* ಅಶೋಕ್‌ಗೆ ಕಂದಾಯ, ಸೋಮಣ್ಣಗೆ ವಸತಿ, ಈಶ್ವರಪ್ಪಗೆ ಗ್ರಾಮೀಣಾಭಿವೃದ್ಧಿ
* ಸಿಎಂ ಬಳಿಯೇ ಹಣಕಾಸು, ಬೆಂಗಳೂರು ಅಭಿವೃದ್ಧಿ, ಇಂಧನ
* ಮಿತ್ರಮಂಡಳಿ ಸಚಿವರಿಗೆ ಬಹುತೇಕ ಹಳೆಯ ಖಾತೆಗಳೇ ದೊರೆಯುವ ಸಂಭವ
* ನಿರಾಣಿಗೆ ಕೈಗಾರಿಕೆ, ಕಾರಜೋಳಗೆ ನೀರಾವರಿ ನೀಡಲು ಚಿಂತನೆ
ಬೆಂಗಳೂರು(ಆ.07): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೂತನ ಸಂಪುಟದ ಸಚಿವರಿಗೆ ಖಾತೆಗಳ ಹಂಚಿಕೆ ಪ್ರಕ್ರಿಯೆ ಬಹುತೇಕ ಮುಗಿದಿದ್ದು, ಪಟ್ಟಿಯನ್ನು ಬಿಜೆಪಿ ವರಿಷ್ಠರ ಪರಿಶೀಲನೆಗಾಗಿ ಕಳುಹಿಸಲಾಗಿದೆ. ಶನಿವಾರ ಬೆಳಿಗ್ಗೆ ಎಲ್ಲವೂ ಅಂತಿಮವಾಗಲಿದೆ ಎಂದು ಹೇಳಲಾಗಿದೆ.
ಕೆಲವು ಸಣ್ಣಪುಟ್ಟಬದಲಾವಣೆಗಳನ್ನು ಹೊರತುಪಡಿಸಿದರೆ ಬಹುತೇಕ ಹಿಂದಿನ ಯಡಿಯೂರಪ್ಪ ಸರ್ಕಾರದಲ್ಲಿದ್ದ ಸಚಿವರಿಗೆ ಅದೇ ಖಾತೆಗಳನ್ನೇ ನೀಡಲಾಗಿದೆ. ವರಿಷ್ಠರು ಏನಾದರೂ ಬದಲಾವಣೆ ಸೂಚಿಸಿದರೆ ಅದನ್ನು ಮಾಡಿ ರಾಜ್ಯಪಾಲರ ಅನುಮೋದನೆಗಾಗಿ ಕಳುಹಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಮುಖ್ಯವಾಗಿ ರಾಜಧಾನಿ ಬೆಂಗಳೂರು ನಗರ ಅಭಿವೃದ್ಧಿ ಖಾತೆಯನ್ನು ಯಾರಿಗೆ ನೀಡಬೇಕು ಎಂಬುದೇ ಹೆಚ್ಚು ಗೊಂದಲ ಸೃಷ್ಟಿಸಿತ್ತು. ಬೆಂಗಳೂರಿನಲ್ಲಿ ಏಳು ಮಂದಿ ಸಚಿವರಿದ್ದಾರೆ. ಯಾರಿಗೇ ನೀಡಿದರೂ ಇತರರಿಗೆ ಅಸಮಾಧಾನವಾಗುವಂಥ ಸನ್ನಿವೇಶ ನಿರ್ಮಾಣವಾಗಿತ್ತು. ಹೀಗಾಗಿ, ಅಂತಿಮವಾಗಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೆಯೇ ಈಗಿನ ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಈ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಳ್ಳಲು ನಿರ್ಧರಿಸಿದರು ಎನ್ನಲಾಗಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರು ಹಣಕಾಸು, ಇಂಧನ, ಬೆಂಗಳೂರು ನಗರ ಅಭಿವೃದ್ಧಿ ಹಾಗೂ ಗುಪ್ತಚರ ಇಲಾಖೆಗಳನ್ನು ತಮ್ಮ ಬಳಿ ಉಳಿಸಿಕೊಳ್ಳಲಿದ್ದಾರೆ. ಕಳೆದ ಬಾರಿ ಲೋಕೋಪಯೋಗಿ ಖಾತೆ ಹೊಂದಿದ್ದ ಗೋವಿಂದ ಕಾರಜೋಳ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ನೀಡಲು ಚಿಂತನೆ ನಡೆದಿದೆ. ವಾಸ್ತವವಾಗಿ ಜಲಸಂಪನ್ಮೂಲ ಖಾತೆಯನ್ನು ತಾವೇ ಉಳಿಸಿಕೊಳ್ಳಲು ಮುಖ್ಯಮಂತ್ರಿ ಬೊಮ್ಮಾಯಿ ಒಲವು ಹೊಂದಿದ್ದರು. ಆದರೆ, ಪಕ್ಷದ ವರಿಷ್ಠರ ಸೂಚನೆಯಂತೆ ಕಾರಜೋಳ ಅವರಿಗೆ ನೀಡುವ ಬಗ್ಗೆ ಚಿಂತನೆ ನಡೆದಿದೆ.
