* ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ಪ್ರಾರಂಭ
* ರಾಮನಗರದಿಂದ ಎರಡನೇ ಹಂತದ ಪಾದಯಾತ್ರೆ ಮಾಡಲಿರುವ ಕಾಂಗ್ರೆಸ್
* ಈ ಸಂಬಂಧ ಪೂರ್ವಭಾವಿ ಸಭೆ ಮಾಡಿದ ಡಿಕೆ ಸುರೇಶ್
ಬೆಂಗಳೂರು, (ಫೆ.20): ಮೇಕೆದಾಟು ಯೋಜನೆ (Mekedatu Project) ಅನುಷ್ಠಾನಕ್ಕೆ ಆಗ್ರಹಿಸಿ ಕಾಂಗ್ರೆಸ್ ‘ನಮ್ಮ ನೀರು, ನಮ್ಮ ಹಕ್ಕು' ಪಾದಯಾತ್ರೆಯನ್ನು(Congress Padayatre) ಫೆಬ್ರವರಿ 27 ರಂದು ರಾಮನಗರದಿಂದ ಪುನರಾರಂಭಿಸಲಿದೆ.
ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ವಿಚಾರವಾಗಿ ಚನ್ನಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಂಸದ ಡಿ.ಕೆ.ಸುರೇಶ್ ಪೂರ್ವಭಾವಿ ಸಭೆ ನಡೆಸಿದರು.
ವಿಧಾನಸೌಧದಲ್ಲಿ ಈ ಕುರಿತಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಸಂಗಮದಿಂದ ಜ.9 ರಂದು ಆರಂಭಿಸಿ ಮಧ್ಯೆ ನಿಲ್ಲಿಸಿದ್ದ ಮೇಕೆದಾಟು ಪಾದಯಾತ್ರೆ ಮುಂದುವರಿಸಲು ತೀರ್ಮಾನಿಸಿದ್ದೇವೆ ಎಂದು ಹೇಳಿದರು.
ಇನ್ನು ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸುರೇಶ್, ಇದೇ ತಿಂಗಳ 27 ರಿಂದ ಮೇಕೆದಾಟು ಪಾದಯಾತ್ರೆ ಪ್ರಾರಂಭ ಮಾಡ್ತೇವೆ. ಬೆಳಗ್ಗೆ 9 ಗಂಟೆಗೆ ರಾಮನಗರದಿಂದ ಪ್ರಾರಂಭ ಮಾಡ್ತೇವೆ. ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯದ ಕೈ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಸ್ಪಷ್ಟಪಡಿಸಿದರು.
ಮೊದಲ ದಿನ ರಾಮನಗರ - ಬಿಡದಿ. ಎರಡನೇ ದಿನ ಬಿಡದಿ - ಕೆಂಗೇರಿವರೆಗೆ ನಡೆಯಲಿದೆ. ಮೊದಲು ಬೆಂಗಳೂರಿನಲ್ಲೇ 5 ದಿನ ಮಾಡಲು ನಿರ್ಧಾರ ಮಾಡಿದ್ದೆವು.ಈಗ ಬಜೆಟ್ ಇರುವ ಕಾರಣ 3 ದಿನ ಬೆಂಗಳೂರಿನಲ್ಲಿ ಮಾಡ್ತೇವೆ ಎಂದು ವಿವರಿಸಿದರು.
ಒಟ್ಟು 5 ದಿನಗಳ ಕಾಲ ಪಾದಯಾತ್ರೆ ನಡೆಯಲಿದೆ, ಬೆಂಗಳೂರಿನಲ್ಲಿಯೂ ಕೆಲ ಮಾರ್ಗ ಬದಲಾವಣೆ ಮಾಡ್ತೇವೆ. ಕಳೆದ ಬಾರಿ ಬಂದ ಜನರಿಗೆ ಆತಿಥ್ಯ ಮಾಡಿದ್ದೆವು. ಈಗಲೂ ಸಹ ಅದರ ಸಿದ್ಧತೆಗಾಗಿ ಸಭೆ ಮಾಡ್ತಿದ್ದೇವೆ ಎಂದು ತಿಳಿಸಿದರು.
