ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು.ತೆನೆಯೊತ್ತ ಮಹಿಳೆ ತೆನೆ ಬಿಸಾಕಿ ಹೋದಳು. ಕರ್ನಾಟಕ ಪ್ರಬುದ್ಧವಾಯಿತು. ಕರ್ನಾಟಕ ಸಮೃದ್ಧವಾಯಿತು ಎಂದು ಪ್ರಾಸವಾಗಿ ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.
ರಾಮನಗರ (ಫೆ.26): ಐದು ಬೆರಳು ಸೇರಿ ಕೈ ಮುಷ್ಠಿಯಾಯಿತು. ಐದು ಗ್ಯಾರಂಟಿ ಸೇರಿ ಕೈ ಗಟ್ಟಿಯಾಯಿತು. ಇದನ್ನು ನೋಡಿದ ಕಮಲ ಉದುರಿ ಹೋಯಿತು.ತೆನೆಯೊತ್ತ ಮಹಿಳೆ ತೆನೆ ಬಿಸಾಕಿ ಹೋದಳು. ಕರ್ನಾಟಕ ಪ್ರಬುದ್ಧವಾಯಿತು. ಕರ್ನಾಟಕ ಸಮೃದ್ಧವಾಯಿತು ಎಂದು ಪ್ರಾಸವಾಗಿ ಹೇಳುವ ಮೂಲಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ ಪ್ರತಿಪಕ್ಷಗಳಿಗೆ ಟಾಂಗ್ ನೀಡಿದರು.
ಬಿಡದಿಯ ಅವರಗೆರೆಯಲ್ಲಿ ಹಮ್ಮಿಕೊಂಡಿದ್ದ ಗೃಹಲಕ್ಷ್ಮೀ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಮನೆಗೂ ೨೦೦ ಯೂನಿಟ್‌ವರೆಗೂ ಉಚಿತ ವಿದ್ಯುತ್ ಸಿಗುತ್ತಿದೆ. ಮನೆಯೊಡತಿಗೆ ಪ್ರತಿ ತಿಂಗಳು ೨ ಸಾವಿರ ನೀಡಲಾಗುತ್ತಿದೆ. ಮಹಿಳೆಯರು ಸರ್ಕಾರಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ನಿರುದ್ಯೋಗಿ ಯುವಕರಿಗೆ ಉದ್ಯೋಗ ಭತ್ಯೆ ನೀಡಲಾಗುತ್ತಿದೆ. ಅನ್ನಭಾಗ್ಯ ಯೋಜನೆಯಲ್ಲಿ ೫ ಕೆ.ಜಿ ಅಕ್ಕಿ ಉಳಿದ ೫ ಕೆ.ಜಿ ಅಕ್ಕಿಯ ಹಣ ನೀಡಲಾಗುತ್ತಿದೆ. ನಮ್ಮ ಯೋಜನೆಗಳಿಂದ ದೇವಾಲಯಗಳಲ್ಲಿ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದ್ದು, ಮಹಿಳೆಯರು ಸರ್ಕಾರ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಹೆಸರಲ್ಲಿ ಪೂಜೆ ಮಾಡಿಸುತ್ತಿದ್ದಾರೆ. ದೇವಾಲಯದ ಹುಂಡಿಗಳು ತುಂಬುತ್ತಿವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದರು ಎಂದರು.
ನನ್ನ ಉಸಿರಿರುವರೆಗೂ ನಿಮ್ಮ ಸೇವೆ
ರಾಮನಗರ ಜಿಲ್ಲೆ ಮಾದರಿ ಜಿಲ್ಲೆಯಾಗಿ ಪರಿವರ್ತಿಸಲು ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದೇವೆ. ನನ್ನ ಉಸಿರಿರುವರೆಗೂ ನಿಮ್ಮ ಸೇವೆ ಮಾಡುತ್ತೇವೆ. ನಿಮ್ಮೆಲ್ಲರಿಗೂ ನಾವು ಅಭಿವೃದ್ಧಿಯ ಭರವಸೆ ನೀಡುತ್ತೇವೆ. ಹತ್ತಾರು ಕಾರ್ಯಕ್ರಮದ ಮೂಲಕ ನಿಮ್ಮ ಆಸ್ತಿ ಮೌಲ್ಯ ಹೆಚ್ಚಾಗಬೇಕು. ನಾವೆಲ್ಲಾ ಬೆಂಗಳೂರು ಜಿಲ್ಲೆಯವರು. ನಮ್ಮ ಸ್ವಾಭಿಮಾನದಿಂದ ನಿಮಗೆ ಉದ್ಯೋಗ ಸೃಷ್ಟಿ ಆಗಬೇಕು. ನಾನು ಬೆಂಗಳೂರಿಗೆ ಮಂತ್ರಿ, ಮೆಟ್ರೋಗೂ ನಾನೇ ಮಂತ್ರಿ. ಶೀಘ್ರದಲ್ಲೇ ನಿಮ್ಮ ಬಿಡದಿಗೆ ಮೆಟ್ರೋ ಬರಲಿದೆ. ಗ್ರೇಟರ್ ಬೆಂಗಳೂರಿಗೆ ನಿಮ್ಮ ಬಿಡದಿ ಸೇರುತ್ತೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಿಸಿದರು.
