* ಸಿದ್ದರಾಮಯ್ಯ ವಿರುದ್ಧ ದಲಿತ ಅಸ್ತ್ರ ಪ್ರಯೋಗ
* ದಲಿತರ ಕ್ಷಮೆ ಕೇಳುವಂತೆ ಬಿಜೆಪಿ ನಾಯಕರ ಆಗ್ರಹ
* ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಒತ್ತಾಯ
* ಛಲವಾದಿ ನಾರಾಯಣಸ್ವಾಮಿ ವಿರುದ್ಧ ಕೇಳಿಬಂತು ಗಂಭೀರ ಆರೋಪ
ಬೆಂಗಳೂರು, (ನ.07): ನನ್ನ ಸಹೋದರ ರಾಜ್ಯ ಬಿಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಅವರ ಬಗ್ಗೆ ಸುದ್ದಿಯೊಂದು ಸುತ್ತುತ್ತಿದೆ. ಆ ಸುದ್ದಿ ನಮಗೆ ತೀವ್ರ ಅಘಾತ ತಂದಿದ್ದು, ಅವರು ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದಾರೆ' ಎಂದು ಬಿಜೆಪಿ ಎಸ್ಸಿ ಮೋರ್ಚಾ ಮಾಜಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಚಿ.ನಾ ರಾಮು ಗಂಭೀರ ಆರೋಪ ಮಾಡಿದ್ದಾರೆ.
ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿದ್ದರೂ ಎಲ್ಲವನ್ನೂ ಜಾಣತನದಿಂದ ಮುಚ್ಚಿಟ್ಟು ಬಿಜೆಪಿ ನಡುಮನೆ ತೂರಿ ನಾಯಕರನ್ನು ವಂಚಿಸಿ, ದಿಕ್ಕುತಪ್ಪಿಸಿ ಅವರಿಗೆ ಸಂಬಂಧಪಡದ ಎಸ್ಸಿ ಮೋರ್ಚಾ ಸೇರಿದ್ದಾರೆ. ಗುಟ್ಟಾಗಿ ಪ್ರತಿ ಭಾನುವಾರ ಚರ್ಚ್ ಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅವರು ಕ್ರೈಸ್ತ ಧರ್ಮೀಯ ಹೆಣ್ಣನ್ನು ಮದುವೆ ಆದ ನಂತರ ಮತಾಂತರವಾದವರು. ಅವರ ಮಕ್ಕಳಿಗೂ ಅದೇ ಧರ್ಮದಲ್ಲಿ ಹೆಣ್ಣು ತಂದು ಇಡೀ ಕುಟುಂಬವೇ ಕ್ರೈಸ್ತ ಧರ್ಮವನ್ನು ಅತ್ಯಂತ ಶ್ರದ್ಧೆಯಿಂದ ಅನುಸರಿಸುತ್ತಿದೆ ಎಂಬುದು ನಾರಾಯಣಸ್ವಾಮಿ ಅವರ ಮೇಲಿರುವ ಆರೋಪವಾಗಿದೆ. ಇದು ಅಕ್ಷರಶಃ ನಿಜ ಎಂದು ಅವರ ಕುಟುಂಬ, ಬಂಧು ಬಾಂಧವ ಮೂಲಗಳೂ ಹೇಳುತ್ತಿವೆ ಎಂದು ಚಿ.ನಾ ರಾಮು ಹೇಳಿದ್ದಾರೆ.
undefined
Bengaluru: ಸಿದ್ದರಾಮಯ್ಯ ಹೇಳಿಕೆ ಖಂಡಿಸಿ ಬಿಜೆಪಿ SC Morcha ಪ್ರತಿಭಟನೆ!
'ಇದು ನಿಜಕ್ಕೂ ಸೋಜಿಗ ಮತ್ತು ಕಳವಳ ಹುಟ್ಟಿಸುವ ವಿಷಯವಾಗಿದೆ. ನಾಜೂಕಾಗಿ ಇವರು ಮಾಡಿದ ಈ ಕೃತ್ಯ ದಿಗ್ಭ್ರಮೆಯ ಜೊತೆಗೆ ಪ್ರತಿ ಬಿಜೆಪಿ ಕಾರ್ಯಕರ್ತರಲ್ಲೂ ಆಕ್ರೋಶ ಉಂಟು ಮಾಡುವ ಸಂಗತಿಯಾಗಿದೆ ಎಂದು ತಿಳಿಸಿದ್ದಾರೆ.
