ಬೈ ಎಲೆಕ್ಷನ್‌ನಲ್ಲಿ ಕಂಬಳಿ ಜಪಾಪಟಿ: ಸಿಟಿ ರವಿಗೆ ಸಿದ್ದು ಗುದ್ದು, ಬುಸ್‌ ಎಂದ ಎಂಟಿಬಿ

By Suvarna News  |  First Published Oct 27, 2021, 6:55 PM IST

* ಉಪಚುನಾವಣೆಯಲ್ಲಿ ಕಂಬಳಿ ವಿಚಾರವಾಗಿ ವಾಕ್ಸಮರ
* ಸಿಟಿ ರವಿ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು
* ಕಂಬಳಿ ಸುದ್ದಿ ಎತ್ತಿದ ಸಿದ್ದರಾಮಯ್ಯ ವಿರುದ್ಧ ಎಂಟಿಬಿ ನಾಗರಾಜ್ ಕಿಡಿ


ವಿಜಯಪುರ, (ಅ.27): ಕಂಬಳಿ ಹಾಗೂ ಮುಸ್ಲಿಂ (Muslim) ಟೋಪಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ (CT Ravi) ಟ್ವೀಟ್‌ಗೆ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ತಿರುಗೇಟು ಕೊಟ್ಟಿದ್ದಾರೆ.

ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ, ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದು ಸಿದ್ದರಾಮಯ್ಯನವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಶ್ನೆ ಮಾಡಿದರು. ಇದು ಭಾರೀ ಚರ್ಚೆಗೆ ಗ್ರಾಸವಗಿತ್ತು. ಅಲ್ಲದೇ ಸಿಟಿ ರವಿ ವಿರುದ್ಧ ಸಿದ್ದು ಅಭಿಮಾನಿಗಳು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

Latest Videos

undefined

'ಕಂಬಳಿ ಹಾಕಲು ಕುರುಬರೇ ಆಗಬೇಕು ಅಂತಾದ್ರೆ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೇ

ಇನ್ನು ಇದೀಗ ಈ  ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರು ಇಂದು (ಅ.27) ವಿಜಯಪುರದಲ್ಲಿ (Vijayapura) ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಾನು ಕಂಬಳಿ ಹಾಕಿಕೊಳ್ಳುತ್ತೇನೆ. ಮುಸಲ್ಮಾನರ ಟೋಪಿಯನ್ನು ಧರಿಸುತ್ತೇನೆ, ಕ್ರಿಶ್ಚಿಯನ್ನರ ಟೋಪಿಯನ್ನೂ ಧರಿಸುತ್ತೇನೆ, ಹಿಂದೂಗಳ ಟೋಪಿಯನ್ನು ಹಾಕಿಕೊಳ್ಳುತ್ತೇನೆ. ಇಲ್ಲವೇ ಗಾಂಧಿ ಟೋಪಿಯನ್ನಾದರೂ ಧರಿಸುತ್ತೇನೆ. ನನ್ನ ಪ್ರಶ್ನಿಸಲು ಇವನ್ಯಾರು ಎಂದು ಸಿಟಿ ರವಿ ಪ್ರಶ್ನಿಸಿದರು. 

 ವಿಧಾನಸೌಧದ ಮುಂದೆ ಸಿದ್ದರಾಮಯ್ಯ ಕಂಬಳಿ ನೇಯ್ದು ತೋರಿಸುವಂತೆ ಕುಮಾರಸ್ವಾಮಿ (Kumaraswamy) ಸವಾಲಿಗೆ ಪ್ರತಿಕ್ರಿಯಿಸಿದ ಸಿದ್ದು,  ನಾನು ಕಂಬಳಿ ನೇಯ್ದಿದ್ದೇನೆ ಅಂತ ಯಾವತ್ತೂ ಹೇಳಿಲ್ಲ, ನಮ್ಮ ಮನೆಯಲ್ಲಿ ಕುರಿ ತುಪ್ಪಳ ಇರುತಿತ್ತು, ಅದನ್ನು ಸಮದಾಯವರಿಗೆ ಕೊಟ್ಟು ಅವರಿಂದ ಕಂಬಳಿ ಪಡೆಯುತ್ತಿದ್ದೆವು. ನಾನು ಕಂಬಳಿ ನೇಯ್ದಿರಿವುದಾಗಿ ಹೇಳಿದರೆ ಅದು ಸುಳ್ಳಾಗುತ್ತದೆ, ಆದರೆ ಕುರಿ ಮೇಯಿಸಿದ್ದೇನೆ ಎಂದು ಹೇಳಿದರು.

