
ಬೆಂಗಳೂರು: ಕುತೂಹಲ ಕೆರಳಿಸಿರುವ ವಿಧಾನಸಭೆ ಚುನಾವಣೆಯ ಫಲಿತಾಂಶವು ಅತಂತ್ರ ಬರುವ ಸಾಧ್ಯತೆ ಕುರಿತು ಸಮೀಕ್ಷೆಗಳು ವರದಿ ಮಾಡಿರುವ ಹಿನ್ನೆಲೆಯಲ್ಲಿ ಜೆಡಿಎಸ್ ತನ್ನದೇ ಆದ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿದ್ದು, ಹಿಂದಿನ ಕಹಿ ಅನುಭವದ ಆಧಾರದ ಮೇಲೆ ಮೈತ್ರಿಗೆ ಮುಂದಾಗಬಹುದಾದ ರಾಷ್ಟ್ರೀಯ ಪಕ್ಷಕ್ಕೆ ಆರಂಭದಲ್ಲೇ ಷರತ್ತು ವಿಧಿಸುವ ಕುರಿತು ಗಂಭೀರವಾಗಿ ಚಿಂತನೆ ನಡೆಸಿದೆ. ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಿರುವ ಪಂಚರತ್ನ ಯೋಜನೆಗಳ ಅನುಷ್ಠಾನಕ್ಕೆ ಒತ್ತು ನೀಡುವ ಪಕ್ಷದೊಂದಿಗೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸುವ ಬಗ್ಗೆ ಒಲವು ಹೊಂದಿದ್ದು, ಈ ಬಗ್ಗೆ ಮುಂಚಿತವಾಗಿಯೇ ಸ್ಪಷ್ಟತೆ ಪಡೆದುಕೊಳ್ಳಲು ಬಯಸಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ರಾಂತಿಗಾಗಿ ಸಿಂಗಾಪುರಕ್ಕೆ ತೆರಳಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ (H D Kumaraswami) ಅಲ್ಲಿಂದಲೇ ರಾಜಕೀಯ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಮತಗಟ್ಟೆಸಮೀಕ್ಷೆಗಳು ಪ್ರಕಟಗೊಂಡ ಬೆನ್ನಲ್ಲೇ ಜೆಡಿಎಸ್ ರಾಜಕೀಯ ರಣತಂತ್ರ ಹೆಣೆಯಲಾರಂಭಿಸಿದೆ. ಅತಂತ್ರ ಫಲಿತಾಂಶ ಬಂದರೆ ಸಹಜವಾಗಿ ಜೆಡಿಎಸ್ ಪ್ರಮುಖ ಪಾತ್ರ ವಹಿಸಲಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ (Congress) ಮತ್ತು ಬಿಜೆಪಿ ಅನಿವಾರ್ಯವಾಗಿ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳಲೇಬೇಕಾಗುತ್ತದೆ. ಈ ಸಂದರ್ಭದಲ್ಲಿ ಯಾವ ರೀತಿ ಕಾರ್ಯತಂತ್ರ ರೂಪಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಹೇಳಲಾಗಿದೆ.
ಕುಮಾರಸ್ವಾಮಿ ಅವರಿಗೆ ಈಗಾಗಲೇ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳ ಜತೆ ಮೈತ್ರಿ ಸರ್ಕಾರ ಮಾಡಿದ ಅನುಭವ ಇದೆ. ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರೂ ಪೂರ್ಣ ಅವಧಿ ಸರ್ಕಾರ ನಡೆಸಲು ಸಾಧ್ಯವಾಗಿಲ್ಲ. ರಾಜಕೀಯ ಕಾರಣಗಳಿಂದಾಗಿ ಮೈತ್ರಿ ಸರ್ಕಾರ ಪತನಗೊಂಡಿದೆ. ಈ ಬಾರಿ ಅದೇ ರೀತಿಯಲ್ಲಿ ಆಗದಂತೆ ಎಚ್ಚರಿಕೆ ವಹಿಸಲು ಕುಮಾರಸ್ವಾಮಿ ಸಿದ್ಧತೆ ಕೈಗೊಂಡಿದ್ದಾರೆ. ಈ ಸಂಬಂಧ ಮೊದಲೇ ಯೋಜನೆ ರೂಪಿಸಿ ಮುಂದಿನ ಹೆಜ್ಜೆ ಇಡುವ ಬಗ್ಗೆ ತೀರ್ಮಾನಿಸಿದ್ದಾರೆ. ಮೈತ್ರಿಗೆ ಬರುವ ಪಕ್ಷ ಯಾವುದೇ ಇದ್ದರೂ ಷರತ್ತುಗಳನ್ನು ವಿಧಿಸಲು ತೀರ್ಮಾನಿಸಿದ್ದಾರೆ. ಜೆಡಿಎಸ್ (JDS) ವಿಧಿಸುವ ಷರತ್ತುಗಳಿಗೆ ಒಪ್ಪಬೇಕು ಎಂದು ಹೇಳಿದ ಬಳಿಕ ಮುಂದಿನ ನಡೆಯ ಬಗ್ಗೆ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಎಸ್‌ನ ಪ್ರಣಾಳಿಕೆಯಲ್ಲಿರುವ ಅಂಶಗಳನ್ನು ಈಡೇರಿಸಲು ಒಪ್ಪಿಗೆ ನೀಡಬೇಕು. ಪ್ರಮುಖವಾಗಿ ಪಂಚರತ್ನ ಯೊಜನೆಗಳ ಅನುಷ್ಠಾನಕ್ಕೆ ಸಮ್ಮತಿ ಸೂಚಿಸಬೇಕು. ಇದರ ಜತೆಗೆ ಪ್ರಚಾರದ ವೇಳೆ ತಾವು ರಾಜ್ಯದ ಜನತೆಗೆ ಕೊಟ್ಟಮಾತಿನಂತೆ ಸರ್ಕಾರ ನಡೆಸಬೇಕು. ಪಕ್ಷದ ಹಿತಾಸಕ್ತಿಗೆ ಧಕ್ಕೆಯಾಗದಂತೆ ಸರ್ಕಾರ ನಡೆಸಬೇಕು ಎಂಬ ಷರತ್ತು ವಿಧಿಸಲು ಕುಮಾರಸ್ವಾಮಿ ಚಿಂತನೆ ನಡೆಸಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಜತೆ ಕೈ ಜೋಡಿಸಿ ಎರಡೂ ಸಲ ಮೈತ್ರಿ ಮುರಿದ ಬಳಿಕ ಕುಮಾರಸ್ವಾಮಿ ನೋವು ಅನುಭವಿಸಿದ್ದಾರೆ. ಈ ಸಲ ಆದಕ್ಕೆ ಆಸ್ಪದ ಕೊಡದಂತೆ ಮೊದಲೇ ಸಿದ್ಧತೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಅತಂತ್ರ ಪರಿಸ್ಥಿತಿ ಸಾಧ್ಯತೆ ಇದೆ ಎಂಬ ಮತಗಟ್ಟೆ ಸಮೀಕ್ಷೆಗಳ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪಕ್ಷಗಳು ಶಾಸಕರನ್ನು ಹೈಜಾಕ್ ಮಾಡಬಹುದು ಎಂಬ ಭೀತಿಯಿಂದ ಜೆಡಿಎಸ್ ತನ್ನವರನ್ನು ಹಿಡಿದಿಟ್ಟುಕೊಳ್ಳಲು ಕಾರ್ಯತಂತ್ರ ರೂಪಿಸಲು ಮುಂದಾಗಿದೆ. ಈ ಸಂಬಂಧ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ರಾಜಕೀಯ ರಣತಂತ್ರ ರೂಪಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಗೆಲ್ಲುವ ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಜಿ.ಟಿ.ದೇವೇಗೌಡ ಅವರಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.