ಸಹೋದರ ಛಲವಾದಿ ನಾರಾಯಣಸ್ವಾಮಿ ಅವರು ಮೂಲ ಕ್ರೈಸ್ತ ಮತಾನುಯಾಯಿ ಆಗಿದ್ದರೆ ನಮ್ಮ ಆಕ್ಷೇಪವಿರಲಿಲ್ಲ. ಆದರೆ ಹಿಂದೂ ಧರ್ಮದಿಂದ ಮತಾಂತರಗೊಂಡು, ತಮ್ಮ ಕುಟುಂಬವನ್ನೂ ಮತ ಪರಿವರ್ತನೆ ಮಾಡಿ ಅದನ್ನು ಮುಚ್ಚಿಕೊಂಡಿದ್ದರೆ ಅದರ ಬಗ್ಗೆ ನಮ್ಮ ವಿರೋಧವಿದೆ. ಹಿಂದೂ ಧರ್ಮದಿಂದ ಅನ್ಯ ಧರ್ಮಕ್ಕೆ ಮತಾಂತರ ಹೊಂದುವುದನ್ನು ಪ್ರತಿ ಬಿಜೆಪಿ ಕಾರ್ಯಕರ್ತ, ಪ್ರತಿ ಧರ್ಮನಿಷ್ಠ ಹಿಂದೂವು ವಿರೋಧಿಸುತ್ತಾನೆ. ನಮ್ಮ ಧರ್ಮ ವಿಶ್ವಕ್ಕೆ ಬೆಳಕು ತೋರಿದ, ಮನುಕುಲದ ಪರಂಪರೆಗೇ ಮಾದರಿಯಾದ ಧರ್ಮವಾಗಿದೆ.
ಹೀಗಿರುವಾಗ ಛಲವಾದಿ ನಾರಾಯಣಸ್ವಾಮಿ ಅವರು ಕದ್ದುಮುಚ್ಚಿ ಕ್ರೈಸ್ತ ಧರ್ಮ ಪಾಲನೆ ಮಾಡುತ್ತಿದ್ದಾರೆ ಎಂಬುದೇ ಸತ್ಯವೇ ಆಗಿದ್ದಾರೆ. ಅವರು ಕೂಡಲೇ "ಘರ್ ವಾಪಸಿ" ಆಗಬೇಕು. ಅಥವಾ ತಮ್ಮ ತಪ್ಪು, ಪಕ್ಷಕ್ಕೆ ಮಾಡಿದ ದ್ರೋಹ ಒಪ್ಪಿಕೊಂಡು ಎಲ್ಲಾ ನಮ್ಮ ಬಿಜೆಪಿ ನಾಯಕರ ಕ್ಷಮೆ ಕೇಳಿ ಎಲ್ಲರೂ ಕ್ಷಮಿಸಿದರೆ ಆಗ ಅಲ್ಪಸಂಖ್ಯಾತ ಮೋರ್ಚಾ ಸೇರಿಕೊಳ್ಳಬೇಕು. ಇಲ್ಲಾ ನಾನು ಹಿಂದೂ ಧರ್ಮೀಯನೇ ಎಂಬುದಾದರೆ ನಮ್ಮ ರಾಜ್ಯ ಕಚೇರಿ ಬಳಿಯೇ ಇರುವ ಗಂಗಮ್ಮನ ದೇಗುಲ, ಸಮೀಪದಲ್ಲೇ ಇರುವ ಸರ್ಕಲ್ ಮಾರಮ್ಮನ ದೇವಸ್ಥಾನ ಮತ್ತು ಅಣ್ಣಮ್ಮನ ದೇವಸ್ಥಾನಕ್ಕೆ ತಮ್ಮ ಕುಟುಂಬದೊಂದಿಗೆ ಬಂದು ಪೂಜೆ ಸಲ್ಲಿಸಿ ಹಿಂದೂ ಧರ್ಮದ ಬಗ್ಗೆ ಇರುವ ಶ್ರದ್ಧೆಯನ್ನು ವ್ಯಕ್ತಪಡಿಸಬೇಕು ಎಂದಿದ್ದಾರೆ.
