ವಿಧಾನಸಭೆ ಚುನಾವಣೆ: ಧಾರವಾಡದಲ್ಲಿ ಚುರುಕುಗೊಂಡ ರಾಜಕೀಯ ಚಟುವಟಿಕೆ

Published : Mar 30, 2023, 11:53 AM IST
ವಿಧಾನಸಭೆ ಚುನಾವಣೆ: ಧಾರವಾಡದಲ್ಲಿ ಚುರುಕುಗೊಂಡ ರಾಜಕೀಯ ಚಟುವಟಿಕೆ

ಸಾರಾಂಶ

ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇತ್ತ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಟಿಕೆಟ್‌ ಆಕಾಂಕ್ಷಿಗಳೆಲ್ಲ ಬೆಂಬಲಿಗರ ಸಭೆ ನಡೆಸಿ ಈ ಸಲ ಯಾವ ರೀತಿ ಪ್ರಚಾರ ನಡೆಸಬೇಕು ಎಂಬ ತಂತ್ರಗಾರಿಕೆ ಮಾಡುವಲ್ಲಿ ನಿರತವಾಗಿದ್ದರೆ, ಕೆಲವರು ಟಿಕೆಟ್‌ ಪಕ್ಕಾ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ವಿಶೇಷ ವರದಿ

 ಹುಬ್ಬಳ್ಳಿ (ಮಾ.30) : ವಿಧಾನಸಭೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇತ್ತ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಟಿಕೆಟ್‌ ಆಕಾಂಕ್ಷಿಗಳೆಲ್ಲ ಬೆಂಬಲಿಗರ ಸಭೆ ನಡೆಸಿ ಈ ಸಲ ಯಾವ ರೀತಿ ಪ್ರಚಾರ ನಡೆಸಬೇಕು ಎಂಬ ತಂತ್ರಗಾರಿಕೆ ಮಾಡುವಲ್ಲಿ ನಿರತವಾಗಿದ್ದರೆ, ಕೆಲವರು ಟಿಕೆಟ್‌ ಪಕ್ಕಾ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದಾರೆ.

ಜಿಲ್ಲೆಯ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಶಾಸಕರಿದ್ದರೆ, ಎರಡರಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಕಾಂಗ್ರೆಸ್‌ನಲ್ಲಿ ಏಳು ಕ್ಷೇತ್ರಗಳ ಪೈಕಿ ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರಕ್ಕೆ ಮಾತ್ರ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಟಿಕೆಟ್‌ ಪಕ್ಕಾ ಆಗಿದೆ. ಇನ್ನುಳಿದಂತೆ ಉಳಿದ ಯಾವ ಕ್ಷೇತ್ರದಲ್ಲೂ ಟಿಕೆಟ್‌ ಘೋಷಿಸಿಲ್ಲ. ಇದರಿಂದ ಆಕಾಂಕ್ಷಿಗಳಲ್ಲಿ ಆತಂಕ ಶುರುವಾಗಿದೆ. ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಅಭ್ಯರ್ಥಿಗಳನ್ನು ಘೋಷಿಸುವುದು ಕೆಪಿಸಿಸಿಗೆ ದೊಡ್ಡ ತಲೆನೋವಾದಂತಾಗಿದೆ. ಟಿಕೆಟ್‌ ಘೋಷಣೆ ಬಳಿಕ ಎದುರಾಗುವ ಬಂಡಾಯದ ಕೂಗು, ಭಿನ್ನಮತ ಹೇಗೆ ನಿಭಾಯಿಸಬೇಕು ಎಂಬ ಆಲೋಚನೆಯಲ್ಲಿ ಕೆಪಿಸಿಸಿ ತೊಡಗಿದೆ. ಆದರೆ, ಆದಷ್ಟುಶೀಘ್ರವೇ ಟಿಕೆಟ್‌ ಘೋಷಿಸಿ ಚುನಾವಣೆ ಕೆಲಸ ಮಾಡುವುದಕ್ಕೆ ಅನುಕೂಲವಾಗುತ್ತದೆ ಎಂಬ ಬೇಡಿಕೆ ಆಕಾಂಕ್ಷಿಗಳದ್ದು. ಟಿಕೆಟ್‌ ಪಕ್ಕಾ ಮಾಡಿಕೊಳ್ಳಲು ಕೆಲ ಆಕಾಂಕ್ಷಿಗಳು ಬೆಂಗಳೂರಲ್ಲೇ ಠಿಕಾಣಿ ಹೂಡಿದ್ದು, ಕೆಲವರು ಟಿಕೆಟ್‌ಗೂ ತಮಗೆ ಏನು ಸಂಬಂಧವಿಲ್ಲ ಎಂದುಕೊಂಡು ಪ್ರಚಾರದಲ್ಲಿ ತೊಡಗಿದ್ದಾರೆ.

