ನಮ್ಮ ಸರ್ಕಾರ ಜಾರಿಗೆ ತಂದಂತಹ ರೀತಿ ಒಂದೇ ಒಂದು ಕಾರ್ಯಕ್ರಮ ಮಾಡೋಕಾಗಲಿಲ್ಲ ಬಸವರಾಜ ಬೊಮ್ಮಾಯಿಯವರೇ ಬರೀ ಹಣದಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ ವಾಗ್ದಾಳಿ ನಡೆಸಿದರು.
ಶಿಗ್ಗಾವಿ (ನ.10): ಶಿಗ್ಗಾವಿ ಮಹಾಜನತೆಗೆ ಅಭಿನಂದನೆ ಸಲ್ಲಿಸಬೇಕು ಅಂತಾ ಉತ್ಸಾಹದಿಂದ ಬಂದಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ನುಡಿದರು.
ಇಂದು ಶಿಗ್ಗಾವಿಯಲ್ಲಿ ನಡೆದ ಕಾಂಗ್ರೆಸ್ ಬೃಹತ್ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು, ಬೊಮ್ಮಾಯಿಯನ್ನ 4 ಬಾರಿ ಆಯ್ಕೆ ಮಾಡಿದ್ರೂ ಕೂಡಾ ಇಲ್ಲಿ ಲೋಕಸಭಾ ಚುನಾವಣೆಯಲ್ಲಿ 8 ಸಾವಿರ ಅಂತರದಿಂದ ಲೀಡ್ ಕೊಟ್ಟು ಕಾಂಗ್ರೆಸ್ ಗೆಲುವಿಗೆ ಮುನ್ನೋಟ ಬರೆದಿದ್ದೀರಿ. ರಾಜಕೀಯದಲ್ಲಿ ಯಾರೂ ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಚಕ್ರವರ್ತಿಗಳೂ ಮೇಲೆ ಕೆಳಗೆ ಆಗಿದ್ದಾರೆ, ಸೂರ್ಯ ಕೂಡಾ ಮೇಲಿಂದ ಕೆಳಗೆ ಬರ್ತಾನೆ, ಅಧಿಕಾರ ನಶ್ವರ, ಮತದಾರನೇ ಈಶ್ವರ ಅಂತ ನಿಮ್ಮ ಮುಂದೆ ಬಂದಿದ್ದೀವೆ ಪಠಾಣ್ ಅವರನ್ನು ಗೆಲ್ಲಿಸಿಕೊಡಿ, ನಾವು ನಿಮ್ಮ ಋಣ ತೀರಿಸುತ್ತೇವೆ ಎಂದರು.
ಯಡಿಯೂರಪ್ಪ, ಶ್ರೀರಾಮುಲು ವಿರುದ್ಧ ತನಿಖೆಗೆ ಶಿಫಾರಸು: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಆಕ್ರೋಶ
ಶಿಗ್ಗಾವಿ ಕ್ಷೇತ್ರದಲ್ಲಿ ಕೇಂದ್ರ ಸಚಿವರನ್ನು ಆಯ್ಕೆ ಮಾಡಿದ್ದೀರಿ, ರಾಜ್ಯದ ಸಿಎಂ ಆಗಿ ಅವರನ್ನು ಆಯ್ಕೆ ಮಾಡಿದ್ದೀರಿ. ರಾಜ್ಯದ ಉದ್ದಗಲಕ್ಕೂ ಹಲವಾರು ಜನ ಸಿಎಂ ಆಗಿದ್ರು. ಬಹಳ ಜನ ನಾಯಕರು ಸಿಎಂ ಆಗಿಹೋಗಿದ್ದಾರೆ. ವೀರೇಂದ್ರ ಪಾಟೀಲರ ಕಾಲದಲ್ಲಿ ನಾನು ಶಾಸಕನಾಗಿದ್ದೆ, ಅವರು ಇಂದಿರಾಗಾಂಧಿಯವರ ಕಾಲದಲ್ಲಿ ಆಗ ಬಡವರಿಗೆ ಪೆನ್ಷನ್ ಕಾರ್ಯಕ್ರಮ ರೂಪಿಸಿದ್ದರು ಇವೆಲ್ಲ ಇತಿಹಾಸ ಯಾರೂ ಮರೆಯಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಸಿಎಂ ಇದ್ದಾಗ ಯಾರೂ ಹಸಿದುಕೊಂಡು ಇರಬಾರದು ಅಂತ ಅನ್ನಭಾಗ್ಯ ಯೋಜನೆ ತಂದರು. ಈಗಲೂ ಭಾಗ್ಯಗಳ ಸರದಾರ ಎನಿಸಿದ್ದಾರೆ. ನಾನು ಮತ್ತು ಸಿಎಂ ಇಬ್ರೂ ಸೇರಿ ಹೋರಾಟ ಮಾಡಿದ್ದೆವು ಅದರ ಫಲವಾಗಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅವರು ಸಿಎಂ ಆಗಿದ್ದಾರೆ. ನಾನು ಡಿಸಿಎಂ ಆಗಿದ್ದೇನೆ. ಇದಕ್ಕೂ ಮೊದಲು ಅವರು ವಿಪಕ್ಷ ನಾಯಕರಾಗಿದ್ದರು, ನಾನು ಅಧ್ಯಕ್ಷನಾಗಿದ್ದೆ. ಹೋರಾಟದ ಮೂಲಕವೇ ನಾವು ಅಧಿಕಾರಕ್ಕೆ ಬಂದೆವು. ಅಧಿಕಾರಕ್ಕೆ ಬಂದು ಸುಮ್ಮನೆ ಕೂರಲಿಲ್ಲ. ಬಡವರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದೆವು. ಚುನಾವಣೆ ಪೂರ್ವ ಕೊಟ್ಟ ಮಾತಿನಂತೆ ಅಧಿಕಾರಕ್ಕೆ ಬಂದ ವರ್ಷದೊಳಗೆ ಎಲ್ಲ ಯೋಜನೆಗಳನ್ನು ಜಾರಿ ಮಾಡಿದೆವು. ಗೃಹ ಜ್ಯೋತಿ ಯೋಜನೆ ಅಂತ ಬಡವರ ಮನೆ ಬೆಳಗುವ ಕಾರ್ಯಕ್ರಮ ತಂದೆವು. 10 ಕೆಜಿ ಅಕ್ಕಿ ಕೊಡುವ ಯೋಜನೆ ತಂದೆವು ಎಂದರು.
ಭಾರತ್ ಜೋಡೋ ಯಾತ್ರೆ ವೇಳೆ ತಾಯಿಯೊಬ್ಬರು ಸೌತೆಕಾಯಿ ಹಿಡಿದುಕೊಂಡು ಬಂದರು. ಹೊಲದಿಂದ ಬೆಳೆದ ಸವತೆಕಾಯಿ ಅಂತಾ ಅಜ್ಜಿ ರಾಹುಲ್ ಗಾಂಧಿಯವರಿಗೆ ಸೌತೆ ಕಾಯಿ ಕೊಟ್ಟಿದ್ದರು. ಈಗ ಎಲ್ಲ ಬೆಲೆ ಜಾಸ್ತಿಯಾಯ್ತು. ಅದಕ್ಕೆ ಏನು ಮಾಡಬೇಕು ಅಂತಾ ಹೆಣ್ಣುಮಕ್ಕಳನ್ನು ಕೇಳಿದ್ದೇವು. ಆಗ ನಮ್ಮ ಕುಟುಂಬ ಬೆಳೆಸಬೇಕು, ನಮಗೆ ಆರ್ಥಿಕ ಶಕ್ತಿ ಬೇಕು ಅಂದಿದ್ದರು. ಅದಕ್ಕೆ ಅಂತಾನೇ ನಾವು ಗೃಹ ಲಕ್ಷ್ಮೀ ಯೋಜನೆ ಪ್ರಾರಂಭ ಮಾಡಿದೆವು. ಅಂದು ಪ್ರಿಯಾಂಕಾ ಗಾಂಧಿ ಅವರ ಮುಂದೆನೇ ಗ್ಯಾರಂಟಿ ಚೆಕ್ ಗೆ ಸಹಿ ಹಾಕಿ ಮಾತು ಕೊಟ್ಟಿದ್ದೆವು. ಮುಂದೆ ರಾಹುಲ್ ಗಾಂಧಿ ಅವರು ಹೇಳಿದ್ದಕ್ಕೆ ಶಕ್ತಿ ಯೋಜನೆ ಜಾರಿ ಮಾಡಿದೆವು. ಇದೆಲ್ಲ ಸುಳ್ಳಾ? ನಾವು ಇದೆಲ್ಲ ಬಡವರಿಗಾಗಿ ಮಾಡಿದ್ದು