
ಬಾಗಲಕೋಟೆ, (ಅ.27): ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ (By Election) ಪ್ರಚಾರದ ಮಧ್ಯೆ ನಾಯಕರ ಮಾತಿನ ಸಮರ ತಾರಕಕ್ಕೇರಿದೆ.
ಯಡಿಯೂರಪ್ಪ (BS Yediyurappa) ಕಣ್ಣೀರಿನಲ್ಲಿ ಬಿಜೆಪಿ ಕೊಚ್ಚಿಕೊಂಡು ಹೋಗುತ್ತೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು (Nalin Kumar Kateel) ತಿರುಗೇಟು ನೀಡಿದ್ದಾರೆ.
ಹಾನಗಲ್ ಸಮೀಕ್ಷೆ: ಸಜ್ಜನರ, ಮಾನೆ ನಡುವೆ ನೇರ ಸ್ಪರ್ಧೆ
ವಿಜಯಪುರದಲ್ಲಿ (Vijayapura) ಇಂದು (ಅ.27) ಸುದ್ದಿಗಾರರೊಂದಿಗೆ ಮಾತನಾಡಿದ ಕಟೀಲ್, ಬಿಎಸ್ ಯಡಿಯೂರಪ್ಪನವರ ಕಣ್ಣೀರಿಗಿಂತ ಮಲ್ಲಿಕಾರ್ಜುನ ಖರ್ಗೆ (Mallikarjuna Kharge), ಪರಮೇಶ್ವರ್ (Parameshwar) ಕಣ್ಣೀರು ಹೆಚ್ಚಿದೆ. ಮುಖ್ಯಮಂತ್ರಿ ಮಾಡಲಿಲ್ಲ ಅಂತ ಖರ್ಗೆ, ಸೋಲಿಸಿದಿರಿ ಅಂತ ಪರಮೇಶ್ವರ್ ಕಣ್ಣೀರು ಹೆಚ್ಚಿದೆ ಎಂದು ಡಿಕೆಶಿಗೆ ಟಾಂಗ್ ಕೊಟ್ಟರು.
ಖರ್ಗೆ, ಪರಮೇಶ್ವರ್ ಕಣ್ಣೀರಿನಲ್ಲಿ ಕಾಂಗ್ರೆಸ್ ಸರ್ವನಾಶವಾಗಿದೆ. ಅದಕ್ಕೇನು ಉತ್ತರ ಕೊಡುತ್ತೀರಿ? ಎಂದು ಪ್ರಶ್ನಿಸಿದ ನಳಿನ್ ಕುಮಾರ್ ಕಟೀಲು, ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಬಗ್ಗೆ ಡಿಕೆಶಿಗೆ ಚಿಂತೆಯಿಲ್ಲ. ಚಿಂತೆ ಇರುವುದು ಸಿದ್ದರಾಮಯ್ಯ ಬಗ್ಗೆ ಮಾತ್ರ. ಸಿದ್ದರಾಮಯ್ಯ, ಡಿಕೆಶಿ ಸಿಎಂ ಕುರ್ಚಿಗೆ ಟವೆಲ್ ಹಾಕಿ ಕುಳಿತಿದ್ದಾರೆ. ಬೈಎಲೆಕ್ಷನ್ ಮುಗಿದ ಮೇಲೆ ಕಾಂಗ್ರೆಸ್ ಎರಡು ಹೋಳಾಗುತ್ತದೆ ಎಂದು ಭವಿಷ್ಯ ನುಡಿದರು.
ಸಿದ್ದರಾಮಯ್ಯ ಸಿಎಂ ಆಗಲು ಡಿಕೆ ಶಿವಕುಮಾರ್ ಯಾವ ಕಾರಣಕ್ಕೂ ಬಿಡಲ್ಲ. ಡಿಕೆಶಿ ಅಧ್ಯಕ್ಷರಾಗಿ ಮುಂದುವರಿಯಲು ಸಿದ್ದರಾಮಯ್ಯ ಬಿಡಲ್ಲ. ಇದು ಕಾಂಗ್ರೆಸ್ ಎಂದು ಕುಟುಕಿದರು.
