ಶ್ರೀರಂಗಪಟ್ಟಣ, ಪಾಂಡವಪುರದಲ್ಲಿ ನನ್ನ ಮೇಲೆ ಹಲ್ಲೆಯಾಗಿತ್ತು, ಜೆಡಿಎಸ್‌ ವಿರುದ್ಧ ಹರಿಹಾಯ್ದ ಸುಮಲತಾ!

By Santosh Naik  |  First Published Mar 10, 2023, 1:11 PM IST

ಬಿಜೆಪಿ ಸೇರುವ ವಿಚಾರವಾಗಿ ಮಂಡ್ಯ ಸಂಸದೆ ಸುಮಲತಾ ಶುಕ್ರವಾರ ಮಂಡ್ಯದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದರು. ಬೆಂಬಲಿಗರ ಜೊತೆ ಸುದ್ದಿಗೋಷ್ಠಿಗೆ ಆಗಮಿಸಿದ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಇದ್ದ ಗೊಂದಲಗಳ ಬಗ್ಗೆ ಮಾತನಾಡಿದರು.
 


ಮಂಡ್ಯ (ಮಾ.10): ಮಂಡ್ಯ ಸಂಸದೆ ಸುಮಲತಾ ಅವರ ರಾಜಕೀಯ ನಡೆ ಇನ್ನೂ ನಿಗೂಢವಾಗಿಯೇ ಉಳಿದುಕೊಂಡಿದೆ. ಬಿಜೆಪಿ ಸೇರ್ತಾರೆ ಅನ್ನೋ ವಿಚಾರದಲ್ಲಿ ಕುತೂಹಲವನ್ನು ಉಳಿಸಿಕೊಂಡಿರುವ ಸುಮಲತಾ ಶುಕ್ರವಾರ, ಮಂಡ್ಯದ ಚಾಮುಂಡೇಶ್ವರಿಯಲ್ಲಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಹಲವು ವಿವರಗಳನ್ನು ನೀಡಿದರು. 'ಈ ಮಾರ್ಚ್‌ ವೇಳೆಗೆ ನಾನು ರಾಜಕೀಯಕ್ಕೆ ಬಂದು ನಾಲ್ಕು ವರ್ಷಗಳು. ಸರಿಯಾಗಿ ಹೇಳಬೇಕು ಎಂದರೆ 3 ವರ್ಷ 8 ತಿಂಗಳಾಗಿದೆ. ನನಗೆ ರಾಜಕೀಯ ಅನಿವಾರ್ಯವಾಗಿರಲಿಲ್ಲ. ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ಜನರಿಗಿದ್ದ ಅಭಿಮಾನ, ಅಂಬರೀಶ್‌ ಮೇಲಿನ ಪ್ರೀತಿಯಿಂದಾಗಿ ನಾನು ರಾಜಕೀಯ ಪ್ರವೇಶಿಸಿದೆ. ನನಗೆ ಸ್ವಾರ್ಥ ಇದ್ದಿದ್ದರೆ, ನನ್ನ ದಾರಿ ಬೇರೆಯೇ ಆಗಿರುತ್ತಿತ್ತು. ಮಂಡ್ಯ ಜನರ ಮಾತಿಗೆ ಕಟ್ಟುಬಿದ್ದು ರಾಜಕೀಯಕ್ಕೆ ಬಂದೆ. ಅಂಬರೀಶ್‌ ಅವರಿಗಿದ್ದ ಪ್ರಭಾವಿಗಳ ಒಡನಾಟ ನನ್ನ ಜೊತೆಗೂ ಇದೆ. ನನ್ನ ಸ್ವಾರ್ಥಕ್ಕಾಗಿ ಮುಮಖ್ಯಂತ್ರಿಯನ್ನು ಎದುರಿಸುವ ತೀರ್ಮಾನ ಮಾಡಿರಲಿಲ್ಲ. ಅಂದು ನನ್ನ ಬೆಂಬಲಕ್ಕೆ ನಿಂತಿದ್ದು ಅಂಬಿ ಆಪ್ತರು. ಸರ್ಕಾರಕ್ಕೆ ಟಾರ್ಗೆಟ್‌ ಆಗುತ್ತೇನಾ? ನನ್ನ ಭವಿಷ್ಯ ಏನಾಗುತ್ತೆ? ನನ್ನ ನಂಬಿದ ಜನರಿಗೆ ಏನಾಗುತ್ತೆ ಎಂದು ಯೋಚನೆ ಮಾಡಿರಲಿಲ್ಲ. ಎಲ್ಲವನ್ನೂ ಪಣಕ್ಕಿಟ್ಟು ನಾನು ಇಂದು ಮುಂದೆ ಬಂದಿದ್ದೇನೆ' ಎಂದು ಸುದ್ದಿಗೋಷ್ಠಿಯ ಆರಂಭದಲ್ಲಿ ಮಾತನಾಡಿದರು.

Breaking: ತಾಂತ್ರಿಕ ಕಾರಣ, ಸದ್ಯಕ್ಕೆ ಬಿಜೆಪಿ ಸೇರೋದಿಲ್ಲ ಸುಮಲತಾ!

