ವಿಧಾನಸಭೆ ಚುನಾವಣೆಯ ಫಲಿತಾಂಶ ಅತಂತ್ರ ಸ್ಥಿತಿ ಬಂದಲ್ಲಿ ಯಾವ ಮಾರ್ಗ ಅನುಸರಿಸಬೇಕೆಂದು, ಮೂರೂ ಪಕ್ಷಗಳಿಂದ ಪ್ಯಾನ್ ಎ ಮತ್ತು ಬಿ ಸಿದ್ಧಪಡಿಸಿಕೊಂಡಿವೆ.
ಬೆಂಗಳೂರು (ಮೇ 13): ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದು, ಜಿದ್ದಾಜಿದ್ದಿ ಪೈಪೋಟಿಯಿಂದ ಕೂಡಿದ್ದ ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿರುವ ಹಿನ್ನೆಲೆಯಲ್ಲಿ ಮೂರೂ ಪಕ್ಷಗಳು ತುದಿಗಾಲಲ್ಲಿ ನಿಂತಿವೆ. ಸಮೀಕ್ಷೆಗಳು ಅತಂತ್ರ ಸ್ಥಿತಿಯ ಭವಿಷ್ಯ ನುಡಿದಿದ್ದು, ಮೂರೂ ಪಕ್ಷಗಳಿಂದ ಪ್ಯಾನ್ ಎ ಮತ್ತು ಬಿ ಸಿದ್ಧಪಡಿಸಿಕೊಂಡಿವೆ.
ಬಹುತೇಕ ಮತಗಟ್ಟೆಸಮೀಕ್ಷೆಗಳು ಅತಂತ್ರ ವಿಧಾನಸಭೆಯ ಸಾಧ್ಯತೆಯ ಕುರಿತು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಪಕ್ಷಗಳು ಭರ್ಜರಿ ತಂತ್ರಗಾರಿಕೆ ಆರಂಭಿಸಿವೆ. ದಕ್ಷಿಣ ಭಾರತದಲ್ಲಿ ಪಕ್ಷ ಅಧಿಕಾರದಲ್ಲಿರುವ ಏಕೈಕ ರಾಜ್ಯವನ್ನು ಕಳೆದುಕೊಳ್ಳಬಾರದು ಎಂಬ ಹಟಕ್ಕೆ ಬಿಜೆಪಿ ಬಿದ್ದಿದ್ದರೆ, ಬಿಜೆಪಿಯನ್ನು ಹೇಗಾದರೂ ಮಾಡಿ ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂದು ನಿಶ್ಚಯಿಸಿರುವ ಕಾಂಗ್ರೆಸ್ ಯಾವುದೇ ಅವಕಾಶವನ್ನೂ ಎದುರಾಳಿಗೆ ನೀಡದಿರಲು ಸಜ್ಜಾಗಿ ಕುಳಿತಿದೆ. ಈ ನಡುವೆ ಅತಂತ್ರ ಪರಿಸ್ಥಿತಿಯಲ್ಲಿ ಎರಡೂ ಪಕ್ಷಗಳು ತನ್ನ ಮುಂದೆ ಬರುವ ನಿರೀಕ್ಷೆಯಲ್ಲಿರುವ ಜೆಡಿಎಸ್, ‘ಚೌಕಾಸಿ’ಗೆ ಪಟ್ಟುಗಳನ್ನು ರೂಪಿಸುತ್ತಿದೆ. ಒಟ್ಟಿನಲ್ಲಿ ಇಂದು ಇಡೀ ದಿನ ಕರ್ನಾಟಕ ರಾಜಕಾರಣ ಹೈವೋಲ್ಟೇಜ್ ಕುತೂಹಲವನ್ನು ಒಡಲಲ್ಲಿಟ್ಟುಕೊಂಡಿದೆ.
Karnataka Assembly Election 2023: ಅಂಚೆ ಮತ ಎಣಿಕೆ, ಬಿಜೆಪಿ, ಕಾಂಗ್ರೆಸ್‌ಗೆ ಸಮಬಲ...
ಹಲವು ಸ್ವತಂತ್ರ ಅಭ್ಯರ್ಥಿಗಳೊಂದಿಗೆ ಮುನ್ನಡೆ:
ಅತಂತ್ರ ಸ್ಥಿತಿ ನಿರ್ಮಾಣವಾಗುವ ಭೀತಿ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯು ಫಲಿತಾಂಶ ಹೊರಬೀಳುವ ಮೊದಲೇ ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರು ಹಾಗೂ ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸಲು ಮುಂದಾಗಿದೆ. ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದರ ನೇತೃತ್ವ ವಹಿಸಿಕೊಂಡಿದ್ದು, ಹಲವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಅತಂತ್ರ ಸನ್ನಿವೇಶ ನಿರ್ಮಾಣವಾದಲ್ಲಿ ತಮ್ಮ ಜತೆಗಿರುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಶಿರಹಟ್ಟಿವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ, ಹರಪನಹಳ್ಳಿ ಪಕ್ಷೇತರ ಅಭ್ಯರ್ಥಿಯಾಗಿರುವ, ದಿ.ಎಂ.ಪಿ.ಪ್ರಕಾಶ ಅವರ ಮಗಳು ಎಂ.ಪಿ.ಲತಾ, ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಎಸ್.ಐ.ಚಿಕ್ಕನಗೌಡರ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ ಎಂಬ ಖಚಿತ ಮಾಹಿತಿ ಹೊರಬಿದ್ದಿದೆ. ಎಲ್ಲರಿಗೂ ಮುಖ್ಯಮಂತ್ರಿ ಬೊಮ್ಮಾಯಿ ಒಬ್ಬರೇ ಸಂಪರ್ಕಿಸಿ ಮಾತನಾಡಿಲ್ಲ. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್ ಸೇರಿದಂತೆ ತಮ್ಮ ಆಪ್ತರನ್ನು ಮುಂದೆ ಬಿಟ್ಟು ಸಂಪರ್ಕಿಸುವ ಗಂಭೀರ ಪ್ರಯತ್ನ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಅತಂತ್ರ ಫಲಿತಾಂಶ ಹೊರಬಿದ್ದರೆ ಅದರ ಲಾಭ ಕಾಂಗ್ರೆಸ್ ಪಡೆದುಕೊಳ್ಳದಂತೆ ತಡೆಯುವ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.