ಸಿಎಂ ದೆಹಲಿಗೆ ಬಂದಾಗ ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮಾಡಿದ್ದೆ. ಅವರು ನಾವು ಮಾಡ್ತೇವೆಂದಿದ್ದರು, ಆದರೆ ಇದುವರೆಗೆ ಯಾವುದೇ ಚಕಾರ ಎತ್ತಿಲ್ಲ. ಅವರು ಕೇಂದ್ರ ಸರ್ಕಾರದ ಅನುಮತಿ ತರುವುದು ಅವರ ಜವಾಬ್ದಾರಿ. ಹಾಗಾಗಿ ಇವತ್ತು ರಾಜ್ಯ - ಕೇಂದ್ರ ಸರ್ಕಾರಕ್ಕೆ ಪಾದಯಾತ್ರೆ ಮೂಲಕ ಒತ್ತಾಯ ಮಾಡ್ತಿದ್ದೇವೆ ಎಂದು ಹೇಳಿದರು.
ಯಾವುದೇ ಅಡೆ೦ತಡೆ ಬಂದರೂ ಸಹ ಪಾದಯಾತ್ರೆ ಮುಂದುವರೆಸುತ್ತೇವೆ. ಕೊರೋನಾ ಇತ್ತು ಎಂದು ನಾವು ಪಾದಯಾತ್ರೆ ಮೊಟಕು ಮಾಡಿದ್ದೆವು. ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮೊಟಕು ಮಾಡಿದ್ದೆವು. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬೆಂಬಲ ಸಿಗಲಿದೆ. ಬೆಂಗಳೂರಿನ ಜನರು ಈ ಪಾದಯಾತ್ರೆ ಗೆ ಪಕ್ಷಾತೀತವಾಗಿ ಬೆಂಬಲ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕುಮಾರಸ್ವಾಮಿಗೆ ನಯವಾಗಿ ಟಾಂಗ್ ಕೊಟ್ಟ ಡಿ.ಕೆ.ಸುರೇಶ್ , ಅವರು ಪ್ರಧಾನಮಂತ್ರಿ ಕುಟುಂಬದವರು. ಅವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಅವರಿಗಿರುವ ಬುದ್ಧಿ, ತಿಳುವಳಿಕೆ ಈ ರಾಜ್ಯದಲ್ಲಿ ಯಾರಿಗೂ ಇಲ್ಲ. ಅವರು ಏನು ಮಾತನಾಡಿದರೂ ಕೇಳಬೇಕಷ್ಟೇ, ಪ್ರಶ್ನೆ ಮಾಡಬಾರದು. ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಏನ್ ಹೇಳ್ತಾರೋ ಕೇಳಬೇಕು, ಪ್ರಶ್ನೆ ಮಾಡಬಾರದು ಎಂದರು.
ಇದರಲ್ಲಿ ಟೆಕ್ನಿಕಲ್ ಸಮಸ್ಯೆ ಏನು ಇಲ್ಲ . ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಿದೆ. ಇವತ್ತು ರಾಜ್ಯ - ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೇ . ಎನ್ವಿರಾನ್ಮೆಂಟ್ ಕ್ಲಿಯರೆನ್ಸ್ ಕೊಡಲು ಅವಕಾಶ ಇರುವುದು ಕೇಂದ್ರ ಸರ್ಕಾರಕ್ಕೆ ಎಂದು ಹೇಳಿದರು.
ಕಾವೇರಿ ಪ್ರಾಧಿಕಾರ ರಚನೆಯಾಗಿದೆ, ಅದರಲ್ಲಿ ಕುಡಿಯುವ ನೀರಿನ ಯೋಜನೆ ಎಂದು ಕೇಂದ್ರ ಸರ್ಕಾರ ಅನುಮೋದನೆ ಕೊಡಬೇಕಿದೆ. ಎರಡೂ ಕಡೆ ಬಿಜೆಪಿ ಸರ್ಕಾರ ಇರೋದ್ರಿಂದ ಒತ್ತಡ ಮಾಡ್ತಿದ್ದೇವೆ. ಜನರ ಒತ್ತಾಯದ ಮುಂದೆ ಬೇರೆ ಏನು ಇಲ್ಲ, ಮಾಡಲೇಬೇಕಾಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.