ಉಪಚುನಾವಣೆಯಲ್ಲಿ ಗೋಣಿಚೀಲದಲ್ಲಿ ಹಣ ತಂದು ಹಂಚಿದ್ದಾರೆ ಎಂಬ ಕಾಂಗ್ರೆಸ್ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಟೀಲ್, ನೀವು ಸುದೀರ್ಘ ಅವಧಿಯಲ್ಲಿ ರಾಜಕಾರಣ ಮಾಡಿದ್ದೀರಿ. ಹಾಗಾದರೆ ಎಲ್ಲ ಚುನಾವಣೆಯಲ್ಲೂ ಹಣ ಹಂಚಿ ಗೆದ್ರಾ? ಇದಕ್ಕೆಲ್ಲ ಉತ್ತರ ಅವರೆ ಕೊಡಲಿ. ಬಾದಾಮಿಯಲ್ಲಿ ಸಿದ್ದರಾಮಯ್ಯ ಹಾಗೂ ಚನ್ನಪಟ್ಟಣದಲ್ಲಿ ಡಿಕೆ ಶಿವಕುಮಾರ್ ಯಾವ ರೀತಿ ಗೆದ್ದಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸುದೀರ್ಘ ಆಡಳಿತದಲ್ಲಿ 4 ಕೊಡುಗೆ ಕೊಟ್ಟಿದೆ. ಒಂದು ಭಯೋತ್ಪಾದನೆ, ಎರಡನೆಯದು ಭ್ರಷ್ಟಾಚಾರ. ಮೂರನೇಯದ್ದು ಬಡತನ, ನಾಲ್ಕನೆಯದ್ದು ನಿರುದ್ಯೋಗ ಅಂತ ಕಾಂಗ್ರೆಸ್ ವಿರುದ್ಧ ನಳಿನ್ ಕುಮಾರ್ ಆರೋಪ ಮಾಡಿದ್ದಾರೆ. ಮೋದಿ ಭಯೋತ್ಪಾದನೆ, ಭ್ರಷ್ಟಾಚಾರ ಮುಕ್ತ ಮಾಡಿದ್ದಾರೆ. ಬಡತನ ನಿರ್ಮೂಲನೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದರು.
ಇನ್ನು ಜೆಡಿಎಸ್ ಬಗ್ಗೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜೆಡಿಎಸ್ ಒಂದು ಕುಟುಂಬದ ಪಾರ್ಟಿಯಾಗಿದೆ. ಹೀಗಾಗಿ ಆ ಕುಟುಂಬವೇ ಪ್ರಚಾರ ಮಾಡುತ್ತಿದೆ ಲೇವಡಿ ಮಾಡಿದರು.
ಕುಮಾರಸ್ವಾಮಿಯನ್ನು ಸಿಎಂ ಮಾಡಿದ್ದು ಯಾರು ಸ್ವಾಮಿ? ಬಿಬಿಎಂಪಿಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಯಾರು? ಮೈಸೂರು ಪಾಲಿಕೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ರಿ. ಹೀಗಾಗಿ ಕಾಂಗ್ರೆಸ್ ಪಕ್ಷದ ಬಿ ಟೀಂ ಜೆಡಿಎಸ್ ಪಕ್ಷ. ಕಾಂಗ್ರೆಸ್ ಪಕ್ಷದಲ್ಲಿ ಇರೋರು ಜೆಡಿಎಸ್ನಲ್ಲೂ ಇರ್ತಾರೆ. ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಪಕ್ಷ ಬದಲಿಸುತ್ತಿರುತ್ತಾರೆ ಎಂದರು.
ಜೆಡಿಎಸ್ನ ಬಿ ಟೀಂ ಕಾಂಗ್ರೆಸ್ ಎಂದು ಸಿದ್ದರಾಮಯ್ಯ ಎಲ್ಲೇ ಇದ್ದರೂ ಈ ಮಾತು ಹೇಳಬೇಕು. ಸಿದ್ದರಾಮಯ್ಯ ಜೆಡಿಎಸ್ ಪಕ್ಷದಿಂದ ಬಂದಿರುವ ಹಿನ್ನೆಲೆ ಜೆಡಿಎಸ್ನ ಬಿ ಟೀಂ ಕಾಂಗ್ರೆಸ್ ಎಂದು ಹೇಳಬೇಕು. ಸಿದ್ದರಾಮಯ್ಯ ಎಲ್ಲಿ ನಾಯಕರಾಗ್ತಾರೋ ಅದನ್ನ ತುಳೀತಾರೆ. ಅವರು ನಾಯಕರಾಗಿ ಬೆಳೆದ ಪಕ್ಷವನ್ನ ಅವರು ತುಳೀತಾರೆ. ಈ ಹಿಂದೆ ಇಂದಿರಾ ಗಾಂಧಿಯನ್ನು ಕೂಡ ಟೀಕಿಸಿದ್ದರು. ಬೇಕಿದ್ದರೆ ಇತಿಹಾಸ ತೆಗೆದು ನೋಡಲಿ ಎಂದು ಹೇಳಿದರು.
ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆ ಇದೇ ಅಕ್ಟೋಬರ್ 30ರಂದು ನಡೆಯಲಿದ್ದು, ನವೆಂಬರ್ 02ರಂದು ಫಲಿತಾಂಶ ಪ್ರಕಟವಾಗಲಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.