ಧರಣಿ ಪದಕ್ಕೆ ಕಾಂಗ್ರೆಸ್‌ ನಾಯಕರಿಂದ ಹೊಸ ವ್ಯಾಖ್ಯಾನ: ಮುನಿರಾಜುಗೌಡ

Published : Feb 21, 2022, 08:37 AM IST
ಧರಣಿ ಪದಕ್ಕೆ ಕಾಂಗ್ರೆಸ್‌ ನಾಯಕರಿಂದ ಹೊಸ ವ್ಯಾಖ್ಯಾನ: ಮುನಿರಾಜುಗೌಡ

ಸಾರಾಂಶ

ಧರಣಿ ಎಂದರೆ ಏನು ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನು ಕಾಂಗ್ರೆಸ್‌ನ ನಾಯಕರು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ (Muniraju Gowda) ವ್ಯಂಗ್ಯ ಮಾಡಿದ್ದಾರೆ

ಬೆಂಗಳೂರು (ಫೆ. 21): ಧರಣಿ ಎಂದರೆ ಏನು ಎಂಬುದಕ್ಕೆ ಹೊಸ ವ್ಯಾಖ್ಯಾನವನ್ನು ಕಾಂಗ್ರೆಸ್‌ನ ನಾಯಕರು ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ತುಳಸಿ ಮುನಿರಾಜುಗೌಡ (Muniraju Gowda) ವ್ಯಂಗ್ಯ ಮಾಡಿದ್ದಾರೆ. ಕಾಂಗ್ರೆಸ್‌ ಮುಖಂಡರು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಹೇಳಿಕೆಯನ್ನು ಖಂಡಿಸುವ ಭರಾಟೆಯಲ್ಲಿ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ತಿಲಾಂಜಲಿಯಿಟ್ಟಿದ್ದಾರೆ.

ಧರಣಿ ಅಂದರೆ ಅಸಲಿಗೆ ಅರ್ಥ ಗೊತ್ತಿಲ್ಲದ ನಾಯಕರು, ಪ್ರಜಾಪ್ರಭುತ್ವವನ್ನು ರಾಜ್ಯದಲ್ಲಿ ಹೇಗೆ ಎತ್ತಿ ಹಿಡಿಯುತ್ತಾರೆ? ಧರಣಿ ಅಂದರೆ, ಒಂದು ಕಡೆ ಕುಳಿತು, ಆಗಿರುವ ಅಥವಾ ಆಗುತ್ತಿರುವ ಕಾರ್ಯವನ್ನು ಖಂಡಿಸುವುದು. ಅದನ್ನು ಒಪ್ಪದಿರುವುದು. 

ಆದರೆ, ಈಶ್ವರಪ್ಪ (KS Eshwarappa) ಅವರ ಹೇಳಿಕೆ ವಿರುದ್ಧ ದನಿ ಎತ್ತಿ ಧರಣಿ ನಡೆಸುತ್ತಿರುವ ನಾಯಕರು ಬೇಕಾದಾಗಲೆಲ್ಲ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸದನದಿಂದ ಹೊರ ಹೋಗುತ್ತಿದ್ದಾರೆ, ಒಳ ಬರುತ್ತಿದ್ದಾರೆ. ಅಭಿನಂದನಾ ಕಾರ್ಯಕ್ರಮಗಳಲ್ಲಿಯೂ ಭಾಗಿಯಾಗುತ್ತಿದ್ದಾರೆ. ಇದನ್ನು ಧರಣಿ ಎನ್ನಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್‌ ಕ್ಲಾಸ್ ಬಳಿಕ ಕೊನೆಗೂ ಈಶ್ವರಪ್ಪ ಬೆಂಬಲಿಗರ ವಿರುದ್ಧ FIR

ಇದು ಬಿಜೆಪಿ ಸರ್ಕಾರ ಹಾಗೂ ಸರ್ಕಾರದ ಅಂಗಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಸಚಿವರ ವರ್ಚಸ್ಸು ಸಹಿಸಲಾರದೇ ಪಿತೂರಿ ಮಾಡಿ ಷಡ್ಯಂತ್ರದ ರೂಪಿಸುವ ಹುನ್ನಾರವಷ್ಟೇ. ನಮ್ಮ ಸಚಿವ ಈಶ್ವರಪ್ಪ ಅವರು ಹಿರಿಯರು, ಅನುಭವಿಗಳು. ರಾಜ್ಯದ ಹಿಂದುಳಿದ ಸಮುದಾಯ ನಾಯಕರಲ್ಲಿ ಒಬ್ಬರು. ಪ್ರಜಾಪ್ರಭುತ್ವಕ್ಕೆ ತಲೆಬಾಗುವವರು. ಅವರು ವಿರುದ್ಧ ಕಾಂಗ್ರೆಸ್‌ ಸುಖಾಸುಮ್ಮನೆ ಧರಣಿಗಿಳಿದಿದೆ ಅಷ್ಟೇ. ಇದಕ್ಕೆಲ್ಲ ರಾಜ್ಯದ ಜನ ಮುಂದಿನ ದಿನಗಳಲ್ಲಿ ತಕ್ಕ ಉತ್ತರ ನೀಡುತ್ತಾರೆ ಎಂದು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