ಧಾರವಾಡ : ಜಿಲ್ಲೆಯಲ್ಲಿ ಒಂದೇ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್‌ ಅಖೈರು!

ಇನ್ನು ಬಿಜೆಪಿಯಲ್ಲಿ ಯಾವ ಕ್ಷೇತ್ರಕ್ಕೂ ಈ ವರೆಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿಲ್ಲ. ಆದರೆ, ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರೇ ಇದ್ದಾರೆ. ಇದರಲ್ಲಿ ಬಹುತೇಕರು ಅವರೇ ಅಭ್ಯರ್ಥಿಗಳಾಗುವುದು ಬಹುತೇಕ ಖಚಿತ. ಬದಲಾವಣೆಯಾದರೂ ಒಂದು ಅಥವಾ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ. ಕಾಂಗ್ರೆಸ್‌ ಶಾಸಕರಿರುವ ಎರಡು ಕ್ಷೇತ್ರಗಳಲ್ಲಿ ಗೆಲ್ಲುವ ಕುದುರೆಗಳನ್ನೇ ಕಣಕ್ಕಿಳಿಸಲು ಅಳೆದು ತೂಗಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಯೋಚನೆ ಪಕ್ಷದ ವರಿಷ್ಠರದ್ದು. ಏಪ್ರಿಲ್‌ 7 ಅಥವಾ 8ಕ್ಕೆ ಮೊದಲ ಪಟ್ಟಿಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಇನ್ನೂ ಪ್ರಚಾರದಲ್ಲಿ ಕೊಂಚ ಮುಂದಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಪ್ರಮುಖರ ಸಭೆಗಳನ್ನು ನಡೆಸಿದೆ. ಚುನಾವಣಾ ಪ್ರಚಾರದ ತಂತ್ರಗಾರಿಕೆ ರೂಪಿಸುತ್ತಿದೆ.

ಇನ್ನು ಜೆಡಿಎಸ್‌ನಲ್ಲಿ ಹೇಳಿಕೊಳ್ಳುವಂಥ ನಾಯಕರು ಇಲ್ಲದಿದ್ದರೂ ಇತ್ತೀಚಿಗೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರನ್ನು ಕಣಕ್ಕಿಳಿಸುವುದು ಬಹುತೇಕ ಖಚಿತ. ಜತೆಗೆ ಬಿಜೆಪಿ ಹಾಗೂ ಕಾಂಗ್ರೆಸ್‌ ಟಿಕೆಟ್‌ ಘೋಷಣೆಯಾದ ಬಳಿಕ ಅಲ್ಲಿನ ಟಿಕೆಟ್‌ ವಂಚಿತರು ಜೆಡಿಎಸ್‌ ಸೇರುತ್ತಾರೋ ಎಂಬ ನಿರೀಕ್ಷೆ ಪಕ್ಷದಲ್ಲಿದೆ. ಯಾರಾದರೂ ಬಂದರೆ ಅವರನ್ನು ಭವ್ಯವಾಗಿ ಸ್ವಾಗತಿಸಿ ಟಿಕೆಟ್‌ ನೀಡುವ ಯೋಚನೆ ಪಕ್ಷದ್ದು.