ಮುಸ್ಲಿಂ ಸಮುದಾಯದ ಯಾವುದೋ ಒಂದು ಸಾಮಾರಂಭದಲ್ಲಿ ಸಿದ್ದರಾಮಯ್ಯನವರು ಆ ಸಮುದಾಯದ ಟೋಪಿಯನ್ನು ಧರಿಸಿ ಭಾಗವಹಿಸಿರುವ ಫೋಟೋ ಹಾಕಿ, 'ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?' ಅಂತ ಸಿ ಟಿ ರವಿ  ಟ್ವೀಟ್ ಮಾಡಿದ್ದರು. 

ಇನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಕಂಬಳಿ ಹಾಕಿಕೊಂಡು ಚುನಾವಣೆ ಪ್ರಚಾರ ಮಾಡಿರುವ ವಿಚಾರ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಚರ್ಚೆ ಆಗ್ತಿದೆ. ಮೊನ್ನೆಯಷ್ಟೇ ಕಿಡಿಕಾರಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಕಂಬಳಿ ಹಾಕಿಕೊಂಡ ತಕ್ಷಣ ಆ ಗೌರವ ಬರುತ್ತಾ..? ಎಂದು ಕಿಡಿಕಾರಿದ್ದರು.

ಎಂಟಿಬಿ ನಾಗರಾಜ್ ಕಿಡಿ
ಇದೇ ಕಂಬಳಿ ವಿಚಾರಕ್ಕೆ ಸಚಿವ ಎಂಟಿಬಿ ನಾಗರಾಜ್ (MTB Nagaraj) ಪ್ರತಿಕ್ರಿಯಿಸಿದ್ದು, ಪ್ರೀತಿಯಿಂದ ಕಂಬಳಿ ಹಾಕಿದ್ರೆ ತಪ್ಪೇನು? ಉಪಚುನಾವಣೆಯಲ್ಲಿ ಕಂಬಳಿ ವಿಚಾರ ದೊಡ್ಡ ಪ್ರಚಾರ ಆಗ್ತಿದೆ. ಕಂಬಳಿಯನ್ನ ಕನಕದಾಸರ ಭಕ್ತರು, ಅನುಯಾಯಿಗಳು ಬಳಸುತ್ತಿದ್ರು, ಹಿಂದಿನ ಕಾಲದಲ್ಲಿ ಕುರಿ ಉಣ್ಣೆಯಿಂದ ತಯಾರದ ಕಂಬಳಿ ಎಲ್ಲರು ಬಳಸುತ್ತಿದ್ರು. ನಮ್ಮ ಸಮುದಾಯದವರು ಸಿಎಂಗೆ ಪ್ರೀತಿಯಿಂದ ಕಂಬಳಿಯನ್ನು ಮೈಮೇಲೆ ಹಾಕಿದ್ದಾರೆ, ಅದನ್ನು ‌ತಪ್ಪೆಂದು ಭಾವಿಸಬಾರದು, ಸಾಮಾನ್ಯವಾಗಿ ಎಲ್ಲಾ ಸಮುದಾಯದವರು ಕುರಿ ಮೇಯಿಸುತ್ತಾರೆ, ರೈತಾಪಿ ಜನರೆಲ್ಲ ಕುರಿ, ಹಸು ಮೇಕೆ ಮೇಯಿಸುತ್ತಾರೆ ಹಾಗಂತ ಅದಕ್ಕೆ ಬೇರೆ-ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಸಿದ್ದರಾಮಯ್ಯರ ವಿರುದ್ಧ ಕಿಡಿಕಾರಿದ್ದಾರೆ.

ಒಟ್ಟಿನಲ್ಲಿ ಹಾನಗಲ್ ಸಿಂದಗಿ ಉಪಚುನಾವಣೆ ಕಣದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಆರೋಪ-ಪ್ರತ್ಯಾರೋಪಗಳು ಜೋರಾಗಿವೆ. ಅಲ್ಲದೇ ನಾಯಕರ ಟೀಕೆಗಳು ವೈಯಕ್ತಿಕ್ಕೆ ಇಳಿದಿರುವುದು ದುರಂತ.

ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಇದೇ ಅಕ್ಟೋಬರ್ 30ರಂದು ನಡೆಯಲಿದ್ದು, ನವೆಂಬರ್ 02ರಂದು ಫಲಿತಾಂಶ ಪ್ರಕಟವಾಗಲಿದ್ದು, ಯಾರಿಗೆ ಗೆಲುವು ಒಲಿಯಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

click me!