ಕೈ ಅಭ್ಯರ್ಥಿ ಹಿಡಿದಿಡಲು ಹೋದ ಜಿಲ್ಲಾ ಉಸ್ತುವಾರಿಗಳು: ಆಪರೇಷನ್ ಕಮಲವೂ ಸೇರಿದಂತೆ ಯಾವುದೇ ಅನನುಕೂಲಕರ ಬೆಳವಣಿಗೆಗೆ ಅವಕಾಶ ನೀಡದಿರಲು ನಿರ್ಧರಿಸಿರುವ ಕಾಂಗ್ರೆಸ್ ನಾಯಕರು, ಇಂದು ಫಲಿತಾಂಶ ಪ್ರಕಟವಾಗಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೇ ಅವರನ್ನು ಬೆಂಗಳೂರಿಗೆ ಕರೆತರುವ ಹೊಣೆಗಾರಿಕೆ ನೀಡಿ ತಲಾ ಇಬ್ಬರು ಉಸ್ತುವಾರಿಗಳನ್ನು ರಾಜ್ಯದ ಪ್ರತಿ ಜಿಲ್ಲೆಗೂ ಕಳುಹಿಸಿಕೊಟ್ಟಿದೆ. ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನಾದಿನವಾದ ಶುಕ್ರವಾರ ಕಾಂಗ್ರೆಸ್ ನಾಯಕರು ತೀವ್ರ ಚಟುವಟಿಕೆಯಿಂದ ಇದ್ದರು. ರಾಜ್ಯಕ್ಕೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರುವ ಹೈಕಮಾಂಡ್ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ನಗರದಲ್ಲೇ ಬೀಡು ಬಿಟ್ಟು ನಿರ್ಣಾಯಕ ದಿನವಾದ ಶನಿವಾರಕ್ಕೆ ಹೇಗೆಲ್ಲ ಸಜ್ಜುಗೊಳ್ಳಬೇಕು ಎಂಬ ಬಗ್ಗೆ ರಾಜ್ಯ ನಾಯಕರೊಂದಿಗೆ ಸರಣಿ ಸಭೆ ನಡೆಸಿ ಚರ್ಚಿಸಿದರು.
120 ಬಂದರೆ ಇಂದೇ ಶಾಸಕಾಂಗ ಪಕ್ಷದ ಸಭೆ? ಕಾಂಗ್ರೆಸ್ ಪಕ್ಷ 120ರ ಗಡಿ ಮುಟ್ಟಿದರೆ ಶನಿವಾರವೇ ನಗರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಏಕೆಂದರೆ, ರಾಜ್ಯದ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಎಲ್ಲ ನಾಯಕರು (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ) ನಗರದಲ್ಲೇ ಇದ್ದಾರೆ. ಇನ್ನು ವರಿಷ್ಠರಾದ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಅಭಿಪ್ರಾಯವನ್ನು ದೂರವಾಣಿ ಮೂಲಕ ಪಡೆಯುವ ಅವಕಾಶವಿದೆ. ಹೀಗಾಗಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ನೂತನ ನಾಯಕನ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆಗಳು ಹೆಚ್ಚಿವೆ.
ಶಾಸಕರನ್ನು ಹಿಡಿದಿಡಲು ಜೆಡಿಎಸ್‌ನಿಂದ ಕಸರತ್ತು: ಬೆಂಗಳೂರು: ಅತಂತ್ರ ಪರಿಸ್ಥಿತಿ ಸಾಧ್ಯತೆ ಇದೆ ಎಂಬ ಮತಗಟ್ಟೆಸಮೀಕ್ಷೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಶಾಸಕರನ್ನು ಹೈಜಾಕ್ ಮಾಡಬಹುದು ಎಂಬ ಭೀತಿಯಿಂದ ಜೆಡಿಎಸ್ ತನ್ನವರನ್ನು ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಜಕೀಯ ರಣತಂತ್ರ ರೂಪಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಗೆಲ್ಲುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಜಿ.ಟಿ.ದೇವೇಗೌಡ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.