* ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ
* ಹೊರಟ್ಟಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿಯೇ ಇಲ್ಲ
* ಸೋಲುವ ಭೀತಿಯಿಂದ ಬಿಜೆಪಿಗೆ ಬರುತ್ತಿದ್ದಾರೆ
ಹುಬ್ಬಳ್ಳಿ(ಏ.07): ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯಿಂದ ನಾನೇ ಅಭ್ಯರ್ಥಿ. ನನ್ನನ್ನು ಬಿಟ್ಟು ಬೇರೆ ಯಾರಿಗೂ ಪಕ್ಷ ಟಿಕೆಟ್ ಕೊಡುವುದಿಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ(Mohan Limbikai) ವಿಶ್ವಾಸ ವ್ಯಕ್ತಪಡಿಸಿದರು. ಈ ಮೂಲಕ ಈಗಾಗಲೇ ತಾವೇ ಬಿಜೆಪಿ(BJP) ಅಭ್ಯರ್ಥಿ ಎಂದು ಹೇಳಿಕೊಂಡಿರುವ ಬಸವರಾಜ ಹೊರಟ್ಟಿ ಅವರಿಗೆ ತಿರುಗೇಟು ನೀಡಿದರು ಲಿಂಬಿಕಾಯಿ.
ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್‌ನಿಂದಾಗಲಿ(JDS), ಸ್ವತಂತ್ರವಾಗಲಿ ಕಣಕ್ಕಿಳಿದರೆ ಈ ಸಲ ಸೋಲುವುದು ಗ್ಯಾರಂಟಿ ಎಂಬುದು ಮನವರಿಕೆಯಾಗಿದ್ದರಿಂದ ಬಸವರಾಜ ಹೊರಟ್ಟಿ(Basavaraj Horatti) ಬಿಜೆಪಿಯಿಂದ ಸ್ಪರ್ಧಿಸುವ ತವಕದಲ್ಲಿದ್ದಾರೆ. ಆದರೆ ಹೊರಟ್ಟಿಅವರನ್ನು ಬಿಜೆಪಿಯ ಯಾರೂ ಪಕ್ಷಕ್ಕೆ ಆಹ್ವಾನಿಸಿಯೇ ಇಲ್ಲ, ಅವರಾಗಿಯೇ ಬರುತ್ತೇನೆ, ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ ಎಂದು ಲೇವಡಿ ಮಾಡಿದರು.
Woman Death: ಸವದತ್ತಿ ಈ ಸಾವು ನ್ಯಾಯವೇ? ಜನ್ಮನೀಡಿದವಳನ್ನು ಆಕ್ಸಿಜನ್ ಇಲ್ಲದ ಆಂಬುಲೆನ್ಸ್ ನಲ್ಲಿ ಕಳಿಸಿದ್ರು!
