ಸಿಎಂ ಬೊಮ್ಮಾಯಿ ಇಂದು ದೆಹಲಿಗೆ : 4 ಸಚಿವ ಸ್ಥಾನ ಭರ್ತಿ ಬಗ್ಗೆ ಚರ್ಚೆ?

By Kannadaprabha NewsFirst Published Sep 7, 2021, 8:35 AM IST
Highlights
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ
  • ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ವರಿಷ್ಠರ ಜತೆ ಸಮಾಲೋಚನೆ 

 ಬೆಂಗಳೂರು (ಸೆ.07):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ದೆಹಲಿಗೆ ತೆರಳುತ್ತಿದ್ದು, ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನಗಳನ್ನು ಭರ್ತಿ ಮಾಡುವ ಕುರಿತು ವರಿಷ್ಠರ ಜತೆ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.

ಮಂಗಳವಾರ ಬೆಳಗ್ಗೆ 11.30ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ. ಮಧ್ಯಾಹ್ನ 2.30ರ ಸುಮಾರಿಗೆ ದೆಹಲಿಗೆ ತಲುಪುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಸೇರಿದಂತೆ ಇತರೆ ವರಿಷ್ಠರನ್ನು ಭೇಟಿ ಮಾಡಿ ಸಂಪುಟ ವಿಸ್ತರಣೆ ಕುರಿತು ಚರ್ಚೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಖಾತೆ ಕ್ಯಾತೆ ತೆಗೆದಿದ್ದ ಆನಂದ್ ಸಿಂಗ್‌ಗೆ ಬಂಪರ್ ಗಿಫ್ಟ್

ಅಲ್ಲದೇ, ಕೆಲವು ಸಚಿವರನ್ನು ಭೇಟಿ ಮಾಡುವ ಅವರು ರಾಜ್ಯದ ಯೋಜನೆಗಳಿಗೆ ಅನುಮತಿ ನೀಡುವ ಬಗ್ಗೆ ಮನವಿ ಮಾಡುವ ಸಾಧ್ಯತೆಯೂ ಇದೆ. ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆಯೂ ಕೇಂದ್ರದ ಸಚಿವರಲ್ಲಿ ಪ್ರಸ್ತಾಪಿಸುವ ತ್ವರಿತಗತಿಯಲ್ಲಿ ಯೋಜನೆ ಅನುಷ್ಠಾನದ ಬಗ್ಗೆಯೂ ಚರ್ಚಿಸಲಿದ್ದಾರೆ ಎನ್ನಲಾಗಿದೆ. ನಿಗಮ-ಮಂಡಳಿಗಳಿಗೆ ಹೊಸದಾಗಿ ನೇಮಕ ಮಾಡುವ ಕುರಿತು ಸಹ ವರಿಷ್ಠರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ. ದೆಹಲಿಯಲ್ಲಿ ವರಿಷ್ಠರ ಜತೆ ಚರ್ಚೆ ನಡೆಸಿ ಬುಧವಾರ ರಾತ್ರಿ ಬೆಂಗಳೂರಿಗೆ ಹಿಂತಿರುಗಲಿದ್ದಾರೆ.

ಇದೇ ವೇಳೆ ಬೊಮ್ಮಾಯಿ ಅವರು ಬುಧವಾರ ದೆಹಲಿಯಲ್ಲಿ ನಡೆಯಲಿರುವ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್‌ ಜೋಶಿ ಅವರ ಪುತ್ರಿಯ ವಿವಾಹ ಆರತಕ್ಷತೆ ಸಮಾರಂಭದಲ್ಲೂ ಪಾಲ್ಗೊಳ್ಳಲಿದ್ದಾರೆ. ಹುಬ್ಬಳ್ಳಿ ಮತ್ತು ಬೆಂಗಳೂರಿನ ಸಮಾರಂಭಗಳಲ್ಲೂ ಭಾಗಿಯಾಗಿದ್ದ ಬೊಮ್ಮಾಯಿ ಅವರು ದೆಹಲಿಯಲ್ಲೂ ಭಾಗವಹಿಸುತ್ತಿದ್ದಾರೆ.

click me!