* ನೂತನ ಸಚಿವ ಜೊತೆ ಮೊದಲ ಸಚಿವ ಸಂಪುಟ ಸಭೆ ನಡೆಸಿದ ಬಸವರಾಜ ಬೊಮ್ಮಾಯಿ
* ಮೊದಲ ಸಭೆಯಲ್ಲಿ ನೂತನ ಸಚಿವರಿಗೆ ಸಿಎಂ ಮಹತ್ವದ ಸೂಚನೆ ರವಾನೆ
* ಖಾತೆ ಹಂಚಿಕೆ ಬಗ್ಗೆಯೂ ಪ್ರತಿಕ್ರಿಯೆ
ಬೆಂಗಳೂರು, (ಆ.04): ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕರ್ನಾಟಕ ಕ್ಯಾಬಿನೆಟ್ ರಚನೆಯಾಗಿದ್ದು, ಇಂದು (ಆ.04) 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.
ಬಳಿಕ ಬಸವರಾಜ ಬೊಮ್ಮಯಿ ಅವರು ವಿಧಾನಸೌಧದಲ್ಲಿ ನೂತನ ಸಚಿವರ ಜೊತೆ ಮೊದಲ ಕ್ಯಾಬಿನೆಟ್ ಸಭೆ ನಡೆಸಿದರು. ಈ ಸಭೆಯಲ್ಲಿ ಜಿಲ್ಲೆಗೆಳಿಗೆ ತೆರಳುವಂತೆ ನೂತನ ಸಚಿವರಿಗೆ ಬೊಮ್ಮಾಯಿ ಖಡಕ್ ಸೂಚನೆ ಕೊಟ್ಟಿದ್ದಾರೆ.
29 ಸಚಿವರಿಂದ ಪ್ರಮಾಣವಚನ: ಬೊಮ್ಮಾಯಿ ಸಂಪುಟದ ಹೊಸಬರು- ಹಳಬರ ಮಿಶ್ರಣ
ಹೌದು...ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ರಚನೆಯದ ಬಳಿಕ ಮೊದಲ ಸಂಪುಟ ಸಭೆ ನಡೆಸಲಾಯ್ತು. ಎಲ್ಲಾ ಸಚಿವರಿಗ ಕೋವಿಡ್ ಮತ್ತು ನೆರೆ ಪರಿಸ್ಥಿತಿ ಪರಿಶೀಲಿಸಲು ಜಿಲ್ಲೆ ನಿಯೋಜನೆ ಮಾಡುತ್ತೇವೆ. ನಾಳೆ (ಆ.05) ಆ ಜಿಲ್ಲೆಗೆಳಿಗೆ ಸಚಿವರು ತೆರಳಬೇಕು ಅಂತ ಸೂಚನೆ ನೀಡಿದ್ದೇನೆ ಎಂದರು.
ಕೊರೋನಾ 3ನೇ ಅಲೆ, ನೆರೆ ವೀಕ್ಷಣೆ ಜತೆ ಪರಿಹಾರದ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳೀಯವಾಗಿ ಪರಿಹಾರ ಕೊಡುವ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ. ಕೊವಿಡ್ ಟಾಸ್ಕ್ಫೋರ್ಸ್ ಪುನಾರಚನೆ ಮಾಡಲಾಗುವುದು. ಸಚಿವರಿಗೆ ಖಾತೆ ಹಂಚಿಕೆ ನಂತರ ಟಾಸ್ಕ್ಫೋರ್ಸ್ ರಚನೆ ಆಗಲಿದೆ ಎಂದು ಅವರು ಮಾಹಿತಿ ನೀಡಿದರು.
ಖಾತೆ ಹಂಚಿಕೆ ವಿಳಂವಾಗೋದಿಲ್ಲ. ಒಂದೆರಡು ದಿನಗಳಲ್ಲಿ ಸಚಿವರಿಗೆ ಖಾತೆ ಹಂಚಿಕೆ ಮಾಡುತ್ತೇವೆ. ಯಾವುದೇ ಸಚಿವರು ಇಂಥದ್ದೇ ಖಾತೆ ಬೇಕೆಂದು ಆಗ್ರಹಿಸಿಲ್ಲ. ಯಾರೊಬ್ಬರೂ ಮೊದಲ ಖಾತೆಯಲ್ಲಿ ಮುಂದುವರಿಸಿ ಅಂದಿಲ್ಲ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇವೆ ಅಂದಿದ್ದಾರೆ ಇಂದಿನ ಸಂಪುಟ ಸಭೆಯಲ್ಲಿ ನೂತನ ಸಚಿವರು ಒತ್ತಾಯಿಸಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಪುಟ ರಚನೆಗೆ ಹಿಂದೆ 10-15 ದಿನ ಅಥವಾ ತಿಂಗಳು ಹಿಡಿಯುತ್ತಿತ್ತು. ಆದರೆ, ಈ ಬಾರಿ 3 ದಿನದಲ್ಲಿ ಸಚಿವರ ಪಟ್ಟಿ ಫೈನಲ್ ಮಾಡಿಕೊಂಡು ಬಂದಿದ್ದೇನೆ. ಹೀಗಾಗಿ ಖಾತೆ ಹಂಚಿಕೆಗೆ ಹೆಚ್ಚು ದಿನ ತೆಗೆದುಕೊಳ್ಳುವುದಿಲ್ಲ. ನೂತನ ಸಚಿವರಿಗೆ ನಾನೇ ಖಾತೆ ಹಂಚಿಕೆ ಮಾಡುತ್ತೇನೆ ಎಂದರು.
ಎಸ್ಟಿಪಿಎಸ್ ಹಣ ಬೇರೆ ಇಲಾಖೆಗೆ ನೀಡುತ್ತಿದ್ದ ಹಿನ್ನೆಲೆ ಶೀಘ್ರದಲ್ಲೇ ಎಸ್ಟಿ ಸೆಕ್ರೆಟರಿಯೇಟ್ ರಚನೆ ತೀರ್ಮಾನ ಮಾಡುತ್ತೇವೆ. ಎಸ್ಟಿ ಸಮುದಾಯದ ಬೇಡಿಕೆಯಂತೆ ಸೆಕ್ರೆಟರಿಯೇಟ್ ರಚನೆ ಮಾಡುತ್ತೇವೆ ಎಂದು ವಿವರಿಸಿದರು.
ಇನ್ನು ಮಹಿಳೆಯರು ಮತ್ತು ಮಕ್ಕಳ ಸಬಲೀಕರಣಕ್ಕೆ ಅಭಿಯಾನ ನಡೆಸುತ್ತೇವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಬಲಿಕರಣಕ್ಕಾಗಿ ಸಮಿತಿ ರಚನೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಿದ್ದೇವೆ ಎಂದು ಹೇಳಿದರು.