ಪಕ್ಷೇತರ ಸ್ಪರ್ಧಿಗಳಿಗೆ ಬಿಜೆಪಿಯಿಂದ ಗಾಳ: ಕಾಂಗ್ರೆಸ್ ಹೊಸ ಶಾಸಕರು ಇಂದೇ ರೆಸಾರ್ಟಿಗೆ

By Kannadaprabha NewsFirst Published May 13, 2023, 5:43 AM IST
Highlights

ಅತಂತ್ರ ಸ್ಥಿತಿ ನಿರ್ಮಾಣವಾಗುವ ಭೀತಿ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯು ಫಲಿತಾಂಶ ಹೊರಬೀಳುವ ಮೊದಲೇ ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರು ಹಾಗೂ ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸಲು ಮುಂದಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ತನ್ನ ಹೊಸ ಶಾಸಕರನ್ನು ಇಂದೇ ರೆಸಾರ್ಟ್‌ಗೆ ಕಳುಹಿಸಲು ನಿರ್ಧರಿಸಿದೆ.

ಬೆಂಗಳೂರು: ಅತಂತ್ರ ಸ್ಥಿತಿ ನಿರ್ಮಾಣವಾಗುವ ಭೀತಿ ಹಿನ್ನೆಲೆಯಲ್ಲಿ ಆಡಳಿತಾರೂಢ ಬಿಜೆಪಿಯು ಫಲಿತಾಂಶ ಹೊರಬೀಳುವ ಮೊದಲೇ ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರು ಹಾಗೂ ಬಂಡಾಯ ಅಭ್ಯರ್ಥಿಗಳನ್ನು ಸಂಪರ್ಕಿಸಲು ಮುಂದಾಗಿದೆ. ಮತ್ತೊಂದೆಡೆ ಕಾಂಗ್ರೆಸ್ ತನ್ನ ಹೊಸ ಶಾಸಕರನ್ನು ಇಂದೇ ರೆಸಾರ್ಟ್‌ಗೆ ಕಳುಹಿಸಲು ನಿರ್ಧರಿಸಿದೆ.

ಅತಂತ್ರ ಸ್ಥಿತಿ ನಿರ್ಮಾಣವಾಗುವ ಭೀತಿ ಹಿನ್ನೆಲೆಯಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ಇದರ ನೇತೃತ್ವ ವಹಿಸಿಕೊಂಡಿದ್ದು, ಹಲವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಅತಂತ್ರ ಸನ್ನಿವೇಶ ನಿರ್ಮಾಣವಾದಲ್ಲಿ ತಮ್ಮ ಜತೆಗಿರುವಂತೆ ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Latest Videos

ಶಿರಹಟ್ಟಿವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ರಾಮಕೃಷ್ಣ ದೊಡ್ಡಮನಿ, ಹರಪನಹಳ್ಳಿ ಪಕ್ಷೇತರ ಅಭ್ಯರ್ಥಿಯಾಗಿರುವ, ದಿ.ಎಂ.ಪಿ.ಪ್ರಕಾಶ ಅವರ ಮಗಳು ಎಂ.ಪಿ.ಲತಾ, ಕುಂದಗೋಳ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಮಾಜಿ ಶಾಸಕ ಎಸ್‌.ಐ.ಚಿಕ್ಕನಗೌಡರ ಅವರನ್ನು ಸಂಪರ್ಕಿಸಿ ಮಾತುಕತೆ ನಡೆಸಲಾಗಿದೆ ಎಂಬ ಖಚಿತ ಮಾಹಿತಿ ಹೊರಬಿದ್ದಿದೆ. ಎಲ್ಲರಿಗೂ ಮುಖ್ಯಮಂತ್ರಿ ಬೊಮ್ಮಾಯಿ ಒಬ್ಬರೇ ಸಂಪರ್ಕಿಸಿ ಮಾತನಾಡಿಲ್ಲ. ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ್‌ ಸೇರಿದಂತೆ ತಮ್ಮ ಆಪ್ತರನ್ನು ಮುಂದೆ ಬಿಟ್ಟು ಸಂಪರ್ಕಿಸುವ ಗಂಭೀರ ಪ್ರಯತ್ನ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಅತಂತ್ರ ಫಲಿತಾಂಶ ಹೊರಬಿದ್ದರೆ ಅದರ ಲಾಭ ಕಾಂಗ್ರೆಸ್‌ ಪಡೆದುಕೊಳ್ಳದಂತೆ ತಡೆಯುವ ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದೆ.