ಅಲ್ವ? ಇದೆಲ್ಲಾ ಬಡಜನರಿಗಾಗಿ ಸಿಎಂ ಅವರು ಮಾಡಿದ ಕಾರ್ಯಕ್ರಮಗಳು. ಅದೇ ಬೊಮ್ಮಾಯಿ ಸಿಎಂ ಮಾಡಿದ್ರಿ ಅವರು ಹೇಳಿಕೊಳ್ಳುವ ಒಂದೇ ಒಂದು ಕೆಲಸ ಮಾಡಿದ್ರ? ಜನರಿಗಾಗಿ ಏನೂ ಯೋಜನೆ ಮಾಡಿಲ್ಲ ಅಂದಮೇಲೆ ಯಾಕೆ ಓಟ್ ಕೇಳ್ತಾ ಇದಾರೆ ಬೊಮ್ಮಾಯಿ? ಎಂದು ಪ್ರಶ್ನಿಸುವ ಮೂಲಕ ಬೊಮ್ಮಾಯಿ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ಸರ್ಕಾರ ಜಾರಿಗೆ ತಂದಂತಹ ರೀತಿ ಒಂದೇ ಒಂದು ಕಾರ್ಯಕ್ರಮ ಮಾಡೋಕಾಗಲಿಲ್ಲ ಬಸವರಾಜ ಬೊಮ್ಮಾಯಿಯವರೇ ಬರೀ ಹಣದಿಂದ ರಾಜಕೀಯ ಮಾಡಲು ಸಾಧ್ಯವಿಲ್ಲ. ಯಾರಾದರೂ ಒಬ್ಬ ಕಾರ್ಯಕರ್ತನಿಗೆ ಟಿಕೆಟ್ ಕೊಡಬಹುದಿತ್ತು. ಆದರೆ ಭರತ ಬೊಮ್ಮಾಯಿಗೆ ಟಿಕೆಟ್ ಕೊಟ್ಟುಕೊಂಡಿದ್ದಾರೆ. ನಾನು ವಿಚಾರಿಸಿದೆ ಕ್ಷೇತ್ರದಲ್ಲಿ ಬೊಮ್ಮಾಯಿ ಬಳಿ ಹೋಗಬೇಕಾದರೆ ಏಜೆಂಟ್ ಮೂಲಕ ಹೋಗಬೇಕಂತೆ. ಕುಮಾರಸ್ವಾಮಿ ದೇವೆಗೌಡರು ನಮ್ಮ ಸರ್ಕಾರ ಕಿತ್ತಾಕಿಬಿಡ್ತಾರಂತೆ. ಅಲ್ಲ ಕಿತ್ತಾಕಿಬಿಡೋಕೆ ಕಾಂಗ್ರೆಸ್ ಸರ್ಕಾರ ಕಡ್ಲೆಕಾಯಿ ಗಿಡಾನಾ? ಕುಮಾರಸ್ವಾಮಿ ವಿಜಯೇಂದ್ರ ನಿಮಗೆ ಹೇಳ್ತಾ ಇದೀನಿ , ನಿಮಗೆ ಈ ಸರ್ಕಾರ ಕಿತ್ತಾಕೋಕೆ ಆಗಲ್ಲ, ಸಾಧ್ಯವೇ ಇಲ್ಲ ಎಂದು ಸವಾಲು ಹಾಕಿದರು.
'ಮಿಸ್ಟರ್ ಕೆರೆ ಕಳ್ಳ ಚೆಲುವರಾಯಸ್ವಾಮಿ ನೀನೊಬ್ಬ ಖತರ್ನಾಕ್ ಕಳ್ಳ ಎಂಬುದು ರಾಜ್ಯಕ್ಕೆ ಗೊತ್ತು': ಜೆಡಿಎಸ್ ವಾಗ್ದಾಳಿ
ಕೊಟ್ಟ ಕುದುರೆ ಏರದವನು ಧೀರನೂ ಅಲ್ಲ ಶೂರನೂ ಅಲ್ಲ. ಅಧಿಕಾರದಲ್ಲಿದ್ದಾಗ ಏನೂ ಹರಿಯಲು ಆಗಲಿಲ್ಲ. ಈಗ ಹರಿತೀವಿ ಅಂತ ಅಂದ್ರೆ ಏನು ಹೇಳೋದು? ನಾನು ಅದಕ್ಕೆ ಹೇಳೋದು ಕಮಲ ಕೆರೆಯಲ್ಲಿದ್ರೆ ಚೆಂದ, ತೆನೆ ಹೊಲದಲ್ಲಿದ್ರೆ ಚೆಂದ ಕೈ ಅಧಿಕಾರದಲ್ಲಿದ್ರೆ ಚೆಂದ. ಹೀಗಾಗಿ ದಯವಿಟ್ಟು ನಮ್ಮ ಅಭ್ಯರ್ಥಿಗೆ ಕ್ಷೇತ್ರದ ಜನರು ಆಶೀರ್ವಾದ ಮಾಡಬೇಕು. ಯಾಸೀರ್ ಖಾನ್ ಪಠಾಣ್ ಗೆ ಮತ ನೀಡುವಂತೆ ಡಿಕೆಶಿ ಮನವಿ ಮಾಡಿದರು.