ಕಾಂಗ್ರೆಸ್‌ ಜೀವನ ಪರ್ಯಂತ ಧರಣಿ ಮಾಡಿದ್ರೂ ನಾನು ಕುಗ್ಗಲ್ಲ: ಕಾಂಗ್ರೆಸ್‌(Congress) ಪಕ್ಷದವರು ಜೀವನ ಪರ್ಯಂತ ಧರಣಿ ಮಾಡಿದರೂ ನಾನು ಕುಗ್ಗುವುದಿಲ್ಲ, ಬಗ್ಗುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ(KS Eshwarappa) ಕಡ್ಡಿ ಮುರಿದಂತೆ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನೊಬ್ಬ ರಾಷ್ಟ್ರಭಕ್ತ. ನಾನು ಯಾವುದೇ ತಪ್ಪು ಮಾಡಿಲ್ಲ. ನಾನ್ಯಾಕೆ ರಾಜೀನಾಮೆ ಕೊಡಬೇಕು? ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿದರು.
ತಪ್ಪು ಮಾಡಿದ್ದು ಡಿ.ಕೆ.ಶಿವಕುಮಾರ್‌(DK Shivakumar) ಅವರೇ ಹೊರತು ನಾನಲ್ಲ. 

ಇದನ್ನೂ ಓದಿNational Flag Row ರಾಜೀನಾಮೆಗೆ ಪಟ್ಟು ಹಿಡಿದಿರುವ ವಿಚಾರದ ಬಗ್ಗೆ 13 ಸಾರಿ ಹೇಳಿದ್ದೇನೆ, ಈಶ್ವರಪ್ಪ ಟಾಂಗ್

ಶಿವಮೊಗ್ಗದಲ್ಲಿ ರಾಷ್ಟ್ರಧ್ವಜವನ್ನು(National Flag) ಇಳಿಸಿ ಭಗವಾ ಧ್ವಜ ಹಾರಿಸಲಾಗಿದೆ ಎಂಬ ಸುಳ್ಳು ಹೇಳಿದ್ದು ಶಿವಕುಮಾರ್‌. ಈಗ ರಾಷ್ಟ್ರಧ್ವಜ ದುರುಪಯೋಗ ಮಾಡಿಕೊಂಡು ಧರಣಿ ಮಾಡುತ್ತಿದ್ದಾರೆ. ಇದು ರಾಷ್ಟ್ರಧ್ವಜಕ್ಕೆ ಮಾಡಿದ ಅಪಮಾನ. ಹೀಗಾಗಿ, ಶಿವಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಅವರನ್ನು ಬಂಧಿಸಬೇಕು ಎಂದು ಈಶ್ವರಪ್ಪ ಒತ್ತಾಯಿಸಿದರು.

ಕಲಾಪಕ್ಕೆ ಅಡ್ಡಿ ಮಾಡುತ್ತಿರುವವರನ್ನು ಹೊರಹಾಕಿ: ಜನರ ತೆರಿಗೆ ಹಣವನ್ನು ಪೋಲು ಮಾಡುತ್ತಿರುವ ಮತ್ತು ಕಲಾಪದ(Session) ಸಮಯ ಹಾಳು ಮಾಡುತ್ತಿರುವವರನ್ನು ಕೂಡಲೇ ಸದನದಿಂದ ಹೊರಹಾಕಿ ಅಥವಾ ಅಧಿವೇಶನದ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದ(Karnataka) ಜ್ವಲಂತ ಸಮಸ್ಯೆಗಳ ಕುರಿತು ಮತ್ತು ರೈತರು, ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ಚರ್ಚೆ ಮಾಡುವುದನ್ನು ಬಿಟ್ಟು ಕೇಸರಿ ಬಾವುಟ(Saffron Flag) ವಿಷಯವನ್ನಿಟ್ಟುಕೊಂಡು ಎರಡು ದಿನಗಳ ಕಲಾಪವನ್ನು ಹಾಳು ಮಾಡಿದರು. ಸಚಿವರೊಬ್ಬರ ರಾಜೀನಾಮೆ ಪಡೆಯಬೇಕು ಎಂಬುದನ್ನೇ ಪ್ರತಿಷ್ಠೆ ಮಾಡಿಕೊಂಡು ಜನರ ನಿರೀಕ್ಷೆಗಳನ್ನು ಅವಹೇಳನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