ಕರ್ನಾಟಕದ ರಾಜಕಾರಣಿಗಳಿಗೆ ದೆಹಲಿಯಲ್ಲೀಗ ಪ್ರಹ್ಲಾದ್ ಜೋಶಿ ಆಪದ್ಬಾಂಧವ
ಇನ್ನು ಆರ್.ಅಶೋಕ್ ಅವರಿಗೆ ಹಿಂದಿನ ಕಂದಾಯ ಖಾತೆಯೇ ಲಭಿಸುವುದು ಬಹುತೇಕ ನಿಚ್ಚಳವಾಗಿದೆ. ವಿ.ಸೋಮಣ್ಣ ಅವರಿಗೂ ಈ ಹಿಂದಿನಂತೆ ವಸತಿ ಖಾತೆಯೇ ಸಿಗುವ ಸಾಧ್ಯತೆಯಿದೆ. ಕೆ.ಎಸ್.ಈಶ್ವರಪ್ಪ ಅವರಿಗೆ ಕೂಡ ಹಿಂದಿನ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಖಾತೆಯೇ ಸಿಗಲಿದೆ ಎಂದು ಮೂಲಗಳು ಹೇಳಿವೆ. ಆನಂದ್ ಸಿಂಗ್ ಅವರಿಗೆ ಪರಿಸರ ಖಾತೆ, ಡಾ.ಕೆ.ಸುಧಾಕರ್ ಅವರಿಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ, ಎಸ್.ಟಿ.ಸೋಮಶೇಖರ್ ಅವರಿಗೆ ಸಹಕಾರ, ಬೈರತಿ ಬಸವರಾಜು ಅವರಿಗೆ ನಗರಾಭಿವೃದ್ಧಿ ಖಾತೆಗಳನ್ನೇ ನೀಡುವ ಸಂಭವವಿದೆ. ‘ಮಿತ್ರಮಂಡಳಿ’ಯ ಸಚಿವರಿಗೆ ಬಹುತೇಕ ಹಳೆಯ ಖಾತೆಗಳೇ ದೊರೆಯಲಿವೆ.
ಮುರುಗೇಶ್ ನಿರಾಣಿ ಅವರ ಬಳಿ ಹಿಂದೆ ಇದ್ದ ಗಣಿ ಮತ್ತು ಭೂವಿಜ್ಞಾನ ಖಾತೆಯನ್ನು ಸಿ.ಸಿ.ಪಾಟೀಲರಿಗೆ ನೀಡಬಹುದು. ನಿರಾಣಿ ಅವರಿಗೆ ಇಂಧನ ಖಾತೆ ಮೇಲೆ ಕಣ್ಣಿದ್ದರೂ ಅದನ್ನು ಮುಖ್ಯಮಂತ್ರಿಗಳೇ ಉಳಿಸಿಕೊಳ್ಳಲಿರುವುದರಿಂದ ಅವರಿಗೆ ಬೃಹತ್ ಕೈಗಾರಿಕೆ ಖಾತೆ ದೊರೆಯಬಹುದು ಎನ್ನಲಾಗಿದೆ.