ ಈ ಸಮಯದಲ್ಲಿ ಹಣವನ್ನೂ ಯಥೇಚ್ಛವಾಗಿ ಖರ್ಚು ಮಾಡುತ್ತಿದ್ದು ಮತದಾರರಿಗೂ ಸಾಕಷ್ಟು‘ಸಂಪನ್ಮೂಲ’ ತಲುಪುತ್ತಿದೆ. ಜೊತೆಗೆ ಮನೆ ಮನೆ ಪ್ರಚಾರ, ಕರಪತ್ರ ಹಂಚಿಕೆ, ವೋಟರ್ ಸ್ಲಿಪ್ ಮನೆಗಳಿಗೆ ತಲುಪಿಸಲೂ ಜನರನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದು, ಇದೆಲ್ಲದರ ಪರಿಣಾಮವೇ ಮದ್ಯಕ್ಕೆ ‘ಡಿಮ್ಯಾಂಡ್’ ಬಂದಿದೆ ಎಂದು ತಿಳಿದು ಬಂದಿದೆ. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಬೆಂಗಳೂರಲ್ಲಿಂದು ಮೋದಿ 26.5 ಕಿ.ಮೀ. ರೋಡ್ ಶೋ: ಸಂಚಾರದಲ್ಲೂ ಬದಲಾವಣೆ
ಚುನಾವಣೆ ನೀತಿ ಸಂಹಿತೆ ನೆಪದಲ್ಲಿ ಅಬಕಾರಿ ಅಧಿಕಾರಿಗಳು ಸನ್ನದುದಾರರಿಗೆ ಹೆಚ್ಚು ಮದ್ಯ ವಿತರಿಸುತ್ತಿಲ್ಲ. ಈಗಾಗಲೇ ನೀವು ನಿಮ್ಮ ಖರೀದಿ ಗುರಿ ಮೀರಿದ್ದೀರಿ ಎಂದು ಮದ್ಯ ನೀಡುತ್ತಿಲ್ಲ. ಬೆಂಗಳೂರು ಸೇರಿದಂತೆ ಎಲ್ಲೆಡೆಯೂ ಮದ್ಯ ಸರಿಯಾಗಿ ಸರಬರಾಜಾಗುತ್ತಿಲ್ಲ.
- ಲೋಕೇಶ್, ಬೆಂಗಳೂರು ಲಿಕ್ಕರ್ ಅಸೋಸಿಯೇಷನ್ ಅಧ್ಯಕ್ಷ