Karnataka Politcs: ಸಂಪುಟ ಕಸರತ್ತು ಬಿರುಸು: ಸಚಿವರ ಕೈಬಿಡುವ ಬಗ್ಗೆ ನಡ್ಡಾ ಕೂಡ ಒಲವು..!

Published : Apr 07, 2022, 04:31 AM IST
Karnataka Politcs: ಸಂಪುಟ ಕಸರತ್ತು ಬಿರುಸು: ಸಚಿವರ ಕೈಬಿಡುವ ಬಗ್ಗೆ ನಡ್ಡಾ ಕೂಡ ಒಲವು..!

ಸಾರಾಂಶ

*   ದಿಲ್ಲಿಯಲ್ಲಿ ನಡ್ಡಾ ಜತೆ ಬೊಮ್ಮಾಯಿ ಒಂದೂವರೆ ತಾಸು ಮಾತುಕತೆ *   ಚೆಂಡು ಅಮಿತ್‌ ಅಂಗಳಕ್ಕೆ *  ಇಂದು ದಿಲ್ಲಿಯಿಂದ ಸಿಎಂ ವಾಪಸ್‌  

ಬೆಂಗಳೂರು(ಏ.07):  ಸಚಿವ ಸಂಪುಟ(Cabinet Expansion) ಕಸರತ್ತಿಗೆ ಸಂಬಂಧಿಸಿದಂತೆ ಚಟುವಟಿಕೆಗಳು ಆರಂಭಗೊಂಡಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ(JP Nadda) ಅವರೊಂದಿಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದ್ದಾರೆ.

ದೆಹಲಿ ಪ್ರವಾಸದಲ್ಲಿರುವ ಬೊಮ್ಮಾಯಿ ಅವರು ಬುಧವಾರ ರಾತ್ರಿ ಸುಮಾರು ಒಂದೂವರೆ ಗಂಟೆಗಳ ಕಾಲ ನಡ್ಡಾ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದರು. ಇದಕ್ಕೂ ಮೊದಲು ಅವರು ಬೆಳಗ್ಗೆ ಪಕ್ಷದ ಕಚೇರಿಯಲ್ಲಿ ನಡೆದ ಸಂಸ್ಥಾಪನಾ ದಿನಾಚರಣೆಯ ಸಮಾರಂಭದ ವೇಳೆಯೂ ನಡ್ಡಾ ಅವರೊಂದಿಗೆ ಕೆಲಹೊತ್ತು ಚರ್ಚೆ ನಡೆಸಿದ್ದರು. ಮಾತುಕತೆಯ ವಿವರಗಳು ಸ್ಪಷ್ಟವಾಗಿ ಹೊರಬೀಳದೇ ಇದ್ದರೂ ನಡ್ಡಾ ಅವರು ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಚರ್ಚಿಸಿದ ಬಳಿಕ ಸ್ಪಷ್ಟಚಿತ್ರಣ ಹೊರಬೀಳಬಹುದು ಎನ್ನಲಾಗಿದೆ.

ಬೊಮ್ಮಾಯಿ ಸರ್ಕಾರಕ್ಕೆ ಕುಮಾರಸ್ವಾಮಿ 1 ತಿಂಗಳ ಡೆಡ್‌ಲೈನ್! ಇಲ್ಲಾಂದ್ರೆ....

ಮುಂದಿನ ವಿಧಾನಸಭಾ ಚುನಾವಣೆ(Karnataka Assembly Election) ಗಮನದಲ್ಲಿರಿಸಿಕೊಂಡು ಸಂಪುಟಕ್ಕೆ ಸರ್ಜರಿ ಮಾಡುವ ಆಲೋಚನೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ಅವರು ನಡ್ಡಾ ಅವರ ಮುಂದಿಟ್ಟಿದ್ದಾರೆ. ಸದ್ಯ ನಾಲ್ಕು ಸಚಿವ ಸ್ಥಾನಗಳು ಖಾಲಿಯಿವೆ. ನಾಲ್ಕರಿಂದ ಆರು ಮಂದಿ ಹಾಲಿ ಸಚಿವರನ್ನು ಕೈಬಿಟ್ಟು ಎಂಟರಿಂದ ಹತ್ತು ಮಂದಿ ಹೊಸಬರಿಗೆ ಸಂಪುಟದಲ್ಲಿ ಅವಕಾಶ ನೀಡುವುದು ಉತ್ತಮ ಎಂಬ ಅಭಿಪ್ರಾಯವನ್ನು ಬೊಮ್ಮಾಯಿ ಅವರು ಹೇಳಿದ್ದಾರೆ. ಕೇವಲ ಸಂಪುಟ ವಿಸ್ತರಣೆಯಷ್ಟೇ ನಡೆಯುವುದಾದರೆ ಹೆಚ್ಚು ಗೊಂದಲ ಉಂಟಾಗಲಿಕ್ಕಿಲ್ಲ. ಆದರೆ, ಸಂಪುಟದಿಂದ ಯಾರನ್ನು ಕೈಬಿಡಬೇಕು, ಬಿಟ್ಟರೆ ಮುಂದಾಗುವ ಪರಿಣಾಮಗಳೇನು ಎಂಬುದರ ಬಗ್ಗೆ ಅಳೆದೂ ತೂಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿರುವುದರಿಂದ ಅಮಿತ್‌ ಶಾ ಅವರೊಂದಿಗೆ ಚರ್ಚೆ ನಡೆಸುವುದು ಸೂಕ್ತ ಎಂಬ ಮಾತನ್ನು ನಡ್ಡಾ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೀಗ ನಡ್ಡಾ ಅವರು ಅಮಿತ್‌ ಶಾ(Amit Shah) ಅವರೊಂದಿಗೆ ಯಾವಾಗ ಚರ್ಚಿಸುತ್ತಾರೆ ಎಂಬುದರ ಮೇಲೆ ಸಂಪುಟ ಕಸರತ್ತಿನ ಮುಂದಿನ ಬೆಳವಣಿಗೆಳು ನಡೆಯಲಿವೆ. ಮುಖ್ಯಮಂತ್ರಿ ಬೊಮ್ಮಾಯಿ ಅವರು ಗುರುವಾರ ದೆಹಲಿಯಿಂದ ಬೆಂಗಳೂರಿಗೆ ವಾಪಸಾದ ಬಳಿಕ ಈ ಬಗ್ಗೆ ಸ್ಪಷ್ಟಚಿತ್ರಣ ಸಿಗುವ ನಿರೀಕ್ಷೆಯಿದೆ.

