* ಮೂರು ನಗರ ಪಾಲಿಕೆ ಚುನಾವಣೆ ಫಲಿತಾಂಶ
* ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ
* ಫೇಸ್‌ಬುಕ್‌ನಲ್ಲಿ ವಿವರವಾಗಿ ಬರೆದುಕೊಂಡು ಸಿದ್ದರಾಮಯ್ಯ
ಬೆಂಗಳೂರು, (ಸೆ.06): ಮೂರು ನಗರ ಪಾಲಿಕೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಕಲಬುರಗಿಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ರೆ, ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ಸಾಧನೆ ಮಾಡಿದೆ. ಇನ್ನು ಬೆಳಗಾವಿಯಲ್ಲಿ ನಿರೀಕ್ಷೆಗೆ ತಕ್ಕಂತೆ ಫಲಿತಾಂಶ ಬಂದಿಲ್ಲ.
ಇನ್ನು ಈ ಫಲಿತಾಂಶಗಳ ಬಗ್ಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದು ಈ ಕೆಳಗಿನಂತಿದೆ.
ಕಲಬುರಗಿ ಪಾಲಿಕೆ ಎಲೆಕ್ಷನ್ ರಿಸಲ್ಟ್: ಬಿಜೆಪಿಗೆ ಶಾಪವಾಯ್ತಾ ಶುಕ್ರವಾರದ ಮತದಾನ?
ಸಿದ್ದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದು ಹೀಗೆ..
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಮ್ಮ ಪಕ್ಷಕ್ಕೆ ಮತ ನೀಡಿದ ಎಲ್ಲಾ ಮತದಾರರಿಗೆ ಹಾಗೂ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಧನ್ಯವಾದಗಳು. ಚುನಾವಣೆಯಲ್ಲಿ ಜಯಗಳಿಸಿದ ನಮ್ಮ ಪಕ್ಷದ ಅಭ್ಯರ್ಥಿಗಳಿಗೂ ಅಭಿನಂದನೆಗಳು. ಸೋಲು-ಗೆಲುವುಗಳು ನಿರೀಕ್ಷಿತ, ಹೋರಾಟ ನಿರಂತರ.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷಕ್ಕೆ ಇಂತಹ ಚುನಾವಣೆಗಳಲ್ಲಿ ಹೆಚ್ಚು ಅನುಕೂಲಗಳಿವೆ. ಬಿಜೆಪಿಯ ಸಂಪನ್ಮೂಲಕ್ಕೆ ನಾವು ಸಾಟಿಯಲ್ಲ, ಅದೇ ರೀತಿ ಆಡಳಿತ ಯಂತ್ರವನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ. ಕಲ್ಬುರ್ಗಿಯಲ್ಲಿ ನಮ್ಮ ಶಾಸಕಿಯ ಸಂಬಂಧಿ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಿದ್ದರೂ ನಮ್ಮ ಸಾಧನೆ ಸಮಾಧಾನಕರ.
ಬೆಳಗಾವಿ ಮಹಾನಗರ ಪಾಲಿಕೆಯ ಫಲಿತಾಂಶ ಅನಿರೀಕ್ಷಿತ. 58 ಸ್ಥಾನಗಳಲ್ಲಿ 9 ಸ್ಥಾನಗಳನ್ನು ಮಾತ್ರ ನಾವು ಗೆದ್ದಿದ್ದು, ಬಿಜೆಪಿ ಪಕ್ಷ ಬಹುಮತ ಗಳಿಸಿದೆ. ಇಲ್ಲಿನ ಪಾಲಿಕೆ ವ್ಯಾಪ್ತಿಯಲ್ಲಿ ನಮ್ಮ ಪಕ್ಷದ ಶಾಸಕರು ಹಾಗೂ ಸಂಸದರು ಇಲ್ಲದಿರುವುದು ಕೂಡಾ ನಮ್ಮ ಹಿನ್ನಡೆಗೆ ಕಾರಣ.
ಹುಬ್ಬಳ್ಳಿ ಧಾರವಾಡದಲ್ಲಿ ಬಹುಮತಗಳಿಸುವ ನಿರೀಕ್ಷೆಯಿತ್ತು. ಅತಂತ್ರ ಫಲಿತಾಂಶ ಬಂದಿದೆ. ಕೇಂದ್ರ ಸಚಿವರು, ಮುಖ್ಯಮಂತ್ರಿಗಳು, ಹಲವು ಮಂದಿ ಶಾಸಕರ ಹೊರತಾಗಿಯೂ ಬಿಜೆಪಿಯದ್ದು ದೊಡ್ಡ ಗೆಲುವಲ್ಲ, ಕೆಲವೇ ಕ್ಷೇತ್ರಗಳ ಅಂತರದಲ್ಲಿ ನಾವು ಬಹುಮತ ಕಳೆದುಕೊಂಡದ್ದು ಕಡಿಮೆ ಸಾಧನೆಯೂ ಅಲ್ಲ.