ಬಿಎಸ್‌ವೈ ನಿವಾಸದಲ್ಲಿ ಸಭೆ:

ಈ ನಡುವೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನಿವಾಸದಲ್ಲಿ ಶುಕ್ರವಾರ ಪಕ್ಷದ ನಾಯಕರ ಸಭೆ ನಡೆದಿದ್ದು, ಶನಿವಾರದ ಫಲಿತಾಂಶದ ನಂತರದ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವರಾದ ಮುರುಗೇಶ್‌ ನಿರಾಣಿ, ಬೈರತಿ ಬಸವರಾಜ, ರಾಜ್ಯಸಭಾ ಸದಸ್ಯ ಲೆಹರ್‌ ಸಿಂಗ್‌ ಸಿರೋಯ, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಮೊದಲಾದವರು ಪಾಲ್ಗೊಂಡಿದ್ದರು.

ಮತಗಟ್ಟೆಸಮೀಕ್ಷೆ ಅನುಸಾರ ಈ ಬಾರಿ ಅತಂತ್ರ ಫಲಿತಾಂಶ ಹೊರಬೀಳಬಹುದು ಎಂಬುದನ್ನು ಒಪ್ಪಲು ಸಾಧ್ಯವಿಲ್ಲ. ಬಿಜೆಪಿಗೆ ಸಂಪೂರ್ಣ ಬಹುಮತ ಸಿಗಲಿದೆ. ಆದರೂ ಮತಗಟ್ಟೆಸಮೀಕ್ಷೆಯನ್ನು ನಿರ್ಲಕ್ಷಿಸುವುದು ಬೇಡ. ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷ ಅಧಿಕಾರದ ಗದ್ದುಗೆ ಏರದಂತೆ ನೋಡಿಕೊಳ್ಳಬೇಕು. ಗೆಲ್ಲುವ ಸಾಮರ್ಥ್ಯ ಇರುವ ಪಕ್ಷೇತರರು ಹಾಗೂ ಬಂಡಾಯ ಅಭ್ಯರ್ಥಿಗಳನ್ನು ತಕ್ಷಣವೇ ಸಂಪರ್ಕಿಸಿ ಮುಂಚಿತವಾಗಿಯೇ ಅವರ ಮನವೊಲಿಸುವ ಪ್ರಕ್ರಿಯೆ ಮುಗಿಸಬೇಕು ಎಂಬ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಬಳಿಕ ಮುಖ್ಯಮಂತ್ರಿ ಬೊಮ್ಮಾಯಿ ಅವರು ಶನಿವಾರದ ಫಲಿತಾಂಶದ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸಿದರು

ಹೊಸ ಶಾಸಕರ ಬೆಂಗಳೂರಿಗೆ ಕರೆತರಲು ಕೈ ಉಸ್ತುವಾರಿಗಳ ನೇಮಕ

ಆಪರೇಷನ್‌ ಕಮಲವೂ ಸೇರಿದಂತೆ ಯಾವುದೇ ಅನನುಕೂಲಕರ ಬೆಳವಣಿಗೆಗೆ ಅವಕಾಶ ನೀಡದಿರಲು ನಿರ್ಧರಿಸಿರುವ ಕಾಂಗ್ರೆಸ್‌ ನಾಯಕತ್ವ, ಇಂದು ಫಲಿತಾಂಶ ಪ್ರಕಟವಾಗಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಿದ್ದಂತೆಯೇ ಅವರನ್ನು ಬೆಂಗಳೂರಿಗೆ ಕರೆತರುವ ಹೊಣೆಗಾರಿಕೆ ನೀಡಿ ತಲಾ ಇಬ್ಬರು ಉಸ್ತುವಾರಿಗಳನ್ನು ರಾಜ್ಯದ ಪ್ರತಿ ಜಿಲ್ಲೆಗೂ ಕಳುಹಿಸಿಕೊಟ್ಟಿದೆ.  ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳುವ ಮುನ್ನಾದಿನವಾದ ಶುಕ್ರವಾರ ಕಾಂಗ್ರೆಸ್‌ ನಾಯಕರು ತೀವ್ರ ಚಟುವಟಿಕೆಯಿಂದ ಇದ್ದರು. ರಾಜ್ಯಕ್ಕೆ ಸಂಬಂಧಪಟ್ಟಂತೆ ಮಹತ್ವದ ನಿರ್ಧಾರ ಕೈಗೊಳ್ಳುವ ಅಧಿಕಾರ ಹೊಂದಿರುವ ಹೈಕಮಾಂಡ್‌ ನಾಯಕರಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಹಾಗೂ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ನಗರದಲ್ಲೇ ಬೀಡು ಬಿಟ್ಟು ನಿರ್ಣಾಯಕ ದಿನವಾದ ಇಂದಿಗೆ ಹೇಗೆಲ್ಲ ಸಜ್ಜುಗೊಳ್ಳಬೇಕು ಎಂಬ ಬಗ್ಗೆ ರಾಜ್ಯ ನಾಯಕರೊಂದಿಗೆ ಸರಣಿ ಸಭೆ ನಡೆಸಿ ಚರ್ಚಿಸಿದರು.

Karnataka assembly election: ಪಕ್ಷೇತರರ ಸೆಳೆಯಲು ಡಿಕೆಶಿ, ಸಿದ್ದರಾಮಯ್ಯ, ಸಿಎಂ ಯತ್ನ

ಪ್ರಮಾಣಪತ್ರ ಪಡೆಯುತ್ತಿದ್ದಂತೆ ಬೆಂಗಳೂರಿಗೆ:

ಇದರ ಫಲವಾಗಿ ರಾಜ್ಯದ ಪ್ರತಿ ಜಿಲ್ಲೆಗೂ ತಲಾ ಇಬ್ಬರು ಉಸ್ತುವಾರಿಗಳನ್ನು ರವಾನಿಸಲು ತೀರ್ಮಾನಿಸಲಾಯಿತು. ಈ ಉಸ್ತುವಾರಿಗಳು ಜಿಲ್ಲೆಗಳಲ್ಲಿ ಗೆಲ್ಲುವ ಕಾಂಗ್ರೆಸ್‌ ಅಭ್ಯರ್ಥಿಗಳು ಗೆಲುವಿನ ಪ್ರಮಾಣ ಪತ್ರ ಪಡೆದ ಕೂಡಲೇ ಅವರನ್ನು ಬೆಂಗಳೂರಿಗೆ ಕರೆ ತರಲಿದ್ದಾರೆ. ಹೀಗೆ ಆಗಮಿಸುವ ಎಲ್ಲ ಶಾಸಕರನ್ನು ರೆಸಾರ್ಚ್‌ ವಾಸ್ತವ್ಯಕ್ಕೆ ಕರೆದೊಯ್ಯಲು ತೀರ್ಮಾನಿಸಲಾಗಿದೆ.  ಆದರೆ, ಈ ಎಲ್ಲಾ ಬೆಳವಣಿಗೆಗಳು ಮೂರು ಸಾಧ್ಯತೆಗಳ ಸಂದರ್ಭದಲ್ಲಿ ನಡೆಯಲಿವೆ. ಅವು- 1.ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೆ, 2.ಸರಳ ಬಹುಮತದ ಸಮೀಪ ಬಂದು ನಿಂತರೆ. 3.ಒಂದು ವೇಳೆ 120 ಸ್ಥಾನಗಳ ಒಳಗೆ ಬಂದರೆ. ಈ ಎಚ್ಚರಿಕೆಗೆ ಕಾರಣ ಬಿಜೆಪಿಯು ಕಾಂಗ್ರೆಸ್‌ ಶಾಸಕರನ್ನು ಸಂಪರ್ಕಿಸಿ ಆಪರೇಷನ್‌ ಕಮಲ ನಡೆಸುವ ಸಣ್ಣ ಸಾಧ್ಯತೆಗೂ ಅವಕಾಶ ನೀಡಬಾರದು ಎಂಬುದು.