75 ತುಂಬಿದ ಹೊರಟ್ಟಿ:
ಬಿಜೆಪಿ ತತ್ವ ಸಿದ್ಧಾಂತಗಳ ಪಕ್ಷ, ಶಿಸ್ತಿನ ಪಕ್ಷ. ನಮ್ಮಲ್ಲಿ 75 ವರ್ಷ ಆದವರಿಗೆ ಯಾವುದೇ ಸ್ಥಾನಮಾನ ನೀಡುವುದಿಲ್ಲ. ಈ ಕಾರಣಕ್ಕಾಗಿಯೇ ಬಿ.ಎಸ್.ಯಡಿಯೂರಪ್ಪ, ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಆನಂದಿ ಬೆನ್ ರಾಜೀನಾಮೆ ನೀಡಿದ್ದುಂಟು. ಇನ್ನು ಪಕ್ಷವನ್ನು ಕಟ್ಟಿ ಬೆಳೆಸಿರುವ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿ ಅವರಿಗೂ ಪಕ್ಷದಲ್ಲಿ ಯಾವುದೇ ನೀಡಿಲ್ಲ. ಅವರು ಸಲಹೆ, ಆಶೀರ್ವಾದ ನೀಡುತ್ತಿದ್ದಾರೆ. ಅದು ನಮಗೆ ಬೇಕು ಕೂಡ ಎಂದರು. ಈಗಾಗಲೇ 75 ವರ್ಷ ತುಂಬಿರುವ ಹೊರಟ್ಟಿ ಅವರಿಗೆ ಟಿಕೆಟ್ ನೀಡಲು ಹೇಗೆ ಸಾಧ್ಯ? ವಾಸ್ತವ ಹೀಗಿರುವಾಗ ಯಡಿಯೂರಪ್ಪ, ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ಮಾತನಾಡಿದ್ದಾರೆ ಎಂದೆಲ್ಲ ಹೊರಟ್ಟಿ ಸುಳ್ಳು ಹೇಳುತ್ತ ಮತದಾರರಲ್ಲಿ ಗೊಂದಲ ಹುಟ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಹೊರಟ್ಟಿ ಅವರ ಹೇಳಿಕೆ ಕುರಿತಂತೆ ನಾನು ಈಗಾಗಲೇ ಪಕ್ಷದ ಮುಖಂಡರೊಂದಿಗೆ ಮಾತನಾಡಿದ್ದೇನೆ. ಯಾರಾರಯರೋ ಏನೇನೋ ಮಾತನಾಡುತ್ತಾರೆ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ನಿಮ್ಮ ಪ್ರಚಾರ ನೀವು ಮಾಡಿ ಎಂದು ಮುಖಂಡರು ನನಗೆ ಹೇಳಿದ್ದಾರೆ. ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ನನ್ನೊಬ್ಬನ ಹೆಸರು ಮಾತ್ರ ಕೇಂದ್ರ ಸಮಿತಿಗೆ ಕಳುಹಿಸಲಾಗಿದೆ. ಹೀಗಾಗಿ ನನಗೆ ಟಿಕೆಟ್ ದೊರೆಯುವುದು ಖಚಿತ. ಈ ಬಗ್ಗೆ 3 ತಿಂಗಳ ಹಿಂದೆಯೇ ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಸೇರಿದಂತೆ ಹಿರಿಯರೆಲ್ಲರೂ ಸ್ಪಷ್ಟಪಡಿಸಿದ್ದಾರೆ. ಅದರಂತೆ ನಾನೂ ಪ್ರಚಾರವನ್ನೂ ಕೈಗೊಂಡಿದ್ದೇನೆ. 10 ಸಾವಿರ ಮತದಾರರನ್ನು ನೋಂದಣಿ ಮಾಡಿಸಿದ್ದೇನೆ ಎಂದು ಲಿಂಬಿಕಾಯಿ ಹೇಳಿದರು.
ಹಲಾಲ್ ಕಟ್ ಮಾಡಿದ್ದೆ ನಾವು ತಿನ್ನೋದು, ಮಾಂಸ ತಿನ್ನದವರಿಂದ ವಿವಾದ ಸೃಷ್ಟಿ: ಸಿದ್ದರಾಮಯ್ಯ
ಯಾರೂ ಹೊರಟ್ಟಿ ಕರೆದಿಲ್ಲ:
ಒಂದು ವೇಳೆ ಬಿಜೆಪಿ ನಿಮಗೆ ಟಿಕೆಟ್ ನೀಡದಿದ್ದರೆ ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ, ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಕೇಂದ್ರ ಸಮಿತಿಗೆ ನನ್ನ ಹೆಸರು ಮಾತ್ರ ಹೋಗಿದೆ. ಹೀಗಾಗಿ ಟಿಕೆಟ್ ನನಗೆ ಸಿಗುವುದು ಗ್ಯಾರಂಟಿ. ಹೊರಟ್ಟಿ ಅವರೇ ಬಿಜೆಪಿಗೆ ಸೇರುತ್ತೇನೆ ಎಂದು ಹೇಳಿದ್ದಾರೆಯೇ ಹೊರತು, ಬಿಜೆಪಿಯ ಯಾರೂ ನಮ್ಮ ಪಕ್ಷಕ್ಕೆ ಬನ್ನಿ ಎಂದು ಅವರನ್ನು ಕರೆದಿಲ್ಲ, ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿಲ್ಲ ಎಂದರು.