ಮಹಾನಗರ ಪಾಲಿಕೆಗಳ ಚುನಾವಣಾ ಫಲಿತಾಂಶ ಜನರ ಒಲವು ಬಿಜೆಪಿ ಪರವಾಗಿರುವುದನ್ನು ತೋರಿಸುತ್ತದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆ ಅವರ ರಾಜಕೀಯ ಜ್ಞಾನದ ಕೊರತೆಯನ್ನು ತೋರಿಸುತ್ತದೆ. ಬೆಳಗಾವಿ ಬಿಟ್ಟರೆ ಬೇರೆಲ್ಲಿ ಬಿಜೆಪಿ ಬಹುಮತ ಪಡೆದಿದೆಯಂತೆ?
ನಾನು ಚುನಾವಣಾ ಪ್ರಚಾರಕ್ಕೆ ಹೋಗದಿರುವುದು ಚುನಾವಣೆಗೆ ಮೊದಲೇ ಸೋಲೊಪ್ಪಿಕೊಂಡಂತೆ ಎಂಬ ನಳಿನ್ ಕುಮಾರ್ ಕಟೀಲ್ ಹೇಳಿಕೆ ಎಂದಿನಂತೆ ಒಂದು ಬಾಲಿಶ ಹೇಳಿಕೆ. ಅವರ ಮಾತಿನ ಪ್ರಕಾರ ಬಿಜೆಪಿ ಗೆಲುವಿನ ಕಾರಣ ನಾನು ಎಂದಾಗುವುದಿಲ್ಲವೇ?
ನಾನು ಈ ಬಾರಿ ಮಾತ್ರವಲ್ಲ ಹಿಂದೆಯೂ ಪಾಲಿಕೆ ಚುನಾವಣೆಯ ಪ್ರಚಾರಕ್ಕೆ ಹೋಗಿಲ್ಲ. ನಳಿನ್ ಕುಮಾರ್ ಕಟೀಲ್, ಬಿಜೆಪಿಯ ರಾಜ್ಯಾಧ್ಯಕ್ಷರಲ್ಲವೇ? ಅವರು ಎಷ್ಟು ಕಡೆ ಪ್ರಚಾರಕ್ಕೆ ಹೋಗಿದ್ದಾರೆ. ಅವರನ್ನು ಅವರ ಪಕ್ಷದಲ್ಲಿ ಕೇಳುವವರಿಲ್ಲ. ನನ್ನನ್ನು ಟೀಕಿಸಿದರೆ ಪ್ರಚಾರ ಸಿಗುತ್ತೆ ಎಂದು ಟೀಕಿಸುತ್ತಾರೆ ಅಷ್ಟೆ.
ತಾಲಿಬಾನಿಗಳಿಂದ ಭಾರತದಲ್ಲಿ ತೈಲ ಬೆಲೆಯೇರಿಕೆ ಆಗುತ್ತಿದೆ ಎಂಬ ಅರವಿಂದ ಬೆಲ್ಲದ್ ಹೇಳಿಕೆ ದಡ್ಡತನದ ಪರಮಾವಧಿ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾಗದೆ ಇದ್ದಾಗ ದೇಶದೊಳಗೆ ಮಾತ್ರ ತೈಲಬೆಲೆ ಏರಿದರೆ ಅದಕ್ಕೆ ತಾಲಿಬಾನ್ ಹೇಗೆ ಕಾರಣವಾಗುತ್ತೆ?
ತಾಲೂಕು ಹಾಗೂ ಜಿಲ್ಲಾ ಪಂಚಾಯತ ಚುನಾವಣೆಗೆ ಸಂಬಂಧಿಸಿದ ಮೀಸಲಾತಿ ಆಯೋಗ ರಚನೆಯ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ. ಈಗಲೇ ಚುನಾವಣೆ ನಡೆಸಲು ಬಿಜೆಪಿ ಸರ್ಕಾರಕ್ಕೆ ಧೈರ್ಯವಿಲ್ಲ. ಸೋಲಿನ ಭಯದಿಂದ ಚುನಾವಣೆ ಮುಂದೂಡಲು ಈ ರೀತಿಯ ನಾಟಕ ಮಾಡುತ್ತಿದೆ ಎಂದು ಬರೆದುಕೊಂಡಿದ್ದಾರೆ.