* ಕಾಂಗ್ರೆಸ್‌ನಿಂದ ಪಾದಯಾತ್ರೆ ಮಾಡಲು ತಿರ್ಮಾನ
* ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ
* ಡಿಸೆಂಬರ್‌ನಲ್ಲಿ ಪಾದಯಾತ್ರೆ ಮಾಡುವುದಾಗಿ ಹೇಳಿದ ಸಿದ್ದರಾಮಯ್ಯ
ಬೆಂಗಳೂರು, (ನ.07): ಮೇಕೆದಾಟು ಯೋಜನೆ (Mekedatu Project) ವಿಚಾರವಾಗಿ ಕಾಂಗ್ರೆಸ್ (Congress) ಪಾದಯಾತ್ರೆ ಮಾಡಲು ತಿರ್ಮಾನಿಸಿದೆ.
ಈ ಬಗ್ಗೆ ಕೆಪಿಸಿಸಿ (KPCC) ಕಚೇರಿಯಲ್ಲಿ ಇಂದು (ನ.07) ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ (Siddaramaiah) ಮತ್ತು ಡಿ ಕೆ ಶಿವಕುಮಾರ್ (DK Shivakumar), ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಿದೆ. ನಮ್ಮ ಜಾಗದಲ್ಲಿ ಯೋಜನೆ ಜಾರಿಮಾಡಲು, ಕಾನೂನಾತ್ಮಕವಾಗಿ ಯೋಜನೆ ಮಾಡಲು ನಮಗೆ ಅವಕಾಶವಿದೆ. ಹೀಗಾಗಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆ ಮಾಡ್ತೇವೆ. ಕೂಡಲೇ ಕೇಂದ್ರ ಪರಿಸರ ಇಲಾಖೆ ಇದಕ್ಕೆ ಕ್ಲಿಯರೆನ್ಸ್ ಕೊಡಬೇಕು. ಕರ್ನಾಟಕ ಸರ್ಕಾರ ಕೂಡಲೇ ಯೋಜನೆ ಆರಂಭಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
Karnataka Politics: ದಳಪತಿಗಳಿಗೆ ಮತ್ತೊಂದು ಶಾಕ್ ಕೊಟ್ಟ ಜಿಟಿ ದೇವೇಗೌಡ
ಮೇಕೆದಾಟು ಕುಡಿವ ನೀರಿನ ಯೋಜನೆಗೆ ಡಿಪಿಆರ್ ಮಾಡಿದ್ದೆವು. ನಮ್ಮ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಸಿದ್ಧಪಡಿಸಿ ಪರಿಸರ ಇಲಾಖೆಗೆ ಕಳುಹಿಸಿಕೊಟ್ಟಿದ್ದೆವು. ತಮಿಳುನಾಡು ಸರ್ಕಾರ ಸುಮ್ಮನೆ ಕ್ಯಾತೆ ತೆಗೆಯುತ್ತಿದೆ. ಮೇಕೆದಾಟು ಯೋಜನೆಯಿಂದ 2 ರಾಜ್ಯಗಳಿಗೂ ನೆರವಾಗುತ್ತೆ. ಕರ್ನಾಟಕ, ತಮಿಳುನಾಡು ರಾಜ್ಯದ ಜನರಿಗೆ ಸಹಾಯವಾಗುತ್ತೆ. ತಮಿಳುನಾಡಿಗೆ ನೀರು ಬೇಕೆಂದರೆ ಇಲ್ಲಿಂದಲೂ ಹರಿಸಬಹುದು ಎಂದರು.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತೇವೆ. ಡಿಸೆಂಬರ್ ಮೊದಲ ವಾರದಲ್ಲಿ ಪಾದಯಾತ್ರೆ ಮಾಡುತ್ತೇವೆ. ಮೇಕೆದಾಟುನಿಂದ ಬೆಂಗಳೂರಿಗೆ ಪಾದಯಾತ್ರೆ ಮಾಡುತ್ತೇವೆ. ಎಷ್ಟು ದಿನ ಪಾದಯಾತ್ರೆ ಎಂಬುದನ್ನು ಶೀಘ್ರದಲ್ಲೇ ತಿಳಿಸ್ತೇವೆ. ಇದು ವೋಟಿಗಾಗಿ ಮಾಡುತ್ತಿರುವ ಪಾದಯಾತ್ರೆ ಅಲ್ಲ. ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿ ನೀಡುತ್ತಿಲ್ಲ. ರಾಜ್ಯ ಸರ್ಕಾರ ಸುಮ್ಮನೆ ಕುಳಿತಿದೆ. ಹೀಗಾಗಿ ಮೇಕೆದಾಟು ಯೋಜನೆ ಜಾರಿಗಾಗಿ ಹೋರಾಟ ಕೈಗೊಂಡಿದ್ದೇವೆ. ರಾಜಕೀಯ ಕಾರಣಕ್ಕಾಗಿ ತಮಿಳುನಾಡು ಯೋಜನೆಗೆ ವಿರೋಧ ಮಾಡ್ತಿದೆ. ಕಾಂಗ್ರೆಸ್ ಯಾವಾಗಲೂ ಕರ್ನಾಟಕ, ಕನ್ನಡಿಗರ ಪರ ಇರುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.