ಈ ಸಲ ಮೊದಲ ಬಾರಿಗೆ ಓವೈಸಿಯ ಎಐಎಂಐಎಂ ಹಾಗೂ ಎಸ್‌ಡಿಪಿಐ ಕಣಕ್ಕಿಳಿದಿವೆ. ಸದ್ಯ ಎರಡು ಪಕ್ಷಗಳು ಪೂರ್ವ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿ ಪ್ರಚಾರವನ್ನು ಶುರುಮಾಡಿವೆ. ಇನ್ನುಳಿದ ಕ್ಷೇತ್ರಗಳಲ್ಲಿ ತಾವೇ ಅಭ್ಯರ್ಥಿ ಎಂದು ಕೆಲವರು ಪ್ರಚಾರ ನಡೆಸುತ್ತಿದ್ದಾರೆ ಆದರೂ ಪಕ್ಷಗಳು ಎಷ್ಟುಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತದೆ ಎಂಬ ಪ್ರಶ್ನೆಗೆ ಇನ್ನಷ್ಟುದಿನ ಕಾಯುವುದು ಅನಿವಾರ್ಯ.

ಇನ್ನೂ ಕಳೆದ ಬಾರಿಗೆ ಅದೃಷ್ಟಪರೀಕ್ಷಿಸಿ ಸೋಲನ್ನುಭವಿಸಿದ್ದ ಆಮ್‌ ಆದ್ಮಿ ಪಕ್ಷವೂ ಈ ಏಳು ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ. ಈಗಾಗಲೇ 3 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿ ಘೋಷಣೆ ಕೂಡ ಮಾಡಿದೆ. ಅವರು ಕೂಡ ಈಗಾಗಲೇ ಪ್ರಚಾರವನ್ನೂ ಶುರು ಮಾಡಿಕೊಂಡಿದ್ದಾರೆ. ದೆಹಲಿ ತಂತ್ರಗಾರಿಕೆ ಅನುಸರಿಸಿ ಈ ಸಲ ಗೆಲ್ಲಬೇಕೆಂಬ ಇರಾದೆ ಪಕ್ಷದ್ದು, ಆದರೆ ಇದಕ್ಕೆ ಮತದಾರ ಯಾವ ರೀತಿ ಮಣೆಹಾಕುತ್ತಾನೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ.

ಧಾರವಾಡ: ಬಿಜೆಪಿ ಶಾಸಕ ಬೆಲ್ಲದಗೆ ಅಂಚಟಗೇರಿ ಪೈಪೋಟಿ..!

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ರಂಗು ದಿನೇ ದಿನೇ ಏರುಗತಿಯಲ್ಲಿ ಸಾಗಿದ್ದು, ಎಲ್ಲರೂ ಅಧಿಕಾರದ ಗದ್ದುಗೆ ಏರಬೇಕೆಂಬ ಹುಮ್ಮಸ್ಸಿನಲ್ಲೇ ಇರುವುದು ಮಾತ್ರ ಸತ್ಯ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೂರು ವರ್ಷಗಳಲ್ಲಿ 57,733 ಸೈಬರ್ ಅಪರಾಧ, ₹5,473 ಕೋಟಿ ವಂಚನೆ: ಗೃಹ ಸಚಿವ ಪರಮೇಶ್ವರ್
ಮೇಕೆದಾಟು, ಭದ್ರಾ, ಕೃಷ್ಣಾ ಯೋಜನೆಗಳಲ್ಲಿ ಕೇಂದ್ರ ಸರ್ಕಾರ ವಿಳಂಬ: ಡಿ.ಕೆ.ಶಿವಕುಮಾರ್ ಆಕ್ರೋಶ