ಬಿಜೆಪಿಯ ಅರಗ ಜ್ಞಾಜೇಂದ್ರ ಅರ್ಧ ಜ್ಞಾನೇಂದ್ರ:
ಬಿಜೆಪಿಯ ಅರಗ ಜ್ಞಾನೇಂದ್ರ ನಮ್ಮ ಗ್ಯಾರಂಟಿಗಳನ್ನು 420 ಅಂದವ್ನೆ. ಅವನು ಅರ್ಧ ಜ್ಞಾನೇಂದ್ರ, ದಡ್ಡ ಜ್ಞಾನೇಂದ್ರ! ಎಂದು ಮಾಜಿ ಸಚಿವ ಅರಗ ಜ್ಞಾನೇಂದ್ರಗೆ ಟೀಕಿಸಿದರು. ಅಲ್ಲದೆ, ನಮ್ಮ ಗ್ಯಾರಂಟಿಗಳು 420 ಆದರೆ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಕಾರ್ಯಕರ್ತರಿಗೆ ಈ ಯೋಜನೆಗಳ ಪ್ರಯೋಜನ ಪಡೆದುಕೊಳ್ಳದಂತೆ ಕರೆ ನೀಡಲಿ ಎಂದು ಸವಾಲು ಹಾಕಿದರು.
ನಮ್ಮದು ಹೆಣ್ಣನ್ನು ಗೌರವಿಸುವ ಸಂಸ್ಕೃತಿ:
ನಾರಿ ದೇಶದ ಶಕ್ತಿ. ನಾವು ಭೂಮಿಯನ್ನು ತಾಯಿ ಎಂದು ಕರೆಯುತ್ತೇವೆ. ಯಾವುದೇ ಹಳ್ಳಿಗೆ ಹೋದರೂ ಅಲ್ಲಿ ಗ್ರಾಮ ದೇವತೆ ಇರುತ್ತಾಳೆ. ನಮಗೆ ಆಮಂತ್ರಣ ನೀಡುವಾಗ ಆಮಂತ್ರಣ ಪತ್ರದಲ್ಲಿ ಮೊದಲು ಶ್ರೀಮತಿ ಎಂದು ಹಾಕಿರುತ್ತಾರೆ. ಇದು ನಮ್ಮ ಸಂಸ್ಕೃತಿ. ಈ ದೇಶದಲ್ಲಿ ಹೆಣ್ಣಿಗೆ ಗೌರವ ನೀಡುವ ಸಂಸ್ಕೃತಿ ಇದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಅದರಂತೆ ನಾವು ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ನಮ್ಮ ನಾಡಧ್ವಜ ಕೆಂಪು, ಹಳದಿ ಬಣ್ಣದಿಂದ ಕೂಡಿದೆ. ಅಂದರೆ ಅರಶಿನ - ಕುಂಕುಮ ಸೌಭಾಗ್ಯದ ಸಂಕೇತ. ಮಹಿಳೆಯರು ನಮ್ಮ ರಾಜ್ಯದ ಸೌಭಾಗ್ಯ ಎಂದು ನಮ್ಮ ಸರ್ಕಾರ ಈ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡಿದೆ. ಆರ್ಥಿಕವಾಗಿ ಶಕ್ತಿ ತುಂಬಲು ನಾವು ಈ ಯೋಜನೆ ನೀಡಿದ್ದೇವೆ ಎಂದರು.