ಇದಲ್ಲದೆ, ಈ ಬಾರಿ ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರನ್ನು ಸಂಪರ್ಕಿಸಿ ಮಾತುಕತೆ ನಡೆಸುವ ಪ್ರಕ್ರಿಯೆ ಶುಕ್ರವಾರವೂ ಮುಂದುವರೆಯಿತು. ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಗೆಲ್ಲುವ ಸಾಧ್ಯತೆಯಿರುವ ಪಕ್ಷೇತರರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ದೂರವಾಣಿ ಮೂಲಕ ಸಂಪರ್ಕಿಸಿದರು.  ಶುಕ್ರವಾರ ಇಡೀ ದಿನ ಪಕ್ಷದ ನಾಯಕರು ಸರಣಿ ಸಭೆ ನಡೆಸಿದರು. ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಅವರು ಮುಂಜಾನೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದರು. ಅನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರು ಸಹ ಖರ್ಗೆ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಸಂಜೆಯ ವೇಳೆಗೆ ಖರ್ಗೆ, ವೇಣುಗೋಪಾಲ್‌, ಸುರ್ಜೇವಾಲಾ, ಶಿವಕುಮಾರ್‌, ಸಿದ್ದರಾಮಯ್ಯ, ಕೆ.ಎಚ್‌.ಮುನಿಯಪ್ಪ ಸೇರಿದಂತೆ ಪ್ರಮುಖ ನಾಯಕರು ಪಂಚತಾರಾ ಹೊಟೇಲ್‌ವೊಂದರಲ್ಲಿ ಸಭೆ ಸೇರಿ ನಿರ್ಣಾಯಕ ದಿನದ ಕುರಿತು ಚರ್ಚೆ ನಡೆಸಿದರು.


120 ಬಂದರೆ ಇಂದೇ ಶಾಸಕಾಂಗ ಪಕ್ಷದ ಸಭೆ?

ಕಾಂಗ್ರೆಸ್‌ ಪಕ್ಷ 120ರ ಗಡಿ ಮುಟ್ಟಿದರೆ ಇಂದೇ ನಗರದಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಪ್ರಕ್ರಿಯೆಗೆ ಚಾಲನೆ ದೊರೆಯುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಏಕೆಂದರೆ, ರಾಜ್ಯದ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಎಲ್ಲ ನಾಯಕರು (ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ) ನಗರದಲ್ಲೇ ಇದ್ದಾರೆ. ಇನ್ನು ವರಿಷ್ಠರಾದ ರಾಹುಲ್‌ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ಅಭಿಪ್ರಾಯವನ್ನು ದೂರವಾಣಿ ಮೂಲಕ ಪಡೆಯುವ ಅವಕಾಶವಿದೆ. ಹೀಗಾಗಿ ಶಾಸಕಾಂಗ ಪಕ್ಷದ ಸಭೆ ನಡೆಸಿ, ನೂತನ ನಾಯಕನ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡುವ ಸಾಧ್ಯತೆಗಳು ಹೆಚ್ಚಿವೆ.

ಮುಂದಿನ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಈ ಶಾಸಕಾಂಗ ಪಕ್ಷದ ಸಭೆಯಲ್ಲೇ ಉತ್ತರ ದೊರೆಯುವ ಸಾಧ್ಯತೆ ಕಡಿಮೆಯಿದ್ದರೂ ಆ ದಿಸೆಯಲ್ಲಿ ಮಹತ್ವದ ಚರ್ಚೆ ಈ ಸಭೆಯಲ್ಲಿ ನಡೆಯಲಿದ್ದು, ಶಾಸಕರ ಅಭಿಪ್ರಾಯ ಸಂಗ್ರಹವಾಗುವ ಸಾಧ್ಯತೆಯಿದೆ ಎನ್ನಲಾಗಿದೆ..

click me!