ಬೆಂಗಳೂರು (ಜೂ.16): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಕುರಿತು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿಯೇ ಜೆಡಿಎಸ್ ಮುಖಂಡ ಎಚ್.ಡಿ.ರೇವಣ್ಣ ಅವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿರುವುದು ಕುತೂಹಲ ಕೆರಳಿಸಿದೆ.
ಮಂಗಳವಾರ ಬೆಳಗ್ಗೆ ಸಚಿವ ಬಸವರಾಜ ಬೊಮ್ಮಾಯಿ ನಿವಾಸಕ್ಕೆ ತೆರಳಿದ ರೇವಣ್ಣ ಅವರು ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಪ್ರಸಕ್ತ ರಾಜಕೀಯ ವಿದ್ಯಮಾನದ ಕುರಿತು ಮತ್ತು ಹೊಳೆನರಸೀಪುರದಲ್ಲಿ ನೂತನ ಪೊಲೀಸ್ ಠಾಣೆ ನಿರ್ಮಾಣ ಕುರಿತು ಚರ್ಚೆ ನಡೆಸಿದರು.
ಸಚಿವರ ಭೇಟಿ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ರೇವಣ್ಣ, ಹೊಳನರಸೀಪುರ ತಾಲೂಕಿನಲ್ಲಿ ಒಂದು ಪೊಲೀಸ್ ಠಾಣೆ ಆಗಬೇಕಿತ್ತು. ಈ ಸಂಬಂಧ ಚರ್ಚೆ ನಡೆಸಲು ಆಗಮಿಸಿದ್ದೆ ಅಷ್ಟೇ. ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಬೊಮ್ಮಾಯಿ ಅವರು ನಮ್ಮ ಹಳೆಯ ಸ್ನೇಹಿತರು ಎಂದರು.
ಅತ್ತ ಎಚ್‌ಡಿಕೆ ಕಿಡಿ, ಇತ್ತ ಸಿದ್ದರಾಮಯ್ಯ ಪರ ರೇವಣ್ಣ ಬ್ಯಾಟಿಂಗ್ ...
ನಮ್ಮ ಪಕ್ಷದಲ್ಲಿದ್ದವರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ 2023ಕ್ಕೆ ನೋಡೋಣ ಎಂದಷ್ಟೇ ಹೇಳಿದರು.
ಸಚಿವ ಬೊಮ್ಮಾಯಿ ಮಾತನಾಡಿ, ರೇವಣ್ಣ ಅವರು ಆಗಾಗ್ಗೆ ಭೇಟಿ ಮಾಡುತ್ತಿರುತ್ತಾರೆ. ಕ್ಷೇತ್ರ ಹಾಗೂ ಅವರ ಹಾಸನ ಜಿಲ್ಲೆಯ ವಿಚಾರದ ಬಗ್ಗೆ ಚರ್ಚಿಸಲು ಬರುತ್ತಿರುತ್ತಾರೆ. ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ ಎಂದರು