ಜೆಡಿಎಸ್‌ನಲ್ಲಿ ಇಷ್ಟು ವರ್ಷ ಇದ್ದರೂ ಅವರಿಗೆ ಆ ಪಕ್ಷ ಸಂಘಟನೆ ಮಾಡಲಾಗಿಲ್ಲ. ಒಬ್ಬರೇ ಒಬ್ಬರನ್ನು ಗೆಲ್ಲಿಸಲು ಅವರಿಂದ ಸಾಧ್ಯವಾಗಿಲ್ಲ. ಹೀಗಿರುವಾಗ ಇವರನ್ನು ಬಿಜೆಪಿಗೆ ಸೇರಿಸಿಕೊಂಡರೆ ಕಿಂಚಿತ್ತೂ ಲಾಭವಿಲ್ಲ ಎಂದು ವ್ಯಂಗ್ಯವಾಡಿದರು.
ಸಂವಿಧಾನ ಬಾಹೀರ:
ಸಭಾಪತಿಗಳ(Speaker) ಸ್ಥಾನದಲ್ಲಿ ಕುಳಿತುಕೊಂಡು, ಹೀಗೆ ಮುಂದಿನ ಚುನಾವಣೆಯಲ್ಲಿ(Election) ಇಂಥ ಪಕ್ಷದಿಂದ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೆ ನೀಡುವುದು ಸಂವಿಧಾನ ಬಾಹಿರ ಎಂದ ಅವರು, ಇವರು ಪಕ್ಷಕ್ಕೆ ನಾನೇ ಸೇರುತ್ತೇನೆ ಎಂದು ಹೇಳಿದ್ದಾರೆ. ತಾವು ಬಿಜೆಪಿ ಸೇರುವುದಕ್ಕೆ ಕುಮಾರಸ್ವಾಮಿ(HD Kumaraswamy) ಅವರದು ಸಹಮತವಿದೆ ಎಂದು ಹೇಳಿದ್ದಾರೆ. ಆದರೆ ಕುಮಾರಸ್ವಾಮಿ ಅವರ ಎದುರಿಗೆ ಈ ಚುನಾವಣೆಯಲ್ಲಿ ಬಿಜೆಪಿಗರು ಹಣದ ಹೊಳೆ ಹರಿಸಿ ನನ್ನನ್ನು ಸೋಲಿಸುತ್ತಾರೆ. ಹೀಗಾಗಿ ಆ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ ಎಂದು ತಿಳಿಸಿದ್ದಾರಂತೆ. ಈ ವಿಷಯವನ್ನು ಕುಮಾರಸ್ವಾಮಿ ಅವರೇ ಸ್ಪಷ್ಟಪಡಿಸಿದ್ದಾರೆ. ಅಂದರೆ ಶಿಕ್ಷಕರು ದುಡ್ಡು ಪಡೆದು ಮತ ಚಲಾಯಿಸುತ್ತಾರೆ ಎಂದು ಹೇಳಿದಂತಾಗಿದೆ. ಈ ಮೂಲಕ ಶಿಕ್ಷಕರಿಗೆ ಅವಮಾನ ಮಾಡಿದ್ದಾರೆ. ಅದಕ್ಕಾಗಿ ಶಿಕ್ಷಕ ಸಮುದಾಯಕ್ಕೆ ಹೊರಟ್ಟಿಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಶಿಕ್ಷಕ ಪ್ರಕೋಷ್ಠದ ಆನಂದ ಕುಲಕರ್ಣಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ, ಶ್ರೀಧರ ರಡ್ಡೇರ್ ಸೇರಿದಂತೆ ಹಲವರಿದ್ದರು.