ಕೇಂದ್ರದ ಮೇಲೆ ಒತ್ತಡ ತರಲು ಪಾದಯಾತ್ರೆ
ಇನ್ನು ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಜಕೀಯ ಒತ್ತಡದಿಂದ ಮೇಕೆದಾಟು ಯೋಜನೆ ಜಾರಿ ಮಾಡಿಲ್ಲ. ಮೇಕೆದಾಟು ಯೋಜನೆ ಜಾರಿಗಾಗಿ ಕಾಂಗ್ರೆಸ್‌ನಿಂದ ಹೋರಾಟ ಮಾಡುತ್ತೇವೆ. ಡಿಸೆಂಬರ್ ಮೊದಲ ಅಥವಾ 2ನೇ ವಾರದಲ್ಲಿ ಬೃಹತ್ ಹೋರಾಟ ಕೈಗೊಳ್ಳುತ್ತೇವೆ. ಮೇಕೆದಾಟಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಕಾರ್ಯಕ್ರಮ ಇದೆ. ಯಾರು ಬೇಕಾದ್ರೂ ಹೋರಾಟದಲ್ಲಿ ಕೈ ಜೋಡಿಸಬಹುದು. ಮೇಕೆದಾಟು ಯೋಜನೆಗೆ ಕೇಂದ್ರದಿಂದ ಎನ್‌ಒಸಿ ಬೇಕು ಅಷ್ಟೇ. ಕೇಂದ್ರದ ಮೇಲೆ ಒತ್ತಡ ತರಲು ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಆಫ್‌ಲೈನ್, ಆನ್‌ಲೈನ್‌ನಲ್ಲಿ ಸದಸ್ಯರ ನೋಂದಣಿ
ಬೆಳಗ್ಗೆಯಿಂದ ಹಿರಿಯ ನಾಯಕರು, ಎಲ್ಲ ಘಟಕಗಳ ಜತೆ ಸಭೆ ನಡೆಸಲಾಗಿದೆ. ಪಕ್ಷ ಸಂಘಟನೆ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನವನ್ನ ನಡೆಸುತ್ತೇವೆ. ಪ್ರತಿ ಕ್ಷೇತ್ರದಲ್ಲೂ ಪಕ್ಷದವತಿಯಿಂದ ಜನ ಜಾಗೃತಿ ಅಭಿಯಾನ ಮಾಡುತ್ತೇವೆ. ಕೇಂದ್ರ-ರಾಜ್ಯಸರ್ಕಾರದ ಲೋಪಗಳ ಬಗ್ಗೆ ಜಾಗೃತಿ ಮೂಡಿಸ್ತೇವೆ ಎಂದು ಹೇಳಿದರು.
12 ವರ್ಷಗಳ ನಂತರ ಎಐಸಿಸಿ ಚುನಾವಣಾ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಆಫ್‌ಲೈನ್, ಆನ್‌ಲೈನ್‌ನಲ್ಲಿ ಸದಸ್ಯರ ನೋಂದಣಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಬೆಂಗಳೂರಿನಲ್ಲಿ ನ.14ರಂದು ಸದಸ್ಯರ ನೋಂದಣಿಗೆ ಚಾಲನೆ ಕೊಡಲಾಗುತ್ತದೆ. ಕಾಂಗ್ರೆಸ್‌ನ ಹಳೇ ಸದಸ್ಯರೂ ಸದಸ್ಯತ್ವ ನವೀಕರಣ ಮಾಡಬೇಕು. ಹೊಸ ಸದಸ್ಯರಾಗಲು 5 ರೂಪಾಯಿ ನೀಡಿ ಅರ್ಜಿ ತುಂಬಬೇಕು. ಹಳೇ ಸದಸ್ಯರು 100 ರೂಪಾಯಿ ನೀಡಿ ಅರ್ಜಿ ಪಡೆಯಬೇಕು. ನೆಹರುರವರ ಹುಟ್ಟುಹಬ್ಬಕ್ಕೆ ಎಲ್ಲಾ ಘಟಕಗಳನ್ನು ಆಹ್ವಾನಿಸುತ್ತೇವೆ. ದೇಶಕ್ಕೆ ಸ್ವಾತಂತ್ರ್ಯ ಕೊಟ್ಟ ಕಾಂಗ್ರೆಸ್‌ಗೆ ಇದು ದೊಡ್ಡ ಕಾರ್ಯಕ್ರಮ ಎಂದು ತಿಳಿಸಿದರು.
ನಾವು ಒಗ್ಗಟ್ಟಾಗಿ ಹೋಗಿದ್ದಕ್ಕೆ ಹಾನಗಲ್‌ನಲ್ಲಿ ಗೆಲುವು ಲಭಿಸಿದೆ. ಒಗ್ಗಟ್ಟು ಇಲ್ಲದಿದ್ದರೆ ಸಿಂದಗಿಯಲ್ಲಿ ಆದಂತೆ ಆಗುತ್ತದೆ. ಸಿಂದಗಿಯಲ್ಲಿ ಅಭ್ಯರ್ಥಿ ಬದಲಾಯಿಸಿದ್ರೂ ಗೆಲುವು ಸಿಕ್ಕಿಲ್ಲ. ಕಾರ್ಯಕರ್ತರಲ್ಲಿ ಒಗ್ಗಟ್ಟು ಇಲ್ಲದಿರುವುದೇ ಇದಕ್ಕೆ ಕಾರಣ. ಮುಂದಿನ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರುತ್ತದೆ. ಸ್ಥಳೀಯ ಚುನಾವಣೆಗಳನ್ನು ನಾವು ಎದುರಿಸಬೇಕಾಗುತ್ತೆ. ನಾವೆಲ್ಲರೂ ಒಗ್ಗಟ್ಟಾಗಿ ಹೋದರೆ ಕಾಂಗ್ರೆಸ್ ಗೆಲುವು ಖಚಿತ ಎಂದು ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಒಗ್ಗಟ್ಟಿನ ಜಪ ಮಾಡಿದರು.