Tap to resize

Latest Videos

ಎಂಎಲ್‌ಸಿಯಾಗುವಂತೆ ನನಗೆ ಬಹಿರಂಗ ಆಹ್ವಾನವೂ ಬಂದಿತ್ತು. ಅಂಬರೀಶ್‌ ಅವರ ಪತ್ನಿ ಎನ್ನುವುದನ್ನೂ ಮರೆತು ನನ್ನ ತೇಜೋವಧೆ ಮಾಡಿದರು. ಪ್ರತಿದಿನವೂ ನನ್ನ ಹೆಸರನ್ನು ಪ್ರಸ್ತಾಪಿಸಿ ಟಾರ್ಗೆಟ್‌ ಮಾಡಿದರು. ಆದರೆ, ಕಾಂಗ್ರೆಸ್‌ನ ಸ್ಥಳೀಯ ನಾಯಕರು, ಕಾರ್ಯಕರ್ತರು ಬೆಂಬಲಿಸಿದರು. ಚುನಾವಣೆ ವೇಳೆ ಬಿಜೆಪಿ ಬಹಿರಂಗವಾಗಿ ಬೆಂಬಲ ನೀಡಿತ್ತು. ರೈತ ಸಂಘ, ಬೇರೆ ಸಂಘಟನೆಗಳು ನನಗೆ ಬಹಿರಂಗವಾಗಿ ಬೆಂಬಲ ನೀಡಿದರು. ಕೊರೋನಾ ಟೈಮ್‌ನಲ್ಲಿ ಸಂಸದರ ನಿಧಿ ಬರದೇ ಇದ್ದರೂ, ನಾನು ಜನರ ಸಹಾಯಕ್ಕೆ ಬಂದೆ. ಆದರೆ, ಪ್ರತಿ ಹಂತದಲಲ್ಲೂ ನನಗೆ ಅವಮಾನ ಮಾಡಿದರು ಎನ್ನುವ ಮೂಲಕ ಪರೋಕ್ಷವಾಗಿ ಜೆಡಿಎಸ್‌ ನಾಯಕರ ವಿರುದ್ಧ ಹರಿಹಾಯ್ದರು.

ಸುಮಲತಾ ಟು 'ಕಮಲ'ತಾ: ಇಂದು ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಸೇರ್ಪಡೆಯ ಕುರಿತು ಘೋಷಣೆ?

ಅಕ್ರಮ ಗಣಿಗಾರಿಕೆಯಿಂದ ಜಿಲ್ಲೆಯನ್ನು ಕಾಪಾಡಿದ್ದೇನೆ. ಮೈಶುಗರ್‌ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ. ನಾನ್‌ ಏನ್‌ ಕೆಲಸ ಮಾಡಿದ್ದೇನೆ ಅನ್ನೋದು ಇಲ್ಲಿನ ಜನರಿಗೆ ಗೊತ್ತಿದೆ. ಹೀಗಿದ್ದರೂ, ಕೆಆರ್‌ನಗರದಲ್ಲಿ, ಪಾಂಡವಪುರದಲ್ಲಿ ನನ್ನ ಮೇಲೆ ಹಲ್ಲೆ ಮಾಡುವ ಪ್ರಯತ್ನ ಮಾಡಿದ್ದರು ಎಂದು ಹೇಳಿದರು.

ಇದೇ ವೇಳೆ ಮಂಡ್ಯಕ್ಕೆ ಸುಮಲತಾ ಏನ್‌ ಮಾಡಿದ್ದಾರೆ ಎನ್ನುವ ಪ್ರಶ್ನೆಗೆ ದಾಖಲೆ ಸಮೇತ ಉತ್ತರ ನೀಡಿದರು. ಮಂಡ್ಯದಲ್ಲಿ ತಾಯಿ ಮಕ್ಕಳ ಆಸ್ಪತ್ರೆಗೆ ಹೋರಾಟ ಮಾಡಿದ್ದೇನೆ. ಕೇಂದ್ರದಲ್ಲಿ 2 ವರ್ಷ ಹೋರಾಟ ಮಾಡಿ ಕೇಂದ್ರೀಯ ವಿದ್ಯಾಲಯಕ್ಕಾಗಿ 25 ಕೋಟಿ ಅನುದಾನ ತಂದಿದ್ದೇನೆ. ದಿಶಾ ಸಭೆಯಲ್ಲಿ ಚರ್ಚೆಸಿ ಅನುದಾನ ಬಿಡುಗಡೆ ಮಾಡಿಸಿದ್ದೇನೆ. ಮಂಡ್ಯ ರೈಲ್ವೇ ನಿಲ್ದಾಣ ಹೇಗೆ ಅಭಿವೃದ್ಧಿಯಾಗಿದೆ ಅನ್ನೋದನ್ನ ನನ್ನ ಪ್ರಶ್ನೆ ಮಾಡುವವರು ಒಮ್ಮೆ ಹೋಗಿ ನೋಡಲಿ. ಆಯುಷ್ಮಾನ್‌ ಭಾರತ್‌ ಯೋಜನೆಯಿಂದ 111 ಕೋಟಿ ರೂಪಾಯಿ ಫಂಡ್‌ ತಂದಿದ್ದೇನೆ. ಸಿಎಂ, 3 ಶಾಸಕರು, ಮೂರು ಎಂಎಲ್‌ಸಿಗಳಿದ್ದರೂ ಮೈಶುಗರ್‌ ಪುನಶ್ಚೇತನವಾಗಿರಲಿಲ್ಲ. ನಾನು ಸ್ವತಂತ್ರ ಸಂಸದೆಯಾಗಿ ಇಷ್ಟು ಕೆಲಸ ಮಾಡಿದ್ದೇನೆ. ನಿಮಗೆ ಎಲ್ಲಾ ಅಧಿಕಾರವಿದ್ದರೂ, ಮಂಡ್ಯ ಜನರಿಗೆ ಏನು ಮಾಡಿದ್ದೀರಿ ಎಂದು ಟೀಕಕಾರರಿಗೆ ಪ್ರಶ್ನೆ ಮಾಡಿದ್ದಾರೆ.

click me!