
ಬಳ್ಳಾರಿ (ಮೇ.06): ಭಯೋತ್ಪಾದನೆ ವಿಚಾರಕ್ಕೆ ಬಂದಾಗ ಬಿಜೆಪಿ ಯಾವತ್ತಿದ್ದರೂ ಕಠೋರವಾಗಿ ವರ್ತಿಸುತ್ತದೆ. ಆದರೆ ಕೇವಲ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಭಯೋತ್ಪಾದನೆಗೆ ಪ್ರೋತ್ಸಾಹಿಸಿ, ಆಶ್ರಯ ನೀಡುವ ಜತೆಗೆ ಅದರ ಮುಂದೆ ಕಾಂಗ್ರೆಸ್ ಮಂಡಿಯೂರಿದೆ. ಯಾವಾಗೆಲ್ಲ ದೇಶದಲ್ಲಿ ಭಯೋತ್ಪಾದನೆ ಹತ್ತಿಕ್ಕುವ ಕ್ರಮಗಳಾಗುತ್ತೋ, ಆವಾಗೆಲ್ಲ ಕಾಂಗ್ರೆಸ್‌ಗೆ ಹೊಟ್ಟೆಯುರಿ ಆರಂಭವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ಹೊರವಲಯದ ಸತ್ಯಂ ಕಾಲೇಜು ಮೈದಾನದಲ್ಲಿ ಶುಕ್ರವಾರ ಜರುಗಿದ ನವ ಕರ್ನಾಟಕ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು ಭಯೋತ್ಪಾದನೆ ವಿಚಾರ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕರ್ನಾಟಕವನ್ನು ದೇಶದಲ್ಲಿ ನಂ.1 ರಾಜ್ಯ ಮಾಡಬೇಕಿದ್ದರೆ ಕಾನೂನು, ಸುವ್ಯವಸ್ಥೆ ಸರಿಯಾಗಿರುವುದು ಮತ್ತು ರಾಜ್ಯ ಭಯೋತ್ಪಾದನೆಯಿಂದ ಮುಕ್ತವಾಗಿರುವುದು ಮುಖ್ಯ.
ಬೆಂಗಳೂರಲ್ಲಿಂದು ಮೋದಿ 26.5 ಕಿ.ಮೀ. ರೋಡ್ ಶೋ: ಸಂಚಾರದಲ್ಲೂ ಬದಲಾವಣೆ
ಭಯೋತ್ಪಾದನೆ ಮಾನವತೆ, ಅಭಿವೃದ್ಧಿ ಹಾಗೂ ಜೀವನಮೌಲ್ಯದ ವಿರೋಧಿ. ಇಡೀ ವಿಶ್ವದಲ್ಲಿಯೇ ಭಯೋತ್ಪಾದನೆ ನಿಯಂತ್ರಣ ದೊಡ್ಡ ಸವಾಲಾಗಿದೆ. ದೇಶವು ಈಗಾಗಲೇ ಉಗ್ರರ ದಾಳಿಗಳಿಂದಾಗಿ ಹಲವು ಅಮಾಯಕ ನಾಗರಿಕರನ್ನು ಕಳೆದುಕೊಂಡಿದೆ. ಇಷ್ಟಾದರೂ ಕೇವಲ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಭಯೋತ್ಪಾದನೆ ಮುಂದೆ ಮಂಡಿಯೂರಿದ್ದು ನೋಡಿ ಅಚ್ಚರಿಯಾಗುತ್ತದೆ. ನಾವು ಪ್ರತಿಬಾರಿ ಆತಂಕವಾದದ ವಿರುದ್ಧ ಕ್ರಮ ಕೈಗೊಂಡಾಗ ಕಾಂಗ್ರೆಸ್‌ಗೆ ಹೊಟ್ಟೆಉರಿ ಶುರುವಾಗುತ್ತದೆ.
ಕಾಂಗ್ರೆಸ್ಸಿಗರಿಗೆ ದೇಶ ರಕ್ಷಣೆಯ ಬಗ್ಗೆ ಕಾಳಜಿಯೇ ಇಲ್ಲ. ಬಿಜೆಪಿಯನ್ನು ವಿರೋಧಿಸುವುದಷ್ಟೇ ಅವರ ಕಾರ್ಯ ಎಂದು ಅವರು ಭಾವಿಸಿದಂತಿದೆ. ಇಂಥ ಪಕ್ಷ ಕರ್ನಾಟಕ ಮತ್ತು ಇಲ್ಲಿನ ನಾಗರಿಕರನ್ನು ಜನರನ್ನು ರಕ್ಷಣೆ ಮಾಡಲು ಸಾಧ್ಯವೇ? ಭಯೋತ್ಪಾದನೆಯ ವಾತಾವರಣದಿಂದಾಗಿ ಇಲ್ಲಿನ ಕೈಗಾರಿಕೆಗಳು, ಐಟಿ ಉದ್ಯಮ, ರೈತರು ಮತ್ತು ಶ್ರೀಮಂತ ಸಂಸ್ಕೃತಿಗೆ ಆತಂಕ ಶುರುವಾಗಿದೆ. ಆದರೆ, ಭಯೋತ್ಪಾದನೆ ವಿರುದ್ಧ ಮಾತನಾಡುವ ಧೈರ್ಯವನ್ನೇ ಕಾಂಗ್ರೆಸ್ ಕಳೆದುಕೊಂಡಿದೆ ಎಂದು ಅಸಮಾಧಾನ ಹೊರಹಾಕಿದರು. ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಾಗಿತ್ತು.
ಪ್ರಧಾನಿ ಮೋದಿ ಬೆಂಗ್ಳೂರು ಮೆಗಾ ರೋಡ್ ಶೋಗೆ ಹೈಕೋರ್ಟ್ ಅಸ್ತು
ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಕಾಂಗ್ರೆಸ್ ಭಯೋತ್ಪಾದನೆಗೆ ಪ್ರೋತ್ಸಾಹಿಸಿ, ಆಶ್ರಯ ನೀಡುವ ಜತೆಗೆ ಅದರ ಮುಂದೆ ಮಂಡಿಯೂರಿದೆ. ಭಯೋತ್ಪಾದನೆ ವಿರುದ್ಧ ಮಾತನಾಡುವ ಧೈರ್ಯವನ್ನೇ ಕಾಂಗ್ರೆಸ್ ಕಳೆದುಕೊಂಡಿದೆ
- ನರೇಂದ್ರ ಮೋದಿ, ಪ್ರಧಾನಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.