ನಮ್ಮ ಕುಟುಂಬ ಕ್ರೈಸ್ತ ಧರ್ಮ ಅನುಸರಿಸುತ್ತಿದೆ ನಾನು ಹಿಂದೂ ಅನ್ನುವುದಾದರೆ ಕೂಡಲೇ ಇಡೀ ಕುಟುಂಬದ "ಘರ್ ವಾಪಸಿ" ಮೂಲಕ ಬಿಜೆಪಿ ಪಕ್ಷ, ನಮ್ಮ ಪಕ್ಷದ ತತ್ವ ಸಿದ್ದಾಂತ ಪಾಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಮತಾಂತರ ಎಂಬ ಪಿಡುಗು ನಮ್ಮ ಧರ್ಮವನ್ನು ಕಾಡುತ್ತಿದೆ. ನಮ್ಮ ಪಕ್ಷದ ಶಾಸಕರಾದ ಗೂಳಿಹಟ್ಟಿ ಶೇಖರ್ ಅವರು ತಮ್ಮ ತಾಯಿಯನ್ನು ಮತಾಂತರಗೊಳಿಸಿದ್ದರ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತಿ ಮತ್ತೆ ಘರ್ ವಾಪಸಿ ಮಾಡಿಕೊಂಡರು. ಹಿಂದೂ ಧರ್ಮದ ಬಗ್ಗೆ ತಮಗಿರುವ ಶ್ರದ್ಧೆ ಎಂತದ್ದು ಎಂಬುದನ್ನು ಎತ್ತಿ ತೋರಿದರು ಎಂದಿದ್ದಾರೆ.
ಈಗ ನನ್ನ ಸೋದರ ಛಲವಾದಿ ನಾರಾಯಣಸ್ವಾಮಿ ಅವರ ಮೇಲೆ ಬಂದಿರುವ ಆರೋಪ ನನಗೆ ನೋವು ತಂದಿದೆ. ಅವರು ಈ ಆರೋಪದಿಂದ ಮುಕ್ತರಾಗಿ ಟೀಕಿಸುವ ವಿರೋಧಿಗಳಿಗೆ ತಕ್ಕ ಉತ್ತರ ನೀಡಬೇಕು ಎಂಬುದು ನಮ್ಮ ಆಶಯವಾಗಿದೆ. ನಾವು ಈ ಟೀಕೆಯನ್ನು ಒಟ್ಟಾಗಿ ಎದುರಿಸೋಣ. ಅದಕ್ಕಾಗಿ ಸತ್ಯವನ್ನು ಬಯಲು ಮಾಡೋಣ. ಜೊತೆಯಲ್ಲಿ ನಿಮ್ಮ ಕುಟುಂಬದೊಂದಿಗೆ ಹೋಗಿ ಎಲ್ಲಾ ದೇವಾಲಯಗಳಿಗೂ ಪೂಜೆ ಸಲ್ಲಿಸೋಣ. ಬನ್ನಿ ಸಹೋದರ. ಪೂಜೆಗೆ ನಾನು ಏರ್ಪಾಡು ಮಾಡುತ್ತೇನೆ. ಈ ವಿಷಯ ಕೇಳಿದಾಗಿನಿಂದ ಒಬ್ಬ ಹಿಂದೂ, ಒಬ್ಬ ದಲಿತನಾಗಿ ಹೇಳಿಕೊಳ್ಳಲಾರದಷ್ಟು ನೋವುಂಡ ನಂತರ ನಿಮ್ಮ ಮೇಲಿನ ಈ ಆರೋಪ ಸಹಿಸದೇ ಬಹಿರಂಗವಾಗಿ ಮನವಿ ಮಾಡುತ್ತಿದ್ದೇನೆ ದಯಮಾಡಿ ಸತ್ಯವನ್ನು ಹೊರಗಿಟ್ಟು ನಮ್ಮ ವಿರೋಧಿಗಳ ಬಾಯಿ ಮುಚ್ಚಿಸೋಣ. ಬನ್ನಿ ಎಂದು ಛಲವಾದಿ ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.