Halal Row ಕುಮಾರಸ್ವಾಮಿ ಮಾತಿಗೆ ಉತ್ತರ ಕೊಡೋಕೆ ನಾನು ಇಲ್ಲಿರೋದಲ್ಲ ಎಂದ ಸಿಎಂ!

ಈ ನಡುವೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಇದೇ ತಿಂಗಳ 16 ಮತ್ತು 17ರಂದು ನಿಗದಿಯಾಗಿರುವ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಭೆ ಬಳಿಕ ನಡೆಯಲಿದೆ ಎಂಬ ಮಾತು ಬಿಜೆಪಿ ಪಾಳೆಯದಿಂದ ಗಂಭೀರವಾಗಿ ಕೇಳಿಬರುತ್ತಿದೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯಲಿರುವ ಎರಡು ದಿನಗಳ ಕಾರ್ಯಕಾರಿಣಿ ಸಭೆಗೆ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಆಗಮಿಸಲಿದ್ದಾರೆ. ಅವರು ಆಗಮಿಸುವ ಮೊದಲೇ ಸಂಪುಟ ಸರ್ಜರಿ ಕೈಗೊಂಡಲ್ಲಿ ಭಿನ್ನಮತದ ಬಿಸಿ ಎದುರಾಗಬಹುದು. ಹೀಗಾಗಿ, ಅವರು ಬಂದು ರಾಜ್ಯ ನಾಯಕರೊಂದಿಗೆ ಚರ್ಚಿಸಿ ವಾಪಸಾದ ಬಳಿಕ ಸಂಪುಟ ಕಸರತ್ತಿಗೆ ತಾರ್ಕಿಕ ಅಂತ್ಯ ಸಿಗಬಹುದು ಎಂಬ ವಿವರಣೆ ಬಿಜೆಪಿ ಪಾಳೆಯದಿಂದ ಹೊರಬೀಳುತ್ತಿದೆ.

ಸಿಎಂ ವಾದವೇನು?

- ಚುನಾವಣೆ ಗಮನದಲ್ಲಿರಿಸಿ ಸಂಪುಟಕ್ಕೆ ಸರ್ಜರಿ ಆಗಬೇಕು
- 4 ಸ್ಥಾನ ಖಾಲಿ ಇವೆ, 4ರಿಂದ 6 ಸಚಿವರನ್ನು ಕೈಬಿಡಬೇಕು
- 8ರಿಂದ 10 ಮಂದಿಗೆ ಸಂಪುಟದಲ್ಲಿ ಸ್ಥಾನ ನೀಡಬೇಕು

ನಡ್ಡಾ ಹೇಳೋದೇನು?

- ಸಂಪುಟ ವಿಸ್ತರಣೆಯಷ್ಟೇ ನಡೆಯುವುದಾದರೆ ಗೊಂದಲ ಇಲ್ಲ
- ಸಂಪುಟದಿಂದ ಕೈಬಿಟ್ಟರೆ ಆಗುವ ಪರಿಣಾಮಗಳ ಬಗ್ಗೆ ಚರ್ಚಿಸಬೇಕು
- ಈ ಬಗ್ಗೆ ಅಮಿತ್‌ ಶಾ ಅವರೊಂದಿಗೆ ಮಾತುಕತೆ ನಡೆಸುವುದು ಸೂಕ್ತ
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ
ಹೈಕಮಾಂಡ್‌ ನಿರ್ಧಾರವೇ ಅಂತಿಮ: ಸಿಎಂ ಬದಲು ವಿಚಾರಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